ವಿಶ್ವ ಹಾಕಿ ಚಾಂಪಿಯನ್‌ಶಿಪ್‌| ಭಾರತ ವನಿತೆಯರಿಗೆ ಈಗ ಮತ್ತೆ ಐರ್ಲೆಂಡ್ ಸವಾಲು

ಅತಿ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಇಟಲಿ ವಿರುದ್ಧ ಆಕ್ರಮಣಕಾರಿ ಆಟವಾಡಿ ೩-೦ ಗೋಲುಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ವನಿತಾ ಹಾಕಿ ತಂಡ, ವಿಶ್ವ ಹಾಕಿ ಚಾಂಪಿಯನ್‌ಶಿಪ್‌ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದಿದೆ. ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ರಾಣಿ ಪಡೆ ಸೆಣಸಲಿದೆ

ಗುಂಪು ಹಂತದ ಮೂರೂ ಪಂದ್ಯಗಳಲ್ಲಿ ಗೆಲುವಿನ ಸಿಹಿ ಕಾಣದೆ ಕಂಗಾಲಾಗಿದ್ದ ಭಾರತ ಹಾಕಿ ವನಿತಾ ತಂಡ ಸದ್ಯ ಈಗ ನಿಡುಸುಯ್ದಿದೆ. ಇಟಲಿ ವಿರುದ್ಧದ ಕ್ವಾರ್ಟರ್‌ಫೈನಲ್‌ನ ಪ್ಲೇ-ಆಫ್ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ರಾಣಿ ರಾಂಪಾಲ್ ಸಾರಥ್ಯದ ಭಾರತ ತಂಡ, ೩-೦ ಗೋಲುಗಳ ಗೆಲುವಿನೊಂದಿಗೆ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಳಿಸಿತು. ಅಂತಿಮ ಎಂಟರ ಹಂತದ ಈ ಪಂದ್ಯವು ಗುರುವಾರ (ಆಗಸ್ಟ್ ೨) ಮಧ್ಯರಾತ್ರಿ ನಡೆಯಲಿದ್ದು, ಐರ್ಲೆಂಡ್ ಎದುರು ರಾಣಿ ಪಡೆ ಸೆಣಸಲಿದೆ.

ಲಂಡನ್‌ನ ಲೀ ವ್ಯಾಲಿ ಹಾಕಿ ಹಾಗೂ ಟೆನಿಸ್ ಸೆಂಟರ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಲಾಲ್ರೆಮ್‌ಸಿಯಾಮಿ (೯ನೇ ನಿ.) ಮೊದಲ ಗೋಲು ದಾಖಲಿಸಿದರೆ, ಮೂರನೇ ಕ್ವಾರ್ಟರ್‌ನ ಕೊನೇ ನಿಮಿಷದಲ್ಲಿ ನೇಹಾ ಗೋಯೆಲ್ ೨ನೇ ಗೋಲು ಹೊಡೆದರು. ಅಂತೆಯೇ, ಪಂದ್ಯದ ೫೫ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಬಾರಿಸಿದ ಗೋಲು ಭಾರತಕ್ಕೆ ೩-೦ ಅಂತರದ ಭರ್ಜರಿ ಜಯ ತಂದಿತ್ತಿತು.

೧೯೭೮ರ ಮ್ಯಾಡ್ರಿಡ್ ಆವೃತ್ತಿಯ ನಂತರದಲ್ಲಿ ವಿಶ್ವಕಪ್ ಹಾಕಿಯಲ್ಲಿ ಭಾರತ ವನಿತಾ ತಂಡ ಅಗ್ರ ಎಂಟು ತಂಡಗಳ ಪೈಕಿ ಗುರುತಿಸಿಕೊಂಡದ್ದು ಇದೇ ಮೊದಲು. ೪೦ ವರ್ಷಗಳ ಹಿಂದೆ ಭಾರತ ಏಳನೇ ಸ್ಥಾನಕ್ಕೆ ಹೋರಾಟ ಮುಗಿಸಿತ್ತು. ಅಂದಹಾಗೆ, ಗುಂಪು ಹಂತದಲ್ಲಿ ೦-೧ರಿಂದ ಐರ್ಲೆಂಡ್ ವಿರುದ್ಧ ಸೋಲನುಭವಿಸಿದ ರಾಣಿ ಪಡೆ, ಕ್ವಾರ್ಟರ್‌ಫೈನಲ್‌ನಲ್ಲಿ ತಿರುಗೇಟು ನೀಡಲು ಪಣ ತೊಟ್ಟಿದೆ.

“ನಮಗೀ ಈ ಪಂದ್ಯ ಎಷ್ಟೊಂದು ಮಹತ್ವಪೂರ್ಣದ್ದು ಎಂಬುದು ಚೆನ್ನಾಗಿ ತಿಳಿದಿತ್ತು. ಆದರೆ, ನಮ್ಮ ಪಯಣ ಇಲ್ಲಿಗೇ ಮುಗಿದಿಲ್ಲ. ನಾವು ನಮ್ಮೆಲ್ಲಾ ಸಾಮರ್ಥ್ಯವನ್ನೂ ಧಾರೆ ಎರೆದು ಗೆಲುವು ಸಾಧಿಸಿದ್ದು, ಸದ್ಯ ನಮ್ಮ ಮುಂದಿನ ಗುರಿ ಐರಿಷರತ್ತ. ಈ ಪಂದ್ಯ ಕೂಡಾ ವಿಭಿನ್ನವಾಗಿರಲಿದೆ. ಈಗಾಗಲೇ ನಾವು ಗುಂಪು ಹಂತದಲ್ಲಿ ಕಾದಿದ್ದೇವೆ. ಆದರೆ, ಕ್ವಾರ್ಟರ್‌ಫೈನಲ್ ಯಾವಾಗಲೂ ಬೇರೆಯದ್ದೇ ಆಗಿರುತ್ತದೆ,’’ ಎಂದು ಪಂದ್ಯ ಮುಗಿದ ಬಳಿಕ ನಾಯಕಿ ರಾಣಿ ರಾಂಪಾಲ್ ತಿಳಿಸಿದರು.

ಅಂದಹಾಗೆ, ಇಟಲಿ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದ್ದ ಭಾರತ, ಆರಂಭದಲ್ಲೇ ಗೋಲು ಬಾರಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು. ಇಟಲಿ ಡಿಫೆನ್ಸ್ ಪಾಳೆಯ ಹೊಕ್ಕ ಲಾಲ್ರೆಮ್‌ಸಿಯಾಮಿ, ರಿವರ್ಸ್ ಸ್ವೀಪ್‌ನೊಂದಿಗೆ ಚೆಂಡನ್ನು ನೆಟ್‌ಗೆ ತಾಗಿಸಿ ೧-೦ ಮುನ್ನಡೆ ತಂದಿತ್ತರು. ೧೯ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಅವಕಾಶವಿತ್ತಾದರೂ, ಉದಿತಾ ಅವರ ಯತ್ನವನ್ನು ಇಟಲಿ ಗೋಲಿ ಮಾರ್ಟಿನಾ ಚಿರಿಕೊ ವಿಫಲಗೊಳಿಸಿದರು.

ಪ್ರಥಮಾರ್ಧದಲ್ಲಿ ೧-೦ ಮುನ್ನಡೆ ಪಡೆದ ಭಾರತ, ಮತ್ತದೇ ಆಕ್ರಮಣಕಾರಿ ಆಟದಿಂದ ಇಟಲಿ ಆಟಗಾರ್ತಿಯರತ್ತ ದಾಳಿ ನಡೆಸಿತು. ನವನೀತ್ ಈ ಹಂತದಲ್ಲಿ ಗೋಲಿಗಾಗಿ ನಡೆಸಿದ ಪ್ರಯತ್ನ ಕೈಕೊಟ್ಟಿತಾದರೂ, ಇಂಗ್ಲೆಂಡ್ ವಿರುದ್ಧದ ಟೂರ್ನಿಯ ಮೊದಲ ಪಂದ್ಯದಲ್ಲಿ ಗೋಲು ಬಾರಿಸಿದ್ದ ನೇಹಾ ಗೋಯಲ್ ಈ ಬಾರಿ ಭಾರತಕ್ಕೆ ೨-೦ ಮುನ್ನಡೆ ತಂದುಕೊಟ್ಟರು. ಆನಂತರದಲ್ಲಿ ಪಂದ್ಯದ ನಾಲ್ಕನೇ ಕ್ವಾರ್ಟರ್‌ನಲ್ಲಿ ಎರಡು ನಿಮಿಷಗಳ ಅಂತರದಲ್ಲಿ ಎರಡು ಗೋಲು ಬಾರಿಸುವ ಅವಕಾಶವಿತ್ತಾದರೂ, ನವನೀತ್ ೫೬ನೇ ನಿಮಿಷದಲ್ಲಿ ಬಾರಿಸಿದ ಚೆಂಡು ಇಟಲಿ ಗೋಲ್‌ಕೀಪರ್ ಪ್ಯಾಡ್‌ಗೆ ಬಡಿದು ಅವರು ಮತ್ತೊಮ್ಮೆ ನಿರಾಸೆ ಅನುಭವಿಸುವಂತಾಯಿತು.

ದಿನಾಂಕ: ಆಗಸ್ಟ್ ೨ | ಪಂದ್ಯ ಆರಂಭ: ೦೦.೪೫ (ಭಾರತೀಯ ಕಾಲಮಾನ) | ನೇರಪ್ರಸಾರ: ಸ್ಟಾರ್ ನೆಟ್ವರ್ಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More