ವಿಶ್ವ ಬ್ಯಾಡ್ಮಿಂಟನ್ | ಪ್ರಯಾಸದ ಜಯ ಸಾಧಿಸಿದ ಕಿಡಾಂಬಿ ಪ್ರೀ ಕ್ವಾರ್ಟರ್‌ಗೆ

ಭಾರತದ ನಂ ೧ ಬ್ಯಾಡ್ಮಿಂಟನ್ ಆಟಗಾರ ಕಿಡಾಂಬಿ ಶ್ರೀಕಾಂತ್ ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಪ್ರಯಾಸದ ಗೆಲುವು ಸಾಧಿಸಿ ಪ್ರೀಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಸ್ಪೇನ್ ಆಟಗಾರ ಪ್ಯಾಬ್ಲೊ ವಿರುದ್ಧ ಶ್ರೀಕಾಂತ್ ೨೧-೧೫, ೧೨-೨೧, ೨೧-೧೪ರಿಂದ ಜಯಿಸಿದರು 

ಸರಿಸುಮಾರು ಒಂದು ತಾಸಿಗೂ ಹೆಚ್ಚು ಕಾಲ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಒತ್ತಡ ಮೆಟ್ಟಿನಿಂತ ಕಿಡಾಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ತೃತೀಯ ಸುತ್ತಿಗೆ ಸಾಗಿದರು. ಮ್ಯಾರಾಥನ್ ಪಂದ್ಯದಲ್ಲಿ ಸ್ಪೇನ್ ಆಟಗಾರ ಪ್ಯಾಬ್ಲೊ ಅಬಿಯಾನ್ ಒಡ್ಡಿದ ಪ್ರಬಲ ಪ್ರತಿರೋಧವನ್ನು ಮೂರು ಗೇಮ್‌ಗಳ ಆಟದಲ್ಲಿ ಹತ್ತಿಕ್ಕಿದ ಶ್ರೀಕಾಂತ್, ಅಮೋಘ ಗೆಲುವಿನೊಂದಿಗೆ ಮುನ್ನಡೆ ಸಾಧಿಸಿದರು.

ಬುಧವಾರ (ಆಗಸ್ಟ್ ೧) ನಡೆದ ಪುರುಷರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಮೊದಲ ಗೇಮ್‌ನಲ್ಲಿ ಗೆಲುವು ಸಾಧಿಸಿದರೂ, ಎರಡನೇ ಗೇಮ್‌ನಲ್ಲಿ ಪ್ಯಾಬ್ಲೊ ತಿರುಗಿಬಿದ್ದರು. ಆಕರ್ಷಕ ಹೋರಾಟ ನಡೆಸಿದ ಪ್ಯಾಬ್ಲೊ ಒಂದೇ ಸಮನೆ ಶ್ರೀಕಾಂತ್ ಮೇಲೆ ಒತ್ತಡ ಹೇರಿ ಪಂದ್ಯ ಮೂರನೇ ಗೇಮ್‌ಗೆ ಹೊರಳುವಂತೆ ಮಾಡಿದರು.

ಆದರೆ, ಮೂರನೇ ಗೇಮ್‌ನಲ್ಲಿ ಸ್ಥಿಮಿತ ಕಳೆದುಕೊಳ್ಳದೆ ಪ್ರಶಾಂತ ಆಟವಾಡಿದ ಶ್ರೀಕಾಂತ್, ಪ್ಯಾಬ್ಲೊ ಹೋರಾಟಕ್ಕೆ ತೆರೆ ಎಳೆದರು. ಈ ಮೂರನೇ ಗೇಮ್ ಅನ್ನು ೨೬ ನಿಮಿಷಗಳಲ್ಲಿ ಶ್ರೀಕಾಂತ್ ಕೈವಶ ಮಾಡಿಕೊಂಡರು. ಎರಡನೇ ಗೇಮ್‌ನಲ್ಲಿನ ಹಿನ್ನಡೆಯ ನಂತರದಲ್ಲಿ ದಿಟ್ಟ ಹೋರಾಟದೊಂದಿಗೆ ತಿರುಗಿಬಿದ್ದ ಶ್ರೀಕಾಂತ್, ೧೮-೧೩ರಿಂದ ಐದು ಪಾಯಿಂಟ್ಸ್‌ಗಳ ಅಂತರ ಕಾಯ್ದುಕೊಂಡು ಜಯಭೇರಿ ಬಾರಿಸಿದರು.

ಇದನ್ನೂ ಓದಿ : ವಿಶ್ವ ಬ್ಯಾಡ್ಮಿಂಟನ್ | ಜಯದ ಆರಂಭ ಪಡೆದು ತೃತೀಯ ಸುತ್ತಿಗೆ ಸಾಗಿದ ಸೈನಾ

ಸಿಂಧು, ಸಮೀರ್ ಹೋರಾಟ

ಶ್ರೀಕಾಂತ್ ಪ್ರೀಕ್ವಾರ್ಟ್‌ಗೆ ಪ್ರವೇಶಿಸಿದ್ದು ಭಾರತದ ಮಿಕ್ಕ ಆಟಗಾರರೂ ಉತ್ತಮ ಪ್ರದರ್ಶನ ನೀಡಲು ಸ್ಫೂರ್ತಿ ನೀಡಿತು. ಮುಖ್ಯವಾಗಿ, ಪಿ ವಿ ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಫಿಟ್ರಿಯಾನಿ ಪಿಟ್ರಿಯಾನಿ ವಿರುದ್ಧ ಹೋರಾಡಲು ಅಣಿಯಾಗಿದ್ದರು. ಇನ್ನು, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ, ಚೀನಾದ ಲಿನ್ ಡಾನ್ ಎದುರು ಕಾದಾಡಲು ಸಜ್ಜಾಗಿದ್ದರು.

ಒಲಿಂಪಿಕ್ಸ್ ಚಾಂಪಿಯನ್ ಲಿನ್ ಡಾನ್ ಎದುರು ಸಮೀರ್ ವರ್ಮಾ ಪ್ರಬಲ ಸವಾಲು ಎದುರಿಸುವ ಸಾಧ್ಯತೆ ಇತ್ತು. ಏತನ್ಮಧ್ಯೆ, ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕಿ ರೆಡ್ಡಿ ಜೋಡಿ ವನಿತೆಯರ ಡಬಲ್ಸ್‌ನಲ್ಲಿ ಜಪಾನ್‌ನ ಯುಕಿ ಫುಕುಶಿಮಾ ಮತ್ತು ಸಯಾಕ ಹಿರೊಟಾ ವಿರುದ್ಧದ ಸೆಣಸಾಟ ಕೂಡಾ ಕೌತುಕ ಕೆರಳಿಸಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More