ವಿಶ್ವ ಬ್ಯಾಡ್ಮಿಂಟನ್ ಸಿಂಗಲ್ಸ್‌| ಸಿಂಧು ತೃತೀಯ ಸುತ್ತಿಗೆ, ಪ್ರಣಯ್ ನಿರ್ಗಮನ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಬುಧವಾರ (ಆಗಸ್ಟ್ ೧) ಭಾರತ ಮಿಶ್ರ ಫಲ ಅನುಭವಿಸಿತು. ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಪಿ ವಿ ಸಿಂಧು ತೃತೀಯ ಸುತ್ತಿಗೆ ಮುನ್ನಡೆದರೆ, ಪುರುಷರ ಸಿಂಗಲ್ಸ್‌ನಲ್ಲಿ ಎಚ್ ಎಸ್ ಪ್ರಣಯ್ ದ್ವಿತೀಯ ಸುತ್ತಲ್ಲೇ ಸೋಲನುಭವಿಸಿದರು

ಭಾರತದ ಅಗ್ರ ಕ್ರಮಾಂಕಿತ ಬ್ಯಾಡ್ಮಿಂಟನ್ ಆಟಗಾರ ಕಿಡಾಂಬಿ ಶ್ರೀಕಾಂತ್ ಹಾಗೂ ಪಿ ವಿ ಸಿಂಧು ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರೀ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಬೆಳಗ್ಗೆ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್ ಆಟಗಾರ ಪ್ಯಾಬ್ಲೊ ಅಬಿಯಾನ್ ೨೧-೧೫, ೧೨-೨೧, ೨೧-೧೪ರ ಮೂರು ಗೇಮ್‌ಗಳ ಆಟದಲ್ಲಿ ಕಿಡಾಂಬಿ ಜಯಭೇರಿ ಬಾರಿಸಿದರು.

ಇತ್ತ, ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸಿಂಧು, ಇಂಡೋನೇಷಿಯಾ ಆಟಗಾರ್ತಿ ಫಿಟ್ರಿಯಾನಿ ಫಿಟ್ರಿಯಾನಿ ವಿರುದ್ಧ ನೇರ ಗೇಮ್‌ಗಳಲ್ಲಿ ಗೆಲುವು ಪಡೆದು ಪ್ರೀಕ್ವಾರ್ಟರ್‌ಫೈನಲ್‌ಗೆ ಧಾವಿಸಿದರು. ಆಕ್ರಮಣಕಾರಿ ಆಟವಾಡಿದ ಸಿಂಧು, ಫಿಟ್ರಿಯಾನಿಯನ್ನು ೨೧-೧೪, ೨೧-೯ರ ಎರಡು ನೇರ ಗೇಮ್‌ಗಳಲ್ಲಿ ಮಣಿಸಿದರು.

ಮೊದಲ ಗೇಮ್‌ನಲ್ಲಿ ಕೊಂಚ ಪ್ರತಿರೋಧ ನೀಡಿದ ಫಿಟ್ರಿಯಾನಿ ಎರಡನೇ ಗೇಮ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದರು. ಸಿಂಧುವಿನ ಆಕ್ರಮಣಕಾರಿ ದಾಳಿಯನ್ನು ಹತ್ತಿಕ್ಕಲು ಆಕೆಯಿಂದ ಆಗಲಿಲ್ಲ. ಪ್ರಚಂಡ ಆಟವಾಡಿದ ಸಿಂಧು, ಇಂಡೋನೇಷಿಯಾ ಆಟಗಾರ್ತಿ ಒಂದೊಂದುಪ ಪಾಯಿಂಟ್ಸ್‌ಗೂ ತಿಣುಕುವಂತೆ ಮಾಡಿದರು. ಕೇವಲ ೩೫ ನಿಮಿಷಗಳಲ್ಲೇ ಪಂದ್ಯವನ್ನು ಸಿಂಧು ಕೈವಶ ಮಾಡಿಕೊಂಡು ತೃತೀಯ ಸುತ್ತಿಗೆ ಸಾಗಿದರು.

ಇದನ್ನೂ ಓದಿ : ವಿಶ್ವ ಬ್ಯಾಡ್ಮಿಂಟನ್ | ಪ್ರಯಾಸದ ಜಯ ಸಾಧಿಸಿದ ಕಿಡಾಂಬಿ ಪ್ರೀ ಕ್ವಾರ್ಟರ್‌ಗೆ

ಸಾಯಿ ಪ್ರಣೀತ್‌ ಮುನ್ನಡೆ

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಾಯಿ ಪ್ರಣೀತ್ ಕೂಡಾ ಗೆಲುವಿನ ಸಿಹಿಯುಂಡರು. ಸ್ಪೇನ್ ಆಟಗಾರ ಲೂಯಿಸ್ ಎನ್ರಿಕ್ ಪೆನಾಲ್ವೆರ್ ವಿರುದ್ಧದ ಹಣಾಹಣಿಯಲ್ಲಿ ೨೧-೧೮, ೨೧-೧೧ರ ಎರಡು ನೇರ ಗೇಮ್‌ಗಳಲ್ಲಿ ಸಾಯಿ ಪ್ರಣೀತ್ ಜಯಭೇರಿ ಬಾರಿಸಿ ಮುಂದಿನ ಸುತ್ತಿಗೆ ನಡೆದರು. ಆದರೆ, ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಪ್ರಣಯ್ ನಿರಾಸೆ ಅನುಭವಿಸಿದರು.

ಬ್ರೆಜಿಲ್ ಆಟಗಾರ ಯೊಗರ್ ಕೊಯ್ಲೊ ವಿರುದ್ಧದ ಮೂರು ಗೇಮ್‌ಗಳ ರೋಚಕ ಹಣಾಹಣಿಯಲ್ಲಿ ೮-೨೧, ೨೧-೧೬, ೨೧-೧೫ರಿಂದ ಹಿನ್ನಡೆ ಅನುಭವಿಸಿ ಟೂರ್ನಿಯಿಂದ ನಿರ್ಗಮಿಸಿದರು. ಇನ್ನು, ಪುರುಷರ ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ ಹಾಗೂ ಬಿ ಸುಮೀತ್ ರೆಡ್ಡಿ ಜೋಡಿ ಜಪಾನ್‌ನ ಟಕುಟೊ ಇಂಕ್ ಹಾಗೂ ಯುಕಿ ಕೆನೆಕೊ ಜೋಡಿ ಎದುರು ೨೪-೨೨, ೧೩-೨೧, ೧೬-೨೧ರಿಂದ ಪರಾಭವಗೊಂಡರು.

ಮಿಶ್ರ ಡಬಲ್ಸ್ ವಿಭಾಗದಲ್ಲಿಯೂ ಭಾರತ ಪರಾಭವಗೊಂಡಿತು. ಸಾತ್ವಿಕ್ಸಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯನ್ನು ಇಂಡೋನೇಷಿಯಾದ ಆಂಡ್ರೆಸ್ ರಸ್ಮುಸೆನ್ ಹಾಗೂ ಕಿಮ್ ಆಸ್ಟ್ರುಪ್ ಜೋಡಿ ೨೧-೧೮, ೧೫-೨೧, ೨೧-೧೬ರಿಂದ ಮಣಿಸಿದರೆ, ವನಿತೆಯರ ಡಬಲ್ಸ್ ವಿಭಾಗದಲ್ಲಿ ಜಪಾನ್ ಜೋಡಿ ಯುಕಿ ಫುಕುಶಿಮಾ ಮತ್ತು ಸಯಾಕ ಹಿರೋಟ ಕನ್ನಡಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್ ಸಿಕಿ ರೆಡ್ಡಿ ಜೋಡಿಯನ್ನು ೨೧-೧೪, ೨೧-೧೫ರ ಎರಡು ನೇರ ಗೇಮ್‌ಗಳಲ್ಲಿ ಸೋಲಿಸಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More