ಮತ್ತೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್!

ಜನವರಿ ೨, ೨೦೧೭ರಂದು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲ್ಪಟ್ಟ ಆದೇಶ ಪರಿಶೀಲನೆಗೆ ಅನುರಾಗ್ ಠಾಕೂರ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಿವೃತ್ತ ನ್ಯಾ. ಆರ್ ಎಂ ಲೋಧಾ ನಿಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ವಿಫಲವಾದ್ದರಿಂದ ಠಾಕೂರ್ ಭಾರೀ ಬೆಲೆ ತೆತ್ತಿದ್ದರು

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪರಿಷ್ಕೃತ ಸಂವಿಧಾನ ಕುರಿತ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟವಾಗುವುದು ಸನ್ನಿಹಿತವಾಗುತ್ತಿದೆ. ಇದೇ ವೇಳೆ ಮಾಜಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಮರು ಪರಿಶೀಲಿಸುವಂತೆ ಮನವಿ ಸಲ್ಲಿಸಿದ್ದಾರೆ.

ಜನವರಿ ೨, ೨೦೧೭ರಂದು ಅಂದಿನ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಠಾಕೂರ್ ಮತ್ತು ಆಗಿನ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ನಿವೃತ್ತ ನ್ಯಾಯಮೂರ್ತಿ ಆರ್ ಎಂ ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ವಿಫಲವಾಗಿದ್ದರಿಂದ ಹಾಗೂ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಜಾಗೊಳಿಸಿತ್ತು.

“ನ್ಯಾಯಾಲಯದ ಕಲಾಪಗಳು ನಡೆಯುವ ವೇಳೆ ವೈಯಕ್ತಿಕವಾಗಿ ನಾನು ಹಾಜರಿರಲಿಲ್ಲ. ನನ್ನನ್ನಾಗಲೀ ಇಲ್ಲವೇ ನನ್ನ ವಕೀಲರ ವಾದ ಮಂಡನೆಗೂ ಅವಕಾಶ ಸಿಕ್ಕಿರಲಿಲ್ಲ. ಹೀಗಿರುವಾಗ ನ್ಯಾಯಾಲಯ ನನ್ನನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ ಕ್ರಮ ಪ್ರಶ್ನಾರ್ಹವಾಗಿದೆ. ಮೇಲಾಗಿ, ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ನನ್ನನ್ನು ಮಾನಸಿಕವಾಗಿ ಜರ್ಜರಿತನನ್ನಾಗಿ ಮಾಡಿರುವುದಲ್ಲದೆ, ಸಾರ್ವಜನಿಕ ವಲಯದಲ್ಲಿಯೂ ಮುಜುಗರ ಅನುಭವಿಸುವಂತಾಗಿದೆ,’’ ಎಂದು ಬಿಜೆಪಿ ಸಂಸದರೂ ಆಗಿರುವ ಠಾಕೂರ್ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ : ಬಿಸಿಸಿಐ ನಿಯಂತ್ರಣಕ್ಕೆ ಕಠಿಣ ನಿಯಮಗಳು ಮೂಗುದಾರವೇ ಹೊರತು ಸಡಿಲ ಸೂತ್ರವಲ್ಲ!

‘ಒಂದು ರಾಜ್ಯ ಒಂದು ಮತ’, ‘ಕೂಲಿಂಗ್ ಆಫ್’ನಂಥ ಪ್ರಮುಖ ಶಿಫಾರಸುಗಳ ಪುನರ್ ಪರಿಶೀಲನೆಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಅಸ್ತು ಎಂದಿರುವ ಬೆನ್ನಿಗೇ ಅನುರಾಗ್ ಠಾಕೂರ್ ಕಳೆದ ವರ್ಷ ತಮ್ಮ ವಿರುದ್ಧ ನ್ಯಾಯಾಲಯ ತಳೆದ ತೀರ್ಪಿನ ಕುರಿತು ಪುನರ್ ಪರಿಶೀಲನೆಗೆ ಕೋರಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಜುಲೈ ೫ರಂದು ನ್ಯಾಯಮೂರ್ತಿ ಅಮಿತ್ ಮಿಶ್ರಾ, ನ್ಯಾಯಾಧೀಶರುಗಳಾದ ಎ ಎಂ ಖನ್ವೀಲ್ಕರ್ ಹಾಗೂ ಡಿ ವೈ ಚಂದ್ರಚೂಡ್ ಅವರಿದ್ದ ತ್ರಿಸದಸ್ಯ ಪೀಠ, ವಿನೋದ್ ರಾಯ್ ನೇತೃತ್ವದ ಬಿಸಿಸಿಐ ಆಡಳಿತ ಸಮಿತಿ ಸಲ್ಲಿಸಿದ ೯ನೇ ಸ್ಟೇಟಸ್ ವರದಿ ವಿಚಾರಣೆಗೆ ಸಮ್ಮತಿ ನೀಡಿತ್ತಲ್ಲದೆ, ಜುಲೈ ೧೮, ೨೦೧೬ರ ಸುಪ್ರೀಂ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸುವಂತೆಯೂ, ಮುಖ್ಯವಾಗಿ ‘ಒಂದು ರಾಜ್ಯ ಒಂದು ಮತ’ ಹಾಗೂ ‘ಕೂಲಿಂಗ್ ಆಫ್’ನಂಥ ಶಿಫಾರಸುಗಳನ್ನು ಪರಿಷ್ಕರಿಸುವಂತೆಯೂ ಬಿಸಿಸಿಐ ಪದಾಧಿಕಾರಿಗಳು ಪಟ್ಟು ಹಿಡಿದಿದ್ದಾರೆ ಎಂದು ವಿನೋದ್ ರಾಯ್ ನೇತೃತ್ವದ ಬಿಸಿಸಿಐ ಆಡಳಿತ ಸಮಿತಿ ವರದಿ ಸಲ್ಲಿಸಿತ್ತು.

ಆರ್ ಎಂ ಲೋಧಾ ಸಮಿತಿಯ ಶಿಫಾರಸುಗಳನ್ನು ಆರಂಭದಿಂದಲೂ ಬಿಸಿಸಿಐ ಪದಾಧಿಕಾರಿಗಳು ವಿರೋಧಿಸುತ್ತಲೇ ಬಂದಿದ್ದಾರೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಹಾಗೂ ಬೆಟ್ಟಿಂಗ್ ಪ್ರಕರಣ ಸ್ಫೋಟಿಸಿದ ನಂತರದಲ್ಲಿ ಆಗಸ್ಟ್ ೭, ೨೦೧೩ರಿಂದ ಜುಲೈ ೫, ೨೦೧೮ರವರೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸರಿಸುಮಾರು ೧೭೩ ವಿಚಾರಣೆಗಳು ಜರುಗಿವೆ. ಪ್ರಸ್ತುತ ದೀಪಕ್ ಮಿಶ್ರಾ ಸೇರಿದಂತೆ ನಾಲ್ವರು ನ್ಯಾಯಮೂರ್ತಿಗಳು ಮತ್ತು ಹನ್ನೆರಡಕ್ಕೂ ಹೆಚ್ಚು ನ್ಯಾಯಾಧೀಶರುಗಳು ಬಿಸಿಸಿಐ ಪ್ರಕರಣದ ವಿಚಾರಣೆ ನಡೆಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More