ಅಶ್ವಿನ್ ಕೈಚಳಕದಲ್ಲಿ ಆತಿಥೇಯರ ಹಿನ್ನಡೆಗೆ ಕಾರಣವಾದ ರೂಟ್ ರನೌಟ್!

ಸಹಸ್ರ ಟೆಸ್ಟ್ ಪಂದ್ಯವನ್ನು ಗೆಲ್ಲುವ ಹುಮ್ಮಸ್ಸಿನಲ್ಲಿರುವ ಆತಿಥೇಯ ಇಂಗ್ಲೆಂಡ್ ಎಜ್‌ಬ್ಯಾಸ್ಟನ್‌ನಲ್ಲಿ ಬುಧವಾರ (ಆ.೧) ಶುರುವಾದ ಮೊದಲ ಟೆಸ್ಟ್‌ನಲ್ಲಿ ಕೊಂಚ ತಡವರಿಸಿದೆ. ಸ್ಪಿನ್ ಮೋಡಿಗಾರ ಅಶ್ವಿನ್ (೬೦ಕ್ಕೆ ೪) ಕೈಚಳಕ ಭಾರತಕ್ಕೆ ವರದಾನವಾದರೆ, ಜೋ ರೂಟ್ ನಿರ್ಗಮನ ಆತಿಥೇಯರಿಗೆ ಹಿನ್ನಡೆ ತಂದಿತು

ಇಂಗ್ಲೆಂಡ್ ವಿರುದ್ಧದ ಚುಟುಕು ಸರಣಿಯಲ್ಲಿ ಭಾರತ ಗೆಲುವು ಸಾಧಿಸಲು ಚೈನಾಮನ್ ಕುಲದೀಪ್ ಯಾದವ್ ಬಹುಪಾಲು ನೆರವಾಗಿದ್ದರು. ಚುಟುಕು ಸರಣಿಯನ್ನು ೨-೧ರಿಂದ ಗೆಲ್ಲುತ್ತಿದ್ದಂತೆ, ಟೆಸ್ಟ್‌ ಪಂದ್ಯಗಳಿಗೂ ತನ್ನನ್ನು ಪರಿಗಣಿಸುವಂತೆ ಕುಲದೀಪ್ ಪ್ರೇರೇಪಿಸುತ್ತಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಉದ್ಗರಿಸಿದ್ದರು. ಆದರೆ, ಎಜ್‌ಬ್ಯಾಸ್ಟನ್ ಟೆಸ್ಟ್‌ನಲ್ಲಿ ಅನುಭವ ಎಷ್ಟರಮಟ್ಟಿಗೆ ಮಹತ್ವನೀಯ ಪಾತ್ರ ವಹಿಸುತ್ತದೆ ಎಂಬುದನ್ನು ಆಫ್‌ಸ್ಪಿನ್ನರ್ ಆರ್ ಅಶ್ವಿನ್ ನಿರೂಪಿಸಿದರು.

ಆತಿಥೇಯರ ಪಾಲಿನ ಐತಿಹಾಸಿಕ ಟೆಸ್ಟ್‌ನ ಮೊದಲ ದಿನವೇ ಅಶ್ವಿನ್ ಮನಮೋಹಕ ಸ್ಪೆಲ್‌ನಿಂದ ಗಮನ ಸೆಳೆದಿದ್ದಾರೆ. ಮೊದಲ ದಿನದಾಟ ನಿಂತಾಗ ಇಂಗ್ಲೆಂಡ್, ೮೮ ಓವರ್‌ಗಳಲ್ಲಿ ೯ ವಿಕೆಟ್ ಕಳೆದುಕೊಂಡು ೨೮೫ ರನ್ ಗಳಿಸಿದೆ. ಜೋ ರೂಟ್ (೮೦: ೧೫೬ ಎಸೆತ, ೯ ಬೌಂಡರಿ) ಮತ್ತು ಜಾನಿ ಬೇರ್‌ಸ್ಟೋ (೭೦: ೮೮ ಎಸೆತ, ೯ ಬೌಂಡರಿ) ಅರ್ಧಶತಕ ಇಂಗ್ಲೆಂಡ್ ಇನ್ನಿಂಗ್ಸ್‌ನ ಜೀವಾಳವಾಯಿತು. ಆಲ್ರೌಂಡರ್ ಸ್ಯಾಮ್ ಕುರನ್ (೨೪) ಮತ್ತು ವೇಗಿ ಜೇಮ್ಸ್ ಆ್ಯಂಡರ್ಸನ್ ಯಾವುದೇ ರನ್ ಗಳಿಸದೆ ಕ್ರೀಸ್‌ನಲ್ಲಿ ಉಳಿದಿದ್ದಾರೆ. ೯ ಎಸೆತಗಳನ್ನು ಎದುರಿಸಿರುವ ಜೇಮ್ಸ್ ಇನ್ನಷ್ಟೇ ಖಾತೆ ತೆರೆಯಬೇಕಿದೆ.

ಮೊದಲ ದಿನದಾಟದ ಸೂಕ್ಷ್ಮತೆಯನ್ನು ಗಮನಿಸುವುದಾದರೆ, ಪ್ರವಾಸಿ ಭಾರತ ತಂಡ ಆತಿಥೇಯರ ಮೇಲೆ ಸಂಪೂರ್ಣ ಹಿಡಿತ ಸಾಧಿಸದೆ ಹೋದರೂ, ರೂಟ್ ಪಡೆಯ ಮೇಲೆ ತುಸು ಒತ್ತಡ ಹೇರುವುದರಲ್ಲಂತೂ ಸಫಲವಾಗಿದೆ ಎನ್ನಬಹುದು. ಒಂದೊಮ್ಮೆ ರೂಟ್ ರನೌಟ್ ಆಗದೆ ಹೋಗಿದ್ದರೆ ಇಂಗ್ಲೆಂಡ್ ಇನ್ನಷ್ಟು ರನ್‌ಗಳನ್ನು ಪೇರಿಸುತ್ತಿತ್ತೆಂಬುದರಲ್ಲಿ ಯಾವ ಸಂದೇಹವೂ ಇರಲಿಲ್ಲ. ಮೇಲಾಗಿ, ಅವರು ಕ್ರೀಸ್‌ಗೆ ಕಚ್ಚಿನಿಂತಿದ್ದರು ಬೇರೆ. ಆದರೆ, ಕೊಹ್ಲಿಯ ಕರಾರುವಾಕ್ ಎಸೆತ ಅವರನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಸಫಲವಾಯಿತು.

ಕುಕ್ ವೈಫಲ್ಯ

ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಅಲೆಸ್ಟೈರ್ ಕುಕ್ ಅಭ್ಯಾಸ ಪಂದ್ಯದಲ್ಲಿಅಮೋಘ ಶತಕ ದಾಖಲಿಸಿದ್ದರಿಂದ ಸಹಜವಾಗಿಯೇ ಭೀತಿ ಮೂಡಿಸಿದ್ದರು. ಆದರೆ, ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಅಶ್ವಿನ್ ಬಿಡಲಿಲ್ಲ. ಇನ್ನಿಂಗ್ಸ್‌ನ ಒಂಬತ್ತನೇ ಓವರ್‌ನಲ್ಲಿ ಅಶ್ವಿನ್ ಸೊಗಸಾದ ಎಸೆತವೊಂದು ಅವರನ್ನು ಕ್ಲೀನ್ ಬೌಲ್ಡ್ ಮಾಡಿತು. ೨೮ ಎಸೆತಗಳನ್ನುಎದುರಿಸಿದ ಕುಕ್, ೨ ಬೌಂಡರಿಗಳನ್ನಷ್ಟೇ ಬಾರಿಸಿ ಪೆವಿಲಿಯನ್ ದಾರಿ ತುಳಿದರು.

ಇನ್ನು ಭರವಸೆ ಮೂಡಿಸಿದ್ದ ಕೀಟನ್ ಜೆನ್ನಿಂಗ್ಸ್ (೪೨: ೯೮ ಎಸೆತ, ೪ ಬೌಂಡರಿ) ನಾಯಕ ರೂಟ್ ಜತೆಗೆ ಉತ್ತಮ ಇನ್ನಿಂಗ್ಸ್ ಕಟ್ಟುವ ಸುಳಿವು ನೀಡಿದರು. ಕುಕ್ ಜತೆಗೆ ಮೊದಲ ವಿಕೆಟ್‌ಗೆ ೨೬ ರನ್ ಕಲೆಹಾಕಿದ್ದ ಜೆನ್ನಿಂಗ್ಸ್, ಕೆಲವು ಆಕರ್ಷಕ ಸ್ಟ್ರೋಕ್‌ಗಳೊಂದಿಗೆ ಭಾರತೀಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸುತ್ತಾ ಸಾಗಿದರು. ಮತ್ತೊಂದು ಬದಿಯಲ್ಲಿ ರೂಟ್ ಕೂಡ ಅವರಿಗೆ ಸೂಕ್ತ ಬೆಂಬಲ ನೀಡಿದರು.

ರೂಟ್ ಮತ್ತು ಜೆನ್ನಿಂಗ್ಸ್ ಜೋಡಿ ಅಪಾಯಕಾರಿಯಾಗುವ ಎಲ್ಲ ಲಕ್ಷಣವೂ ಗೋಚರಿಸ ತೊಡಗುತ್ತಿದ್ದಂತೆ ಅಪಾಯದ ಸುಳಿವರಿತ ಕೊಹ್ಲಿ, ಚೆಂಡನ್ನು ಮೊಹಮದ್ ಶಮಿ ಕೈಗಿತ್ತರು. ೩೬ನೇ ಓವರ್‌ನ ಮೊದಲ ಎಸೆತದಲ್ಲೇ ಶಮಿ, ಜೆನ್ನಿಂಗ್ಸ್ ಅವರನ್ನು ಬೌಲ್ಡ್ ಮಾಡಿ ಕೊಹ್ಲಿಯ ಮೊಗದಲ್ಲಿ ಲಾಸ್ಯವೆಬ್ಬಿಸಿದರು. ರೂಟ್ ಮತ್ತು ಜೆನ್ನಿಂಗ್ಸ್ ಎರಡನೇ ವಿಕೆಟ್‌ಗೆ ೭೨ ರನ್ ಪೇರಿಸಿದರು.

ಇದನ್ನೂ ಓದಿ : ಇಂಗ್ಲೆಂಡ್‌ನಲ್ಲಿ ನಾನೇನೂ ಸಾಧಿಸಿ ತೋರಿಸಬೇಕಿಲ್ಲ ಎಂದ ವಿರಾಟ್ ಕೊಹ್ಲಿ

ರೂಟ್-ಜಾನಿ ಜತೆಯಾಟ

ಜೆನ್ನಿಂಗ್ಸ್ ನಿರ್ಗಮನದ ನಂತರದಲ್ಲಿ ಆಡಲಿಳಿದ ದಾವಿಡ್ ಮ್ಯಾಲನ್ (೮) ಕೂಡಾ ಇದೇ ಶಮಿ ಹೆಣೆದ ಎಲ್‌ಬಿ ಬಲೆಯಲ್ಲಿ ಸಿಲುಕಿ ಪೆವಿಲಿಯನ್ ದಾರಿ ತುಳಿದರು. ಈ ಹಂತದಲ್ಲಿ ಜತೆಯಾದ ರೂಟ್ ಹಾಗೂ ವಿಕೆಟ್‌ಕೀಪರ್ ಜಾನಿ ಬೇರ್‌ಸ್ಟೊ ಅವರನ್ನು ಕೂಡಿಕೊಂಡ ರೂಟ್ ತಂಡದ ಇನ್ನಿಂಗ್ಸ್‌ಗೆ ಚೇತರಿಕೆ ನೀಡುವಲ್ಲಿ ಮುಂದಾದರು. ಇಂಗ್ಲೆಂಡ್‌ ಪಾಲಿಗೆ ಸಿಕ್ಕ ಬಹುದೊಡ್ಡ ಹಾಗೂ ಜವಾಬ್ದಾರಿಯುತ ಜತೆಯಾಟವೆಂದರೆ ಅದು ರೂಟ್ ಮತ್ತು ಜಾನಿಯ ಇನ್ನಿಂಗ್ಸ್ ಮಾತ್ರವೇ.

ಅದ್ಭುತ ಹೊಂದಾಣಿಕೆಯೊಂದಿಗೆ ಬ್ಯಾಟ್ ಬೀಸಿದ ಈ ಜೋಡಿ ತಂಡದ ಇನ್ನಿಂಗ್ಸ್‌ಗೆ ಬಲ ನೀಡಿತು. ಸಹಜತೆಯ ಆಕ್ರಮಣಶೀಲತೆಯಲ್ಲಿ ಜಾನಿ ಬ್ಯಾಟ್ ಬೀಸಿದರೆ, ರೂಟ್ ಬ್ಯಾಟಿಂಗ್ ಎಂದಿನ ಪಕ್ವತೆಯಿಂದ ಕೂಡಿದ್ದುದಾಗಿತ್ತು. ಸ್ಪಿನ್ ಮತ್ತು ವೇಗದ ಬೌಲಿಂಗ್‌ಗೆ ಎಚ್ಚರಿಕೆಯಿಂದ ಉತ್ತರಿಸುತ್ತಿದ್ದ ಈ ಜೋಡಿ ಬಹುದೊಡ್ಡ ಜತೆಯಾಟ ನೀಡುವ ಸಾಧ್ಯತೆಯೂ ಇತ್ತು. ಆದರೆ, ೬೩ನೇ ಓವರ್‌ನಲ್ಲಿ ಅಶ್ವಿನ್ ಬೌಲಿಂಗ್‌ನಲ್ಲಿ ಕೊಹ್ಲಿಯ ನೇರ ಹಾಗೂ ಕರಾರುವಾಕ್ ಎಸೆತವು ರೂಟ್ ರನೌಟ್‌ಗೆ ಕಾರಣವಾಗಿ ಇಂಗ್ಲೆಂಡ್‌ನ ಉಪಯುಕ್ತ ಜತೆಯಾಟವನ್ನೂ ತುಂಡರಿಸಿತು.

ರೂಟ್ ನಿರ್ಗಮನದ ನಂತರದಲ್ಲಿ ಜಾನಿ ಬೇರ್‌ಸ್ಟೋ ಕೂಡಾ ಹೆಚ್ಚು ಹೊತ್ತು ಕ್ರಿಸ್‌ನಲ್ಲಿ ಉಳಿಯಲಿಲ್ಲ. ೬೬ನೇ ಓವರ್‌ನ ಕೊನೇ ಎಸೆತದಲ್ಲಿ ವೇಗಿ ಉಮೇಶ್ ಯಾದವ್, ಜಾನಿಯನ್ನು ಕ್ಲೀನ್‌ಬೌಲ್ಡ್ ಮಾಡಿ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ರೂಟ್ ಮತ್ತು ಜಾನಿ ಬೇರ್‌ಸ್ಟೋ ೧೦೪ ರನ್‌ಗಳ ಜತೆಯಾಟವಾಡಿದರು. ಜಾನಿ ಮತ್ತು ರೂಟ್ ವಿಕೆಟ್ ಕಳೆದುಕೊಳ್ಳುತ್ತಲೇ ಇಂಗ್ಲೆಂಡ್‌ನ ಇನ್ನಿಂಗ್ಸ್ ಕೂಡಾ ತಳಕಚ್ಚಿತು. ಅಂದಹಾಗೆ, ೩೯ನೇ ಓವರ್‌ನ ಎರಡನೇ ಎಸೆತದಲ್ಲಿ ರೂಟ್ ಅಶ್ವಿನ್ ಬೌಲಿಂಗ್‌ನಲ್ಲಿ ಬೌಂಡರಿ ಗೆರೆ ದಾಟಿಸುವುದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ೬೦೦೦ ರನ್ ಪೂರೈಸಿದ ದಾಖಲೆ ಬರೆದರು.

ಅಶ್ವಿನ್ ಮೋಡಿ

ಹೆಜ್ಜೆ ಹೆಜ್ಜೆಗೂ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಅಶ್ವಿನ್, ಮಧ್ಯಮ ಕ್ರಮಾಂಕವನ್ನು ಅಸ್ಥಿರಗೊಳಿಸಿದರು. ಬೆನ್ ಸ್ಟೋಕ್ಸ್ (೨೧), ಜೋಸ್ ಬಟ್ಲರ್ (೦) ವಿಕೆಟ್ ಎಗರಿಸಿದ ಅಶ್ವಿನ್, ದಿನಾಂತ್ಯದಲ್ಲಿ ಆಡಲಿಳಿದ ಸ್ಟುವರ್ಟ್ ಬ್ರಾಡ್ (೧) ಅವರನ್ನು ಎಲ್‌ಬಿ ಬಲೆಗೆ ಕೆಡವಿದರು. ಇನ್ನು, ಆದಿಲ್ ರಶೀದ್ (೧೩) ಅವರನ್ನು ಇಶಾಂತ್ ಎಲ್‌ಬಿ ಬಲೆಗೆ ಸಿಕ್ಕಿಸಿದರು. ಅಶ್ವಿನ್ ಪಡೆದ ನಾಲ್ಕು ವಿಕೆಟ್‌ಗಳ ಪೈಕಿ ಕುಕ್ ವಿಕೆಟ್ ಭಾರತದ ಮಟ್ಟಿಗೆ ಮಹತ್ವಪೂರ್ಣವೆನಿಸಿತು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ೮೮ ಓವರ್‌ಗಳಲ್ಲಿ ೨೮೫/೯ (ಜೋ ರೂಟ್ ೮೦, ಜಾನಿ ಬೇರ್‌ಸ್ಟೋ ೭೦; ಅಶ್ವಿನ್ ೬೦ಕ್ಕೆ ೪; ಮೊಹಮದ್ ಶಮಿ ೬೪ಕ್ಕೆ ೨; ಸ್ಯಾಮ್ ಕುರನ್ ೨೪*; ಜೇಮ್ಸ್ ಆ್ಯಂಡರ್ಸನ್ ೦*).

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More