ವಿಶ್ವ ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಸೈನಾ ದಾಪುಗಾಲು, ಶ್ರೀಕಾಂತ್ ನಿರ್ಗಮನ

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಎಂಟರ ಘಟ್ಟಕ್ಕೆ ಕಾಲಿಟ್ಟಿದ್ದಾರೆ. ಗುರುವಾರ (ಆ.೨) ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಥಾಯ್ ಆಟಗಾರ್ತಿ ರಚಾನಕ್ ವಿರುದ್ಧ ೨೧-೧೬, ೨೧-೧೯ರಿಂದ ಸೈನಾ ಜಯಿಸಿದರು

ಸ್ಪರ್ಧಾತ್ಮಕ ಹಣಾಹಣಿಯನ್ನು ನಿರೀಕ್ಷಿಸಿದ್ದ ಪಂದ್ಯದಲ್ಲಿ ಸೈನಾ, ಥಾಯ್ಲೆಂಡ್ ಆಟಗಾರ್ತಿ ವಿರುದ್ಧ ಸುನಾಯಾಸ ಗೆಲುವು ಸಾಧಿಸಿದರು. ವೃತ್ತಿಬದುಕಿನ ಒಟ್ಟಾರೆ ಮುಖಾಮುಖಿಯಲ್ಲಿ ರಚಾನಕ್ ವಿರುದ್ಧ ೯-೫ರ ಪ್ರಭುತ್ವ ಮೆರೆದಿದ್ದ ೨೦೧೪ರ ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಸೈನಾ, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮತ್ತೊಂದು ಹೆಜ್ಜೆ ಕ್ರಮಿಸಿದರು.

ಈ ಋತುವಿನಲ್ಲಿ ಒಮ್ಮೆ ಮಾತ್ರ ಎದುರುಬದುರಾಗಿದ್ದ ಸೈನಾ ಮತ್ತು ರಚಾನಕ್ ಪೈಕಿ ಸೈನಾ ಗೆಲುವು ಸಾಧಿಸಿದ್ದರು. ಇದೀಗ ಮತ್ತೊಮ್ಮೆ ಥಾಯ್ ಆಟಗಾರ್ತಿಯನ್ನು ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟರು. ಮೊದಲ ಗೇಮ್‌ನಲ್ಲಿ ೨-೧ ಮುನ್ನಡೆ ಪಡೆದ ಸೈನಾ, ಆರಂಭದಿಂದಲೂ ರಚಾನಕ್ ಮೇಲೆ ಒತ್ತಡ ಹೇರಲು ಯತ್ನಿಸಿದರು.

ಆದರೆ, ಶೀಘ್ರವೇ ತಿರುಗಿಬಿದ್ದ ರಚಾನಕ್ ೫-೫ ಸಮಾಂತರ ಸಾಧಿಸಿದರು. ಮಾತ್ರವಲ್ಲ, ಮತ್ತೆ ೩ ಪಾಯಿಂಟ್ಸ್ ಕಲೆಹಾಕಿದ ಥಾಯ್ ಆಟಗಾರ್ತಿ ಸೈನಾಗೆ ಸವಾಲೊಡ್ಡಿದರು. ರಚಾನಕ್ ರಚನಾತ್ಮಕ ಆಟಕ್ಕೆ ಕಂಗೆಡದ ಸೈನಾ ಕೂಡಾ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಅದರ ಫಲವಾಗಿ ೮-೮, ೧೦-೮ರಿಂದ ಮುನ್ನಡೆ ಪಡೆದ ಸೈನಾ, ಬಳಿಕ ೧೫-೧೨ರ ಅಂತರ ಕಾಯ್ದುಕೊಂಡರು. ರಚಾನಕ್ ಎರಡು ಗೇಮ್ ಪಾಯಿಂಟ್ಸ್ ಕಲೆಹಾಕಿದರೂ, ಸೈನಾ ೨೧-೧೬ರಿಂದ ಗೇಮ್ ವಶಕ್ಕೆ ಪಡೆದರು.

ಇದನ್ನೂ ಓದಿ : ವಿಶ್ವ ಬ್ಯಾಡ್ಮಿಂಟನ್ ಸಿಂಗಲ್ಸ್‌| ಸಿಂಧು ತೃತೀಯ ಸುತ್ತಿಗೆ, ಪ್ರಣಯ್ ನಿರ್ಗಮನ

ಇನ್ನು, ಎರಡನೇ ಗೇಮ್‌ನಲ್ಲಿಯೂ ಸೈನಾ ಶುರುವಿನಿಂದಲೇ ಮುನ್ನಡೆ ಸಾಧಿಸಿದರು. ಪ್ರತಿಯೊಂದು ಶಾಟ್‌ಗಳಲ್ಲೂ ಎಚ್ಚರಿಕೆ ವಹಿಸಿದ ಸೈನಾ, ೯-೫ ಮುನ್ನಡೆ ಪಡೆದರು. ಮಧ್ಯಂತರದ ಹೊತ್ತಿಗೆ ೧೧-೮ರಿಂದ ಮುನ್ನಡೆ ಸಾಧಿಸಿದ ಸೈನಾ, ಕ್ರಮೇಣ ೧೮-೧೪ರಿಂದ ನಾಲ್ಕು ಪಾಯಿಂಟ್ಸ್ ಅಂತರ ಕಾಯ್ದುಕೊಂಡರು. ಇದಕ್ಕೆ ಪ್ರತಿಯಾಗಿ ರಚಾನಕ್ ಕೂಡಾ ಸತತ ನಾಲ್ಕು ಪಾಯಿಂಟ್ಸ್ ಗಳಿಸಿ ಸಮಾಂತರ ಸಾಧಿಸಿದರು.

ನಿರ್ಣಾಯಕ ಹಂತದಲ್ಲಿ ಸೈನಾ ಆಕರ್ಷಕ ಸ್ಮ್ಯಾಶ್‌ಗಳಿಂದ ೧೯-೧೯ರ ಸಮಬಲ ಪಡದು ಮತ್ತೆ ದಿಟ್ಟ ಪೈಪೋಟಿ ನೀಡಿದರು. ಆನಂತತದಲ್ಲಿ ಮ್ಯಾಚ್ ಪಾಯಿಂಟ್ಸ್ ಪಡೆದ ಸೈನಾ, ಗೆಲುವಿನ ಅಂಚಿಗೆ ಬಂದುನಿಂತರು. ತರಾತುರಿಯಲ್ಲಿದ್ದ ಥಾಯ್ ಆಟಗಾರ್ತಿ ಕೊನೇ ಹಂತದಲ್ಲಿ ಬ್ಯಾಕ್‌ಹ್ಯಾಂಡ್ ಶಾಟ್ ಅನ್ನು ನೆಟ್‌ಗೆ ತಾಗಿಸುತ್ತಿದ್ದಂತೆ ಸೈನಾ ಗೆಲುವಿನ ನಗೆಬೀರಿದರು.

ಶ್ರೀಕಾಂತ್ ನಿರ್ಗಮನ

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಿಡಾಂಬಿ ಶ್ರೀಕಾಂತ್ ತವರಿನ ಹಾದಿ ಹಿಡಿದರು. ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿಂದು ಮಲೇಷಿಯಾ ಆಟಗಾರ ಡರೆನ್ ಲಿಯೆವ್ ವಿರುದ್ಧ ಶ್ರೀಕಾಂತ್ ಎರಡು ನೇರ ಗೇಮ್‌ಗಳ ಆಟದಲ್ಲಿ ಸೋಲನುಭವಿಸಿದರು. ಈ ಹಿಂದೆಯೂ ಲಿಯೆವ್ ಎದುರಿನ ಎರಡು ಮುಖಾಮುಖಿಯಲ್ಲಿ ಭಾರತೀಯ ಆಟಗಾರ ಗೆಲುವು ಸಾಧಿಸಲಾಗಿರಲಿಲ್ಲ. ಅಂತಿಮವಾಗಿ ಇಂದು ಮಲೇಷಿಯಾ ಆಟಗಾರನ ಕೈಯಲ್ಲಿ ಹ್ಯಾಟ್ರಿಕ್ ಸೋಲನುಭವಿಸಿದರು.

ವಿಶ್ವದ ೩೮ನೇ ಶ್ರೇಯಾಂಕಿತ ಆಟಗಾರ ಲಿಯೆವ್ ಎದುರಿನ ಪಂದ್ಯದಲ್ಲಿ ವಿಶ್ವದ ಆರನೇ ಶ್ರೇಯಾಂಕಿತ ಶ್ರೀಕಾಂತ್ ಪ್ರತಿರೋಧದ ಮಧ್ಯೆಯೂ ೧೮-೨೧, ೧೮-೨೧ರ ಎರಡು ನೇರ ಗೇಮ್‌ಗಳಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದರು. ಎರಡನೇ ಸುತ್ತಿನಲ್ಲೇ ಎಚ್ ಎಸ್ ಪ್ರಣಯ್ ಸೋಲನುಭವಿಸಿದರೆ, ಇದೀಗ ಶ್ರೀಕಾಂತ್ ಮೂರನೇ ಸುತ್ತಿನಲ್ಲಿ ಪರಾಭವಗೊಂಡಿದ್ದು, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಾಯಿ ಪ್ರಣೀತ್ ಭರವಸೆ ಮೂಡಿಸಿದ್ದಾರೆ.

ನಿರ್ಣಾಯಕ ಹಂತದಲ್ಲಿ ಮಲೇಷಿಯಾ ಆಟಗಾರ ಎಸಗಿದ ಕೆಲವೊಂದು ತಪ್ಪುಗಳನ್ನು ಶ್ರೀಕಾಂತ್ ಲಾಭವಾಗಿಸಿಕೊಳ್ಳಲು ವಿಫಲವಾದರು. ಅದರಲ್ಲೂ ಎರಡನೇ ಗೇಮ್‌ನಲ್ಲಿ ೧೮-೧೮ರಿಂದ ಸಮಬಲ ಸಾಧಿಸಿದ್ದಾಗಲೂ ಶ್ರೀಕಾಂತ್, ಪಾಯಿಂಟ್‌ ಒಂದನ್ನು ಬಿಟ್ಟುಕೊಟ್ಟು ಬಹುದೊಡ್ಡ ಪ್ರಮಾದವೆಸಗಿದರು. ಇತ್ತ, ಶ್ರೀಕಾಂತ್ ತಪ್ಪಿನ ಲಾಭ ಪಡೆದ ಲಿಯೆವ್ ಮ್ಯಾಚ್ ಪಾಯಿಂಟ್ಸ್‌ನೊಂದಿಗೆ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಹಾಕಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More