ವಿಶ್ವ ಬ್ಯಾಡ್ಮಿಂಟನ್ | ಸಿಂಧು, ಸಾಯಿ ಪ್ರಣೀತ್ ಕ್ವಾರ್ಟರ್‌ಫೈನಲ್‌ ಪ್ರವೇಶ

ಇಂದು (ಆ.2) ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸ್ಪರ್ಧಾವಳಿಯಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಅಂತೆಯೇ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಯುವ ಆಟಗಾರ ಸಾಯಿ ಪ್ರಣೀತ್ ಕೂಡ ಎಂಟರ ಘಟ್ಟಕ್ಕೆ ಲಗ್ಗೆ ಹಾಕಿದರು

ಕಳೆದ ಸಾಲಿನ ರನ್ನರ್‌ಅಪ್ ಪಿ ವಿ ಸಿಂಧು, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮತ್ತೊಂದು ಹೆಜ್ಜೆ ಇರಿಸಿದ್ದಾರೆ. ಅಂತೆಯೇ, ಲಂಡನ್ ಒಲಿಂಪಿಕ್ಸ್ ಕಂಚು ವಿಜೇತೆ ಸೈನಾ ನೆಹ್ವಾಲ್ ಕೂಡ ಪ್ರತಿಷ್ಠಿತ ಟೂರ್ನಿಯಲ್ಲಿ ಎಂಟನೇ ಬಾರಿಗೆ ಕ್ವಾರ್ಟರ್‌ಫೈನಲ್ ತಲುಪಿದ ಸಾಧನೆ ಮಾಡಿದರು. ಆದರೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತ ಮಿಶ್ರ ಫಲ ಅನುಭವಿಸಿತು.

ಪದಕ ಫೇವರಿಟ್ ಕಿಡಾಂಬಿ ಶ್ರೀಕಾಂತ್ ಮಲೇಷ್ಯಾ ಆಟಗಾರನ ಎದುರು ೧೮-೨೧, ೧೮-೨೧ ಎರಡು ನೇರ ಗೇಮ್‌ಗಳಲ್ಲಿ ಸೋಲನುಭವಿಸಿದರು. ಆದರೆ, ಯುವ ಆಟಗಾರ ಬಿ ಸಾಯಿ ಪ್ರಣೀತ್ ಎಂಟರ ಘಟ್ಟಕ್ಕೆ ಕಾಲಿಡುವಲ್ಲಿ ಸಫಲವಾದರು. ಡೆನ್ಮಾರ್ಕ್ ಆಟಗಾರ ಹ್ಯಾನ್ಸ್ ಕ್ರಿಸ್ಟಿಯನ್ ವಿಟಿಂಗಸ್ ವಿರುದ್ಧದ ಹಣಾಹಣಿಯಲ್ಲಿ ಆಕ್ರಮಣಕಾರಿ ಆಟವಾಡಿದ ಪ್ರಣೀತ್, ೨೧-೧೩, ೨೧-೧೧ರ ಎರಡು ನೇರ ಗೇಮ್‌ಗಳಲ್ಲಿ ಸುಲಭ ಗೆಲುವು ಪಡೆದು ಮುಂದಿನ ಸುತ್ತಿಗೆ ಅರ್ಹತೆ ಗಿಟ್ಟಿಸಿದರು.

ಶುಕ್ರವಾರ (ಆ.3) ನಡೆಯಲಿರುವ ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಸಾಯಿ ಪ್ರಣೀತ್ ಜಪಾನ್ ಆಟಗಾರ ಕೆಂಟೊ ಮೊಮಾಟ ವಿರುದ್ಧ ಕಾದಾಡಲಿದ್ದಾರೆ.

ಸೈನಾ-ಮರಿನ್ ಕಾದಾಟ

ಸತತ ಎಂಟನೇ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಎಂಟರ ಘಟ್ಟ ತಲುಪಿರುವ ಸೈನಾ ನೆಹ್ವಾಲ್, ಶುಕ್ರವಾರ ಅಗ್ನಿಪರೀಕ್ಷೆ ಎದುರಿಸಲಿದ್ದಾರೆ. ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಕೆರೋಲಿನಾ ಮರಿನ್ ಎದುರು ಸೈನಾ ಸೆಮಿಫೈನಲ್‌ಗಾಗಿ ಕಾದಾಡಲಿದ್ದಾರೆ. “ನನ್ನ ಪಾಲಿಗಿದು ಅತ್ಯಂತ ಸವಾಲಿನಿಂದ ಕೂಡಿರುವ ಪಂದ್ಯವಾಗಿರಲಿದೆ. ಮರಿನ್ ಸ್ವಭಾವತಃ ಬಿರುಸಿನ ಹಾಗೂ ಆಕ್ರಮಣಕಾರಿ ಆಟಗಾರ್ತಿ. ಆಕೆಯ ವಿರುದ್ಧ ಸುಲಭ ಗೆಲುವನ್ನು ನಿರೀಕ್ಷಿಸುವಂತಿಲ್ಲ,’’ ಎಂದು ಸೈನಾ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

ಸಿಂಧು ಗೆಲುವು

ಮಹಿಳೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ಪ್ರೀಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ದಕ್ಷಿಣ ಕೊರಿಯಾದ ಹ್ಯುನ್ ಸಂಗ್ ವಿರುದ್ಧ ಸಿಂಧು ೨೧-೧೦, ೨೧-೧೮ರಿಂದ ಗೆಲುವು ಪಡೆದರು. ವಿಶ್ವದ ಎರಡನೇ ಶ್ರೇಯಾಂಕಿತೆ ಮೊದಲ ಗೇಮ್‌ನಲ್ಲಿ ನೀರಸ ಆಟವಾಡಿದರು. ಆದರೆ, ಎರಡನೇ ಗೇಮ್‌ನಲ್ಲಿ ತುಸು ಪ್ರತಿರೋಧ ನೀಡಿದರಾದರೂ, ಸಿಂಧುವಿನ ಆಕ್ರಮಣಕಾರಿ ಆಟದೆದುರು ಆಕೆ ಸೋಲೊಪ್ಪಿಕೊಂಡರು. ಮುಂದಿನ ಸುತ್ತಿನಲ್ಲಿ ಸಿಂಧು, ಜಪಾನ್‌ನ ನೊಜೊಮಿ ಒಕುಹಾರ ವಿರುದ್ಧ ಕಾದಾಡಲಿದ್ದಾರೆ.

ಇನ್ನು, ಮಿಶ್ರ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ- ಸಾತ್ವಿಕ್‌ಸಾಯಿ ರೆಡ್ಡಿ ಜೋಡಿ ಕೂಡ ಗೆಲುವಿನ ಸವಿಯುಂಡಿತು. ಏಳನೇ ಶ್ರೇಯಾಂಕಿತ ಮಲೇಷಿಯಾ ಜೋಡಿ ಶೆವೊನ್ ಜೇಮಿ ಲಾಯ್ ಮತ್ತು ಗೂಹ್ ಸೂನ್ ಹುಟ್ ನೀಡಿದ ಕಠಿಣ ಪ್ರತಿರೋಧವನ್ನು ಅಶ್ವಿನಿ ಜೋಡಿ ೨೦-೨೨, ೨೧-೧೪, ೨೧-೬ರಿಂದ ಹತ್ತಿಕ್ಕಿತು. ಮೊದಲ ಗೇಮ್‌ ಅಂತೂ ರೋಚಕತೆಯಿಂದ ಕೂಡಿತ್ತು. ಆದರೆ, ಈ ಗೇಮ್‌ನಲ್ಲಿ ಅಶ್ವಿನಿ ಜೋಡಿ ಸೋಲಪ್ಪಿದರೂ, ಕೊನೆಯ ಎರಡೂ ಗೇಮ್‌ಗಳಲ್ಲಿ ಅಬ್ಬರದ ಆಟವಾಡಿ ಮಲೇಷ್ಯಾ ಜೋಡಿಯನ್ನು ಮಣಿಸಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More