ಸರ್ವ ಟೀಕೆಗಳಿಗೂ ಶತಕವೇ ಮದ್ದು ಎಂದ ವಿರಾಟ್ ಆಟಕ್ಕೆ ಸುಸ್ತಾದ ಇಂಗ್ಲೆಂಡ್

ಇಂಗ್ಲೆಂಡ್‌ ನೆಲದಲ್ಲಿ ತಾನೇನನ್ನೂ ಸಾಧಿಸಿ ತೋರಿಸಬೇಕಿಲ್ಲ ಎಂದಿದ್ದ ವಿರಾಟ್ ಕೊಹ್ಲಿ, ಚೊಚ್ಚಲ ಶತಕದೊಂದಿಗೆ ತನ್ನ ವಿರುದ್ಧದ ಎಲ್ಲ ಟೀಕೆ-ಟಿಪ್ಪಣಿಗಳಿಗೂ ತಕ್ಕ ಉತ್ತರ ಕೊಟ್ಟಿದ್ದಾರೆ. ಎಜ್‌ಬ್ಯಾಸ್ಟನ್ ಟೆಸ್ಟ್ ಪಂದ್ಯ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕುತೂಹಲದ ಆಗರವಾಗಿ ಮಾರ್ಪಟ್ಟಿದೆ

‘ಸರ್ವರೋಗಕ್ಕೂ ಸಾರಾಯಿ ಮದ್ದು’ ಎಂಬ ಮಾತು ಮದ್ಯಪ್ರಿಯರ ಅತ್ಯಂತ ಜನಪ್ರಿಯ ನಾಣ್ನುಡಿ! ಈ ಜನಪ್ರಿಯ ಮಾತನ್ನೇ ಕೊಹ್ಲಿಗೆ ಉದ್ಧರಿಸುವುದಾದರೆ, ಆತ ತನ್ನೆಲ್ಲ ವಿರುದ್ಧದ ಟೀಕೆ ಮತ್ತು ಟಿಪ್ಪಣಿಗಳಿಗೂ ಶತಕದಿಂದಲೇ ಉತ್ತರಿಸಿ ಬೊಬ್ಬಿರಿದಿದ್ದಾರೆ. ಕಳೆದ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಕನಿಷ್ಠ ೧೫ರ ಬ್ಯಾಟಿಂಗ್ ಸರಾಸರಿಯನ್ನೂ ಮುಟ್ಟಲಾಗದ ಕಾರಣಕ್ಕಾಗಿ ವಿರಾಟ್ ಕೊಹ್ಲಿ ಅತೀವ ಟೀಕೆಗೆ ಗುರಿಯಾಗಿದ್ದರು. ಆದರೆ, ಈ ಟೀಕೆಗಳನ್ನು ಎಜ್‌ಬ್ಯಾಸ್ಟನ್ ಟೆಸ್ಟ್‌ನಲ್ಲಿ ಮೆಟ್ಟಿನಿಂತಿದ್ದಾರೆ.

ತಂಡದ ಮಿಕ್ಕೆಲ್ಲ ಬ್ಯಾಟ್ಸ್‌ಮನ್‌ಗಳೂ ಒಬ್ಬರಾದ ಮೇಲೊಬ್ಬರಂತೆ ಕೈಚೆಲ್ಲಿದರೂ ಅದರಿಂದ ಅಧೀರವಾಗದೆ, ಇಂಗ್ಲೆಂಡ್ ಬೌಲರ್‌ಗಳ ಸಕಲ ದಾಳಿಯನ್ನೂ ಕೆಚ್ಚೆದೆಯಿಂದ ನಿಭಾಯಿಸಿದ ಕೊಹ್ಲಿ, ವೃತ್ತಿಬದುಕಿನ ೨೨ನೇ ಶತಕ ಪೂರೈಸಿದರು. ಅವರ ಈ ಏಕಾಂಗಿ ಹೋರಾಟದ ಫಲವಾಗಿ ಭಾರತ ಭಾರೀ ಹಿನ್ನಡೆ ಅನುಭವಿಸುವುದರಿಂದ ಪಾರಾಯಿತು. ಇಂಗ್ಲಿಷ್ ನೆಲದಲ್ಲಿ ಕೊಹ್ಲಿ ದಾಖಲಿಸಿದ ಚೊಚ್ಚಲ ಶತಕದ ನೆರವಿನಲ್ಲಿ ಭಾರತ ತಂಡ ೨೭೪ ರನ್‌ಗಳಿಗೆ ಆಲೌಟ್ ಆಯಿತಲ್ಲದೆ, ಕೇವಲ ೧೩ ರನ್ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತು.

ಇದಕ್ಕೆ ಪ್ರತಿಯಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್, ೧ ವಿಕೆಟ್ ನಷ್ಟಕ್ಕೆ ೯ ರನ್‌ ಗಳಿಸಿದೆ. ಅಲೆಸ್ಟೈರ್ ಕುಕ್ (೦) ವಿಕೆಟ್ ಕಳೆದುಕೊಂಡಿರುವ ಇಂಗ್ಲೆಂಡ್, ಕೇವಲ ೨೨ ರನ್ ಮುನ್ನಡೆಯಲ್ಲಿದೆ. ದಿನದಾಟ ನಿಂತಾಗ ಕೀಟನ್ ಜೆನ್ನಿಂಗ್ಸ್ (೫) ಕ್ರೀಸ್‌ನಲ್ಲಿದ್ದರು. ಮೂರನೇ ದಿನವಾದ ಶುಕ್ರವಾರದಂದು (ಆ.೩) ಆತಿಥೇಯರ ಬ್ಯಾಟಿಂಗ್‌ ಎಷ್ಟರ ಮಟ್ಟಿಗೆ ವಿಜೃಂಭಿಸುತ್ತದೆ ಎಂಬುದರ ಮೇಲೆ ಪಂದ್ಯದಲ್ಲಿ ಆಂಗ್ಲರು ಹಿಡಿತ ಸಾಧಿಸಲಿದ್ದಾರೆ.

ಇದನ್ನೂ ಓದಿ : ಅಶ್ವಿನ್ ಕೈಚಳಕದಲ್ಲಿ ಆತಿಥೇಯರ ಹಿನ್ನಡೆಗೆ ಕಾರಣವಾದ ರೂಟ್ ರನೌಟ್!

ವಿರಾಟ್‌ಮಯ

ಎಜ್‌ಬ್ಯಾಸ್ಟನ್‌ ಟೆಸ್ಟ್ ಪಂದ್ಯದ ಎರಡನೇ ದಿನ ಸಂಪೂರ್ಣ ವಿರಾಟ್‌ಮಯವಾಗಿದ್ದುದು ವಿಶೇಷ. ಇಡೀ ತಂಡದ ಅರ್ಧದಷ್ಟು ರನ್‌ಗಳನ್ನು ಏಕಾಂಗಿಯಾಗಿಯೇ ಪೇರಿಸಿದ ಕೊಹ್ಲಿ, ದಿನವಾದ್ಯಂತ ಅಮೋಘ ಬ್ಯಾಟಿಂಗ್ ನಡೆಸಿದರು. ತೀವ್ರ ಒತ್ತಡದ ಮಧ್ಯದಲ್ಲಿಯೂ ಬ್ಯಾಟಿಂಗ್‌ನಲ್ಲಿ ಭೋರ್ಗರೆದ ವಿರಾಟ್ ಕೊಹ್ಲಿ, ಸೊಗಸಾದ ಇನ್ನಿಂಗ್ಸ್ ಕಟ್ಟಿದರು. ವೇಗಿ ಸ್ಯಾಮ್ ಕರನ್ (೭೪ಕ್ಕೆ ೪), ಜೇಮ್ಸ್ ಆ್ಯಂಡರ್ಸನ್ (೪೧ಕ್ಕೆ ೨) ಹಾಗೂ ಬೆನ್ ಸ್ಟೋಕ್ಸ್ (೭೩ಕ್ಕೆ ೨) ಮನಮೋಹಕ ದಾಳಿಯ ಮಧ್ಯದಲ್ಲೂ ವಿರಾಟ್ ಆಟ ಮಹತ್ವಪೂರ್ಣವೆನಿಸಿತು.

೨೨ ಬೌಂಡರಿ, ೧ ಸಿಕ್ಸರ್ ಸೇರಿದ ಕೊಹ್ಲಿಯ ಅಮೋಘ ಇನ್ನಿಂಗ್ಸ್ ಭಾರತದ ಪಾಲಿಗೆ ವರದಾನವಾಯಿತು. ಶತಕದ ಸಾಧನೆ ಮೆರೆಯುತ್ತಿದ್ದಂತೆಯೇ ತನ್ನ ಮದುವೆ ರಿಂಗ್‌ಗೆ ಮುತ್ತಿಟ್ಟು ಕೊಹ್ಲಿ ಆನಂದಿಸಿದರು. ಇಂಗ್ಲೆಂಡ್ ನೆಲದಲ್ಲಿ ರನ್ ಗಳಿಸಲೇ ತಿಣುಕಿದ್ದ ಕೊಹ್ಲಿ, ಈ ಶತಕದೊಂದಿಗೆ ತಾನು ಎಲ್ಲಿ ಬೇಕಾದರೂ ರನ್ ಗಳಿಸುವಂಥ ಆಟಗಾರ ಎಂಬುದನ್ನು ನಿರೂಪಿಸಿದರು.

ಕೆಳ ಕ್ರಮಾಂಕಿತರ ನೆರವು

ಅಂದಹಾಗೆ, ಆಂಗ್ಲರನ್ನು ೨೮೭ ರನ್‌ಗಳಿಗೆ ನಿಯಂತ್ರಿಸಿದ ಬಳಿಕ ಇನ್ನಿಂಗ್ಸ್ ಆರಂಭಿಸಿದ ಭಾರತ ಆರಂಭದಿಂದಲೇ ದಿಕೆಟ್ಟು ಹೋಯಿತು. ಆರಂಭಿಕರಾದ ಮುರಳಿ ವಿಜಯ್ (೨೦), ಶಿಖರ್ ಧವನ್ (೨೬) ವೇಗಿ ಕರನ್‌ ದಾಳಿಯಲ್ಲಿ ವಿಕೆಟ್ ಒಪ್ಪಿಸಿದರೆ, ಕನ್ನಡಿಗ ಕೆ ಎಲ್ ರಾಹುಲ್ (೪) ಎರಡಂಕಿ ದಾಟದೆಯೇ ಕರನ್‌ಗೆ ಬೌಲ್ಡ್ ಆದರು. ಇನ್ನು, ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ (೧೫) ಮತ್ತು ದಿನೇಶ್ ಕಾರ್ತಿಕ್ (೦) ಕೂಡ ನಿರಾಸೆ ಮೂಡಿಸಿದರು. ಇತ್ತ, ನಾಯಕ ಕೊಹ್ಲಿ ಜೊತೆಗೆ ಹಾರ್ದಿಕ್ ಪಾಂಡ್ಯ (೨೨) ೪೮ ರನ್ ಜೊತೆಯಾಟವಾಡಿದರು.

ಆದರೆ, ಭಾರತದ ಇನ್ನಿಂಗ್ಸ್‌ಗೆ ಹೆಚ್ಚು ಒತ್ತಾಸೆಯಾದದ್ದು ಕೆಳ ಕ್ರಮಾಂಕಿತ ಆಟಗಾರರಿಂದ. ಇಶಾಂತ್ ಶರ್ಮಾ (೫) ಹತ್ತನೇ ಕ್ರಮಾಂಕದಲ್ಲಿ ಕೊಹ್ಲಿ ಜೊತೆ ೩೫ ರನ್ ಜೊತೆಯಾಟವಾಡಿದರೆ, ಕಡೇ ಆಟಗಾರ ಉಮೇಶ್ ಯಾದವ್ (೧) ಸಹ ಹದಿನಾರು ಎಸೆತಗಳನ್ನು ಎದುರಿಸಿ ಕೊಹ್ಲಿಗೆ ಕೊಂಚ ನೆರವು ನೀಡಿದರು. ಅಂತಿಮವಾಗಿ ಅದಿಲ್ ರಶೀದ್ ಬೌಲಿಂಗ್‌ನಲ್ಲಿ ಸ್ಟುವರ್ಟ್ ಬ್ರಾಡ್‌ಗೆ ಕೊಹ್ಲಿ ಕ್ಯಾಚ್ ನೀಡುತ್ತಿದ್ದಂತೆ ಭಾರತದ ಇನ್ನಿಂಗ್ಸ್‌ಗಷ್ಟೇ ಅಲ್ಲ, ಕೊಹ್ಲಿ ಇನ್ನಿಂಗ್ಸ್‌ಗೂ ತಡೆಬಿದ್ದಿತು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ೮೯.೪ ಓವರ್‌ಗಳಲ್ಲಿ ೨೮೭ (ಜೋ ರೂಟ್ ೮೦, ಜಾನಿ ಬೇರ್‌ಸ್ಟೋ ೭೦; ಆರ್ ಅಶ್ವಿನ್ ೬೨ಕ್ಕೆ ೪) ಭಾರತ ಮೊದಲ ಇನ್ನಿಂಗ್ಸ್: ೭೬ ಓವರ್‌ಗಳಲ್ಲಿ ೨೭೪ (ವಿರಾಟ್ ಕೊಹ್ಲಿ ೧೪೯; ಸ್ಯಾಮ್ ಕರನ್ ೭೪ಕ್ಕೆ ೪) ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್: ೩.೪ ಓವರ್‌ಗಳಲ್ಲಿ ೯/೧ (ಅಲೆಸ್ಟೈರ್ ಕುಕ್ ೦, ಕೀಟನ್ ಜೆನ್ನಿಂಗ್ಸ್ ೫ ಬ್ಯಾಟಿಂಗ್; ಅಶ್ವಿನ್ ೫ಕ್ಕೆ ೧)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More