ವನಿತೆಯರ ವಿಶ್ವಕಪ್ ಹಾಕಿ: ಭಾರತದ ಸೆಮಿಫೈನಲ್ ಕನಸು ಭಗ್ನಗೊಳಿಸಿದ ಐರ್ಲೆಂಡ್

ಪೆನಾಲ್ಟಿ ಶೂಟೌಟ್‌ನಲ್ಲಿ ಐರ್ಲೆಂಡ್ ವನಿತೆಯರ ದಾಳಿಯನ್ನು ಹತ್ತಿಕ್ಕಲಾಗದ ಭಾರತ ವನಿತಾ ತಂಡದ ವಿಶ್ವಕಪ್ ಸೆಮಿಫೈನಲ್ ಕನಸು ಭಗ್ನಗೊಂಡಿದೆ. ಗುರುವಾರ (ಆ.೩) ತಡರಾತ್ರಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ರಾಣಿ ಪಡೆಯನ್ನು ೩-೧ರಿಂದ ಮಣಿಸಿದ ಐರ್ಲೆಂಡ್ ಉಪಾಂತ್ಯಕ್ಕೆ ಧಾವಿಸಿತು

೪೪ ವರ್ಷಗಳ ಚರಿತ್ರೆ ಪುನಾರಚಿಸುವ ತವಕದಿಂದ ಕೂಡಿದ್ದ ಭಾರತ ವನಿತಾ ಹಾಕಿ ತಂಡದ ಕನಸು ಕಡೆಗೂ ಕಮರಿದೆ. ಗುಂಪು ಹಂತದಲ್ಲಿ ಇದೇ ಐರಿಷ್ ನಾರಿಯರ ವಿರುದ್ಧ ೦-೧ ಗೋಲಿನಿಂದ ಸೋಲನುಭವಿಸಿದ್ದ ರಾಣಿ ರಾಂಪಾಲ್ ಬಳಗ, ಎಂಟರ ಘಟ್ಟದ ಪಂದ್ಯದಲ್ಲಿ ಚೇತೋಹಾರಿ ಪ್ರದರ್ಶನ ನೀಡಿತಾದರೂ, ಪೆನಾಲ್ಟಿ ಶೂಟೌಟ್‌ನಲ್ಲಿ ಐರ್ಲೆಂಡ್ ಎದುರು ಮಂಕಾಯಿತು.

ಪೆನಾಲ್ಟಿ ಶೂಟೌಟ್‌ನಲ್ಲಿ ನಾಯಕಿ ರಾಣಿ ರಾಂಪಾಲ್ ಸೇರಿದಂತೆ ಮೋನಿಕಾ ಹಾಗೂ ನವಜೋತ್ ಕೌರ್ ಕೂಡ ಗೋಲು ಗಳಿಸಲು ಸಾಧ್ಯವಾಗದೆ ಭಾರತಕ್ಕೆ ನಿರಾಸೆ ಮೂಡಿಸಿದರು. ಐರಿಷ್ ಗೋಲಿ ಆಯೇಷಾ ಮೆಕ್‌ಫೆರಾನ್ ಅಭೇದ್ಯ ಕೋಟೆಯಂತೆ ನಿಂತು ಭಾರತದ ಗೋಲು ಗಳಿಕೆಯ ಯತ್ನಗಳನ್ನೆಲ್ಲ ವಿಫಲಗೊಳಿಸಿದರು. ರೀನಾ ಬಾರಿಸಿದ ಗೋಲು, ಭಾರತದ ಪರ ಪೆನಾಲ್ಟಿ ಶೂಟೌಟ್‌ನಲ್ಲಿ ದಾಖಲಾದ ಏಕಮಾತ್ರ ಗೋಲೆನಿಸಿತು.

ಅಂದಹಾಗೆ, ಭಾರತದ ಗೋಲ್‌ಕೀಪರ್ ಸವಿತಾ ಐರ್ಲೆಂಡ್ ಆಟಗಾರ್ತಿಯರ ಎರಡು ಗೋಲಿನ ಯತ್ನಗಳನ್ನು ವಿಫಲಗೊಳಿಸಿ ಭಾರತದ ಹೋರಾಟವನ್ನು ಜೀವಂತವಾಗಿಡುವಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು. ಆದರೆ, ಅವರ ಈ ಹೋರಾಟ ಹೆಚ್ಚು ಕಾಲ ನಿಲ್ಲಲಿಲ್ಲ. ರಾಯಿಸಿನ್, ಆಪ್ಟನ್, ಅಲಿಸನ್ ಮೀಕಿ ಹಾಗೂ ಕ್ಲೊಯಿ ವಾಟ್ಕಿನ್ಸ್ ಚಮತ್ಕಾರಿ ಗೋಲು ಬಾರಿಸಿ ಐರ್ಲೆಂಡ್ ಗೆಲುವಿಗೆ ನೆರವಾದರು.

ಇದನ್ನೂ ಓದಿ : ವನಿತಾ ವಿಶ್ವಕಪ್ ಹಾಕಿ | ಐರ್ಲೆಂಡ್ ಎದುರು ಆಘಾತಕಾರಿ ಸೋಲುಂಡ ರಾಣಿ ಬಳಗ

ನಾಲ್ಕು ದಶಕಗಳ ಕನಸು

ಗುಂಪು ಹಂತದಲ್ಲಿ ಒಂದೇ ಒಂದು ಗೆಲುವನ್ನೂ ಸಾಧಿಸಲಾಗದೆ ಹೋದರೂ, ನಿರ್ಣಾಯಕವಾಗಿದ್ದ ಪ್ಲೇ ಆಫ್ ಪಂದ್ಯದಲ್ಲಿ ಇಟಲಿಯನ್ನು ೩-೦ ಗೋಲುಗಳಿಂದ ಹಣಿದಿದ್ದ ರಾಣಿ ಪಡೆ, ೪೪ ವರ್ಷಗಳ ಬಳಿಕ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪುವ ಅದ್ಭುತ ಅವಕಾಶ ಸೃಷ್ಟಿಸಿಕೊಂಡಿತ್ತು. ಮೊದಲ ಹಂತದ ಕಾದಾಟದಲ್ಲಿಯೂ ಐರ್ಲೆಂಡ್ ವಿರುದ್ಧ ದಿಟ್ಟ ಪ್ರದರ್ಶನ ನೀಡಿದ್ದ ಭಾರತ ತಂಡ, ೦-೧ ಗೋಲಿನಿಂದ ಪಂದ್ಯವನ್ನು ಕೈಚೆಲ್ಲಿತಾದರೂ, ಕ್ವಾರ್ಟರ್‌ಫೈನಲ್‌ನಲ್ಲಿ ಅದನ್ನು ಮಣಿಸುವ ವಿಶ್ವಾಸದಲ್ಲಿತ್ತು.

ಆದರೆ, ಎಂಟರ ಘಟ್ಟದ ಪಂದ್ಯದಲ್ಲಿ ಭಾರತದ ಯೋಜನೆಗಳೆಲ್ಲ ತಲೆಕೆಳಗಾದವು. ಪ್ರಬಲ ಪೈಪೋಟಿಯ ನಿರೀಕ್ಷೆಯಲ್ಲಿದ್ದ ಐರಿಷ್ ವನಿತೆಯರು, ಭಾರತ ತಂಡವನ್ನು ಅಂತಿಮ ಹಂತದವರೆಗೂ ನಿಯಂತ್ರಣದಲ್ಲಿಟ್ಟುಕೊಂಡರು. ಮಾತ್ರವಲ್ಲ, ಪೆನಾಲ್ಟಿ ಶೂಟೌಟ್‌ನಲ್ಲಿಯೂ ಭಾರತ ಹಿನ್ನಡೆ ಅನುಭವಿಸುವಂತೆ ಮಾಡಿದ್ದು ಐರಿಷರ ಗೆಲುವಿಗೆ ವರವಾಯಿತು. ೧೯೭೪ರ ಫ್ರಾನ್ಸ್‌ನ ಮಾಂಡೆಲಿಯು ಆವೃತ್ತಿಯಲ್ಲಿ ಸೆಮಿಫೈನಲ್ ತಲುಪಿದ್ದ ಭಾರತ, ಈ ಬಾರಿ ಸಿಕ್ಕ ಅಪೂರ್ವ ಅವಕಾಶವನ್ನು ಕೈಚೆಲ್ಲಿತು.

ವಿಶ್ವದ ೧೦ನೇ ಶ್ರೇಯಾಂಕಿತ ಭಾರತ ತಂಡ, ಹದಿನಾರನೇ ಶ್ರೇಯಾಂಕಿತ ಐರಿಷರ ಎದುರು ಟೂರ್ನಿಯಲ್ಲಿ ಸತತ ಎರಡು ಸೋಲನುಭವಿಸಿ ತತ್ತರಿಸಿತು. ಪೂರ್ಣಾವಧಿಯ ಆಟ ೦-೦ಯಿಂದ ಗೋಲುರಹಿತವಾಗಿ ಮುಗಿದ ನಂತರದಲ್ಲಿ ಪೆನಾಲ್ಟಿ ಶೂಟೌಟ್‌ ಭಾರತಕ್ಕೆ ಮುಳುವಾಯಿತು. ಅಂದಹಾಗೆ, ಇದಕ್ಕೂ ಮುನ್ನ ಪಂದ್ಯದ ೨೩ನೇ ನಿಮಿಷದಲ್ಲಿ ಐರ್ಲೆಂಡ್ ಮೊದಲ ಗೋಲಿನ ಸವಿಯುಣ್ಣಲು ಮುಂದಾಯಿತು. ಅನ್ನಾ ಒಫ್ಲಾಂಗನ್ ಬಾರಿಸಿದ ಗೋಲನ್ನು ಭಾರತದ ಗೋಲಿ ಸವಿತಾ ಯಶಸ್ವಿಯಾಗಿ ತಡೆದರು.

ಇದಕ್ಕೆ ಪ್ರತಿಯಾಗಿ ಮೂರು ನಿಮಿಷಗಳ ನಂತರ ರಾಣಿ ರಾಂಪಾಲ್, ಸಹಆಟಗಾರ್ತಿ ವಂದನಾ ಕಟಾರಿಯಾ ಅವರ ನೆರವಿನಲ್ಲಿ ಗೋಲು ಹೊಡೆಯಲು ನಡೆಸಿದ ಯತ್ನ ವೈಡ್ ಆಗಿ ಆ ಯತ್ನವೂ ಕೈಕೊಟ್ಟಿತು. ಇತ್ತ, ಮೂರನೇ ಕ್ವಾರ್ಟರ್‌ ವ್ಯರ್ಥ ಹೋರಾಟದಲ್ಲಿ ಮುಗಿದರೆ, ೪೯ನೇ ನಿಮಿಷದಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಇಡೀ ಪಂದ್ಯದಲ್ಲಿ ಭಾರತಕ್ಕೆ ಸಿಕ್ಕ ಏಕೈಕ ಪೆನಾಲ್ಟಿ ಅವಕಾಶವನ್ನು ರಾಣಿ ಗೋಲಾಗಿ ಪರಿವರ್ತಿಸಲು ವಿಫಲವಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More