ವಿಶ್ವ ಬ್ಯಾಡ್ಮಿಂಟನ್ | ಸೈನಾ ಸವಾಲಿಗೆ ತೆರೆ ಎಳೆದ ಮರಿನ್ ಸೆಮಿಫೈನಲ್‌ಗೆ

ಸ್ಪೇನ್ ಆಟಗಾರ್ತಿ ಹಾಗೂ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಕೆರೋಲಿನ್ ಮರಿನ್ ಅಬ್ಬರದ ಆಟದಲ್ಲಿ ಸೈನಾ ನೆಹ್ವಾಲ್ ಸಂಪೂರ್ಣ ಕಳೆದುಹೋದರು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸ್ಪರ್ಧಾವಳಿಯ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತೀಯ ಆಟಗಾರ್ತಿ ೮-೨೧, ೧೧-೨೧ರಿಂದ ಸೋತು ನಿರ್ಗಮಿಸಿದರು

ಸತತ ಎಂಟನೇ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎಂಟರ ಘಟ್ಟ ತಲುಪಿದ್ದ ಸೈನಾ ನೆಹ್ವಾಲ್, ಈ ಬಾರಿ ಈ ಎಂಟರ ಕಂಟಕವನ್ನು ಮೆಟ್ಟಿನಿಲ್ಲಲು ವಿಫಲವಾದರು. ಶುಕ್ರವಾರ (ಆ.೩) ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಕಾದಾಟದಲ್ಲಿ ಕೆರೋಲಿನ್ ಮರಿನ್ ಎದುರು ಅತ್ಯಂತ ನೀರಸ ಹಾಗೂ ಕಳಪೆ ಆಟವಾಡಿದ ಸೈನಾ, ದಯನೀಯ ಸೋಲಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದರು.

ಚೀನಾದ ನ್ಯಾನ್‌ಜಿಂಗ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಆಕರ್ಷಕ ಪ್ರದರ್ಶನ ನೀಡುವುದರೊಂದಿಗೆ ಎಂಟರ ಹಂತಕ್ಕೇರಿದ್ದ ಸೈನಾ, ಮರಿನ್ ಬಿರುಸಿನ ಆಟಕ್ಕೆ ತಡಬಡಾಯಿಸಿದರು. ಪಂದ್ಯದ ಶುರುವಿನಿಂದಲೂ ಸೈನಾ ಪಾದಚಲನೆ ಅಷ್ಟೇನೂ ಚಲನಶೀಲತೆಯಿಂದ ಕೂಡಿರಲಿಲ್ಲ. ಕೋರ್ಟ್‌ನಲ್ಲಿನ ಆಕೆಯ ಚಲನೆ ಒಂದು ವಿಧದಲ್ಲಿ ಮಂದಗತಿಯಿಂದ ಕೂಡಿತ್ತು.

ಆದರೆ, ಏಳನೇ ಶ್ರೇಯಾಂಕಿತೆ ಮರಿನ್ ಆಟ ಹೆಜ್ಜೆಹೆಜ್ಜೆಗೂ ಬಿರುಸು ಪಡೆದುಕೊಂಡಿತು. ವಿಶ್ವದ ಹತ್ತನೇ ಶ್ರೇಯಾಂಕಿತೆ ಸೈನಾ ಕಿಂಚಿತ್ತೂ ಚೇತರಿಸಿಕೊಳ್ಳದಂತೆ ತ್ವರಿತಗತಿಯಲ್ಲೇ ಮೊದಲ ಗೇಮ್ ಅನ್ನು ಮರಿನ್ ವಶಕ್ಕೆ ಪಡೆದರು. ಕೇವಲ ೧೦ ಪಾಯಿಂಟ್ಸ್‌ಗಳನ್ನೂ ಗಳಿಸಲು ಬಿಡದ ಮರಿನ್, ಒಂದರ ಹಿಂದೊಂದರಂತೆ ಪಾಯಿಂಟ್ಸ್‌ಗಳನ್ನು ಕಲೆಹಾಕಿ ಮೊದಲ ಗೇಮ್‌ನಲ್ಲಿಯೇ ತನ್ನ ಗೆಲುವಿನ ಸುಳಿವು ನೀಡಿದರು. ಪ್ರೀಕ್ವಾರ್ಟರ್‌ನಲ್ಲಿ ಥಾಯ್ ಆಟಗಾರ್ತಿ ರಚಾನಕ್ ಇಂಟಾನಾನ್ ವಿರುದ್ಧ ರಚನಾತ್ಮಕ ಆಟವಾಡಿದ್ದ ಸೈನಾ, ಮರಿನ್ ಎದುರು ಮಂಕಾದರು.

ಇದನ್ನೂ ಓದಿ : ವಿಶ್ವ ಬ್ಯಾಡ್ಮಿಂಟನ್ | ಸಿಂಧು, ಸಾಯಿ ಪ್ರಣೀತ್ ಕ್ವಾರ್ಟರ್‌ಫೈನಲ್‌ ಪ್ರವೇಶ

ಇನ್ನು, ಎರಡನೇ ಗೇಮ್‌ನಲ್ಲಿಯೂ ಸೈನಾ ಪುಟಿದೇಳಲಿಲ್ಲ. ಮರಿನ್ ಮಣಿಸಲು ಆಕೆಯಂತೆಯೇ ಆಕ್ರಮಣಕಾರಿ ಆಟವಾಡಬೇಕಿದ್ದ ಸೈನಾ, ಪದೇಪದೇ ಪ್ರಮಾದ ಎಸಗಿದ್ದಲ್ಲದೆ, ಒತ್ತಡಕ್ಕೆ ಸಿಲುಕಿ ಅನಾಯಾಸವಾಗಿ ಪಾಯಿಂಟ್ಸ್‌ಗಳನ್ನು ಸ್ಪೇನ್ ಆಟಗಾರ್ತಿಗೆ ಧಾರೆ ಎರೆದರು. ಇಲ್ಲಿವರೆಗೂ ಒಂದೇ ಒಂದು ಗೇಮ್‌ನಲ್ಲಿಯೂ ಹಿನ್ನಡೆ ಅನುಭವಿಸದ ಮರಿನ್, ಸೈನಾ ವಿರುದ್ಧವೂ ನೇರ ಗೇಮ್‌ಗಳಲ್ಲಿ ವಿಜೃಂಭಿಸಿದರು.

ಮರಿನ್ ಅಬ್ಬರ ಎಷ್ಟಿತ್ತೆಂದರೆ ಮೊದಲ ಗೇಮ್‌ನ ಶುರುವಿನಲ್ಲಿ ಆಕೆ ೧೧-೨ರ ಪಾರಮ್ಯ ಮೆರೆದರು. ಇನ್ನು, ಎರಡನೇ ಗೇಮ್‌ನಲ್ಲಿಯೂ ಆಕೆ ನಿರ್ದಯಿಯಾದರು. ಇತ್ತ ಸೈನಾ, ಕೆಲವೊಂದು ಆಕರ್ಷಕ ಶಾಟ್‌ಗಳಿಂದ ಹಿಡಿತ ಸಾಧಿಸಲು ಯತ್ನಿಸಿದರು. ಸತತ ಮೂರು ಪಾಯಿಂಟ್ಸ್ ಕಲೆಹಾಕಿದ ಸೈನಾ, ಕೇವಲ ಎರಡು ಪಾಯಿಂಟ್ಸ್ (೮-೧೦) ಹಿನ್ನಡೆ ಅನುಭವಿಸಿದರು. ಸೈನಾ ಪುಟಿದೇಳುತ್ತಿರುವ ಸುಳಿವರಿತ ಮರಿನ್, ಮತ್ತೊಮ್ಮೆ ಆಕ್ರಮಣಕಾರಿ ಆಟಕ್ಕೆ ಮುಂದಾದರು. ನೋಡನೋಡುತ್ತಿದ್ದಂತೆ ೧೯-೧೦ರ ಮುನ್ನಡೆ ಪಡೆದ ಮರಿನ್, ಆನಂತರದಲ್ಲಿಯೂ ಎರಡು ಪಾಯಿಂಟ್ಸ್ ಗಳಿಸಿ ಸೈನಾ ಸವಾಲಿಗೆ ತೆರೆ ಎಳೆದರು.

ಅಶ್ವಿನಿ ಜೋಡಿಗೆ ನಿರಾಸೆ

ವನಿತೆಯರ ಸಿಂಗಲ್ಸ್‌ನಲ್ಲಿ ಸೈನಾ ನಿರಾಸೆ ಅನುಭವಿಸಿದಂತೆ, ಮಿಶ್ರ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ ಜೋಡಿ ಕೂಡ ನೇರ ಗೇಮ್‌ಗಳಲ್ಲಿ ಚೀನಿ ಜೋಡಿಯ ಎದುರು ಸೋಲಪ್ಪಿತು. ಅಗ್ರ ಕ್ರಮಾಂಕಿತ ಜೋಡಿ ಝೆಂಗ್ ಸಿವಿ ಮತ್ತು ಹುವಾಂಗ್ ಯಕಿಯಾಂಗ್ ೨೧-೧೭, ೨೧-೧೦ರ ಎರಡು ನೇರ ಗೇಮ್‌ಗಳಲ್ಲಿ ಭಾರತೀಯ ಜೋಡಿಯನ್ನು ಮಣಿಸಿ ಸೆಮಿಫೈನಲ್‌ಗೆ ಧಾವಿಸಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More