ವಿಶ್ವ ಬ್ಯಾಡ್ಮಿಂಟನ್ | ಉಪಾಂತ್ಯಕ್ಕೆ ಧಾವಿಸಿದ ಸಿಂಧು; ಸಾಯಿ ನಿರ್ಗಮನ

ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ್ತಿ ಪಿ ವಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಉಪಾಂತ್ಯಕ್ಕೆ ಧಾವಿಸಿದ್ದಾರೆ. ಕಳೆದ ಸಾಲಿನಲ್ಲಿ ಇದೇ ನೊಜೊಮಿ ಒಕುಹಾರ ವಿರುದ್ಧ ಸೋಲನುಭವಿಸಿದ್ದ ಸಿಂಧು, ಈ ಬಾರಿ ಜಪಾನ್ ಆಟಗಾರ್ತಿಯನ್ನು ಮಣಿಸುವಲ್ಲಿ ಸಫಲವಾದರು

ಜಪಾನ್ ಆಟಗಾರ್ತಿಯ ಆತ್ಮವಿಶ್ವಾಸವನ್ನು ಹೊಸಕಿಹಾಕಿದ ಸಿಂಧು, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸತತ ಮೂರನೇ ಬಾರಿಗೆ ಸೆಮಿಫೈನಲ್ ತಲುಪಿದ್ದಾರೆ. ಸರಿಸುಮಾರು ೫೮ ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಪ್ರಚಂಡ ಆಟವಾಡಿದ ಸಿಂಧು, ೨೧-೧೭, ೨೧-೧೯ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಪಡೆದ ಸಿಂಧು, ವಿಜಯದ ನಗೆಬೀರಿದರಲ್ಲದೆ, ಭಾರತಕ್ಕೆ ಪದಕ ಖಚಿತಪಡಿಸಿದರು.

ಚೀನಾದ ನ್ಯಾನ್‌ಜಿಂಗ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಭಾರತದ ಎಲ್ಲ ಸ್ಪರ್ಧಿಗಳೂ ಹೊರಬಿದ್ದಿದ್ದು, ಸಿಂಧು ಏಕಾಂಗಿ ಭರವಸೆಯಾಗಿ ಉಳಿದುಕೊಂಡಿದ್ದಾರೆ. ದಿನದ ಆರಂಭದಲ್ಲಿ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಸೈನಾ ನೆಹ್ವಾಲ್, ಸ್ಪೇನ್ ಆಟಗಾರ್ತಿ ಕೆರೋಲಿನ್ ಮರಿನ್ ವಿರುದ್ಧ ೬-೨೧, ೧೧-೨೧ರಿಂದ ಸೋಲನುಭವಿಸಿದರು.

ಅಂತೆಯೇ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ ಜೋಡಿ ಚೀನಾದ ಝೆಂಗ್ ಸಿವಿ ಎದುರು ೧೭-೨೧, ೧೦-೨೧ರ ಎರಡು ನೇರ ಗೇಮ್‌ಗಳಲ್ಲಿ ಸೋಲನುಭವಿಸಿದರು. ಹೀಗಾಗಿ, ಸಿಂಧು ಮತ್ತು ಸಾಯಿ ಪ್ರಣೀತ್ ಮಾತ್ರ ಟೂರ್ನಿಯಲ್ಲಿ ಉಳಿದುಕೊಂಡಿದ್ದ ಭಾರತೀಯ ಸ್ಪರ್ಧಿಗಳಾಗಿದ್ದರು. ಆದರೆ, ಅಂತಿಮವಾಗಿ ಸಿಂಧು ಮಾತ್ರ ಪದಕ ಸುತ್ತಿಗೆ ಕಾಲಿಟ್ಟಿದ್ದಾರೆ.

ಸಾಯಿ ಪ್ರಣೀತ್‌ಗೆ ನಿರಾಸೆ

ಇದಕ್ಕೂ ಮುನ್ನ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಸಾಯಿ ಪ್ರಣೀತ್ ನಿರಾಸೆ ಅನುಭವಿಸಿದರು. ಎಂಟನೇ ಶ್ರೇಯಾಂಕಿತ ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ ಎದುರು ೧೨-೨೧, ೧೨-೨೧ರ ಎರಡು ನೇರ ಗೇಮ್‌ಗಳಲ್ಲಿ ಸಾಯಿ ಪ್ರಣೀತ್ ಸೋಲನುಭವಿಸಿದರು. ಶುರುವಿನಿಂದಲೂ ಆಕ್ರಮಣಕಾರಿ ಆಟವಾಡಿದ ಮೊಮೊಟಾ ವಿರುದ್ಧ ಸಾಯಿ ಪ್ರಣೀತ್ ಚೇತರಿಸಿಕೊಳ್ಳಲು ಸಾಧ್ಯವಾಗದೆ ಸೋಲಪ್ಪಿದರು.

ಇದನ್ನೂ ಓದಿ : ವಿಶ್ವ ಬ್ಯಾಡ್ಮಿಂಟನ್ | ಸೈನಾ ಸವಾಲಿಗೆ ತೆರೆ ಎಳೆದ ಮರಿನ್ ಸೆಮಿಫೈನಲ್‌ಗೆ

ಯಮಗುಚಿ ವಿರುದ್ಧ ಸೆಣಸಾಟ

ಅಂದಹಾಗೆ, ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಒಕುಹಾರ ವಿರುದ್ಧ ಶುರುವಿನಲ್ಲಿ ಮಂದಗತಿಯ ಆಟವಾಡಿದ ಸಿಂಧು, ಕ್ರಮೇಣ ಜಪಾನ್ ಆಟಗಾರ್ತಿಯನ್ನು ಬೆಚ್ಚಿಬೀಳಿಸಿದರು. ಕೇವಲ ಒಂದು, ಎರಡು ಪಾಯಿಂಟ್ಸ್‌ಗಳ ಅಂತರದಲ್ಲೇ ಹೊಯ್ದಾಡಿದ ಮೊದಲ ಗೇಮ್ ಅನ್ನು ಅಂತಿಮವಾಗಿ ನಾಲ್ಕು ಪಾಯಿಂಟ್ಸ್ ಅಂತರದಿಂದ ಸಿಂಧು ಜಯಭೇರಿ ಬಾರಿಸಿದರು. ಮುಂದಿನ ಸುತ್ತಿನಲ್ಲಿ ಜಪಾನ್‌ನ ಮತ್ತೋರ್ವ ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧ ಸಿಂಧು ಸೆಣಸಲಿದ್ದಾರೆ.

ಇನ್ನು, ಎರಡನೇ ಗೇಮ್‌ನಲ್ಲಿ ೦-೪ ಹಿನ್ನಡೆಯೊಂದಿಗೆ ಹೋರಾಟಕ್ಕಿಳಿದ ಸಿಂಧು, ಕ್ರಮೇಣ ಜಪಾನ್ ಆಟಗಾರ್ತಿಗೆ ಪ್ರಬಲ ಸವಾಲಾಗಿ ಪರಿಣಮಿಸಿದರು. ಇಬ್ಬರ ನಡುವಿನ ಹೋರಾಟ ಕತ್ತಿಯ ಅಲಗಿನ ಮೇಲೆ ನಿಂತಂತಾಯಿತಲ್ಲದೆ, ಇಬ್ಬರೂ ೧೯-೧೯ರ ಸಮಬಲ ಸಾಧಿಸಿದಾಗಲಂತೂ ಪ್ರೇಕ್ಷಕರು ಅತೀವ ಕೌತುಕಕ್ಕೆ ಒಳಗಾದರು. ಆನಂತರದಲ್ಲಿ ಒಕುಹಾರ ಬ್ಯಾಕ್ ಹ್ಯಾಂಡ್ ಶಾಟ್ ನೆಟ್‌ಗೆ ಬಡಿಯುತ್ತಿದ್ದಂತೆ ಸಿಂಧು ಗೇಮ್ ಪಾಯಿಂಟ್ಸ್ ಕಲೆಹಾಕಿದರು. ಮತ್ತೊಂದು ಶಾಟ್ ಅನ್ನು ಒಕುಹಾರ ಗೆರೆಯ ಆಚೆಗೆ ದಾಟಿಸುತ್ತಿದ್ದಂತೆ ಸಿಂಧು ಜಯದ ನಗೆಬೀರಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More