ಭಾರತಕ್ಕೆ ಬೇಕು ೮೪ ರನ್, ಇಂಗ್ಲೆಂಡ್‌ಗೆ ಬೇಕಿದೆ ೫ ವಿಕೆಟ್; ಗೆಲ್ಲೋರು ಯಾರು?

ಇಂಡೋ-ಆಂಗ್ಲೋ ನಡುವಣದ ಮೊದಲ ಟೆಸ್ಟ್ ಪಂದ್ಯ ಅತೀವ ಕೌತುಕದತ್ತ ಹೊರಳಿದೆ. ಎಜ್‌ಬ್ಯಾಸ್ಟನ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನಾಂತ್ಯಕ್ಕೆ ಭಾರತ ೧೧೦ ರನ್‌ಗಳಿಗೆ ೫ ವಿಕೆಟ್ ಕಳೆದುಕೊಂಡಿದ್ದು ಗೆಲುವಿಗೆ ೮೪ ರನ್ ಪೇರಿಸಬೇಕಿದೆ. ಇತ್ತ, ಇಂಗ್ಲೆಂಡ್ ಇನ್ನುಳಿದ ೫ ವಿಕೆಟ್‌ಗೆ ಮುಗಿಬಿದ್ದಿದೆ

ಟೆಸ್ಟ್ ಕ್ರಿಕೆಟ್‌ನ ಸೊಗಸಿನ ಘಮ ಮತ್ತೊಮ್ಮೆ ಕ್ರಿಕೆಟ್ ಜಗತ್ತನ್ನು ಆವರಿಸಿದೆ. ಇಂಗ್ಲೆಂಡ್ ಪಾಲಿಗೆ ಐತಿಹಾಸಿಕ ಎನ್ನಬಹುದಾದ ಒಂದು ಸಾವಿರದ ಟೆಸ್ಟ್ ಪಂದ್ಯವು ಕ್ಷಣಕ್ಷಣಕ್ಕೂ ಕೌತುಕ ಕೆರಳಿಸುತ್ತಿದೆ. ಉಳಿದ ೮೪ ರನ್‌ಗಳಿಗಾಗಿ ಭಾರತ ಹಲುಬುತ್ತಿದ್ದರೆ, ಆತಿಥೇಯ ಇಂಗ್ಲೆಂಡ್ ಭಾರತದ ಇನ್ನುಳಿದ ಐದು ವಿಕೆಟ್‌ ಎಗರಿಸಲು ಹವಣಿಸುತ್ತಿದೆ. ಒಂದು ವಿಧದಲ್ಲಿ ಇಬ್ಬರೂ ಸಮಾಂತರ ಸಾಧಿಸಿದ್ದು, ಯಾರು ಮೇಲುಗೈ ಸಾಧಿಸಿ ಗೆಲುವಿನ ನಗೆಬೀರಲಿದ್ದಾರೆ ಎಂಬುದು ಸದ್ಯದ ಕೌತುಕ.

ಮೂರನೇ ದಿನಾಂತ್ಯಕ್ಕೆ ೧೧೦ ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿರುವ ಭಾರತದ ಪರ ನಾಯಕ ವಿರಾಟ್ ಕೊಹ್ಲಿ (೪೩) ಮತ್ತು ದಿನೇಶ್ ಕಾರ್ತಿಕ್ (೧೮) ಕ್ರೀಸ್‌ನಲ್ಲಿದ್ದು, ಈ ಜೋಡಿಯೊಂದೇ ಉಳಿದ ರನ್‌ಗಳನ್ನು ಕಲೆಹಾಕಿದರೂ ಅಚ್ಚರಿಯಿಲ್ಲ. ಆದರೆ, ಬೆಳಗಿನ ಅವಧಿ ಬ್ಯಾಟಿಂಗ್‌ಗೆ ಕಷ್ಟಕರವಾಗಿರುವುದರಿಂದ ಆತಿಥೇಯರು ಭಾರತವನ್ನು ಕಟ್ಟಿಹಾಕುವುದನ್ನೂ ತಳ್ಳಿಹಾಕಲಾಗದು. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಣದ ಈ ಗೆಲುವಿನ ಹೋರಾಟ ಎಲ್ಲರ ಗಮನ ಸೆಳೆದಿದೆ.

ಗೆಲುವಿಗಾಗಿ ೧೯೪ ರನ್ ಗುರಿ ಪಡೆದಿರುವ ಕೊಹ್ಲಿ ಪಡೆ ಶುರುವಿನಲ್ಲಿ ಇಂಗ್ಲೆಂಡ್‌ನಂತೆ ಚಡಪಡಿಸಿತು. ಎಷ್ಟೇ ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದರೂ, ಮುರಳಿ ವಿಜಯ್ (೬) ಮತ್ತು ಶಿಖರ್ ಧವನ್ (೧೩) ವೇಗಿ ಸ್ಟುವರ್ಟ್ ಬ್ರಾಡ್‌ಗೆ ಬಲಿಯಾದರು. ಮುರಳಿ ಎಲ್‌ಬಿ ಬಲೆಗೆ ಬಿದ್ದರೆ, ಧವನ್ ವಿಕೆಟ್‌ಕೀಪರ್ ಜಾನಿ ಬೇರ್‌ಸ್ಟೋಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.

ಇನ್ನು, ಮೊದಲ ಇನ್ನಿಂಗ್ಸ್‌ನಲ್ಲಿ ಎರಡಂಕಿ ದಾಟಲು ಸಾಧ್ಯವಾಗದೆ ಕೇವಲ ೪ ರನ್‌ಗೆ ವಿಕೆಟ್ ಒಪ್ಪಿಸಿದ್ದ ಕನ್ನಡಿಗ ಕೆ ಎಲ್ ರಾಹುಲ್ (೧೩) ಸಹ ಮತ್ತೊಮ್ಮೆ ಅಸ್ಥಿರ ಬ್ಯಾಟಿಂಗ್‌ನಿಂದ ಕ್ರೀಸ್ ತೊರೆದರು. ಮೊದಲ ಇನ್ನಿಂಗ್ಸ್‌ನಲ್ಲಿ ಸ್ಯಾಮ್ ಕರನ್‌ಗೆ ಬೌಲ್ಡ್ ಆಗಿದ್ದ ರಾಹುಲ್, ಈ ಬಾರಿ ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಬೇರ್‌ಸ್ಟೋಗೆ ಕ್ಯಾಚಿತ್ತು ಕ್ರೀಸ್ ತೊರೆದರು.

ಇನ್ನು, ಮಧ್ಯಮ ಕ್ರಮಾಂಕ ಇನ್ನಷ್ಟು ಸಂಕಷ್ಟ ಎದುರಿಸಿತು. ಅಜಿಂಕ್ಯ ರಹಾನೆ (೨) ಸ್ಯಾಮ್ ಕರನ್ ಬೌಲಿಂಗ್‌ನಲ್ಲಿ ಬೇರ್‌ಸ್ಟೋಗೆ ಕ್ಯಾಚಿತ್ತರೆ, ಆರ್ ಅಶ್ವಿನ್ (೧೩) ವೇಗಿ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್‌ನಲ್ಲಿ ಬೇರ್‌ಸ್ಟೋಗೆ ಕ್ಯಾಚ್ ನೀಡಿ ಪೆವಿಲಿಯನ್ ದಾರಿ ತುಳಿದರು. ಈ ಇಬ್ಬರೂ ಕೊಹ್ಲಿಗೆ ಸೂಕ್ತ ಜೊತೆಯಾಟ ನೀಡುವಲ್ಲಿ ವಿಫಲವಾದರು. ಆದರೆ ತದನಂತರ ಆಡಲಿಳಿದ ದಿನೇಶ್ ಕಾರ್ತಿಕ್ ಅವರಿಗೆ ಉತ್ತಮ ಜೊತೆಯಾಟ ನೀಡಿ ದಿನಾಂತ್ಯಕ್ಕೆ ಔಟಾಗದೆ ಉಳಿದರು.

ಇಶಾಂತ್ ಮಿಂಚಿನ ದಾಳಿ

ಇದಕ್ಕೂ ಮುನ್ನ, ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ಗೆ ಇಶಾಂತ್ ಶರ್ಮಾ ಆಘಾತ ನೀಡಿದರು. ಅತ್ಯಮೋಘ ಸ್ಪೆಲ್‌ನಿಂದ ಇಂಗ್ಲೆಂಡ್‌ನ ಮಧ್ಯಮ ಮತ್ತು ಕೆಳ ಕ್ರಮಾಂಕವನ್ನು ವಿಚಲಿತಗೊಳಿಸಿದ ಇಶಾಂತ್, ಆತಿಥೇಯರು ಸವಾಲಿನ ಮೊತ್ತದತ್ತ ಸಾಗುವುದನ್ನು ತಡೆದರು. ಅವರ ಈ ದಾಳಿಯಿಂದಾಗಿಯೇ ಕೇವಲ ೫೧ ರನ್‌ಗಳಿಗೆ ಇಂಗ್ಲೆಂಡ್ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಚಡಪಡಿಸುವಂತಾಯಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ ಎಂಟನೇ ಬಾರಿಗೆ ಐದು ವಿಕೆಟ್‌ಗಳ ಸಾಧನೆ ಮೆರೆದ ಇಶಾಂತ್, ಭಾರತಕ್ಕೆ ೧೯೪ ರನ್‌ಗಳ ಸುಲಭ ಗುರಿ ಎದುರಾಗುವಂತೆ ಮಾಡಿದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್‌ನಲ್ಲಿ ನಡೆದಿದ್ದ ಆಫ್ಘಾನಿಸ್ತಾನ ವಿರುದ್ಧ ಕೊನೆಯ ಬಾರಿಗೆ ಟೆಸ್ಟ್ ಆಡಿದ್ದ ಇಶಾಂತ್, ದಾವಿದ್ ಮ್ಯಾಲನ್ (೨೦), ಜಾನಿ ಬೇರ್‌ಸ್ಟೋ (೨೮), ಬೆನ್ ಸ್ಟೋಕ್ಸ್ (೬), ಜೋಸ್ ಬಟ್ಲರ್ (೧) ಮತ್ತು ಸ್ಟುವರ್ಟ್ ಬ್ರಾಡ್ (೧೧) ವಿಕೆಟ್‌ಗಳನ್ನು ಪಡೆದು ಇಂಗ್ಲೆಂಡ್ ಇನ್ನಿಂಗ್ಸ್‌ಗೆ ಪ್ರಬಲ ಪ್ರಹಾರ ನೀಡಿದರು.

ಇದನ್ನೂ ಓದಿ : ಸರ್ವ ಟೀಕೆಗಳಿಗೂ ಶತಕವೇ ಮದ್ದು ಎಂದ ವಿರಾಟ್ ಆಟಕ್ಕೆ ಸುಸ್ತಾದ ಇಂಗ್ಲೆಂಡ್

#IshantSharma bags his 8th test five wicket haul! #ENGvIND

A post shared by Crickblasters (@crickblasters2.0) on

ಇನ್ನು, ಇಶಾಂತ್ ಜೊತೆ ಅಶ್ವಿನ್ ಕೂಡ ಇಂಗ್ಲೆಂಡ್‌ಗೆ ಮಾರಕರಾದರು. ಈ ಸ್ಪಿನ್ ಮಾಂತ್ರಿಕ ಅಲೆಸ್ಟೈರ್ ಕುಕ್ (೦), ಕೀಟನ್ ಜೆನ್ನಿಂಗ್ಸ್ (೮) ಮತ್ತು ನಾಯಕ ಜೋ ರೂಟ್‌ರಂಥ (೧೪) ಅಪಾಯಕಾರಿ ಆಟಗಾರರನ್ನು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಬಿಡದೆಹೋದದ್ದು ಕೂಡ ಭಾರತಕ್ಕೆ ವರದಾನವಾಯಿತು. ಕುಕ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದ್ದು ಕೂಡ ಗಮನಾರ್ಹ.

ಅಂತೆಯೇ, ಮೊದಲ ಇನ್ನಿಂಗ್ಸ್‌ನಲ್ಲಿ ತಂಡದ ಪರ ವೈಯಕ್ತಿಕ ಗರಿಷ್ಠ ಸ್ಕೋರ್ ಮಾಡಿದ್ದ ಜೋ ರೂಟ್ ವಿಕೆಟ್ ಕೂಡ ಇಂಗ್ಲೆಂಡ್‌ಗೆ ಮುಳುವಾಯಿತು. ಅಶ್ವಿನ್ ಮತ್ತು ಇಶಾಂತ್ ಜಂಟಿಯಾಗಿ ಎಂಟು ವಿಕೆಟ್ ಪಡೆದರೆ, ಉಮೇಶ್ ಯಾದವ್ ಇನ್ನುಳಿದ ೨ ವಿಕೆಟ್‌ ಗಳಿಸಿದರು. ಅದಿಲ್ ರಶೀದ್ (೧೬) ಮತ್ತು ಸ್ಯಾಮ್ ಕರನ್ (೬೩) ಉಮೇಶ್ ಯಾದವ್‌ಗೆ ಬಲಿಯಾದರು.

ಸ್ಯಾಮ್ ಪ್ರತಿರೋಧ

ಭಾರತದ ಮಾರಕ ಬೌಲಿಂಗ್‌ನಿಂದ ಕಂಗೆಟ್ಟ ಇಂಗ್ಲೆಂಡ್‌ಗೆ ಆಲ್ರೌಂಡರ್ ಹಾಗೂ ಯುವ ಆಟಗಾರ ಸ್ಯಾಮ್ ಕರನ್ ಆಸರೆಯಾದರು. ೨೦ರ ಹರೆಯದ ಈ ಎಡಗೈ ಆಟಗಾರ ಭಾರತದ ಬೌಲರ್‌ಗಳ ದಾಳಿಗೆ ಕಂಗೆಡದೆ ಕಟ್ಟಕಡೆಯವರೆಗೂ ಹೋರಾಡಿದರು. ಅವರು ದಾಖಲಿಸಿದ ಅರ್ಧಶತಕದ ನೆರವಿನೊಂದಿಗೆ ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತದ ಗುರಿ ನೀಡಲು ಸಾಧ್ಯವಾಯಿತು.

ಮೊದಲ ಇನ್ನಿಂಗ್ಸ್‌ನಲ್ಲಿ ೭೪ ರನ್‌ಗಳಿಗೆ ನಾಲ್ಕು ವಿಕೆಟ್ ಗಳಿಸಿ ಮಿಂಚಿದ್ದ ಸ್ಯಾಮ್ ಕರನ್, ತಂಡದ ಇನ್ನಿಂಗ್ಸ್ ತಳ ಕಚ್ಚುತ್ತಿದ್ದ ವೇಳೆಯಲ್ಲಿ ನೀಡಿದ ಅಪೂರ್ವ ಬ್ಯಾಟಿಂಗ್ ಪ್ರದರ್ಶನ ಮನೋಜ್ಞವೆನಿಸಿತು. ಟೆಸ್ಟ್ ಕ್ರಿಕೆಟ್‌ನ ಚೊಚ್ಚಲ ಅರ್ಧಶತಕವು ಇಂಗ್ಲೆಂಡ್‌ ಕನಿಷ್ಠ ೧೯೦ ರನ್ ಗಡಿ ದಾಟಲು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ೮೯.೪ ಓವರ್‌ಗಳಲ್ಲಿ ೨೮೭ (ಜೋ ರೂಟ್ ೮೦, ಜಾನಿ ಬೇರ್‌ಸ್ಟೋ ೭೦; ಆರ್ ಅಶ್ವಿನ್ ೬೨ಕ್ಕೆ ೪) ಭಾರತ ಮೊದಲ ಇನ್ನಿಂಗ್ಸ್: ೭೬ ಓವರ್‌ಗಳಲ್ಲಿ ೨೭೪ (ವಿರಾಟ್ ಕೊಹ್ಲಿ ೧೪೯; ಸ್ಯಾಮ್ ಕರನ್ ೭೪ಕ್ಕೆ ೪) ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್: ೫೩ ಓವರ್‌ಗಳಲ್ಲಿ ೧೮೦ (ಸ್ಯಾಮ್ ಕರನ್ ೬೩; ಇಶಾಂತ್ ಶರ್ಮಾ ೫೧ಕ್ಕೆ ೫; ಅಶ್ವಿನ್ ೫೯ಕ್ಕೆ ೩); ಭಾರತ ದ್ವಿತೀಯ ಇನ್ನಿಂಗ್ಸ್: ೩೬ ಓವರ್‌ಗಳಲ್ಲಿ ೧೧೦/೫ (ವಿರಾಟ್ ಕೊಹ್ಲಿ ೪೩ ಬ್ಯಾಟಿಂಗ್, ದಿನೇಶ್ ಕಾರ್ತಿಕ್ ಬ್ಯಾಟಿಂಗ್ ೧೮; ಸ್ಟುವರ್ಟ್ ಬ್ರಾಡ್ ೨೯ಕ್ಕೆ ೨).

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More