ಕೊಹ್ಲಿ ಪಡೆಯನ್ನು ಕಟ್ಟಿಹಾಕಿ ಚಾರಿತ್ರಿಕ ಟೆಸ್ಟ್‌ ಪಂದ್ಯದಲ್ಲಿ ಗೆಲುವು ಕಂಡ ಇಂಗ್ಲೆಂಡ್

ಅತೀವ ಕೌತುಕ ಕೆರಳಿಸಿದ್ದ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಎಜ್‌ಬ್ಯಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಆಂಗ್ಲರು ೩೧ ರನ್‌ಗಳ ಗೆಲುವಿನ ನಗೆಬೀರಿದರು. ಉಳಿದ ೫ ವಿಕೆಟ್‌ಗಳಿಂದ ೮೪ ರನ್ ಪೇರಿಸಬೇಕಿದ್ದ ಭಾರತ, ಬೆನ್ ಸ್ಟೋಕ್ಸ್ (೪೦ಕ್ಕೆ ೪) ಪ್ರಖರ ದಾಳಿಗೆ ನಲುಗಿ ೧೬೨ ರನ್‌ಗೆ ಹೋರಾಟ ಮುಗಿಸಿತು

ಹೆಚ್ಚೂಕಮ್ಮಿ ಇನ್ನೂ ಒಂದೂವರೆ ದಿನ ಬಾಕಿ ಇರುವಂತೆಯೇ ಆಂಗ್ಲರು, ಎಜ್‌ಬ್ಯಾಸ್ಟನ್ ಟೆಸ್ಟ್ ಪಂದ್ಯದಲ್ಲಿ ವಿಜಯದ ನಗೆಬೀರಿದ್ದಾರೆ. ಬ್ಯಾಟಿಂಗ್‌ನಲ್ಲಿ ಅನುಭವಿಸಿದ ವೈಫಲ್ಯವನ್ನು ಬೌಲಿಂಗ್‌ನಲ್ಲಿ ಮೆಟ್ಟಿನಿಂತ ಆಂಗ್ಲರು, ಐತಿಹಾಸಿಕ ಸಹಸ್ರ (1,000) ಟೆಸ್ಟ್ ಪಂದ್ಯದಲ್ಲಿ ವಿಜಯೋತ್ಸವ ಆಚರಿಸಿಕೊಂಡರು. ಇಡೀ ಕ್ರಿಕೆಟ್ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿದ್ದ ವಿರಾಟ್ ಕೊಹ್ಲಿ (೫೧: ೯೩ ಎಸೆತ, ೪ ಬೌಂಡರಿ) ಕೂಡ ಬೆನ್ ಸ್ಟೋಕ್ಸ್ ಚಮತ್ಕಾರಿ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದು ಕೈಚೆಲ್ಲಿದರು.

ಮೊದಲೇ ಹೇಳಿದಂತೆ, ಬೆಳಗಿನ ಅವಧಿಯಲ್ಲಿ ರನ್ ಗಳಿಸುವುದು ಅಷ್ಟು ಸುಲಭವಲ್ಲ. ಉಳಿದ ಐದು ವಿಕೆಟ್‌ಗಳಲ್ಲಿ ೮೪ ರನ್ ಗಳಿಸಬೇಕಿದ್ದ ಭಾರತ ತಂಡ ಆತ್ಮವಿಶ್ವಾಸದಿಂದ ಕೂಡಿತ್ತಾದರೂ, ಬೆನ್ ಸ್ಟೋಕ್ಸ್ ಪ್ರಚಂಡ ಬೌಲಿಂಗ್‌ನಲ್ಲಿ ಆ ಆತ್ಮವಿಶ್ವಾಸ ಘಾಸಿಗೊಂಡಿತು. ೩೧ ರನ್‌ಗಳ ಅಪೂರ್ವ ಗೆಲುವಿನೊಂದಿಗೆ ಆತಿಥೇಯ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ ೧-೦ ಮುನ್ನಡೆ ಸಾಧಿಸಿದಂತಾಗಿದೆ.

ಐದು ವಿಕೆಟ್ ನಷ್ಟಕ್ಕೆ ೧೧೦ ರನ್‌ಗಳೊಂದಿಗೆ ನಾಲ್ಕನೇ ದಿನದಾಟ ಮುಂದುವರಿಸಿದ ಭಾರತಕ್ಕೆ ಆರಂಭದಲ್ಲೇ ಪೆಟ್ಟು ಬಿದ್ದಿತು. ವೇಗಿ ಜೇಮ್ಸ್ ಆ್ಯಂಡರ್ಸನ್, ದಿನೇಶ್ ಕಾರ್ತಿಕ್ (೨೦) ಅವರನ್ನು ಬಲುಬೇಗ ಪೆವಿಲಿಯನ್‌ಗೆ ಅಟ್ಟಿದರು. ೧೮ ರನ್‌ ಗಳಿಸಿದ್ದ ಕಾರ್ತಿಕ್, ಕೇವಲ ೨ ರನ್ ಗಳಿಸುವುದರಲ್ಲಿ ವಿಕೆಟ್ ಕೈಚೆಲ್ಲಿದರು. ದಾವಿದ್ ಮ್ಯಾಲನ್‌ಗೆ ಕ್ಯಾಚಿತ್ತ ಅವರು ಕ್ರೀಸ್‌ ತೊರೆದರು.

ಇದನ್ನೂ ಓದಿ : ಭಾರತಕ್ಕೆ ಬೇಕು ೮೪ ರನ್, ಇಂಗ್ಲೆಂಡ್‌ಗೆ ಬೇಕಿದೆ ೫ ವಿಕೆಟ್; ಗೆಲ್ಲೋರು ಯಾರು?

ಭರವಸೆ ಮೂಡಿಸಿದ್ದ ಹಾರ್ದಿಕ್

ದಿನೇಶ್ ಕಾರ್ತಿಕ್ ನಿರ್ಗಮನದ ಬಳಿಕ ಆಡಲಿಳಿದ ಹಾರ್ದಿಕ್ ಪಾಂಡ್ಯ (೩೧: ೬೧ ಎಸೆತ, ೪ ಬೌಂಡರಿ) ಅವರನ್ನು ಕೂಡಿಕೊಂಡ ಕೊಹ್ಲಿ, ಭಾರತಕ್ಕೆ ಗೆಲುವು ತಂದುಕೊಡುವ ಭರವಸೆ ಮೂಡಿಸಿದ್ದರು. ಈ ಜೋಡಿ ಎಚ್ಚರಿಕೆಯಿಂದ ರನ್ ಪೇರಿಸುತ್ತ ನಡೆಯಿತು. ಆದರೆ, ಈ ಹಂತದಲ್ಲಿ ಕೊಹ್ಲಿ ವಿಕೆಟ್ ಪತನ ಕಂಡದ್ದು ಆಂಗ್ಲರ ಕೈ ಮೇಲಾಗುವಂತೆ ಮಾಡಿತು. ಇನ್ನಿಂಗ್ಸ್‌ನ ೪೭ನೇ ಓವರ್‌ನಲ್ಲಿ ದಾಳಿಗಿಳಿದ ಸ್ಟೋಕ್ಸ್, ಕೊಹ್ಲಿ ಸೇರಿದಂತೆ ಎರಡು ವಿಕೆಟ್‌ ಪಡೆದು ಭಾರತವನ್ನು ಸೋಲಿನ ಸುಳಿಯಲ್ಲಿ ಸಿಲುಕಿಸಿದರು.

ಓವರ್‌ನ ಮೂರನೇ ಎಸೆತದಲ್ಲಿ ಕೊಹ್ಲಿಯನ್ನು ಸ್ಟೋಕ್ಸ್ ಎಲ್‌ಬಿ ಬಲೆಗೆ ಕೆಡವಿದರು. ಕೊಹ್ಲಿ ಪುನರ್ ಪರಿಶೀಲನೆಗೆ ಮನವಿ ಮಾಡಿದರಾದರೂ, ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಕೊಹ್ಲಿಯ ನಿರ್ಗಮನದ ನಂತರದಲ್ಲಿ ಕ್ರೀಸ್‌ಗಿಳಿದ ಮೊಹಮದ್ ಶಮಿ (೦) ಇದೇ ಓವರ್‌ನ ಕೊನೇ ಎಸೆತದಲ್ಲಿ ವಿಕೆಟ್‌ ಕೀಪರ್ ಜಾನಿ ಬೇರ್‌ಸ್ಟೋಗೆ ಕ್ಯಾಚಿತ್ತು ಕ್ರೀಸ್ ತೊರೆದರು.

ಸ್ಟೋಕ್ಸ್ ಸ್ಟ್ರೋಕ್‌

ಮಹತ್ವದ ವಿಕೆಟ್‌ಗಳನ್ನು ಹೆಕ್ಕಿದ ಸ್ಟೋಕ್ಸ್, ಭಾರತಕ್ಕೆ ಆಶ್ರಯವಾಗಿ ನಿಂತಿದ್ದ ಹಾರ್ದಿಕ್ ಪಾಂಡ್ಯ ಅವರನ್ನೂ ಪೆವಿಲಿಯನ್‌ಗೆ ಅಟ್ಟಿದರು. ಹಾರ್ದಿಕ್ ನಿರ್ಗಮನದೊಂದಿಗೆ ಭಾರತದ ಆಶಾಕಿರಣವೂ ಅಗೋಚರವಾಯಿತು. ಶಮಿಯ ನಿರ್ಗಮನದ ನಂತರದಲ್ಲಿ ಬಂದ ಇಶಾಂತ್ ಶರ್ಮಾ (೧೧) ಅವರನ್ನು ಆದಿಲ್ ರಶೀದ್ ಎಲ್‌ಬಿ ಬಲೆಗೆ ಬೀಳಿಸಿದರೆ, ಉಮೇಶ್ ಯಾದವ್ ಯಾವುದೇ ರನ್ ಗಳಿಸದೆ ಅಜೇಯರಾಗುಳಿದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ೮೯.೪ ಓವರ್‌ಗಳಲ್ಲಿ ೨೮೭ (ಜೋ ರೂಟ್ ೮೦, ಜಾನಿ ಬೇರ್‌ಸ್ಟೋ ೭೦; ಆರ್ ಅಶ್ವಿನ್ ೬೨ಕ್ಕೆ ೪) ಭಾರತ ಮೊದಲ ಇನ್ನಿಂಗ್ಸ್: ೭೬ ಓವರ್‌ಗಳಲ್ಲಿ ೨೭೪ (ವಿರಾಟ್ ಕೊಹ್ಲಿ ೧೪೯; ಸ್ಯಾಮ್ ಕರನ್ ೭೪ಕ್ಕೆ ೪) ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್: ೫೩ ಓವರ್‌ಗಳಲ್ಲಿ ೧೮೦ (ಸ್ಯಾಮ್ ಕರನ್ ೬೩; ಇಶಾಂತ್ ಶರ್ಮಾ ೫೧ಕ್ಕೆ ೫; ಅಶ್ವಿನ್ ೫೯ಕ್ಕೆ ೩) ಭಾರತ ದ್ವಿತೀಯ ಇನ್ನಿಂಗ್ಸ್: ೫೪.೨ ಓವರ್‌ಗಳಲ್ಲಿ ೧೬೨ (ವಿರಾಟ್ ಕೊಹ್ಲಿ ೫೧, ಹಾರ್ದಿಕ್ ಪಾಂಡ್ಯ ೩೧; ಬೆನ್ ಸ್ಟೋಕ್ಸ್ ೪೦ಕ್ಕೆ ೪, ಸ್ಟುವರ್ಟ್ ಬ್ರಾಡ್ ೪೩ಕ್ಕೆ ೨, ಜೇಮ್ಸ್ ಆಂಡರ್ಸನ್ ೫೦ಕ್ಕೆ ೨) ಫಲಿತಾಂಶ: ಇಂಗ್ಲೆಂಡ್‌ಗೆ ೩೧ ರನ್ ಗೆಲುವು ಪಂದ್ಯಶ್ರೇಷ್ಠ: ಸ್ಯಾಮ್ ಕರನ್

ಮುಂದಿನ ಪಂದ್ಯ: ಆ.೯ರಿಂದ ಲಾರ್ಡ್ಸ್‌ನಲ್ಲಿ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More