ಏಷ್ಯಾ ರಾಷ್ಟ್ರೀಯ ಕಪ್ ಚೆಸ್: ಭಾರತ ವನಿತೆಯರಿಗೆ ಬ್ಲಿಟ್ಜ್ ಸ್ವರ್ಣ ಭಾಗ್ಯ

ಅತ್ಯಾಕರ್ಷಕವಾಗಿ ಕಾಯಿಗಳನ್ನು ಮುನ್ನಡೆಸಿದ ಭಾರತ ಚೆಸ್ ತಂಡ, ಏಷ್ಯಾ ರಾಷ್ಟ್ರೀಯ ಕಪ್ ಸ್ಪರ್ಧಾವಳಿಯ ಬ್ಲಿಟ್ಜ್ ವಿಭಾಗದಲ್ಲಿ ಸ್ವರ್ಣ ಪದಕ ಪಡೆಯಿತು. ಅಂತೆಯೇ ರ್ಯಾಪಿಡ್ ಮತ್ತು ಕ್ಲಾಸಿಕಲ್ ವಿಭಾಗಗಳಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪದಕಗಳನ್ನು ಭಾರತ ತಂಡ ಗೆದ್ದುಕೊಂಡಿತು

ಇರಾನ್‌ನ ಹಮಾದನ್‌ನಲ್ಲಿ ಜುಲೈ ೨೮ರಿಂದ ಆರಂಭವಾದ ಏಷ್ಯಾ ರಾಷ್ಟ್ರೀಯ ಕಪ್ ಪಂದ್ಯಾವಳಿಯು ಶುಕ್ರವಾರ (ಆಗಸ್ಟ್ ೩) ಮುಕ್ತಾಯ ಕಂಡಿದ್ದು, ಭಾರತ ವನಿತಾ ಚೆಸ್ ತಂಡ ಸಾರ್ಥಕ ಪ್ರವಾಸದೊಂದಿಗೆ ತವರಿನತ್ತ ಮುಖಮಾಡಿದೆ. ಹರಿಕಾ ದ್ರೋಣವಲ್ಲಿ, ಈಶಾ ಕರ್ವಾಡೆ, ಪದ್ಮಿನಿ ರಾವುತ್, ಆರ್ ವೈಷ್ಣವಿ ಹಾಗೂ ಆಕಾಂಕ್ಷಾ ಹಾಗವಾನೆ ಅವರಿದ್ದ ಭಾರತ ವನಿತಾ ತಂಡ, ವಿಯೆಟ್ನಾಂ ಹಾಗೂ ಚೀನಾ ತಂಡವನ್ನು ಹಿಂದಿಕ್ಕಿ ಬ್ಲಿಟ್ಜ್ ಸ್ವರ್ಣ ಪದಕ ಗೆದ್ದುಕೊಂಡರು.

ಪ್ರಶಸ್ತಿ ಸುತ್ತಿನಲ್ಲಿ ಭಾರತ ವನಿತಾ ತಂಡ ೨೧.೫ ಪಾಯಿಂಟ್ಸ್ ಗಳಿಸಿದರೆ, ವಿಯೆಟ್ನಾಂ ೧೮.೫ ಪಾಯಿಂಟ್ಸ್ ಪಡೆದು ಬೆಳ್ಳಿ ಪದಕಕ್ಕೆ ತೃಪ್ತವಾಯಿತು. ಅಂತೆಯೇ ೧೭.೫ ಪಾಯಿಂಟ್ಸ್ ಕಲೆಹಾಕಿದ ಚೀನಾ ಕಂಚಿನ ಪದಕ ಪಡೆಯಿತು. ೨೦೧೪ರ ನಂತರ ಭಾರತ ವನಿತಾ ಚೆಸ್ ತಂಡ ಮೊದಲ ಬಾರಿಗೆ ಸ್ವರ್ಣ ಪದಕ ಗೆದ್ದ ಸಾಧನೆ ಮಾಡಿದೆ.

ಈಶಾ ಮತ್ತು ಪದ್ಮಿನಿ ಅಂತಾರಾಷ್ಟ್ರೀಯ ಮಾಸ್ಟರ್‌ಗಳಾಗಿದ್ದು, ವೈಷ್ಣವಿ ಮತ್ತು ಆಕಾಂಕ್ಷ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್‌ಗಳಾಗಿದ್ದಾರೆ. ಇನ್ನು ಭಾರತ ತಂಡದಲ್ಲಿನ ಐದನೇ ಸ್ಪರ್ಧಿ ಹರಿಕಾ ದ್ರೋಣವಲ್ಲಿ ಅಂತಾರಾಷ್ಟ್ರೀಯ ಗ್ರಾಂಡ್‌ಮಾಸ್ಟರ್.

ಇದನ್ನೂ ಓದಿ : ಪ್ರಜ್ಞಾನಂದ ಎಂಬ ಅಪರೂಪದ ಚೆಸ್ ಪ್ರತಿಭೆಯೊಂದಿಗೆ ಕಳೆದ ಅಮೂಲ್ಯ ಸಮಯ

ರ್ಯಾಪಿಡ್ ವನಿತಾ ವಿಭಾಗದಲ್ಲಿ ಭಾರತ ೧೭ ಪಾಯಿಂಟ್ಸ್ ಗಳಿಸಿ ರಜತ ಪದಕ ಜಯಿಸಿತು. ಆದರೆ, ಈ ವಿಭಾಗದಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಚೀನಾ ವನಿತೆಯರು ೨೩.೫ ಪಾಯಿಂಟ್ಸ್‌ಗಳೊಂದಿಗೆ ಮೊದಲ ಸ್ಥಾನ ಗಳಿಸಿ ಚಿನ್ನದ ನಗೆಬೀರಿದರು. ಅಂತೆಯೇ, ಇರಾನ್ ಗ್ರೀನ್ ತಂಡ ಕಂಚಿನ ಪದಕಕ್ಕೆ ತೃಪ್ತವಾಯಿತು. ಅಂದಹಾಗೆ, ಇರಾನ್ ವನಿತೆಯರು ಕೂಡ ೧೭ ಪಾಯಿಂಟ್ಸ್ ಗಳಿಸಿ ಭಾರತದ ಜೊತೆಗೆ ಸಮಬಲ ಸಾಧಿಸಿದರು. ಆದರೆ, ಎಂಟು ಸುತ್ತಿನ ಪಂದ್ಯಗಳಲ್ಲಿ ಗರಿಷ್ಠ ಗೆಲುವಿನ ಲೆಕ್ಕಾಚಾರದಲ್ಲಿ ಭಾರತ ವನಿತಾ ತಂಡಕ್ಕೆ ಎರಡನೇ ಸ್ಥಾನ ಪ್ರಾಪ್ತಿಯಾಯಿತು.

ಇನ್ನು, ಕ್ಲಾಸಿಕಲ್ ವಿಭಾಗದಲ್ಲಿ ವಿಯೆಟ್ನಾಂ ಎದುರು ಹಿನ್ನಡೆ ಅನುಭವಿಸಿದ ಭಾರತ ಮೂರನೇ ಸ್ಥಾನಕ್ಕೆ ಕುಸಿಯಿತು. ರೌಂಡ್ ರಾಬಿನ್ ಘಟ್ಟದಲ್ಲಿ ಭಾರತಕ್ಕಿಂತಲೂ ವಿಯೆಟ್ನಾಂ ವನಿತೆಯರು ಹೆಚ್ಚು ಗೆಲುವು ದಾಖಲಿಸಿದರು. ಭಾರತ ಮತ್ತು ವಿಯೆಟ್ನಾಂ ತಲಾ ೧೭.೫ ಪಾಯಿಂಟ್ಸ್ ಗಳಿಸಿದರೆ, ಚೀನಾ ೨೦.೫ ಪಾಯಿಂಟ್ಸ್ ಪಡೆದು ಸ್ವರ್ಣ ಪದಕ ಬಾಚಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More