ವಿಶ್ವ ಬ್ಯಾಡ್ಮಿಂಟನ್: ಯಮ ಪಾಶ ಕಳಚಿದ ಸಿಂಧು ಫೈನಲ್‌ಗೆ ದಾಪುಗಾಲು

ಇದೇ ಮಾರ್ಚ್‌ನಲ್ಲಿ ನಡೆದ ಆಲ್ ಇಂಗ್ಲೆಂಡ್ ಓಪನ್ ಸೆಮಿಫೈನಲ್‌ನಲ್ಲಿ ಯಮಗುಚಿ, ಸಿಂಧು ವಿರುದ್ಧ ೧೯-೨೧, ೨೧-೧೯, ೨೧-೧೮ರ ಮೂರು ಗೇಮ್‌ಗಳ ಕಠಿಣ ಹೋರಾಟದಲ್ಲಿ ರೋಚಕ ಗೆಲುವು ಸಾಧಿಸಿದ್ದರು. ಈ ಸೋಲಿಗೆ ಸಿಂಧು ಸೂಕ್ತ ಉತ್ತರ ನೀಡಿ ಫೈನಲ್‌ಗೆ ದಾಪುಗಾಲಿಟ್ಟರು

ಪುರುಷರ ವಿಭಾಗದಲ್ಲಿ ಕಿಡಾಂಬಿ ಶ್ರೀಕಾಂತ್, ಎಚ್ ಎಸ್ ಪ್ರಣಯ್ ಹಾಗೂ ಬಿ ಸಾಯಿ ಪ್ರಣೀತ್ ನಿರ್ಗಮಿಸಿದರೆ, ವನಿತೆಯರ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಕೂಡಾ ಮುಗ್ಗರಿಸಿದರು. ಆದರೆ, ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಏಕಾಂಗಿಯಾಗಿ ಉಳಿದು ಭಾರತದ ಸವಾಲನ್ನು ಜೀವಂತವಾಗಿಟ್ಟಿರುವ ಸಿಂಧು, ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಿನ್ನದ ನಗೆಬೀರಲು ಇನ್ನೊಂದು ಹೆಜ್ಜೆಯನ್ನಷ್ಟೇ ಕ್ರಮಿಸಬೇಕಿದೆ.

ವೃತ್ತಿಬದುಕಿನಲ್ಲಿ ಜಪಾನ್ ಆಟಗಾರ್ತಿಯ ವಿರುದ್ದ ೬-೪ ಮುನ್ನಡೆ ಸಾಧಿಸಿದ್ದ ಸಿಂಧು, ಮಾರ್ಚ್‌ನಲ್ಲಿ ನಡೆದ ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಮೂರು ಗೇಮ್‌ಗಳ ಆಟದಲ್ಲಿ ಪ್ರಬಲ ಪೈಪೋಟಿಯ ನಡುವೆಯೂ ಯಮಗುಚಿಯನ್ನು ಮಣಿಸಲಾಗಿರಲಿಲ್ಲ. ಆದರೆ, ಚೀನಾದ ನ್ಯಾನ್‌ಜಿಂಗ್‌ನಲ್ಲಿ ನಡೆಯುತ್ತಿರುವ ಮಹತ್ವಪೂರ್ಣ ಪಂದ್ಯಾವಳಿಯಲ್ಲಿ ಜಪಾನ್ ಆಟಗಾರ್ತಿಯನ್ನು ೨೧-೧೬, ೨೪-೨೨ರ ಎರಡು ನೇರ ಗೇಮ್‌ಗಳಲ್ಲಿ ಮಣಿಸುವಲ್ಲಿ ಸಫಲವಾದರು.

ಕಳೆದ ವರ್ಷವೂ ಫೈನಲ್ ತಲುಪಿದ್ದ ಸಿಂಧು, ಸತತ ಎರಡನೇ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ಧಾವಿಸಿದ್ದು, ಇದೀಗ ಅಂತಿಮ ಹಣಾಹಣಿಯಲ್ಲಿ ಸ್ಪೇನ್ ಆಟಗಾರ್ತಿ ಹಾಗೂ ರಿಯೊ ಒಲಿಂಪಿಕ್ಸ್ ವಿಜೇತೆ ಕೆರೊಲಿನಾ ಮರಿನ್ ವಿರುದ್ಧ ಸೆಣಸಲಿದ್ದಾರೆ. ಒಂದು ವಿಧದಲ್ಲಿ ಸಿಂಧು ಮತ್ತು ಮರಿನ್‌ಗೆ ಇದು ಮತ್ತೊಂದು ರೀಮ್ಯಾಚ್ ಎಂದೇ ಕರೆಯಲಾಗಿದೆ.

ಇದನ್ನೂ ಓದಿ : ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್: ಸೆಮಿಫೈನಲ್‌ಗೆ ಲಗ್ಗೆ ಹಾಕಿದ ಸಿಂಧು

ರೋಚಕ ಹೋರಾಟ

ಬಹುದೊಡ್ಡ ಮುನ್ನಡೆಯನ್ನು ಬಿಟ್ಟುಕೊಟ್ಟರೂ, ಅಷ್ಟೇ ಶರವೇಗದಲ್ಲಿ ಚೇತರಿಕೆ ಕಂಡ ಸಿಂಧು, ಯಮಗುಚಿಯ ವಿರುದ್ಧ ತಿರುಗಿಬಿದ್ದ ಪರಿಯಂತೂ ಅತ್ಯಂತ ರೋಚಕವಾಗಿತ್ತು. ಮುಖ್ಯವಾಗಿ, ಮೊದಲ ಗೇಮ್‌ನಲ್ಲಿ ಸೋಲನುಭವಿಸಿದ ಯಮಗುಚಿ ಎರಡನೇ ಗೇಮ್‌ನಲ್ಲಂತೂ ಅಬ್ಬರದ ಆಟವಾಡಿದರು. ಆಕೆಯ ಬಿರುಸು ಮತ್ತು ತೀಕ್ಷ್ಣತೆಗೆ ಕಕ್ಕಾಬಿಕ್ಕಿಯಾದ ಸಿಂಧು ೧೨-೧೯ರ ಹಿನ್ನಡೆ ಅನುಭವಿಸಿದರು.

ಪಂದ್ಯದಲ್ಲಿ ಸಮಬಲ ಸಾಧಿಸಿ ಮೂರನೇ ಗೇಮ್‌ಗೆ ವಿಸ್ತರಿಸಲು ಯಮಗುಚಿ ಬೇಕಿದ್ದುದು ಕೇವಲ ಮೂರು ಪಾಯಿಂಟ್ಸ್‌ಗಳಷ್ಟೆ. ಇಂಥದ್ದೊಂದು ವಿಷಮ ಘಳಿಗೆಯಲ್ಲಿ ಗೆಲುವು ಸಾಧಿಸುವ ಸಂದರ್ಭಗಳು ತೀರಾ ಅಪರೂಪ. ಅಂಥ ಅಪರೂಪದ ವಿದ್ಯಮಾನಕ್ಕೆ ಸಿಂಧು ಸಾಕ್ಷಿಯಾದರು. ಸಿಂಧು ಮತ್ತು ಯಮಗುಚಿ ಮಧ್ಯೆ ನೈಜ ಸವಾಲು ಏರ್ಪಟ್ಟಿದ್ದೇ ಇಲ್ಲಿ.

ನೆಟ್ ಡ್ರಿಬಲ್ಸ್‌ನೊಂದಿಗೆ ನೇರ ಸ್ಮ್ಯಾಶ್‌ಗಳೊಂದಿಗೆ ವಿಜೃಂಭಿಸಿದ ಸಿಂಧು, ನೋಡ ನೋಡುತ್ತಿದ್ದಂತೆ ಅಂತರವನ್ನು ೨೦-೧೯ಕ್ಕೆ ತಗ್ಗಿಸಿದರು. ಇದಕ್ಕೆ ಪ್ರತಿಯಾಗಿ ಯಮಗುಚಿ ಕೂಡಾ ಆಕರ್ಷಕ ಸ್ಮ್ಯಾಶ್‌ನೊಂದಿಗೆ ಪಾಯಿಂಟ್ಸ್ ಕಲೆಹಾಕಿ ೨೧-೨೦ರಿಂದ ಮುನ್ನಡೆ ಸಾಧಿಸಿದರು. ಆದರೆ, ಇದೇ ವೇಳೆ ಯಮಗುಚಿ ಅತ್ಯಂತ ಕ್ಷುಲ್ಲಕವಾದ ಪ್ರಮಾದದಿಂದ ಭಾರೀ ಬೆಲೆ ತೆತ್ತರು. ಕೋರ್ಟ್‌ನ ಗೆರೆಯಿಂದಾಚೆಗೆ ಮಾಡಿದ ಸರ್ವ್‌ ಆಕೆಗೆ ಮುಳುವಾಯಿತು.

ಮಾತ್ರವಲ್ಲ, ಆಕೆಯ ಮತ್ತೊಂದು ಶಾಟ್ ಕೂಡಾ ವೈಡ್ ಆಗಿ ಸಿಂಧುಗೆ ಇನ್ನೊಂದು ಪಾಯಿಂಟ್ಸ್ ನಿರಾಯಾಸವಾಗಿ ಒಲಿಯಿತು. ಆದರೆ, ಈ ಹಂತದಲ್ಲಿ ನಡೆದ ೪೧ ಶಾಟ್‌ಗಳ ಅದ್ಭುತ ರ್ಯಾಲಿ ಪ್ರೇಕ್ಷಕರನ್ನು ಮಂತ್ರಮುಗ್ಧವಾಗಿಸಿತು. ಪಂದ್ಯದ ಅತಿ ಸುದೀರ್ಘವಾದ ಈ ರ್ಯಾಲಿ ೨೨-೨೨ರ ಸಮಬಲ ತಂದಿತು. ಇನ್ನು, ಇದಿಷ್ಟಲ್ಲದೆ, ಯಮಗುಚಿ ಮತ್ತೆರಡು ಪ್ರಮಾದಗಳನ್ನೆಸಗಿ ಗೆಲುವಿನ ಪಾಯಿಂಟ್ಸ್‌ಗಳನ್ನು ಸಿಂಧುಗೆ ಧಾರೆ ಎರೆದರೆ, ರಿಯೊ ಒಲಿಂಪಿಕ್ಸ್ ರನ್ನರ್ ಮುಷ್ಠಿ ಬಿಗಿಹಿಡಿದು ತನ್ನ ಗೆಲುವನ್ನು ಸಂಭ್ರಮಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More