ವಿಶ್ವ ಬ್ಯಾಡ್ಮಿಂಟನ್: ಉದಯೋನ್ಮುಖ ತಾರೆ ಶಿಯುಕಿ ಪ್ರಶಸ್ತಿ ಸುತ್ತಿಗೆ ದಾಂಗುಡಿ

ಚೀನಾದ ಬೆಸ್ಟ್ ಬ್ಯಾಡ್ಮಿಂಟನ್ ಪಟು ಎನಿಸಿಕೊಳ್ಳುವ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಉದಯೋನ್ಮುಖ ತಾರೆ ಶಿಯುಕಿ, ಪ್ರತಿಷ್ಠಿತ ವಿಶ್ವ ಟೂರ್ನಿಯಲ್ಲಿ ಫೈನಲ್ ತಲುಪಿದರು. ಶನಿವಾರ (ಆ.೪) ನಾಲ್ಕರ ಘಟ್ಟದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಲಿನ್ ಡಾನ್‌ಗೆ ೨೧-೧೧, ೨೧-೧೭ರಿಂದ ಸೋಲುಣಿಸಿದರು

ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿಕೊಳ್ಳುವ ಭರವಸೆಯಲ್ಲಿದ್ದ ಒಲಿಂಪಿಕ್ಸ್ ಚಾಂಪಿಯನ್ ಲಿನ್ ಡಾನ್ ಯುವ ಆಟಗಾರನ ಕೆಚ್ಚೆದೆಯ ಆಟಕ್ಕೆ ಮಣಿದರು. ೨೨ರ ಹರೆಯದ ಅನುಭವಿ ಆಟಗಾರ ಹಾಗೂ ಒಲಿಂಪಿಕ್ಸ್ ಚಾಂಪಿಯನ್ ಲಿನ್ ಡಾನ್ ಎದುರು ನಿರ್ಭಿಡೆ ಆಟದೊಂದಿಗೆ ವಿಜೃಂಭಿಸಿದ್ದಲ್ಲದೆ, ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿ ಪದಕ ಸುತ್ತಿಗೆ ಮುನ್ನಡೆದರು.

ಭಾನುವಾರ (ಆ.೫) ನಡೆಯಲಿರುವ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಪ್ರಶಸ್ತಿ ಫೇವರಿಟ್ ಎನಿಸಿರುವ ಜಪಾನ್‌ನ ಕೆಂಟೊ ಮೊಮೊಟಾ ಇಲ್ಲವೇ ಮಲೇಷಿಯಾದ ಶ್ರೇಯಾಂಕರಹಿತ ಆಟಗಾರ ಲಿಯೆವ್ ಡರೆನ್ ವಿರುದ್ಧ ಶಿಯುಕಿ ಕಾದಾಡಲಿದ್ದಾರೆ. ೩೪ರ ಹರೆಯದ ಲಿನ್ ಡಾನ್ ಕೂಡಾ ಶಿಯುಕಿ ಆಟಕ್ಕೆ ಬೆರಗಾದರು. ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸೆಮಿಫೈನಲ್‌ನಲ್ಲಿ ಮೊಮೊಟಾ ಇಲ್ಲವೇ ಲಿಯೆವ್ ಈಗ ಚೀನಾದ ಯುವ ಆಟಗಾರನಿಗೆ ಸವಾಲಾಗಿದ್ದಾರೆ.

ಅಂದಹಾಗೆ, ಚೀನಾದ ಪುರುಷರ ಬ್ಯಾಡ್ಮಿಂಟನ್ ವಲಯದಲ್ಲಿ ಇದುವರೆಗೆ ಪಾರುಪತ್ಯ ಮೆರೆದದ್ದು ಲಿನ್ ಡಾನ್. ಆದರೆ, ಡಾನ್ ನಂತರದಲ್ಲಿ ಯಾರೆಂಬ ಪ್ರಶ್ನೆಗೆ ಶಿಯುಕಿ ಉತ್ತರ ಎಂಬಂತೆ ಟೂರ್ನಿಯಿಂದ ಟೂರ್ನಿಗೆ ಅವರ ಆಟ ಪ್ರಖರವಾಗುತ್ತಾ ಸಾಗಿದೆ. ಅಂದಹಾಗೆ, ಇಂದಿನ ಗೆಲುವಿನೊಂದಿಗೆ ಲಿನ್ ಡಾನ್ ಎದುರು ಶಿಯುಕಿ ಎರಡನೇ ಬಾರಿಗೆ ಜಯಭೇರಿ ಬಾರಿಸಿದಂತಾಗಿದೆ.

ಇದನ್ನೂ ಓದಿ : ವಿಶ್ವ ಬ್ಯಾಡ್ಮಿಂಟನ್ | ಉಪಾಂತ್ಯಕ್ಕೆ ಧಾವಿಸಿದ ಸಿಂಧು; ಸಾಯಿ ನಿರ್ಗಮನ

ಇದೇ ಮಾರ್ಚ್‌ನಲ್ಲಿ ನಡೆದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕೂಡಾ ಲಿನ್ ಡಾನ್ ಈ ಯುವ ಆಟಗಾರನಿಗೆ ಮಣಿದಿದ್ದರು. ಆದರೆ, ವಿಶ್ವ ಚಾಂಪಿಯನ್‌ಶಿಪ್ ಗೆದ್ದದ್ದೇ ಆದಲ್ಲಿ, ಶಿಯುಕಿಯ ವೃತ್ತಿಬದುಕಿನಲ್ಲೇ ಇದೊಂದು ಬಹುದೊಡ್ಡ ಹಾಗೂ ಐತಿಹಾಸಿಕ ಸಾಧನೆಯಾಗಿರಲಿದೆ.

ಏತನ್ಮಧ್ಯೆ, ವನಿತೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯಗಳು ಇಂದು ನಡೆಯಲಿದ್ದು, ಭಾರತದ ಸ್ಟಾರ್ ಆಟಗಾರ್ತಿ ಪಿ ವಿ ಸಿಂಧು, ಜಪಾನ್ ಆಟಗಾರ್ತಿ ಅಕಾನಿ ಯಮಗುಚಿ ವಿರುದ್ಧ ಕಾದಾಡಲಿದ್ದಾರೆ. ಸಂಜೆ ೭.೩೦ಕ್ಕೆ ಶುರುವಾಗಬೇಕಿದ್ದ ಪಂದ್ಯವು ಬಹುಶಃ ಒಂದು ತಾಸು ಮುಂಚೆಯೇ ಆರಂಭವಾಗುವ ನಿರೀಕ್ಷೆ ಇದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More