ಐತಿಹಾಸಿಕ ಅವಕಾಶ ಕೈಚೆಲ್ಲಿ ಮತ್ತೆ ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡ ಸಿಂಧು

ಸ್ವಭಾವತಃ ಆಕ್ರಮಣಕಾರಿಯಾದ ಸ್ಪಾನಿಷ್ ಆಟಗಾರ್ತಿ ಕರೊಲಿನಾ ಮರಿನ್ ಅಬ್ಬರದ ಆಟದೆದುರು ಸಿಂಧು ಮಂಕಾದರು. ೨೦೧೪ರ ಇದೇ ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮರಿನ್ ಎದುರು ಸೋತು ಕಂಚಿಗೆ ತೃಪ್ತವಾಗಿದ್ದ ಸಿಂಧು, ಸತತ ೨ನೇ ಬಾರಿಯೂ ಬೆಳ್ಳಿಗೆ ಸೀಮಿತರಾದರು!

ವಿಶ್ವದ ಎರಡನೇ ಶ್ರೇಯಾಂಕಿತೆ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧದ ಸೆಮಿಫೈನಲ್ ಸೆಣಸಾಟದಲ್ಲಿ ರೋಚಕ ಗೆಲುವಿನೊಂದಿಗೆ ವಿಜೃಂಭಿಸಿದ್ಧ ಸಿಂಧು, ಫೈನಲ್‌ನಲ್ಲಿ ಕಳೆಗುಂದಿದರು. ಸ್ಪಾನಿಷ್ ಆಟಗಾರ್ತಿ ಹಾಗೂ ವಿಶ್ವದ ಏಳನೇ ಶ್ರೇಯಾಂಕಿತೆ ಕರೊಲಿನಾ ಮರಿನ್ ವಿರುದ್ಧದ ಹೋರಾಟದಲ್ಲಿ ಸಿಂಧು ಏಕಾಗ್ರತೆ ಕಳೆದುಕೊಂಡದ್ದು ನಿಚ್ಚಳವಾಗಿತ್ತು.

ಚೀನಾದ ನ್ಯಾನ್‌ಜಿಂಗ್‌ನಲ್ಲಿ ಭಾನುವಾರ ಮುಕ್ತಾಯ ಕಂಡ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್‌ ಪ್ರಶಸ್ತಿ ಸುತ್ತಿನಲ್ಲಿ ಸಿಂಧುವನ್ನು ೨೧-೧೯, ೨೧-೯ರ ಎರಡು ನೇರ ಗೇಮ್‌ಗಳಲ್ಲಿ ಮಣಿಸಿದ ಮರಿನ್, ಮತ್ತೊಮ್ಮೆ ತನ್ನ ಸಾಮರ್ಥ್ಯ ಋಜುಪಡಿಸಿದರು. ರಿಯೊ ಒಲಿಂಪಿಕ್ಸ್ ಕೂಟದ ಪ್ರಶಸ್ತಿ ಸುತ್ತಿನಲ್ಲಿಯೂ ಈ ಇಬ್ಬರು ಮುಖಾಮುಖಿಯಾಗಿದ್ದಾಗಲೂ ಮರಿನ್ ಕೈ ಮೇಲಾಗಿತ್ತು.

ಶನಿವಾರ ನಡೆದಿದ್ದ ಮತ್ತೊಂದು ಸೆಮಿಫೈನಲ್‌ನಲ್ಲಿ ಚೀನಾದ ಆರನೇ ಶ್ರೇಯಾಂಕಿತೆ ಹಿ ಬಿಂಗ್ಜಿಯಾವೊ ಎದುರು ಮೊದಲ ಗೇಮ್‌ನಲ್ಲಿ ೧೩-೨೧ರಿಂದ ಹಿನ್ನಡೆ ಅನುಭವಿಸಿದ್ದ ಮರಿನ್, ಆನಂತರ ೨೧-೧೬, ೨೧-೧೩ರಿಂದ ಗೆದ್ದು ಫೈನಲ್ ತಲುಪಿದ್ದರು. ಒಂದು ತಾಸು ಮತ್ತು ಒಂಬತ್ತು ನಿಮಿಷಗಳ ಕಾಲ ನಡೆದ ರೋಚಕ ಹಣಾಹಣಿಯಲ್ಲಿ ಸ್ಪಾನಿಷ್ ಆಟಗಾರ್ತಿ ಗೆಲುವಿನ ನಗೆಬೀರಿದ್ದರು. ಅಂತಿಮವಾಗಿ ಆಕೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೂರನೇ ಬಾರಿಗೆ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮೆರೆದಿದ್ದಾರೆ.

ಪ್ರಶಸ್ತಿಗೆ ಮರಿನ್ ಅರ್ಹ

ಕೇವಲ ೪೬ ನಿಮಿಷಗಳಲ್ಲಿ ಮುಕ್ತಾಯ ಕಂಡ ವನಿತೆಯರ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಕಾದಾಟವು ಮೊದಲ ಗೇಮ್‌ನಲ್ಲಿ ಮಾತ್ರವಷ್ಟೇ ಕೊಂಚ ಪೈಪೋಟಿಯಿಂದ ಕೂಡಿತ್ತು. ಆದರೆ, ಎರಡನೇ ಗೇಮ್‌ನಲ್ಲಿ ಸಂಪೂರ್ಣ ಮರಿನ್‌ಮಯವಾಗಿತ್ತು. ಸಹಜವಾಗಿಯೇ ಆಕೆ ಚಾಂಪಿಯನ್ ಎನಿಸಿಕೊಳ್ಳಲು ಅರ್ಹರೆನಿಸಿದರು. ಮೊದಲೇ ಹೇಳಿದಂತೆ ಸಿಂಧು ಎರಡನೇ ಗೇಮ್‌ನಲ್ಲಿ ಸಂಪೂರ್ಣ ಕಳಾಹೀನರಾದರು.

ಸ್ಪಾನಿಷ್ ಆಟಗಾರ್ತಿಯ ಅದ್ಭುತ ಆಟ ನೋಡುಗರನ್ನು ಬೆರಗುಮೂಡಿಸಿತು. ಮೊದಲ ಗೇಮ್‌ನಲ್ಲಿ ಸಿಂಧು ಪೈಪೋಟಿ ನೀಡಿದರಾದರೂ, ಎರಡು ಪಾಯಿಂಟ್ಸ್ ಅಂತರದಲ್ಲಿ ಗೇಮ್ ಬಿಟ್ಟುಕೊಟ್ಟರು. ಎರಡನೇ ಗೇಮ್‌ನಲ್ಲಿ ೪-೧೭ರ ಹಿನ್ನಡೆ ಅನುಭವಿಸಿದ ಸಿಂಧು ನಿತ್ರಾಣರಾಗಿದ್ದರು. ಈ ಅಂಕಿ ಅಂಶಗಳೊಂದೇ ಸಾಕು ಮರಿನ್ ಆಕ್ರಮಣಕಾರಿತನ ಯಾವ ಪರಿಯಲ್ಲಿತ್ತೆಂಬುದಕ್ಕೆ.

ನನಗಾಗುತ್ತಿರುವ ಆನಂದವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಾಗುತ್ತಿಲ್ಲ. ಈ ಪಂದ್ಯಾವಳಿಗೆ ಸುದೀರ್ಘ ಅವಧಿಯಿಂದ ಅಭ್ಯಾಸ ನಡೆಸುತ್ತಿದ್ದೆ. ಇಲ್ಲಿನ ನನ್ನ ಸಾಧನೆಯಿಂದ ನಿಜವಾಗಿಯೂ ನನಗೆ ಅತೀವ ಸಂತಸವಾಗಿದೆ.
ಕರೊಲಿನಾ ಮರಿನ್, ಸ್ಪೇನ್ ಬ್ಯಾಡ್ಮಿಂಟನ್ ಆಟಗಾರ್ತಿ

ಆದಾಗ್ಯೂ, ಆನಂತರ ಆರು ಪಾಯಿಂಟ್ಸ್‌ಗಳನ್ನು ಕಲೆಹಾಕುವಲ್ಲಿ ಸಿಂಧು ಯಶಸ್ವಿಯಾದರು. ಸುಲಭ ಅವಕಾಶ ಮಾಡಿಕೊಟ್ಟ ಮರಿನ್ ಎದುರು ಮನಮೋಹಕ ಸ್ಮ್ಯಾಶ್‌ ಸಿಡಿಸಿದ ಸಿಂಧು, ಬಳಿಕ ಅದ್ಭುತವಾದ ಕ್ರಾಸ್ ಕೋರ್ಟ್ ಡ್ರಾಪ್‌ನೊಂದಿಗೆ ೭-೧೮ಕ್ಕೆ ಪಾಯಿಂಟ್ಸ್ ಅಂತರವನ್ನು ಇಳಿಸಿದರು. ಆನಂತರದಲ್ಲಿ ಮರಿನ್ ಮತ್ತೊಂದು ಪಾಯಿಂಟ್ಸ್ ಪಡೆದು ೧೯-೭ರಿಂದ ಮುನ್ನಡೆ ಪಡೆದರು.

ಅಷ್ಟರಲ್ಲಾಗಲೇ ಮರಿನ್ ತನ್ನ ಗೆಲುವನ್ನು ಖಾತ್ರಿಗೊಳಿಸಿದ್ದರು. ಅಂತಿಮವಾಗಿ ಒಂದೆರಡು ಪ್ರಮಾದವೆಸಗಿದ ಮರಿನ್, ಸಿಂಧು ೧೦ ಪಾಯಿಂಟ್ಸ್‌ ಹೆಕ್ಕಲು ನೆರವಾದರು! ಅಂದಹಾಗೆ, ಸಿಂಧು ವಿರುದ್ಧದ ಈ ಗೆಲುವಿನೊಂದಿಗೆ ಮೂರು ಬಾರಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಆದ ವಿಶ್ವದ ಮೊದಲ ಮಹಿಳಾ ಶಟ್ಲರ್ ಎಂಬ ಅನುಪಮ ದಾಖಲೆಯನ್ನೂ ಮರಿನ್ ಬರೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More