ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ಗೆ ಚೇತೇಶ್ವರ ಪೂಜಾರ ವಾಪಸ್?

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ೩೧ ರನ್‌ಗಳಿಂದ ಸೋಲು ಅನುಭವಿಸಿದ ಭಾರತ, ಎರಡನೇ ಟೆಸ್ಟ್ ಪಂದ್ಯದಲ್ಲಿ ಅಂತಿಮ ಇಲೆವೆನ್ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಆರಂಭಿಕ ಟೆಸ್ಟ್ ಪಂದ್ಯದಿಂದ ಕೈಬಿಡಲ್ಪಟ್ಟಿದ್ದ ಟೆಸ್ಟ್ ತಜ್ಞ ಪೂಜಾರ ಅವರನ್ನು ಮರಳಿ ತಂಡಕ್ಕೆ ಕರೆತರುವ ಒತ್ತಡ ಸೃಷ್ಟಿಯಾಗಿದೆ

ಚೇತೇಶ್ವರ ಪೂಜಾರರಂಥ ಪ್ರಬುದ್ಧ ಟೆಸ್ಟ್ ಆಟಗಾರನನ್ನು ಕೈಬಿಟ್ಟದ್ದೇಕೆ ಎಂಬ ಟೀಕೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಅನ್ನು ತಾಕಿದೆ. 194 ರನ್ ಗೆಲುವಿನ ಗುರಿಯನ್ನೂ ಮುಟ್ಟಲಾಗದೆ ಭಾರತ ತಂಡ ಮೊದಲ ಟೆಸ್ಟ್ ಅನ್ನು ಕೈಚೆಲ್ಲಲು ಪ್ರಮುಖ ಕಾರಣ ಸೌರಾಷ್ಟ್ರ ಮೂಲದ ಈ ಬ್ಯಾಟ್ಸ್‌ಮನ್ ಕಡೆಗಣನೆಯಿಂದಾಗಿಯೇ ಎಂಬ ಟೀಕೆಯಿಂದ ಎಚ್ಚೆತ್ತಿರುವ ಭಾರತ ತಂಡದ ಮ್ಯಾನೇಜ್‌ಮೆಂಟ್, ಲಾರ್ಡ್ಸ್ ಟೆಸ್ಟ್‌ನೊಂದಿಗೆ ಮತ್ತೆ ಪೂಜಾರ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇಂಗ್ಲೆಂಡ್ ವಿರುದ್ಧದ ಎಜ್‌ಬ್ಯಾಸ್ಟನ್ ಟೆಸ್ಟ್‌ಗೆ ಅಂತಿಮ ಇಲೆವೆನ್ ಆಯ್ಕೆ ಕೆಲವು ಅಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಮಧ್ಯೆ ಸೋಮವಾರ (ಆ.೬), ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಪೂಜಾರಗೆ ತಂಡದಲ್ಲಿ ಸ್ಥಾನ ಕಲ್ಪಿಸುವುದು ಸೂಕ್ತ ಎಂಬರ್ಥದಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

“ಇಂಗ್ಲೆಂಡ್ ಪರ ಪೋಪ್ ಮುಂದಿನ ಟೆಸ್ಟ್‌ನಲ್ಲಿ ಆಡುವ ಸಂಭವವಿದೆ. ಭಾರತ, ಪೂಜಾರ ಅವರನ್ನು ಆಡಿಸಲಿದೆಯೇ? ಇಷ್ಟಕ್ಕೂ ಇದು ಲಾರ್ಡ್ಸ್ ಪಂದ್ಯ,’’ ಎಂದು ವೀರೂ ಟ್ವೀಟಿಸಿದ್ದಾರೆ. ಐಪಿಎಲ್ ಪಂದ್ಯಾವಳಿಗೆ ಯಾವುದೇ ಫ್ರಾಂಚೈಸಿಗಳಿಂದ ಬಿಕರಿಯಾಗದ ಪೂಜಾರ ಕೌಂಟಿ ಕ್ರಿಕೆಟ್‌ನಲ್ಲಿ ಆಡಿದ್ದರು. ಈ ವೇಳೆ ಅವರು ಹೆಚ್ಚೇನೂ ಸದ್ದು ಮಾಡದೆ ಹೋದರೂ, ಇಂಗ್ಲೆಂಡ್‌ನಂಥ ಪಿಚ್‌ನಲ್ಲಿ ಅವರು ಆಡುವ ಹನ್ನೊಂದರ ಬಳಗದಲ್ಲಿ ಇರುವುದು ಲೇಸು ಎಂಬ ಮಾತು ಗಟ್ಟಿಯಾಗಿ ಕೇಳಿಬಂದಿದೆ.

ಇದನ್ನೂ ಓದಿ : ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಮೊಟ್ಟ ಮೊದಲ ಸೋಲಿನ ಬರೆ ಎಳೆದ ಇಂಗ್ಲೆಂಡ್

ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ದ್ವಿತೀಯ ಇನ್ನಿಂಗ್ಸ್‌ಗೆ ಭಾರಿ ಪೆಟ್ಟು ನೀಡಿದ್ದ ವೇಗಿ ಇಶಾಂತ್ ಶರ್ಮಾ, ಐದು ವಿಕೆಟ್‌ಗಳನ್ನು ಎಗರಿಸಿದ್ದರು. ಇಂಗ್ಲೆಂಡ್‌ನಲ್ಲಿನ ಈ ಮಾರಕ ದಾಳಿಗೆ ತಾನು ಕೌಂಟಿ ಕ್ರಿಕೆಟ್‌ನಲ್ಲಿ ಆಡಿದ್ದೇ ಕಾರಣ ಎಂಬುದನ್ನು ಸ್ವತಃ ಇಶಾಂತ್ ಹೇಳಿಕೊಂಡಿದ್ದರು. ಅಂದಹಾಗೆ, ಇಶಾಂತ್ ಶರ್ಮಾ ಕೂಡ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಬಿಕರಿಯಾಗದೆ ಉಳಿದಿದ್ದರಿಂದ ಕೌಂಟಿ ಕ್ರಿಕೆಟ್‌ ಆಡಿದ್ದರು.

ಏತನ್ಮಧ್ಯೆ, ಎಜ್‌ಬ್ಯಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಮೇಲಿನ ಕ್ರಮಾಂಕ ಮಾತ್ರವಲ್ಲ, ಮಧ್ಯಮ ಕ್ರಮಾಂಕ ಕೂಡ ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ಸಿಲುಕಿ ನಲುಗಿತ್ತು. ಮುರಳಿ ವಿಜಯ್, ಶಿಖರ್ ಧವನ್ ಮಾತ್ರವಲ್ಲದೆ, ಕೆ ಎಲ್ ರಾಹುಲ್ ಕೂಡ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾದರೆ, ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ಎಡವಿದ್ದರು.

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಲು ಟೀಂ ಇಂಡಿಯಾದಲ್ಲಿ ಕೆಲವೊಂದು ಬದಲಾವಣೆಗಳು ಅನಿವಾರ್ಯವಾಗಿವೆ. ಮುಖ್ಯವಾಗಿ, ಬ್ಯಾಟಿಂಗ್‌ನಲ್ಲಿ ಈ ಬದಲಾವಣೆ ಅಗತ್ಯವಾಗಿದೆ ಕೂಡ. ವಿರಾಟ್ ಕೊಹ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಪ್ರತಿರೋಧ ನೀಡಿದಂತೆ ಮಿಕ್ಕವರಿಂದ ನಿರಾಶಾದಾಯಕ ಬ್ಯಾಟಿಂಗ್ ಹೊಮ್ಮಿತ್ತು. ೫ ಪಂದ್ಯಗಳ ಸರಣಿ ಸದ್ಯ, ೧-೦ ಅಂತರದಿಂದ ಕೂಡಿದ್ದು, ಆರಂಭದಲ್ಲೇ ಸಮಬಲ ಸಾಧಿಸುವ ತುಡಿತದಲ್ಲಿರುವ ಟೀಂ ಇಂಡಿಯಾ, ಲಾರ್ಡ್ಸ್ ಪಂದ್ಯದಲ್ಲೇ ಎಚ್ಚರಿಕೆ ವಹಿಸಬೇಕಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More