ಕಾಮನ್ವೆಲ್ತ್ ಸ್ವರ್ಣ ವಿಜೇತೆ ಮೀರಾಬಾಯಿ ಚಾನು ಏಷ್ಯಾಡ್‌ಗೆ ಅನುಮಾನ

ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟ ವೇಟ್‌ಲಿಫ್ಟರ್ ಮೀರಾ ಬಾಯಿ ಚಾನು, ಈ ಬಾರಿಯ ಏಷ್ಯಾಡ್‌ನಲ್ಲಿ ಭಾಗವಹಿಸುವುದು ಅನುಮಾನ. ಮೀರಾ ಬಾಯಿ ಚಾನು ಕೆಳಬೆನ್ನಿನ ನೋವಿನಿಂದ ಬಳಲುತ್ತಿದ್ದಾರೆ

ಮೇ ತಿಂಗಳಿನಿಂದಲೂ ಕೆಳಬೆನ್ನಿನ ನೋವಿನಿಂದ ಬಳಲುತ್ತಿರುವ ಮೀರಾ ಬಾಯಿ ಚಾನು, ಏಷ್ಯಾ ಕೂಟದಲ್ಲಿ ಭಾಗವಹಿಸುವ ಮೂಲಕ ಅನಗತ್ಯ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಕೋಚ್ ವಿಜಯ್ ಶರ್ಮಾ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ವಾರವಷ್ಟೇ ಮೀರಾ ಬಾಯಿ ಚಾನು ಮುಂಬೈಗೆ ಪಯಣಿಸಿ ತರಬೇತಿಗೆ ಇಳಿದಿದ್ದಾರೆ. ಇದೇ ವೇಳೆ, ಭಾನುವಾರ ಅವರು ಮತ್ತೊಮ್ಮೆ ನೋವಿನಿಂದ ತತ್ತರಿಸಿದ್ದು, ಒಂದೊಮ್ಮೆ ಜಕಾರ್ತ ಕೂಟದಲ್ಲೇನಾದರೂ ಮೀರಾ ಭಾಗವಹಿಸಿದರೆ ಅದರಿಂದ ಹೆಚ್ಚು ತೊಂದರೆ ಅನುಭವಿಸಬೇಕಾಗುತ್ತದೆ ಎಂತಲೂ ಎಚ್ಚರಿಸಿದ್ದಾರೆ.

“ಮೀರಾ ಏಷ್ಯಾಡ್‌ನಲ್ಲಿ ಭಾಗವಹಿಸುವುದು ಆಕೆಯ ದೈಹಿಕ ಕ್ಷಮತೆಯ ದೃಷ್ಟಿಯಿಂದ ಉಚಿತವಲ್ಲ ಎಂದು ಈಗಾಗಲೇ ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಷನ್‌ಗೆ (ಐಡಬ್ಲ್ಯೂಎಫ್) ವರದಿ ಸಲ್ಲಿಸಲಾಗಿದೆ. ನನ್ನ ಕೆಲಸ ಮುಗಿದಿದ್ದು, ಈಗೇನಿದ್ದರೂ ಮಿರಾ ಹಾಗೂ ಒಕ್ಕೂಟವಷ್ಟೇ ನಿರ್ಧಾರ ತಳೆಯಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ, ಏಷ್ಯಾಡ್‌ಗಿಂತಲೂ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ,’’ ಎಂದೂ ಶರ್ಮಾ ಹೇಳಿದ್ದಾರೆ.

ಅಂದಹಾಗೆ, ಒಲಿಂಪಿಕ್ಸ್ ಕೂಟಕ್ಕಾಗಿನ ಅರ್ಹತಾ ಸ್ಪರ್ಧಾವಳಿಯಾಗಿರುವ ವಿಶ್ವ ಚಾಂಪಿಯನ್‌ಶಿಪ್ ನವೆಂಬರ್ ೧ರಿಂದ ಅಶ್ಘಾಬ್ಯಾಟ್‌ನಲ್ಲಿ ಜರುಗಲಿದೆ. ಈ ಋತುವಿನಲ್ಲಿ ನಡೆಯುತ್ತಿರುವ ಮೊದಲ ಒಲಿಂಪಿಕ್ಸ್ ಅರ್ಹತಾ ಪಂದ್ಯಾವಳಿ ಇದಾಗಿದೆ. “ಭಾನುವಾರದವರೆಗೂ ಮೀರಾ ತರಬೇತಿಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಆದರೆ, ಇದ್ದಕ್ಕಿದ್ದಂತೆ ನಿನ್ನೆ ಆಕೆ ಮತ್ತೆ ನೋವಿಗೆ ಒಳಗಾಗಿದ್ದಾರೆ. ಆದಾಗ್ಯೂ, ಇಂದು ಆಕೆ ತರಬೇತಿ ಮುಂದುವರಿಸಿದ್ದಾರೆ,’’ ಎಂದು ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ : ಗೋಲ್ಡ್ ಕೋಸ್ಟ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದಿತ್ತ ಮೀರಾಬಾಯಿ ಚಾನು

ಮೀರಾ ಬಾಯಿ ಚಾನುವಿನ ದೈಹಿಕ ಕ್ಷಮತೆಯ ಬಗೆಗೆ ಕೋಚ್ ಕಳವಳಕ್ಕೆ ಪ್ರತಿಕ್ರಿಯಿಸಿರುವ ಐಡಬ್ಲ್ಯೂಎಫ್ ಕಾರ್ಯದರ್ಶಿ ಸಹದೇವ್ ಯಾದವ್, “ಏಷ್ಯಾ ಕೂಟದಲ್ಲಿ ಮೀರಾ ಭಾಗವಹಿಸುವ ಕುರಿತು ಇದೇ ಗುರುವಾರ (ಆಗಸ್ಟ್ ೯) ಅಂತಿಮ ನಿರ್ಧಾರ ಪ್ರಕಟಿಸಲಾಗುವುದು,” ಎಂದು ಹೇಳಿದ್ದಾರೆ.

ಅಂದಹಾಗೆ, ಏಷ್ಯಾ ಕ್ರೀಡಾಕೂಟದಲ್ಲಿ ಮೀರಾ ಬಾಯಿ ಚಾನು ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದರು. ಒಂದೊಮ್ಮೆ ಆಕೆ ಕೂಟದಲ್ಲಿ ಭಾಗವಹಿಸದೆ ಹೋದರೆ, ಭಾರತಕ್ಕೆ ಭಾರೀ ಹಿನ್ನಡೆ ಆಗಲಿದೆ. ೨೦೧೭ರ ನವೆಂಬರ್‌ನಲ್ಲಿ ಮಣಿಪುರ ಮೂಲದ ಮೀರಾ, ೪೮ ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮೆರೆದಿದ್ದರು.

ಅಮೆರಿಕದ ಅನಹೀಮ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು ೧೯೪ ಕೆಜಿ ಭಾರ ಎತ್ತಿದ್ದ ಮೀರಾ, ಕರ್ಣಂ ಮಲ್ಲೇಶ್ವರಿ ಬಳಿಕ ೨೨ ವರ್ಷಗಳ ಬಳಿಕ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಅಂತೆಯೇ ಏಪ್ರಿಲ್‌ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು ೧೯೬ ಕೆಜಿ ತೂಕ ಎತ್ತಿದ್ದ ಮೀರಾ ರಾಷ್ಟ್ರೀಯ ದಾಖಲೆಯೊಂದಿಗೆ ಸ್ವರ್ಣ ಸಾಧನೆ ಮೆರೆದಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More