ಮಿಡ್ಲ್‌ಸೆಕ್ಸ್ ಸಹಯೋಗದಲ್ಲಿ ಕ್ರಿಕೆಟ್ ಅಕಾಡೆಮಿ ಅನಾವರಣ ಮಾಡಿದ ಸಚಿನ್

ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ಗಳೆರಡರಲ್ಲಿಯೂ ಗರಿಷ್ಠ ಸ್ಕೋರ್‌ಧಾರಿ ಸಚಿನ್ ತೆಂಡೂಲ್ಕರ್ ಕೌಂಟಿ ಕ್ಲಬ್ ಮಿಡ್ಲ್‌ಸೆಕ್ಸ್ ಜೊತೆಗೂಡಿ ಕ್ರಿಕೆಟ್ ಅಕಾಡೆಮಿ ತೆರೆದಿದ್ದಾರೆ. ‘ತೆಂಡೂಲ್ಕರ್ ಮಿಡ್ಲ್‌ಸೆಕ್ಸ್ ಗ್ಲೋಬಲ್ ಅಕಾಡೆಮಿ’ ಕ್ರಿಕೆಟಿಗರಷ್ಟೇ ಅಲ್ಲ, ಉತ್ತಮ ಜಾಗತಿಕ ಪ್ರಜೆಗಳನ್ನೂ ನೀಡಲಿದೆ ಎಂದಿದ್ದಾರೆ ಸಚಿನ್

ನಿವೃತ್ತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಇಂಗ್ಲಿಷ್ ಕೌಂಟಿ ಮಿಡ್ಲ್‌ಸೆಕ್ಸ್ ಕೈಜೋಡಿಸಿ, ಯುವ ಕ್ರಿಕೆಟಿಗರು ಮತ್ತು ಉತ್ತಮ ಪ್ರಜೆಗಳನ್ನು ರೂಪಿಸಲು ಹೊಸ ಸಂಸ್ಥೆ ಸ್ಥಾಪಿಸಲಾಗಿದೆ. ಸೋಮವಾರ (ಆ.೬) ಲೋಕಾರ್ಪಣೆ ಆಗಿರುವ ‘ತೆಂಡೂಲ್ಕರ್ ಮಿಡ್ಲ್‌ಸೆಕ್ಸ್ ಗ್ಲೋಬಲ್ ಅಕಾಡೆಮಿ’ ಒಂಬತ್ತು ಮತ್ತು ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ತಜ್ಞ ತರಬೇತುದಾರರು ಮತ್ತು ಅನುಭವಿಗಳಿಂದ ಪ್ರಭಾವಿ ಕ್ರಿಕೆಟಿಗರನ್ನಾಗಿ ರೂಪಿಸುವ ಪಣ ತೊಟ್ಟಿದೆ.

ನಾರ್ತ್‌ವುಡ್‌ನ ಮರ್ಚಂಟ್ ಟೇಲರ್ ಶಾಲೆಯಲ್ಲಿ ಅಕಾಡೆಮಿಯ ಮೊದಲ ಕ್ರಿಕೆಟ್ ಶಿಬಿರ ಸೋಮವಾರದಂದೇ ನಡೆಯಿತು. ಮುಂದಿನ ದಿನಗಳಲ್ಲಿ ಮುಂಬೈ, ಲಂಡನ್ ಸೇರಿದಂತೆ ಇನ್ನೂ ಅನೇಕ ಕಡೆ ಕ್ರಿಕೆಟ್ ಶಿಬಿರಗಳನ್ನು ನಡೆಸಲಾಗುವುದು ಎಂದು ಅಕಾಡೆಮಿ ಮೂಲಗಳು ಮುಂತಿಳಿಸಿವೆ.

ಅಕಾಡೆಮಿಯ ಉದ್ಘಾಟನೆ ನಂತರ ಮಾತನಾಡಿರುವ ಸಚಿನ್, “ಮಿಡ್ಲ್‌ಸೆಕ್ಸ್ ಜತೆಗೂಡಿ ಈ ಅಕಾಡೆಮಿಯನ್ನು ತೆರೆಯುತ್ತಿರುವುದಕ್ಕೆ ನನಗೆ ತೀವ್ರ ಸಂತಸವಾಗುತ್ತಿದೆ. ಅಕಾಡೆಮಿಯ ಉದ್ದೇಶ ಕೇವಲ ಕ್ರಿಕೆಟಿಗರನ್ನು ರೂಪುಗೊಳಿಸುವುದಷ್ಟೇ ಆಗಿರದೆ, ಭವಿಷ್ಯದಲ್ಲಿ ಈ ಜಗತ್ತಿಗೆ ಒಳ್ಳೆಯ ಪ್ರಜೆಗಳನ್ನು ನೀಡುವುದು ಕೂಡಾ ಆಗಿರುತ್ತದೆ. ಎಷ್ಟು ಸಾಧ್ಯವೋ ಅಷ್ಟೂ ಅತ್ಯುತ್ತಮ ಕ್ರಿಕೆಟ್ ತರಬೇತಿಯಲ್ಲದೆ, ಮಾನವ ಮೌಲ್ಯಗಳನ್ನು ಕೂಡಾ ಅಕಾಡೆಮಿ ಸೇರುವ ಮಕ್ಕಳಿಗೆ ಕಲಿಸಿಕೊಡಲಾಗುವುದು,’’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಸಚಿನ್, ಕೊಹ್ಲಿಗಿಂತಲೂ ಧೋನಿ ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟಿಗ

ಇನ್ನು ಮಿಡ್ಲ್‌ಸೆಕ್ಸ್ ಕ್ರಿಕೆಟ್‌ನ ಮುಖ್ಯ ಕಾರ್ಯವಾಹಕ ಅಧಿಕಾರಿ ರಿಚರ್ಡ್ ಗೊಯೆಟ್ಲೆ, “ಈ ಅಕಾಡೆಮಿಯನ್ನು ತೆರೆಯಲು ಸಚಿನ್ ತೆಂಡೂಲ್ಕರ್ ಮತ್ತು ಅವರ ತಂಡದೊಟ್ಟಿಗೆ ಕಳೆದ ಆರು ತಿಂಗಳಿನಿಂದ ಕೆಲಸ ಮಾಡಿದ್ದು ಅತ್ಯಂತ ಗೌರವದ ಸಂಗತಿ. ಈ ಅಕಾಡೆಮಿಯು ಸಾರ್ವಕಾಲಿಕ ಶ್ರೇಷ್ಠ ಆಟಗಾರನ ಕಲ್ಪನೆಯಲ್ಲಿ ಒಡಮೂಡಿದೆ. ಇಲ್ಲಿ ಸೇರುವ ಎಳೆಯರಿಗೆ ಸರ್ವೋತ್ಕೃಷ್ಟ ಕ್ರಿಕೆಟ್ ಶಿಕ್ಷಣದ ಜತೆಗೆ ಜೀವನದ ಮೌಲ್ಯಗಳ ಕುರಿತೂ ಅರಿವು ಮೂಡಿಸಲಾಗುವುದು. ಇಲ್ಲಿನ ಅನುಭವ ಅವರ ಜೀವಿತದ ಕಡೇ ಘಟ್ಟದವರೆಗೂ ಕಾಡುವಂತೆ ನೋಡಿಕೊಳ್ಳಲಾಗುವುದು,’’ ಎಂದು ತಿಳಿಸಿದರು.

ವಿಶ್ವ ಕಂಡ ಮೇರು ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಭಾರತದ ಪರ ೧೯೮೯ರಿಂದ ೨೦೧೩ರವರೆಗೆ ೨೦೦ ಟೆಸ್ಟ್‌ ಪಂದ್ಯಗಳನ್ನಾಡಿದ್ದು, ೫೧ ಶತಕ ಸೇರಿದಂತೆ ೧೫,೯೨೧ ರನ್ ಕಲೆಹಾಕಿದ್ದಾರೆ. ಅಂದಹಾಗೆ, ೨೦೧೧ರ ಐಸಿಸಿ ವಿಶ್ವಕಪ್‌ನ ವಿಜೇತ ತಂಡದ ಸದಸ್ಯನೂ ಆಗಿರುವ ಸಚಿನ್ ಮಿಡ್ಲ್‌ಸೆಕ್ಸ್ ಜತೆಗೆ ಈಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ
ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ
ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ
Editor’s Pick More