ಐಸಿಸಿ ವಿಶ್ವಕಪ್ ವಿಡಿಯೋದಲ್ಲಿ ಪ್ಲಿಂಟಾಫ್ ಹಾಡಿಗೆ ಅಭಿಮಾನಿಗಳು ಫಿದಾ

ಮುಂದಿನ ವರ್ಷ ನಡೆಯಲಿರುವ ಪ್ರತಿಷ್ಠಿತ ಐಸಿಸಿ ವಿಶ್ವಕಪ್ ಪಂದ್ಯಾವಳಿಗೆ ಇಂಗ್ಲೆಂಡ್ ತಂಡದ ಮಾಜಿ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಹೊಸ ಕಿಚ್ಚು ಹಚ್ಚಿದ್ದಾರೆ. ಐಸಿಸಿ ಪ್ರಚಾರ ವಿಡಿಯೋವೊಂದರಲ್ಲಿ ಅವರು ವಿಶ್ವಕಪ್ ಕುರಿತು ಗುನುಗಿರುವ ಹಾಡಿಗೆ ಅಭಿಮಾನಿಗಳು ಸಂಪೂರ್ಣ ಬೌಲ್ಡ್ ಆಗಿದ್ದಾರೆ

೨೦೧೯ರ ಐಸಿಸಿ ವಿಶ್ವಕಪ್ ವಿಡಿಯೋಗೆ ಫ್ಲಿಂಟಾಫ್ ಆ್ಯಂಕರ್ ಆಗಿದ್ದಾರೆ. ಮುಂದಿನ ಮೇ ತಿಂಗಳು ೩೦ರಿಂದ ಶುರುವಾಗಲಿರುವ ವಿಶ್ವಕಪ್ ಪಂದ್ಯಾವಳಿಯ ಹಾಡು ಭಾರೀ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಫ್ಲಿಂಟಾಫ್ ವಿಶ್ವಕಪ್ ಹಾಡಿನ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಫ್ಲಿಂಟಾಪ್ ರಸ್ತೆಗಳಲ್ಲಿ ಸಂಚರಿಸುತ್ತಾ ಹಾಡುವ ಹಾಡಿಗೆ ಅಭಿಮಾನಿಗಳು ಅವರನ್ನು ಹಿಂಬಾಲಿಸುತ್ತಿರುವುದು ಗೋಚರವಾಗಿದೆ.

ಇದಕ್ಕೂ ಮೊದಲು ಅವರು ದಿನಪತ್ರಿಕೆಯೊಂದನ್ನು ಓದುತ್ತಿರುವುದು ಕೂಡಾ ವಿಡಿಯೋದಲ್ಲಿ ಸೆರೆಯಾಗಿದೆ. ಈ ದಿನಪತ್ರಿಕೆಯ ಶೀರ್ಷಿಕೆಯು ‘ಕ್ರಿಕೆಟ್ ವಿಶ್ವಕಪ್ ಸನ್ನಿಹಿತವಾಗುತ್ತಿದೆ!’ ಎಂಬುದಾಗಿದೆ. ೧೯ ನೃತ್ಯಗಾರರು ಮತ್ತು ೧೦೦ಕ್ಕೂ ಹೆಚ್ಚು ಅಭಿಮಾನಿಗಳು ಫ್ಲಿಂಟಾಪ್ ವಿಶ್ವಕಪ್ ಹಾಡಿನಲ್ಲಿ ಕಾಣಿಸಿಕೊಂಡಿರುವುದು ಕೂಡ ಗಮನ ಸೆಳೆಯುತ್ತದೆ.

ಇನ್ನು, ಈ ವಿಡಿಯೋದಲ್ಲಿ ರೇಡಿಯೊ ೧ ಡಿಜೆ ಗ್ರೆಗ್ ಜೇಮ್ಸ್ ಅಲ್ಲದೆ, ಕ್ರಿಕೆಟಿಗರಾದ ಚಾರ್ಲೊಟ್ಟೆ ಎಡ್ವರ್ಡ್ಸ್, ಫಿಲ್ ಟಫ್ನೆಲ್, ಕುಮಾರ್ ಸಂಗಕ್ಕಾರ ಅಲ್ಲದೆ, ಪ್ರಭಾವಿಗಳಾದ ಜೋಶ್ ಪೀಟರ್ಸ್, ರೀವ್ ಎಚ್‌ಡಿ ಹಾಗೂ ಡೇನಿಯೆಲೆ ಹೆಡೆನ್ ಕೂಡಾ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ನೃತ್ಯಗಾರರ ಗುಂಪು, ಸಂಗೀತಗಾರರು ಹಾಗೂ ಧ್ವಜಗಳನ್ನು ಹಿಡಿದ ಅಭಿಮಾನಿಗಳಿಂದ ಸುತ್ತುವರೆದ ಫ್ಲಿಂಟಾಫ್ ಇಂಗ್ಲೆಂಡ್‌ನ ರಸ್ತೆಗಳಲ್ಲಿ ಹಾಡುತ್ತಾ ಸಾಗುವ ದೃಶ್ಯ ಮನಮೋಹಕವಾಗಿದೆ.

ಇದನ್ನೂ ಓದಿ : ಕಡೆಗೂ ರಾಜಕೀಯವಾಗಿ ಗೆದ್ದ ಕ್ರಿಕೆಟ್ ವಿಶ್ವಕಪ್ ವಿಜೇತ ಇಮ್ರಾನ್ ಖಾನ್!

ಪ್ರತಿಷ್ಠಿತ ವಿಶ್ವಕಪ್ ಪಂದ್ಯಾವಳಿಯು ಈ ಬಾರಿ ಇಂಗ್ಲೆಂಡ್ ನೆಲದಲ್ಲಿ ನಡೆಯುತ್ತಿದ್ದು, ರೌಂಡ್ ರಾಬಿನ್ ಹಾಗೂ ನಾಕೌಟ್ ಮಾದರಿಯಲ್ಲಿ ಜರುಗಲಿದೆ. ಮೇ ೩೦ರಂದು ಶುರುವಾಗಲಿರುವ ಪಂದ್ಯಾವಳಿಯು ಜುಲೈ ೧೪ರಂದು ನಡೆಯಲಿರುವ ಫೈನಲ್‌ನೊಂದಿಗೆ ಮುಕ್ತಾಯ ಕಾಣಲಿದೆ. ಹತ್ತು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿವೆ.

ಈ ಹಿಂದಿನ ೨೦೧೫ರ ವಿಶ್ವಕಪ್ ಪಂದ್ಯಾವಳಿಯ ಆತಿಥ್ಯವನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ಹೊತ್ತಿದ್ದವು. ಇಲ್ಲೀವರೆಗೆ ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ, ೨೦೧೯ರ ಆವೃತ್ತಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಗುರಿ ಹೊತ್ತಿದ್ದರೆ, ೧೯೮೩ ಮತ್ತು ೨೦೧೧ರ ಚಾಂಪಿಯನ್ ಭಾರತ ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದೆ. ಇತ್ತ, ಆತಿಥೇಯ ಇಂಗ್ಲೆಂಡ್ ಕೂಡಾ ಚೊಚ್ಚಲ ವಿಶ್ವಕಪ್ ಗೆಲುವಿಗಾಗಿ ಮತ್ತೊಂದು ಅಭಿಯಾನ ನಡೆಸಲಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More