ಚೆಂಡು ವಿರೂಪ, ಮೈದಾನದಲ್ಲಿನ ಕ್ಷುಲ್ಲಕ ವರ್ತನೆ ಹೆಚ್ಚಳ: ಐಸಿಸಿ ಕಳವಳ

ಇತ್ತೀಚಿನ ದಿನಗಳಲ್ಲಿ ಸಭ್ಯ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಕ್ಷುಲ್ಲಕ ನಡವಳಿಕೆ ಹಾಗೂ ಚೆಂಡು ವಿರೂಪದಂಥ ಘಟನೆಗಳು ಕ್ರಿಕೆಟ್ ಡಿಎನ್‌ಎಗೆ ಮಾರಕವಾಗುತ್ತಿದೆ ಎಂದು ಐಸಿಸಿ ಕಳವಳ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ಇಂಥ ದುಷ್ಕೃತ್ಯಗಳನ್ನು ತಡೆಯಬೇಕಿದೆ ಎಂದು ಐಸಿಸಿ ಎಚ್ಚರಿಸಿದೆ

ಇತ್ತೀಚೆಗಷ್ಟೇ ಮುಕ್ತಾಯ ಕಂಡ ಎಜ್‌ಬ್ಯಾಸ್ಟನ್ ಟೆಸ್ಟ್‌ ಪಂದ್ಯದಲ್ಲಿ ಇಶಾಂತ್ ಶರ್ಮಾ ಮೈದಾನದಲ್ಲಿ ತೋರಿದ ಅನುಚಿತ ವರ್ತನೆಗೆ ದಂಡ ತೆತ್ತಿದ್ದರು. ಇಂಗ್ಲೆಂಡ್ ಆಟಗಾರ ಮ್ಯಾಲನ್ ವಿಕೆಟ್ ಪಡೆದ ಬಳಿಕ ಇಶಾಂತ್ ಅಶಿಸ್ತು ತೋರಿ ಪಂದ್ಯ ಸಂಭಾವನೆಯ ಶೇ.೧೫ರಷ್ಟು ದಂಡ ತೆತ್ತಿದ್ದರು. ದಂಡ ತೆರುವುದು ಬೇರೆಯದೇ ಮಾತು. ಆದರೆ, ಆಟಗಾರರ ದುರ್ವರ್ತನೆ ಸಭ್ಯ ಕ್ರಿಕೆಟ್‌ಗೆ ಎಂದೂ ಶೋಭೆ ತರುವಂಥದ್ದಲ್ಲ.

ಇದನ್ನೂ ಒಳಗೊಂಡಂತೆ ಚೆಂಡು ವಿರೂಪ ಪ್ರಕರಣದ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಖ್ಯ ಕಾರ್ಯವಾಹಕ ಅಧಿಕಾರಿ ಡೇವಿಡ್ ರಿಚರ್ಡ್‌ಸನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ಅತಿಯಾದ ಸ್ಲೆಡ್ಜಿಂಗ್‌ (ಕುಚೋದ್ಯ) ಆಗಲೀ, ಇಲ್ಲವೇ ಮೈದಾನದಲ್ಲಿನ ಆಟಗಾರರು ಶಿಸ್ತು ಉಲ್ಲಂಘಿಸುವುದಾಗಲೀ ‘ಕ್ರಿಕೆಟ್ ಡಿಎನ್‌ಎ’ಗೆ ಬೆದರಿಕೆಯೊಡ್ಡುತ್ತಿದೆ. ಇಂಥದ್ದೊಂದು ವರ್ತನೆ ನಮ್ಮ ಆಟದ ಘನತೆಗೆ ತಕ್ಕುದ್ದಲ್ಲ,” ಎಂದು ಎಚ್ಚರಿಸಿದ್ದಾರೆ.

“ಜನತೆ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಸಭ್ಯ ಆಟದಲ್ಲಿನ ಇಂಥ ದುರ್ನಡತೆಗಳನ್ನು ಎಂದಿಗೂ ಸಹಿಸುವುದಿಲ್ಲ. ಇದನ್ನು ಆಟಗಾರರು ಗಂಭೀರವಾಗಿ ಗಮನಿಸಬೇಕಿದೆ,’’ ಎಂದು ಸೋಮವಾರ ತಡರಾತ್ರಿ ಲಾರ್ಡ್ಸ್‌ನಲ್ಲಿ ನಡೆದ ಎಂಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಕೌಡ್ರೆ ಲೆಕ್ಚರ್‌ ಕೊಡುವ ವೇಳೆ ರಿಚರ್ಡ್‌ಸನ್ ಆಟಗಾರರನ್ನು ಎಚ್ಚರಿಸಿದರು.

ಇದೇ ಉಪನ್ಯಾಸದ ವೇಳೆ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣದ ಟೆಸ್ಟ್ ಸರಣಿಯಲ್ಲಿ ಘಟಿಸಿದ ಚೆಂಡು ವಿರೂಪ ಪ್ರಕರಣವನ್ನು ಕೂಡ ರಿಚರ್ಡ್‌ಸನ್ ಸ್ಮರಿಸಿದ್ದಾರೆ. “ಕ್ರಿಕೆಟ್ ಡಿಎನ್‌ಎ ಸಮಗ್ರತೆಯಿಂದ ಕೂಡಿದೆ. ಭವಿಷ್ಯದಲ್ಲಿ ಇಂಥ ಕ್ಷುಲ್ಲಕ ಸಂಗತಿಗಳನ್ನು ಹಾಗೂ ದುರ್ವರ್ತನೆಗಳನ್ನು ಕೈಬಿಡದೆ ಹೋದರೆ ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ,’’ ಎಂದು ರಿಚರ್ಡ್‌ಸನ್ ಅಭಿಪ್ರಾಯಿಸಿದ್ದಾರೆ.

“ಸ್ಲೆಡ್ಜಿಂಗ್ ಎಂಬುದು ವೈಯಕ್ತಿಕ ನಿಂದನೆಗಳಿಂದ ಕೂಡಿರಬಾರದು. ಓರ್ವ ಬ್ಯಾಟ್ಸ್‌ಮನ್ ಔಟಾಗಿ ಪೆವಿಲಿಯನ್‌ನತ್ತ ತೆರಳುವಾಗ ಫೀಲ್ಡರ್‌ಗಳು ಅನಗತ್ಯವಾಗಿ ಆಂಗಿಕ ತಿಕ್ಕಾಟಕ್ಕೆ ಮುಂದಾಗುತ್ತಿರುವ ಪ್ರಕರಣಗಳೂ ಕಾಣಿಸಿಕೊಳ್ಳುತ್ತಿವೆ. ಇನ್ನು, ಚೆಂಡು ವಿರೂಪದಂಥ ಪ್ರಕರಣಗಳೊಂದಿಗೆ ಅಂಪೈರ್‌ಗಳ ತೀರ್ಪಿಗೂ ಗೌರವ ಸಲ್ಲಿಸಲಾಗುತ್ತಿಲ್ಲ ಎಂಬ ಸಂಗತಿ ಕೂಡ ಅಪಾಯಕಾರಿ ಚಿಹ್ನೆಗಳೇ,’’ ಎಂದೂ ರಿಚರ್ಡ್‌ಸನ್ ಹೇಳಿದ್ದಾರೆ.

ಇದನ್ನೂ ಓದಿ : ಕ್ರಿಕೆಟಿಗರ ಭಾವುಕ ಕ್ಷಣಗಳನ್ನು ನೆನಪಿಸಿದ ಸ್ಟೀವ್ ಸ್ಮಿತ್ ಕಣ್ಣೀರಿನ ಪ್ರಸಂಗ

ಅಂದಹಾಗೆ, ಇದೇ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣದ ಸರಣಿಯ ವೇಳೆ ವೇಗಿ ಕಾಗಿಸೊ ರಬಾಡ, ಆಸೀಸ್ ನಾಯಕ ಸ್ಟೀವ್ ಸ್ಮಿತ್ ಅವರನ್ನು ತಳ್ಳಿದ ತಪ್ಪಿಗಾಗಿ ಅಮಾನತುಗೊಂಡಿದ್ದರು. ಇದಲ್ಲದೆ, ಡೇವಿಡ್ ವಾರ್ನರ್ ಹಾಗೂ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟಾನ್ ಡಿಕಾಕ್ ಮೈದಾನದಲ್ಲೇ ದುರ್ವರ್ತನೆ ಮೆರೆದಿದ್ದರು. ಅಂದಹಾಗೆ, ಇತ್ತೀಚಿನ ಶ್ರೀಲಂಕಾ ಮತ್ತು ವೆಸ್ಟ್‌ಇಂಡೀಸ್ ನಡುವಣದ ಸರಣಿಯಲ್ಲಿಯೂ ಲಂಕಾ ನಾಯಕ ದಿನೇಶ್ ಚಂಡೀಮಲ್ ಚೆಂಡು ವಿರೂಪ ಪ್ರಕರಣಕ್ಕೆ ಸಿಲುಕಿ, ಸದ್ಯ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಅಮಾನತುಗೊಂಡಿದ್ದಾರೆ.

“ಈಗ್ಗೆ ಕೆಲವು ತಿಂಗಳುಗಳಿಂದ ಚೆಂಡು ವಿರೂಪದಂಥ ಘಟನೆಗಳಿಗೆ ಐಸಿಸಿ ನಿಯಮಗಳು ಅಸ್ಪಷ್ಟ ಹಾಗೂ ಗೊಂದಲಮಯವಾಗಿವೆ ಎಂಬ ಆಟಗಾರರ ಆರೋಪವನ್ನು ನಾನು ಕೇಳಿದ್ದೇನೆ. ಆದರೆ, ನಿಯಮಗಳೇನೂ ಗೊಂದಲಕಾರಿ ಇಲ್ಲವೇ ಜಟಿಲವಾಗಿಲ್ಲ. ಚೆಂಡನ್ನು ಯಾವುದೇ ಕಾರಣಕ್ಕೂ ಅದರ ಮೂಲ ಸ್ವರೂಪವನ್ನು ಚ್ಯುಯಿಂಗ್ ಗಮ್, ಸಕ್ಕರೆ ಮಿಶ್ರಣದ ಪೇಯದಂಥ ಕೃತಕ ವಸ್ತುಗಳಿಂದ ಹಾಳುಗೆಡಹುವುದು ಸ್ಪಷ್ಟ ನಿಯಮ ಉಲ್ಲಂಘನೆಯಾಗಿದೆ ಮತ್ತು ಇದುವೇ ಚೆಂಡು ವಿರೂಪಗೊಳಿಸುವ ಬಗೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟವಾಗಿ ಹೇಳಬಯಸುತ್ತೇನೆ,’’ ಎಂದು ರಿಚರ್ಡ್‌ಸನ್ ತಿಳಿಸಿದ್ದಾರೆ.

ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ
ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ
ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ
Editor’s Pick More