ಲಾರ್ಡ್ಸ್‌ನಲ್ಲಿ ಕಪಿಲ್‌, ಧೋನಿಗೆ ಸಾಧ್ಯವಾದದ್ದು ಕೊಹ್ಲಿಗೆ ಸಾಧ್ಯವಾಗುವುದೇ? 

ಎಜ್‌ಬ್ಯಾಸ್ಟನ್ ಟೆಸ್ಟ್ ಪಂದ್ಯದಲ್ಲಿ ೩೧ ರನ್‌ ಸೋಲನುಭವಿಸಿದ ಭಾರತ ತಂಡಕ್ಕೆ ಈಗ ಲಾರ್ಡ್ಸ್ ಪರೀಕ್ಷೆ ಕಾದಿದೆ. ಗುರುವಾರದಿಂದ (ಆ.೯) ಶುರುವಾಗಲಿರುವ ೨ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಪಡೆ ಜಯ ಸಾಧಿಸುವ ಜೊತೆಗೆ ಸರಣಿಯಲ್ಲಿ ಸಮಬಲ ಸಾಧಿಸಿ ಐತಿಹಾಸಿಕ ಮೈದಾನದಲ್ಲಿ ಹ್ಯಾಟ್ರಿಕ್ ಗುರಿ ಹೊತ್ತಿದೆ

ಇದುವರೆಗಿನ ಅಂಕಿ-ಅಂಶಗಳತ್ತ ಕಣ್ಣಾಡಿಸುವುದಾದರೆ, ಭಾರತಕ್ಕೆ ಲಾರ್ಡ್ಸ್ ಮೈದಾನ ಅಷ್ಟೇನೂ ಪ್ರಿಯವಾದುದಲ್ಲ. ಭಾರತ ತಂಡ ಆಡಿದ ಚೊಚ್ಚಲ ಟೆಸ್ಟ್ ಪಂದ್ಯ ಇದೇ ತಾಣದಲ್ಲಾಗಿದ್ದುದಲ್ಲದೆ, ಸೋಲಿನ ಸುಳಿಗೆ ಸಿಲುಕಿತ್ತು. ಈ ಚಾರಿತ್ರಿಕ ತಾಣದಲ್ಲಿ ಭಾರತ ೧೭ ಟೆಸ್ಟ್ ಪಂದ್ಯಗಳನ್ನಾಡಿದ್ದು, ಗೆಲುವು ಸಾಧಿಸಿರುವುದು ಕೇವಲ ಎರಡು ಪಂದ್ಯಗಳಲ್ಲಷ್ಟೆ. ೧೧ ಪಂದ್ಯಗಳಲ್ಲಿ ಸೋತಿರುವ ಭಾರತ, ಉಳಿದ ನಾಲ್ಕು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.

ಇನ್ನು, ಲಾರ್ಡ್ಸ್ ಮೈದಾನದಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಹದಿಮೂರು ನಾಯಕರುಗಳ ಪೈಕಿ ಯಶ ಕಂಡಿರುವುದು ಕಪಿಲ್ ದೇವ್ ಮತ್ತು ಮಹೇಂದ್ರ ಸಿಂಗ್ ಧೋನಿ ಮಾತ್ರವೇ. ೧೯೩೨ರಲ್ಲಿ ಸಿ ಕೆ ನಾಯ್ಡು ಸಾರಥ್ಯದಲ್ಲಿ ಮೊಟ್ಟಮೊದಲ ಟೆಸ್ಟ್ ಪಂದ್ಯವನ್ನಾಡಿದ ಭಾರತ ತಂಡ, ತಾನಾಡಿದ ಮೊದಲ ಟೆಸ್ಟ್‌ನಲ್ಲೇ ಸೋಲನುಭವಿಸಿತ್ತು. ಡಗ್ಲಾಸ್ ಜಾರ್ಡೈನ್ ನೇತೃತ್ವದ ಇಂಗ್ಲೆಂಡ್ ತಂಡ, ಭಾರತವನ್ನು ೧೫೮ ರನ್‌ಗಳಿಂದ ಮಣಿಸಿತ್ತು.

ಇತಿಹಾಸ ಬರೆದ ಕಪಿಲ್-ಧೋನಿ ಪಡೆ

ಅಲ್ಲಿಂದಾಚೆಗೆ ಆಡಿದ ಹತ್ತು ಪಂದ್ಯಗಳಲ್ಲಿಯೂ ಭಾರತಕ್ಕೆ ಲಾರ್ಡ್ಸ್ ಒಲಿದಿರಲಿಲ್ಲ. ಆದರೆ, ೧೯೮೬ರಲ್ಲಿ ಕಪಿಲ್ ಪಡೆ ಇತಿಹಾಸ ಬರೆದಿತ್ತು. ಇದೇ ಮೈದಾನದಲ್ಲಿ ಮೂರು ವರ್ಷಗಳ ಹಿಂದೆ ದೈತ್ಯ ವೆಸ್ಟ್‌ ಇಂಡೀಸ್ ಮಣಿಸಿ ಚೊಚ್ಚಲ ಐಸಿಸಿ ವಿಶ್ವಕಪ್ ಗೆದ್ದುಕೊಟ್ಟಿದ್ದ ಕಪಿಲ್, ಭಾರತಕ್ಕೆ ಗಗನಕುಸುಮವಾಗಿದ್ದ ಲಾರ್ಡ್ಸ್ ಮೈದಾನದಲ್ಲಿಯೂ ಗೆಲುವು ತಂದುಕೊಟ್ಟಿದ್ದರು. ಡೇವಿಡ್ ಗೋವರ್ ಸಾರಥ್ಯದ ಇಂಗ್ಲೆಂಡ್ ತಂಡವನ್ನು ಐದು ವಿಕೆಟ್‌ಗಳಿಂದ ಭಾರತ ಮಣಿಸಿತ್ತು.

ಕಪಿಲ್ ನಂತರದಲ್ಲಿ ಮತ್ತೆ ಭಾರತ ತಂಡ ಗೆಲುವು ಸಾಧಿಸಲು ತಿಣುಕಿತ್ತು. ಮತ್ತೆ ಲಾರ್ಡ್ಸ್‌ನಲ್ಲಿ ನಸುನಗುವಂತೆ ಮಾಡಿದ್ದು ಎಂ ಎಸ್ ಧೋನಿ ಬಳಗ. ೨೦೧೪ರ ಪ್ರವಾಸದಲ್ಲಿ ಅಲೆಸ್ಟೈರ್ ಕುಕ್ ನೇತೃತ್ವದ ಇಂಗ್ಲೆಂಡ್‌ ವಿರುದ್ಧ ಧೋನಿ ಬಳಗ ೯೫ ರನ್ ಗೆಲುವು ಪಡೆದಿತ್ತು. ವೇಗಿ ಇಶಾಂತ್ ಶರ್ಮಾ ಪ್ರಚಂಡ ಬೌಲಿಂಗ್ ದಾಳಿ ನಡೆಸಿ, ೭೪ ರನ್‌ಗಳಿಗೆ ೭ ವಿಕೆಟ್ ಕಬಳಿಸಿ ಗೆಲುವು ತಂದಿತ್ತಿದ್ದರು.

ಇದನ್ನೂ ಓದಿ : ಇಂಗ್ಲೆಂಡ್‌ನಲ್ಲಿ ನಾನೇನೂ ಸಾಧಿಸಿ ತೋರಿಸಬೇಕಿಲ್ಲ ಎಂದ ವಿರಾಟ್ ಕೊಹ್ಲಿ

ಲಾರ್ಡ್ಸ್‌ನಲ್ಲಿ ಭಾರತದ ಟೆಸ್ಟ್ ಸಾಧನೆ

 • ೧೯೩೬: ವಿಜಯನಗರದ ಮಜಹಾರಾಜ (ನಾಯಕ) - ೯ ವಿಕೆಟ್ ಸೋಲು
 • ೧೯೪೬: ಪಟೌಡಿಯ ನವಾಬ್ (ನಾಯಕ) - ೧೦ ವಿಕೆಟ್ ಸೋಲು
 • ೧೯೫೨: ವಿಜಯ್ ಹಜಾರೆ (ನಾಯಕ) - ೮ ವಿಕೆಟ್ ಸೋಲು
 • ೧೯೫೯: ಪಂಕಜ್ ರಾಯ್ (ನಾಯಕ) - ೮ ವಿಕೆಟ್ ಸೋಲು
 • ೧೯೬೭: ಎಂಎಕೆ ಪಟೌಡಿ (ನಾಯಕ) ೧೨೪ ರನ್ ಸೋಲು
 • ೧೯೭೧: ಅಜಿತ್ ವಾಡೇಕರ್ (ನಾಯಕ) - ಡ್ರಾ
 • ೧೯೭೪: ಅಜಿತ್ ವಾಡೇಕರ್ (ನಾಯಕ) - ಇನ್ನಿಂಗ್ಸಸ್ ಹಾಗೂ ೨೮೫ ರನ್ ಸೋಲು
 • ೧೯೭೯: ಶ್ರೀನಿವಾಸ್ ವೆಂಟಕರಾಘವನ್ (ನಾಯಕ) - ಡ್ರಾ
 • ೧೯೮೨: ಸುನಿಲ್ ಗವಾಸ್ಕರ್ (ನಾಯಕ) - ೭ ವಿಕೆಟ್ ಸೋಲು
 • ೧೯೮೬: ಕಪಿಲ್‌ದೇವ್ (ನಾಯಕ) - ೫ ವಿಕೆಟ್ ಗೆಲುವು
 • ೧೯೯೦: ಮೊಹಮದ್ ಅಜರುದ್ದೀನ್ (ನಾಯಕ) - ೨೪೭ ರನ್ ಸೋಲು
 • ೧೯೯೬: ಮೊಹಮದ್ ಅಜರುದ್ದೀನ್ (ನಾಯಕ) - ಡ್ರಾ
 • ೨೦೦೨: ಸೌರವ್ ಗಂಗೂಲಿ (ನಾಯಕ) - ೧೭೦ ರನ್ ಸೋಲು
 • ೨೦೦೭: ರಾಹುಲ್ ದ್ರಾವಿಡ್ (ನಾಯಕ) - ಡ್ರಾ
 • ೨೦೧೪: ಎಂ ಎಸ್ ಧೋನಿ (ನಾಯಕ) - ೯೫ ರನ್ ಗೆಲುವು
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More