ಸಿರಾಜ್ ದಾಳಿಗೆ ನಲುಗಿದ ಹರಿಣಗಳು; ಭಾರತ ಎ ತಂಡಕ್ಕೆ ಭರ್ಜರಿ ಗೆಲುವು

ಪ್ರವಾಸಿ ದ.ಆಫ್ರಿಕಾ ಎ ತಂಡ ಕಡೆಗೂ ಆತಿಥೇಯ ಭಾರತ ಎ ತಂಡದ ಎದುರು ಮಂಡಿಯೂರಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ (ಆ.೭) ಮುಕ್ತಾಯ ಕಂಡ 4 ದಿನಗಳ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊಹಮದ್ ಸಿರಾಜ್ ಸೊಗಸಾದ ಬೌಲಿಂಗ್‌ ಭಾರತಕ್ಕೆ ಇನ್ನಿಂಗ್ಸ್ ಗೆಲುವು ತಂದಿತ್ತಿತು

ಮೊದಲ ಇನ್ನಿಂಗ್ಸ್‌ನಲ್ಲಿ ಮಾತ್ರವಲ್ಲದೆ, ಎರಡನೇ ಇನ್ನಿಂಗ್ಸ್‌ನಲ್ಲಿಯೂ ಐದು ವಿಕೆಟ್ ಹೆಕ್ಕಿದ ವೇಗಿ ಮೊಹಮದ್ ಸಿರಾಜ್, ಭಾರತ ತಂಡದ ಭರ್ಜರಿ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಸವಾಲಿನ ಮೊತ್ತವನ್ನು ಹತ್ತಿಕ್ಕಲಾಗದೆ ಕಂಗೆಟ್ಟ ದಕ್ಷಿಣ ಆಫ್ರಿಕಾ ಎ ತಂಡ, ಮಧ್ಯಮ ಕ್ರಮಾಂಕಿತ ಆಟಗಾರ ರೂಡಿ ಸೆಕೆಂಡ್ ಅವರ ಹೋರಾಟದ ಮಧ್ಯೆಯೂ ಆತಿಥೇಯರ ಕೈಯಿಂದ ಸೋಲು ತಪ್ಪಿಸಿಕೊಳ್ಳಲಾಗದೆ ಇನ್ನಿಂಗ್ಸ್ ಹಾಗೂ ೩೦ ರನ್ ಸೋಲುಂಡಿತು.

ಅಂದಹಾಗೆ, ತಂಡದ ಪರ ಏಕಾಂಗಿ ಹೋರಾಟ ನಡೆಸಿದ ರೂಡಿ ಸೆಕೆಂಡ್, ಮೊದಲ ಇನ್ನಿಂಗ್ಸ್‌ನಲ್ಲಿ ೯೪ ರನ್‌ಗಳಿಗೆ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಇಷ್ಟೇ ಮೊತ್ತಕ್ಕೆ ಚಾಹಲ್‌ ಹೆಣೆದ ಎಲ್‌ಬಿ ಬಲೆಗೆ ಬಿದ್ದು ಕ್ರೀಸ್ ತೊರೆದರು. ಆಟದ ಅಂತಿಮ ದಿನವಾದ ಮಂಗಳವಾರ (ಆಗಸ್ಟ್ ೭) ಶ್ರೇಯಸ್ ಅಯ್ಯರ್ ಸಾರಥ್ಯದ ಭಾರತ ಎ ತಂಡ ಅಮೋಘ ಗೆಲುವು ಸಾಧಿಸಿತು.

೪ ವಿಕೆಟ್‌ಗೆ ೯೯ ರನ್‌ಗಳಿಂದ ನಾಲ್ಕನೇ ದಿನದಾಟ ಮುಂದುವರಿಸಿದ ಪ್ರವಾಸಿ ದಕ್ಷಿಣ ಆಫ್ರಿಕಾ ಎ ತಂಡದ ಪರ ರೂಡಿ ಸೆಕೆಂಡ್ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದರು. ೩೨೪ ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಅವರು, ೨೧೪ ಎಸೆತಗಳನ್ನು ಎದುರಿಸಿ ೧೧ ಬೌಂಡರಿಗಳುಳ್ಳ ೯೪ ರನ್ ಗಳಿಸಿದರು. ಸತತ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಕೇವಲ ೬ ರನ್‌ಗಳಿಂದ ಶತಕ ವಂಚಿತವಾದದ್ದು ಗಮನಾರ್ಹ.

ಇದನ್ನೂ ಓದಿ : ಸರ್ವ ಟೀಕೆಗಳಿಗೂ ಶತಕವೇ ಮದ್ದು ಎಂದ ವಿರಾಟ್ ಆಟಕ್ಕೆ ಸುಸ್ತಾದ ಇಂಗ್ಲೆಂಡ್

ಅಂದಹಾಗೆ, ಭಾರತದ ಪರ ಮೊಹಮದ್ ಸಿರಾಜ್ ಬೌಲಿಂಗ್‌ ಎಷ್ಟು ಶಕ್ತಿಶಾಲಿಯಾಗಿತ್ತೋ ಅಷ್ಟೇ ಪ್ರವಾಸಿ ತಂಡದ ಪರ ರೂಡಿ ತೋರಿದ ಏಕಾಂಗಿ ಹೋರಾಟವೂ ಅಪ್ಯಾಯಕಾರಿಯಾಗಿತ್ತು. ಆದರೆ, ಅವರೊಬ್ಬರ ಹೋರಾಟ ತಂಡದ ಸೋಲನ್ನು ತಪ್ಪಿಸಲಿಲ್ಲ. ಅಂದಹಾಗೆ, ದಿನದ ಕೊನೆಯ ಏಳು ಎಸೆತಗಳನ್ನು ದಕ್ಷಿಣ ಆಫ್ರಿಕಾ ನಿರ್ಭಿಡೆಯಾಗಿ ಎದುರಿಸಿದ್ದರೆ ಸೋಲನ್ನು ತಪ್ಪಿಸಿಕೊಳ್ಳಬಹುದಾಗಿತ್ತು. ಆದರೆ, ಮೊಹಮದ್ ಸಿರಾಜ್ ಮಾರಕ ಬೌಲಿಂಗ್ ಹರಿಣಗಳನ್ನು ಸೋಲಿಗೆ ಗುರಿಯಾಗಿಸಿತು.

ರೂಡಿ ಹಾಗೂ ಶಾನ್ ವೊಗ್ ಬರ್ಗ್ (೫೦: ೧೭೫ ಎಸೆತ, ೧ ಬೌಂಡರಿ) ಆರನೇ ವಿಕೆಟ್‌ಗೆ ಅತ್ಯಂತ ಸಹನೆಯ ೧೧೯ ರನ್ ಪೇರಿಸಿದರು. ಇಷ್ಟು ರನ್ ಗಳಿಸಲು ಇವರೀರ್ವರೂ ೩೦೬ ಎಸೆತಗಳನ್ನು ಎದುರಿಸಿದರು. ಆದರೆ, ಈ ಜೋಡಿಯನ್ನು ಗುರ್ಬಾನಿ ಬೇರ್ಪಡಿಸಿದರು. ಬೆನ್ನಲ್ಲೇ ಚಾಹಲ್, ರೂಡಿಯನ್ನು ಕ್ರೀಸ್ ತೊರೆಯುವಂತೆ ಮಾಡಿ ಆತಿಥೇಯರ ಗೆಲುವನ್ನು ಸುಗಮಗೊಳಿಸಿದರು.

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕಾ ಎ ಮೊದಲ ಇನ್ನಿಂಗ್ಸ್: ೨೪೬ ಭಾರತ ಎ ಮೊದಲ ಇನ್ನಿಂಗ್ಸ್: ೫೮೪/೮ (ಡಿಕ್ಲೇರ್) (ಪೃಥ್ವಿ ಶಾ ೧೩೬, ಮಯಾಂಕ್ ಅಗರ್ವಾಲ್ ೨೨೦; ಬ್ಯುರನ್ ಹೆನ್ರಿಕ್ಸ್ ೯೮ಕ್ಕೆ ೩) ದಕ್ಷಿಣ ಆಫ್ರಿಕಾ ಎ ದ್ವಿತೀಯ ಇನ್ನಿಂಗ್ಸ್: ೧೨೮.೫ ಓವರ್‌ಗಳಲ್ಲಿ ೩೦೮ (ರೂಡಿ ಸೆಕೆಂಡ್ ೯೪, ಜುಬ್ಯರ್ ಹಮ್ಜಾ ೬೩, ಶಾನ್ ವೊನ್ ಬರ್ಗ್ ೫೦; ಮೊಹಮದ್ ಸಿರಾಜ್ ೭೩ಕ್ಕೆ ೫) ಫಲಿತಾಂಶ: ಭಾರತ ಎ ತಂಡಕ್ಕೆ ಇನ್ನಿಂಗ್ಸ್ ಹಾಗೂ ೩೦ ರನ್ ಗೆಲುವು

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More