ಸರಣಿ ಸಮಬಲದ ಕಾತರದಲ್ಲಿರುವ ವಿರಾಟ್ ಪಡೆ ಲಾರ್ಡ್ಸ್ ಪರೀಕ್ಷೆಗೆ ಸಜ್ಜು

ಆತಿಥೇಯ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಗುರುವಾರದಿಂದ (ಆಗಸ್ಟ್ ೯) ಶುರುವಾಗುತ್ತಿರುವ ಪಂದ್ಯದಲ್ಲಿ ವಿರಾಟ್ ಪಡೆ ಜಯ ಸಾಧಿಸಿ ಸರಣಿಯಲ್ಲಿ ೧-೧ ಸಮಬಲ ಸಾಧಿಸುವ ಗುರಿ ಹೊತ್ತಿದ್ದರೆ, ೫ ಪಂದ್ಯ ಸರಣಿಯಲ್ಲಿ ೨-೦ ಮುನ್ನಡೆಗೆ ಇಂಗ್ಲೆಂಡ್ ಕಾತರಿಸುತ್ತಿದೆ

ಪ್ರವಾಸಿ ಭಾರತ ತಂಡದ ಪಾಲಿಗೆ ಮತ್ತೊಂದು ಸತ್ವಪರೀಕ್ಷೆ ಎದುರಾಗಿದೆ. ಇಂಗ್ಲೆಂಡ್ ಎದುರಿನ ಮೊದಲ ಮೂರು ಟಿ೨೦ ಪಂದ್ಯ ಸರಣಿಯನ್ನು ೨-೧ರಿಂದ ಗೆದ್ದ ಕೊಹ್ಲಿ ಪಡೆ, ಆನಂತರದ ಮೂರು ಏಕದಿನ ಸರಣಿಯನ್ನು ೧-೨ರಿಂದ ಕೈಚೆಲ್ಲಿದೆ. ಸದ್ಯ, ನಡೆಯುತ್ತಿರುವ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲೇ ಭಾರತ ಸೋಲನುಭವಿಸಿದೆ. ಕೊಹ್ಲಿಯ ಏಕಾಂಗಿ ಹೋರಾಟದ ಮಧ್ಯೆಯೂ ಭಾರತ ತಂಡ, ಸೋಲಿನ ಸುಳಿಗೆ ಸಿಲುಕಿದ್ದು ಇದೀ ಸರಣಿಯಲ್ಲಿ ಸಮಬಲ ಸಾಧಿಸುವ ಗುರಿ ಹೊತ್ತಿದೆ.

ಇತ್ತ, ಐತಿಹಾಸಿಕ ಒಂದು ಸಾವಿರದ ಪಂದ್ಯವನ್ನು ಗೆದ್ದು ಬೀಗಿರುವ ಜೋ ರೂಟ್ ಸಾರಥ್ಯದ ಇಂಗ್ಲೆಂಡ್ ತಂಡ ಇದೀಗ ಲಾರ್ಡ್ಸ್ ಪಂದ್ಯವನ್ನೂ ಜಯಿಸಿ ಸರಣಿಯಲ್ಲಿ ೨-೦ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ. ಸತತ ಎರಡನೇ ಗೆಲುವಿನ ಕನಸಿನಲ್ಲಿರುವ ಇಂಗ್ಲೆಂಡ್ ಅಷ್ಟು ಸುಲಭವಾಗಿ ಭಾರತವನ್ನು ಮಣಿಸುವುದು ಕಷ್ಟಸಾಧ್ಯ ಎಂದೇ ಹೇಳಲಾಗುತ್ತಿದೆ.

ಪ್ರಮುಖವಾಗಿ ಎಜ್‌ಬ್ಯಾಸ್ಟನ್ ಪಂದ್ಯದ ಹೀರೋ ಬೆನ್ ಸ್ಟೋಕ್ಸ್, ಕಳೆದ ವರ್ಷ ನಡೆದ ಬ್ರಿಸ್ಟಲ್‌ನಲ್ಲಿನ ನೈಟ್ ಕ್ಲಬ್ ಗಲಭೆ ಪ್ರಕರಣದ ವಿಚಾರಣೆಗೆ ಗುರಿಯಾಗಿದ್ದು, ಅವರ ಸೇವೆ ತಂಡಕ್ಕೆ ಅಲಭ್ಯವಾಗಿದೆ. ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ತಂಡದ ಹೊಂದಾಣಿಕೆ ಅಷ್ಟು ಸುಲಭವಾಗಿಲ್ಲ. ಸ್ಯಾಮ್ ಕರನ್, ಕ್ರಿಸ್ ವೋಕ್ಸ್ ಇಲ್ಲವೇ ಮೊಯೀನ್ ಅಲಿ ಈ ಮೂವರ ಪೈಕಿ ಯಾರು ಆಲ್ರೌಂಡ್ ವಿಭಾಗದಲ್ಲಿ ಇಂಗ್ಲೆಂಡ್‌ಗೆ ವರವಾಗಲಿದ್ದಾರೆ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ.

ಇದನ್ನೂ ಓದಿ : ಲಾರ್ಡ್ಸ್‌ನಲ್ಲಿ ಕಪಿಲ್‌, ಧೋನಿಗೆ ಸಾಧ್ಯವಾದದ್ದು ಕೊಹ್ಲಿಗೆ ಸಾಧ್ಯವಾಗುವುದೇ? 

ಇನ್ನು, ಭಾರತ ಕೂಡಾ ಅಂತಿಮ ಇಲೆವೆನ್ ಆಯ್ಕೆಯಲ್ಲಿ ಸಾಕಷ್ಟು ಗೊಂದಲದಲ್ಲಿದೆ. ಮೊದಲ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅವರನ್ನು ಕೈಬಿಟ್ಟಿದ್ದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಒಂದೊಮ್ಮೆ ತಂಡದಲ್ಲಿ ಪೂಜಾರ ಸ್ಥಾನ ಪಡೆದರೆ, ಶಿಖರ್ ಧವನ್ ಹೊರಗುಳಿಯಬೇಕಾಗುತ್ತದೆ. ಆದರೆ, ಲಾರ್ಡ್ಸ್‌ನಲ್ಲಿ ಮುಕ್ತ ಬ್ಯಾಟಿಂಗ್‌ಗೆ ಅವಕಾಶ ನೀಡುವುದಾದರೆ, ಧವನ್‌ಗೆ ಸ್ಥಾನ ಕಲ್ಪಿಸಿ ಕೆ ಎಲ್ ರಾಹುಲ್‌ ಕೈಬಿಡುವ ಸಂಭವವೂ ಇದೆ.

ಇತ್ತ, ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾರತ್ತ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಕಣ್ಣು ಹಾಯಿಸಿದೆ. ಆದರೆ, ಅವರನ್ನು ಅಂತಿಮ ಇಲೆವೆನ್‌ನಲ್ಲಿ ತರಲು ಯಾರನ್ನು ಕೈಬಿಡಬೇಕೆಂಬುದು ಕೂಡಾ ತಲೆನೋವಾಗಿ ಪರಿಣಮಿಸಿದೆ. ಇಶಾಂತ್ ಶರ್ಮಾ ಹಾಗೂ ಅಶ್ವಿನ್ ಮೊದಲ ಟೆಸ್ಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು, ಅವರನ್ನು ಕೈಬಿಡುವ ಸಾಹಸಕ್ಕೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಇಳಿಯುವ ಸಂಭವವೂ ಕಮ್ಮಿ ಎನ್ನಲಾಗಿದೆ.

ಪ್ರಮುಖಾಂಶಗಳು

  • ೨೦೧೪ರಿಂದ ಏಷ್ಯಾ ತಂಡಗಳು ಲಾರ್ಡ್ಸ್ ಮೈದಾನದಲ್ಲಿ ಜಯಿಸಿರುವುದು ಕೇವಲ ಮೂರು ಪಂದ್ಯಗಳನ್ನಷ್ಟೆ. ಎರಡು ಪಂದ್ಯಗಳು ಡ್ರಾ ಕಂಡಿವೆ
  • ಇಂಗ್ಲೆಂಡ್ ಸ್ಪಿನ್ನರ್‌ಗಳು (೩೬.೧೩) ಏಷ್ಯಾ ಸ್ಪಿನ್ನರ್‌ಗಳಿಗಿಂತಲೂ (೨೯.೪೮) ಅತ್ಯುತ್ತಮ ಸರಾಸರಿ ಹೊಂದಿದ್ದಾರೆ
  • ನಿರ್ದಿಷ್ಟ ಸ್ಥಳದಲ್ಲಿ ೧೦೦ ವಿಕೆಟ್ ಪಡೆದ ವಿಶ್ವದ ಮೊದಲ ವೇಗದ ಬೌಲರ್ ಹಾಗೂ ಮುತ್ತಯ್ಯ ಮುರಳೀಧರನ್ ನಂತರ ಎರಡನೇ ಬೌಲರ್ ಎಂಬ ದಾಖಲೆ ಬರೆಯಲು ಜೇಮ್ಸ್ ಆ್ಯಂಡರ್ಸನ್‌ಗೆ ಬೇಕಿರುವುದು ಇನ್ನು ಕೇವಲ ೬ ವಿಕೆಟ್ ಅಷ್ಟೆ
  • ಸರಣಿಯೊಂದರ ಮೊದಲ ಟೆಸ್ಟ್ ಪಂದ್ಯದಲ್ಲಿ ೨೫.೭೫ರ ಸರಾಸರಿ ಹೊಂದಿರುವ ರಹಾನೆ, ಎರಡನೇ ಟೆಸ್ಟ್‌ನಲ್ಲಿ ೬೪.೫೦ರ ಸರಾಸರಿ ಹೊಂದಿದ್ದಾರೆ. ಒಂಬತ್ತು ಟೆಸ್ಟ್‌ಗಳ ಐದರಲ್ಲಿ ರಹಾನೆ ಶತಕ ಬಾರಿಸಿರುವುದು ಎರಡನೇ ಟೆಸ್ಟ್‌ನಲ್ಲೇ

ಸಂಭವನೀಯ ಇಲೆವೆನ್

ಭಾರತ: ಮುರಳಿ ವಿಜಯ್, ಕೆ ಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಆರ್ ಅಶ್ವಿನ್, ಹಾರ್ದಿಕ್ ಪಾಂಡ್ಯ / ರವೀಂದ್ರ ಜಡೇಜಾ, ಮೊಹಮದ್ ಶಮಿ, ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್.

ಇಂಗ್ಲೆಂಡ್: ಕೀಟನ್ ಜೆನ್ನಿಂಗ್ಸ್, ಅಲೆಸ್ಟೈರ್ ಕುಕ್, ಜೋ ರೂಟ್ (ನಾಯಕ), ಓಲ್ಲಿ ಪೋಪ್, ಜಾನಿ ಬೇರ್‌ಸ್ಟೋ (ವಿಕೆಟ್‌ಕೀಪರ್), ಜೋಸ್ ಬಟ್ಲರ್, ಕ್ರಿಸ್ ವೋಕ್ಸ್ / ಮೊಯೀನ್ ಅಲಿ, ಸ್ಯಾಮ್ ಕರನ್, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಆ್ಯಂಡರ್ಸನ್

ಪಂದ್ಯ ಆರಂಭ: ಮಧ್ಯಾಹ್ನ ೩.೩೦ (ಭಾರತೀಯ ಕಾಲಮಾನ) | ಸ್ಥಳ: ಲಾರ್ಡ್ಸ್ ಮೈದಾನ | ನೇರಪ್ರಸಾರ: ಸೋನಿ ನೆಟ್ವರ್ಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More