ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಿಂದಲೂ ಹೊರಗುಳಿದ ವೇಗಿ ಬುಮ್ರಾ

ಎಡಗೈ ಹೆಬ್ಬೆರಳ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ವೇಗಿ ಜಸ್ಪ್ರೀತ್ ಬುಮ್ರಾ, ಗುರುವಾರದಿಂದ (ಆಗಸ್ಟ್ ೮) ಶುರುವಾಗುತ್ತಿರುವ ಲಾರ್ಡ್ಸ್ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಭಾರತ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಸ್ವತಃ ಈ ಸಂಗತಿಯನ್ನು ಖಚಿತಪಡಿಸಿದ್ದಾರೆ

ಐರ್ಲೆಂಡ್ ವಿರುದ್ಧದ ಮೊದಲ ಟಿ೨೦ ಪಂದ್ಯದಲ್ಲಿ ಗಾಯ ಮಾಡಿಕೊಂಡ ಜಸ್ಪ್ರೀತ್ ಬುಮ್ರಾ ಬಹುತೇಕ ಇಂಗ್ಲೆಂಡ್ ಪ್ರವಾಸದಿಂದ ವಂಚಿತರಾದರು. ಮೂರು ಟಿ೨೦ ಹಾಗೂ ಮೂರು ಏಕದಿನ ಪಂದ್ಯ ಸರಣಿಗಳಿಂದ ಮೊದಲು ಹೊರಬಿದ್ದ ಬುಮ್ರಾ, ಎಜ್‌ಬ್ಯಾಸ್ಟನ್ ಟೆಸ್ಟ್‌ಗೂ ಅಲಭ್ಯವಾಗಿದ್ದರು. ಇದೀಗ ಐದು ಪಂದ್ಯಗಳ ಸರಣಿಯಲ್ಲಿ ೦-೧ ಹಿನ್ನಡೆ ಅನುಭವಿಸಿರುವ ಭಾರತ ತಂಡಕ್ಕೆ ಬುಮ್ರಾ ಅಲಭ್ಯತೆ ಮತ್ತಷ್ಟು ಹೊಡೆತ ನೀಡುವ ಸಂಭವವಿದೆ.

“ಜಸ್ಪ್ರೀತ್ ಬುಮ್ರಾ ಕೊಂಚ ಚೇತರಿಸಿಕೊಂಡಿದ್ದು, ಸದ್ಯ ಬೌಲಿಂಗ್ ಮಾಡುತ್ತಿದ್ದಾರೆ. ಆದರೆ, ಇದೀಗಲೇ ಅವರನ್ನು ಮೈದಾನಕ್ಕಿಳಿಸುವುದು ಹೆಚ್ಚಿನ ಒತ್ತಡವನ್ನು ಅವರ ಮೇಲೆ ಹೇರಿದಂತೆ. ಎಡಗೈಗೆ ಪ್ಲಾಸ್ಟರ್‌ ಸುತ್ತಿಕೊಂಡಿರುವ ಅವರು, ಪರಿಪೂರ್ಣವಾಗಿ ಚೇತರಿಸಿಕೊಳ್ಳಲು ಬಹುಶಃ ಇನ್ನಷ್ಟು ಸಮಯ ಹಿಡಿಯಬಹುದು,’’ ಎಂದು ಭರತ್ ಅರುಣ್ ಸ್ಪಷ್ಟಪಡಿಸಿದ್ದಾರೆ.

ಇನ್ನು, ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್ ಒಬ್ಬರಿಗಿಂತ ಐವರು ಬೌಲರ್‌ಗಳನ್ನು ಕಣಕ್ಕಿಳಿಸುವುದು ಹೆಚ್ಚು ಸೂಕ್ತ. ಏಕೆಂದರೆ, ಲಾರ್ಡ್ಸ್ ಮೈದಾನವು ಬೌಲಿಂಗ್ ಸ್ನೇಹಿ ಪಿಚ್ ಆಗಿರುವುದರಿಂದ ಟೀಂ ಇಂಡಿಯಾದ ಅಂತಿಮ ಇಲೆವೆನ್‌ ಐವರು ಬೌಲರ್‌ಗಳಿಂದ ಕೂಡಿರುವುದು ಎಷ್ಟೋ ಸೂಕ್ತ ಎಂದು ಭರತ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಸಚಿನ್, ಕೊಹ್ಲಿಗಿಂತಲೂ ಧೋನಿ ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟಿಗ

“ಪರಿಸ್ಥಿತಿ ಹಾಗೂ ಪಿಚ್‌ನ ಸ್ಥಿತಿಗತಿಗನುಗುಣವಾಗಿ ತಂಡವನ್ನು ಆರಿಸುವುದಾದರೆ, ನನ್ನ ಪ್ರಕಾರ ಐವರು ಬೌಲರ್‌ಗಳಿಗೆ ಆದ್ಯತೆ ನೀಡುವುದೇ ಸರಿ. ಬರ್ಮಿಂಗ್‌ಹ್ಯಾಮ್ ಪಿಚ್‌ಗಿಂತಲೂ ಲಾರ್ಡ್ಸ್ ಪಿಚ್ ಬೇರೆಯದ್ದೇ ಆಗಿದೆ. ಹೀಗಾಗಿ ಹೆಚ್ಚು ಪ್ರಜ್ಞಾವಂತವಾಗಿ ತಂಡದ ಆಯ್ಕೆ ಮಾಡುವುದು ಸರಿಯಾದ ಕ್ರಮವಾಗಿದೆ,’’ ಎಂದು ಭರತ್ ಪರಿಭಾವಿಸಿದ್ದಾರೆ.

‘’ಮೊದಲ ಟೆಸ್ಟ್‌ನಲ್ಲಿ ಕೂಡಾ ಭಾರತದ ಬೌಲಿಂಗ್ ಅಷ್ಟೇನೂ ಕಳಪೆಯಾಗಿರಲಿಲ್ಲ. ಆದಾಗ್ಯೂ ಮೊದಲ ಇನ್ನಿಂಗ್ಸ್‌ಗಿಂತಲೂ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಹೆಚ್ಚು ಮೊನಚಿನಿಂದ ಕೂಡಿತ್ತು. ಲಾರ್ಡ್ಸ್ ಪಿಚ್ ಹೆಚ್ಚು ಒಣಹವೆಯಿಂದ ಕೂಡಿರುವ ಹಿನ್ನೆಲೆಯಲ್ಲಿ ಬೌಲಿಂಗ್ ಸ್ನೇಹಿಯಾಗಿರಲಿದೆ ಎಂಬುದು ಮೊದಲೇ ನಿರೂಪಿತವಾಗಿದೆ. ಬುಧವಾರ ಪಿಚ್‌ ಅನ್ನು ಮತ್ತೊಮ್ಮೆ ಅವಲೋಕಿಸಿದ ಬಳಿಕ ತಂಡದ ಅಂತಿಮ ಆಯ್ಕೆಯ ಕುರಿತು ನಿರ್ಧಾರ ತಳೆಯಲಾಗುತ್ತದೆ’’ ಎಂದು ಭರತ್ ಸ್ಪಷ್ಟಪಡಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More