ರೋಜರ್ಸ್ ಕಪ್ ಟೆನಿಸ್ | ಮುನ್ನಡೆ ಸಾಧಿಸಿದ ವಾವ್ರಿಂಕಾ, ಜೊಕೊವಿಚ್ 

ಕೆನಡಾ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಸ್ವಿಸ್ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ ಮತ್ತು ಹದಿಮೂರು ಗ್ರಾಂಡ್‌ಸ್ಲಾಮ್ ವಿಜೇತ ನೊವಾಕ್ ಜೊಕೊವಿಚ್ ಶುಭಾರಂಭ ಮಾಡಿದ್ದಾರೆ. ನಿಕ್ ಕಿರ್ಗಿಯೋಸ್ ವಿರುದ್ಧ ಸ್ಟಾನಿಸ್ಲಾಸ್ ಗೆಲುವು ಪಡೆದರೆ, ಜೊಕೊವಿಚ್, ಮಿರ್ಜಾ ಬಾಸಿಕ್ ಮಣಿಸಿದರು

ಟೊರಾಂಟೊ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯ ದ್ವಿತೀಯ ಸುತ್ತಿಗೆ ಸ್ಟಾನಿಸ್ಲಾಸ್ ವಾವ್ರಿಂಕಾ ಹಾಗೂ ನೊವಾಕ್ ಜೊಕೊವಿಚ್ ಧಾವಿಸಿದ್ದಾರೆ. ವರ್ಷದ ಕೊನೆಯ ಗ್ರಾಂಡ್‌ಸ್ಲಾಮ್ ಟೂರ್ನಿಯಾದ ಯುಎಸ್ ಓಪನ್ ಪಂದ್ಯಾವಳಿಗಾಗಿ ಕೊನೆಯ ಪೂರ್ವಭಾವಿ ಟೂರ್ನಿಯಾದ ಈ ರೋಜರ್ಸ್ ಕಪ್ ಪಂದ್ಯಾವಳಿಯಲ್ಲಿ ರೋಜರ್ ಫೆಡರರ್, ಸೆರೆನಾ ವಿಲಿಯಮ್ಸ್ ಸೇರಿದ ಪ್ರಮುಖ ಆಟಗಾರರು ಪಾಲ್ಗೊಳ್ಳುತ್ತಿಲ್ಲ.

ಮೊಣಕಾಲು ನೋವಿನಿಂದ ಚೇತರಿಸಿಕೊಂಡು ಕಣಕ್ಕಿಳಿದಿರುವ ವಾವ್ರಿಂಕಾ, ಆಸ್ಟ್ರೇಲಿಯಾದ ಯುವ ಆಟಗಾರ ನಿಕ್ ಕಿರ್ಗಿಯೋಸ್ ವಿರುದ್ಧ ಪ್ರಬಲ ಹೋರಾಟ ನಡೆಸಿ ೧-೬, ೭-೫, ೭-೫ ಸೆಟ್‌ಗಳಲ್ಲಿ ಗೆಲುವು ಪಡೆದರು. ಮೊದಲ ಸೆಟ್‌ನಲ್ಲಿನ ಹಿನ್ನಡೆಯ ಮಧ್ಯೆಯೂ ಆಕರ್ಷಕ ಹಾಗೂ ಪ್ರತಿರೋಧದ ಹೋರಾಟ ನಡೆಸಿದ ವಾವ್ರಿಂಕಾ, ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಇನ್ನು, ಕಳೆದ ತಿಂಗಳಷ್ಟೇ ವಿಂಬಲ್ಡನ್ ಪ್ರಶಸ್ತಿ ಜಯಿಸಿದ ಜೊಕೊವಿಚ್, ಬೋಸ್ನಿಯಾ ಆಟಗಾರ ಮಿರ್ಜಾ ಬೇಸಿಕ್ ವಿರುದ್ಧ ೬-೩, ೭-೬ (೭/೩) ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಧಾವಿಸಿದರು. ದಕ್ಷಿಣ ಕೊರಿಯಾದ ಚುಂಗ್ ಹಿಯೊನ್ ಕೊನೇ ಘಳಿಗೆಯಲ್ಲಿ ಪಂದ್ಯದಿಂದ ಹಿಂದೆ ಸರಿದದ್ದರಿಂದ ಮಿರ್ಜಾ, ಜೊಕೊವಿಚ್ ಜತೆಗೆ ಸೆಣಸುವ ಅವಕಾಶ ಪಡೆದರು.

ಇದನ್ನೂ ಓದಿ : ಸೆಂಟರ್‌ ಕೋರ್ಟ್‌ನಲ್ಲಿ ನಾಲ್ಕನೇ ವಿಂಬಲ್ಡನ್ ಜಯಿಸಿ ಸಂಭ್ರಮಿಸಿದ ಜೊಕೊವಿಚ್

ಮೂರು ಬಾರಿಯ ಗ್ರಾಂಡ್‌ಸ್ಲಾಮ್ ವಿಜೇತ ವಾವ್ರಿಂಕಾ, ಹದಿನಾರನೇ ಶ್ರೇಯಾಂಕಿತ ಕಿರ್ಗಿಯೋಸ್ ವಿರುದ್ಧ ಅತ್ಯಾಕರ್ಷಕ ಪ್ರದರ್ಶನ ನೀಡಿದರು. ಮೊದಲ ಸೆಟ್ ಏಕಪಕ್ಷೀಯವಾಗಿ ಕಿರ್ಗಿಯೋಸ್ ಮೇಲುಗೈ ಸಾಧಿಸಿದರಾದರೂ, ಬಳಿಕ ಪುಟಿದೆದ್ದ ವಾವ್ರಿಂಕಾ, ಆಸೀಸ್ ಆಟಗಾರನ ಹೋರಾಟಕ್ಕೆ ತೆರೆ ಎಳೆದರು.

ಇನ್ನು, ಕೆನಡಾದಲ್ಲಿ ಎರಡು ಬಾರಿ ಪ್ರಶಸ್ತಿ ಜಯಿಸಿರುವ ಸರ್ಬಿಯಾ ಆಟಗಾರ ಜೊಕೊವಿಚ್ ಮೊದಲ ಸೆಟ್‌ನಲ್ಲಿ ಸುಲಭ ಗೆಲುವು ಸಾಧಿಸಿದರೂ, ಎರಡನೇ ಸೆಟ್‌ನ ಸರ್ವೀಸ್‌ನಲ್ಲೇ ಹಿನ್ನಡೆ ಅನುಭವಿಸಿದರು. ಡಬಲ್ ಫಾಲ್ಟ್‌ನಿಂದಾಗಿ ಕಂಗೆಟ್ಟರೂ, ಬಳಿಕ ಚೇತರಿಸಿಕೊಂಡ ಜೊಕೊವಿಚ್, ಟೈಬ್ರೇಕರ್‌ನಲ್ಲಿ ಸೆಟ್ ಗೆದ್ದು ದ್ವಿತೀಯ ಸುತ್ತಿಗೆ ನಿರಾಯಾಸ ಮುನ್ನಡೆ ಪಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More