ರೋಜರ್ಸ್ ಕಪ್ ಟೆನಿಸ್: ನಡಾಲ್, ಜೊಕೊವಿಚ್ ಗೆಲುವಿನ ಅಭಿಯಾನ

ಅಮೆರಿಕನ್ ಓಪನ್ ಟೆನಿಸ್ ಪಂದ್ಯಾವಳಿಗೆ ಪೂರ್ವಭಾವಿ ತಾಲೀಮಿನಂತೆ ನಡೆಯುತ್ತಿರುವ ರೋಜರ್ಸ್ ಕಪ್ ಟೂರ್ನಿಯಲ್ಲಿ ನಡಾಲ್ ತೃತೀಯ ಸುತ್ತು ತಲುಪಿದ್ದಾರೆ. ಅವರೊಂದಿಗೆ ನೊವಾಕ್ ಜೊಕೊವಿಚ್ ಮತ್ತು ಯುವ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ಕೂಡ ಮುನ್ನಡೆ ಸಾಧಿಸಿದ್ದಾರೆ

ಅಗ್ರ ಶ್ರೇಯಾಂಕಿತ ಟೆನಿಸಿಗ ರಾಫೆಲ್ ನಡಾಲ್, ರೋಜರ್ಸ್ ಕಪ್ ಟೆನಿಸ್ ಪಂದ್ಯಾವಳಿಯಲ್ಲಿ ಗೆಲುವಿನ ಆರಂಭ ಕಂಡಿದ್ದಾರೆ. ಅಂತೆಯೇ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನೊವಾಕ್ ಜೊಕೊವಿಚ್, ಹಾಲಿ ಚಾಂಪಿಯನ್ ಅಲೆಕ್ಸಾಂಡರ್ ಜ್ವೆರೇವ್ ಕೂಡ ಅಂತಿಮ ಹದಿನಾರರ ಹಂತಕ್ಕೆ ದಾಪುಗಾಲಿಟ್ಟಿದ್ದಾರೆ.

ಕೆನಡಾ ಓಪನ್‌ನಲ್ಲಿ ನಾಲ್ಕನೇ ಪ್ರಶಸ್ತಿ ಎದುರುನೋಡುತ್ತಿರುವ ನಡಾಲ್, ಫ್ರಾನ್ಸ್ ಆಟಗಾರ ಬಿಯೋಯಿಟ್ ಪೈರ್ ವಿರುದ್ಧ ಆಕ್ರಮಣಕಾರಿ ಆಟದೊಂದಿಗೆ ೬-೨, ೬-೩ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಒಂದಷ್ಟು ಪ್ರತಿರೋಧ ತೋರುವ ಸುಳಿವು ನೀಡಿದ ಪೈರ್, ಕಡೆಗೂ ಅದರಲ್ಲಿ ಯಶಸ್ವಿ ಆಗಲಿಲ್ಲ. ನಡಾಲ್ ಅಬ್ಬರದ ಆಟದಲ್ಲಿ ಅವರು ಕಳೆದುಹೋದರು. ಮುಂದಿನ ಸುತ್ತಿನಲ್ಲಿ ನಡಾಲ್, ವಾವ್ರಿಂಕಾ ವಿರುದ್ಧ ಸೆಣಸಲಿದ್ದಾರೆ.

ಇನ್ನು, ವಿಂಬಲ್ಡನ್ ಚಾಂಪಿಯನ್ ನೊವಾಕ್ ಜೊಕೊವಿಚ್ ಕೂಡ ಸ್ಥಳೀಯ ಹಾಗೂ ವೈಲ್ಡ್ ಕಾರ್ಡ್ ಸ್ಪರ್ಧಿ ಪೀಟರ್ ಪೊಲಾಂಸ್ಕಿ ವಿರುದ್ಧ ಗೆಲುವು ಪಡೆದರು. ಇನ್ನು, ಯುವ ಅಟಗಾರ ಜರ್ಮನಿಯ ಜ್ವರೇವ್, ಬ್ರಾಡ್ಲೆ ಕ್ಲಾನ್ ವಿರುದ್ಧ ಮೇಲುಗೈ ಸಾಧಿಸಿದರು. ಅಂತೆಯೇ, ಸ್ಟಾನಿಸ್ಲಾಸ್ ವಾವ್ರಿಂಕಾ ಹಾಗೂ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಕೂಡ ಮುಂದಿನ ಹಂತಕ್ಕೆ ನಡೆದರೆ, ಮಿಲಾಸ್ ರಾನಿಕ್, ಫ್ಯಾಬಿಯೊ ಫಾಗ್ನಿನಿ ಮತ್ತು ಡಾಮಿನಿಕ್ ಥೀಮ್ ಟೂರ್ನಿಯಿಂದ ಹೊರಬಿದ್ದರು.

ಇದನ್ನೂ ಓದಿ : ರೋಜರ್ಸ್ ಕಪ್ ಟೆನಿಸ್ | ಮುನ್ನಡೆ ಸಾಧಿಸಿದ ವಾವ್ರಿಂಕಾ, ಜೊಕೊವಿಚ್ 

ನಡಾಲ್ ಸುಲಭ ಗೆಲುವು ಸಾಧಿಸಿದರೆ, ಪುರುಷರ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ವಾವ್ರಿಂಕಾ, ಮಾರ್ಟನ್ ಫುಕ್ಸೊವಿಕ್ಸ್ ವಿರುದ್ಧ ೧-೬, ೭-೬ (೭/೨), ೭-೬ (೧೨-೧೦) ಸೆಟ್‌ಗಳಿಂದ ಗೆಲುವು ಪಡೆದರು. ಇನ್ನು, ಒಂಬತ್ತನೇ ಶ್ರೇಯಾಂಕಿತ ನೊವಾಕ್, ೬-೩, ೬-೪ ಸೆಟ್‌ಗಳಿಂದ ಪೊಲಾಂಸ್ಕಿ ವಿರುದ್ಧ ಜಯಶಾಲಿಯಾದರು. ಟೊರಾಂಟೊದಲ್ಲಿ ನಾಲ್ಕು ಬಾರಿ ಪ್ರಶಸ್ತಿ ಜಯಿಸಿರುವ ನೊವಾಕ್, ಹೆಚ್ಚು ಪ್ರಯಾಸವಿಲ್ಲದೆ ಜಯಶಾಲಿಯಾದರು.

ಆಕರ್ಷಕ ಪ್ರದರ್ಶನ ಮುಂದುವರಿಸಿರುವ ಜ್ವೆರೇವ್, ಕ್ಳಾನ್ ವಿರುದ್ಧ ೬-೪, ೬-೪ ನೇರ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ವಾಷಿಂಗ್ಟನ್ ವಿಜೇತ ಜ್ವೆರೇವ್, ೧೬ ವಿನ್ನರ್‌ಗಳಿಂದ ಗಮನ ಸೆಳೆದರಲ್ಲದೆ, ೧೦ ಸರ್ವೀಸ್ ಗೇಮ್‌ಗಳಲ್ಲಿ ೧೩ ಪಾಯಿಂಟ್ಸ್ ಕಲೆಹಾಕಿದರು. ಈ ಗೆಲುವಿನೊಂದಿಗೆ ಜ್ವೆರೇವ್ ಈ ಋತುವಿನಲ್ಲಿ ೪೨ನೇ ಜಯ ಸಾಧಿಸಿದರು.

ಇತ್ತ, ಶ್ರೇಯಾಂಕರಹಿತ ಆಟಗಾರ ಹಾಗೂ ವಿಶ್ವದ ಮಾಜಿ ಮೂರನೇ ಶ್ರೇಯಾಂಕಿತ ಆಟಗಾರ ರೋನಿಕ್ ಆಘಾತಕಾರಿ ಸೋಲನುಭವಿಸಿದರು.. ಫ್ರಾನ್ಸೆಸ್ ಟಿಯಾಫೋ ಎದುರಿನ ಹಣಾಹಣಿಯಲ್ಲಿ ೭-೬ (೭/೪), ೪-೬, ೬-೧ರಿಂದ ಪರಾಭವ ಕಂಡರು. ಇನ್ನು, ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಪಂದ್ಯದಲ್ಲಿ ಡೆನಿಸ್ ಶಪಲೊವ್ ೧೪ನೇ ಶ್ರೇಯಾಂಕಿತ ಫಾಗ್ನಿನಿಯನ್ನು ೬-೩, ೭-೫ ಸೆಟ್‌ಗಳಿಂದ ಮಣಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More