ಎಂಎಸ್‌ಕೆ ಪ್ರಸಾದ್ ಸಾರಥ್ಯದ ಕ್ರಿಕೆಟ್ ಆಯ್ಕೆ ಸಮಿತಿಗೆ ಸುಪ್ರೀಂ ಬ್ರೇಕ್?

ಗುರುವಾರ (ಆ.೯) ಸರ್ವೋಚ್ಚ ನ್ಯಾಯಾಲಯವು ಬಿಸಿಸಿಐ ನೂತನ ಕರಡು ಸಂವಿಧಾನಕ್ಕೆ ಸಮ್ಮತಿ ಸೂಚಿಸಿರುವ ಬೆನ್ನಲ್ಲೇ, ಕೆಲ ಮಾರ್ಪಾಟುಗಳನ್ನೂ ಹೇಳಿದೆ. ಇದೇ ವೇಳೆ, ಎಂಎಸ್‌ಕೆ ಪ್ರಸಾದ್ ನೇತೃತ್ವದ ಟೀಂ ಇಂಡಿಯಾ ಆಯ್ಕೆ ಸಮಿತಿ ಮತ್ತೊಂದು ಅವಧಿ ಪಡೆಯುವುದು ಅನುಮಾನವಾಗಿದೆ

ಎಂಎಸ್‌ಕೆ ಪ್ರಸಾದ್ ನೇತೃತ್ವದ ಮೂವರು ಹಿರಿಯ ಸದಸ್ಯರ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿಯ ಕಾರ್ಯಾವಧಿಗೆ ತೆರೆಬೀಳುವ ಸಾಧ್ಯತೆ ದಟ್ಟವಾಗಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬಿಸಿಸಿಐ ನೂತನ ಸಂವಿಧಾನ ಅನುಷ್ಠಾನಕ್ಕೆ ಬರುತ್ತಿದ್ದಂತೆ ಚುನಾವಣೆ ನಡೆಯಲಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ ಎಂ ಖಾನ್ವೀಲ್ಕರ್ ಹಾಗೂ ಡಿ ವೈ ಚಂದ್ರಚೂಡ್ ಇದ್ದ ತ್ರಿಸದಸ್ಯ ಪೀಠವು, ಹಿರಿಯ ಹಾಗೂ ಕಿರಿಯ ಮಹಿಳಾ ತಂಡಗಳ ಐವರು ಸದಸ್ಯರ ಆಯ್ಕೆ ಸಮಿತಿಗೆ ಮತ್ತೆ ಅಸ್ತು ಎಂದಿದೆ. ಇನ್ನು, ಆಯ್ಕೆಸಮಿತಿಯ ಸದಸ್ಯರು ಕಡ್ಡಾಯವಾಗಿ ಟೆಸ್ಟ್ ಪಂದ್ಯಗಳನ್ನಾಡಿರಬೇಕೆಂಬ ನಿಯಮವನ್ನೂ ನ್ಯಾಯಪೀಠ ಸಡಿಲಿಸಿದೆ.

ಕನಿಷ್ಠ ಏಳು ಟೆಸ್ಟ್ ಪಂದ್ಯ ಇಲ್ಲವೇ ೧೦ ಏಕದಿನ ಪಂದ್ಯ ಅಥವಾ ೩೦ ಪ್ರಥಮ ದರ್ಜೆ ಪಂದ್ಯಗಳನ್ನಾಡಿದವರೂ ಆಯ್ಕೆ ಸಮಿತಿಯ ಸದಸ್ಯರಾಗಲು ಅರ್ಹರೆಂಬ ನ್ಯಾಯಾಲಯದ ಆದೇಶ ಕೂಡ ಪ್ರಸಾದ್ ಸಾರಥ್ಯದ ಆಯ್ಕೆ ಸಮಿತಿಯ ಕಾರ್ಯಾವಧಿ ತೆರವಿಗೆ ರಹದಾರಿ ನಿರ್ಮಿಸಿದೆ.

ನ್ಯಾಯಾಲಯದ ಆದೇಶದ ಪ್ರಕಾರ ಸದ್ಯ, ಪ್ರಸಾದ್ ಮತ್ತು ಅವರ ಸಹೋದ್ಯೋಗಿಗಳಾದ ಸರಣ್‌ದೀಪ್ ಸಿಂಗ್ ಹಾಗೂ ದೇವಾಂಗ್ ಗಾಂಧಿ ಮುಂದಿನ ದಿನಗಳಲ್ಲಿ ಕ್ರಿಕೆಟ್ ಸಲಹಾ ಸಮಿತಿಯಲ್ಲಿ (ಸಿಎಸಿ) ಮುಂದುವರಿಯುವ ಸಾಧ್ಯತೆ ಕ್ಷೀಣವಾಗಿದೆ. ಮುಂದಿನ ದಿನಗಳಲ್ಲಿ ಐವರು ಸದಸ್ಯರ ಆಯ್ಕೆಸಮಿತಿ ಉದ್ಭವವಾಗಲಿದೆ.

“ಬಿಸಿಸಿಐ ಚುನಾವಣೆ ನಡೆಯುವವರೆಗೂ ಕ್ರಿಕೆಟ್ ಸಲಹಾ ಸಮಿತಿ ತನ್ನ ಕಾರ್ಯಚಟುವಟಿಕೆಯನ್ನು ನ್ಯಾಯಾಲಯ ನೇಮಿತ ಆಡಳಿತ ಸಮಿತಿ (ಸಿಒಎ) ಸಲಹೆಯೊಂದಿಗೆ ನಡೆಸಬೇಕು. ಮಾಜಿ ಅಂತಾರಾಷ್ಟ್ರೀಯ ಆಟಗಾರರಿರುವ ಆಯ್ಕೆಸಮಿತಿಯನ್ನು ನೇಮಿಸಬೇಕು,’’ ಎಂದು ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ.

ಇದನ್ನೂ ಓದಿ : ಕೆಲವು ಮಾರ್ಪಾಟುಗಳೊಂದಿಗೆ ಬಿಸಿಸಿಐ ಕರಡು ಸಂವಿಧಾನಕ್ಕೆ ಸುಪ್ರೀಂ ಸಮ್ಮತಿ

ನ್ಯಾಯಾಲಯದ ಈ ಆದೇಶದ ಪ್ರತಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಸಂಸ್ಥೆ ಪಿಟಿಐ ಜತೆಗೆ ಮಾತನಾಡಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, “ಎಂಎಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆಸಮಿತಿ ಚುನಾವಣೆ ನಡೆಯುವವರೆಗೆ ಮಾತ್ರ ಅಸ್ತಿತ್ವದಲ್ಲಿರುತ್ತದೆ. ಲೋಧಾ ಶಿಫಾರಸುಗಳ ಅನ್ವಯ ನೂತನ ಸಂವಿಧಾನ ಅಸ್ತಿತ್ವಕ್ಕೆ ಬಂದದ್ದೇ ಆದಲ್ಲಿ, ಪ್ರಸ್ತುತ ಆಯ್ಕೆಸಮಿತಿ ತಮ್ಮ ಅಧಿಕಾರಾವಧಿಯಲ್ಲಿ ಮುಂದುವರಿಯುವ ಸಾಧ್ಯತೆ ಕ್ಷೀಣವಾಗಲಿದೆ,’’ ಎಂದು ಸ್ಪಷ್ಟಪಡಿಸಿದ್ದಾರೆ.

ಅಂದಹಾಗೆ, ಸದ್ಯ ಆಯ್ಕೆ ಸಮಿತಿಯ ಮೂವರಲ್ಲಿ ಗಾಂಧಿ ಮತ್ತು ಸಿಂಗ್ ಕಾರ್ಯವೈಖರಿ ಬಿಸಿಸಿಐಗೆ ತೃಪ್ತಿತಂದಿಲ್ಲ. ಹಲವಾರು ಆಯ್ಕೆ ಸಮಿತಿಯ ಸಭೆಗಳಲ್ಲಿ ಈ ಇಬ್ಬರ ಕೊಡುಗೆಯನ್ನು ಪ್ರಶ್ನಿಸಲಾಗಿದೆ. ನೂತನ ಆಯ್ಕೆ ಸಮಿತಿ ಅಸ್ತಿತ್ವಕ್ಕೆ ಬರುವವರೆಗೆ ಗಗನ್ ಖೋಡಾ, ಸೀಮಿತ ಅವಧಿಗೆ ಪ್ರಸಾದ್ ಬಳಗವನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More