ಕೆಲವು ಮಾರ್ಪಾಟುಗಳೊಂದಿಗೆ ಬಿಸಿಸಿಐ ಕರಡು ಸಂವಿಧಾನಕ್ಕೆ ಸುಪ್ರೀಂ ಸಮ್ಮತಿ

ಅಂತೂ ಬಿಸಿಸಿಐ ಕಾನೂನು ಹೋರಾಟದಲ್ಲಿ ಗೆದ್ದಿದೆ! ಪಾರದರ್ಶಕ ಹಾಗೂ ಸ್ವಚ್ಛ ಆಡಳಿತಕ್ಕಾಗಿ ನಿವೃತ್ತ ನ್ಯಾ.ಆರ್‌ ಎಂ ಲೋಧಾ ನೇತೃತ್ವದ ನಿಯೋಗ ಸಲ್ಲಿಸಿದ್ದ ಶಿಫಾರಸುಗಳಿಂದ ಕೂಡಿದ ಬಿಸಿಸಿಐ ನೂತನ ಕರಡು ಸಂವಿಧಾನಕ್ಕೆ ಸರ್ವೋಚ್ಚ ನ್ಯಾಯಾಲಯ ಕೆಲವು ಮಾರ್ಪಾಡುಗಳೊಂದಿಗೆ ಅಸ್ತು ಎಂದಿದೆ!

ಕೊನೆಗೂ ತಾನೇ ನೀಡಿದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ತಿದ್ದುಪಡಿಯೊಂದಿಗೆ ಪ್ರಕಟಿಸಿ, ಒಂದು ಬಗೆಯಲ್ಲಿ ಬಿಸಿಸಿಐ ವಾದಕ್ಕೆ ಮನ್ನಣೆ ನೀಡಿದಂತಾಗಿದೆ. ಗುರುವಾರ (ಆ.೯) ಬಿಸಿಸಿಐನ ಹೊಸದಾದ ಕರಡು ಸಂವಿಧಾನವನ್ನು ಕೆಲವೊಂದು ಮಾರ್ಪಾಡುಗಳೊಂದಿಗೆ ಸರ್ವೋಚ್ಚ ನ್ಯಾಯಾಲಯ ಅನುಮೋದಿಸಿದೆ.

ಬಹುಮುಖ್ಯವಾಗಿ, ‘ಒಂದು ರಾಜ್ಯ , ಒಂದು ಮತ’ ಶಿಫಾರಸು ಜಾರಿಗೆ ತರಬೇಕೆಂದು ಹೇಳಿರುವುದಲ್ಲದೆ, ಮುಂಬೈ, ಸೌರಾಷ್ಟ್ರ, ವಡೋದರಾ ಹಾಗೂ ವಿದರ್ಭಕ್ಕೆ ಕಾಯಂ ಸದಸ್ಯತ್ವವನ್ನೂ ಸರ್ವೋಚ್ಚ ನ್ಯಾಯಾಲಯ ದಯಪಾಲಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯತ್ವ ಪೀಠ ಬಿಸಿಸಿಐ ಸಂವಿಧಾನವನ್ನು ಅನುಮೋದಿಸಿದೆ. ಮಾತ್ರವಲ್ಲದೆ, ತಮಿಳುನಾಡು ಸೊಸೈಟಿಯ ಪ್ರಧಾನ ರಿಜಿಸ್ಟ್ರಾರ್‌ಗೆ ಮುಂದಿನ ನಾಲ್ಕು ವಾರಗಳಲ್ಲಿ ಬಿಸಿಸಿಐ ಸಂವಿಧಾನವನ್ನು ಅನುಷ್ಠಾನಕ್ಕೆ ತಂದಿರುವುದರ ಕುರಿತು ದಾಖಲೆ ಒದಗಿಸುವಂತೆಯೂ ತಾಕೀತು ಮಾಡಿದೆ.

ನ್ಯಾಯಾಧೀಶರುಗಳಾದ ಎ ಎಂ ಖನ್ವೀಲ್ಕರ್ ಹಾಗೂ ಡಿ ವೈ ಚಂದ್ರಚೂಡ್ ಅವರನ್ನೂ ಒಳಗೊಂಡ ನ್ಯಾಯಪೀಠ, ರೈಲ್ವೇಸ್, ಸರ್ವೀಸಸ್ ಹಾಗೂ ವಿವಿಗಳ ಬಿಸಿಸಿಐ ಸದಸ್ಯತ್ವವನ್ನೂ ಕಾಯಂಗೊಳಿಸಿತು. ಏತನ್ಮಧ್ಯೆ, ದೇಶದ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳೂ ಬಿಸಿಸಿಐ ಸಂವಿಧಾನವನ್ನು ಮುಂದಿನ ಮೂವತ್ತು ದಿನಗಳೊಳಗೆ ಅಳವಡಿಸಿಕೊಳ್ಳುವಂತೆಯೂ ನಿರ್ದೇಶಿಸಿತಲ್ಲದೆ, ಆದೇಶವನ್ನು ಉಲ್ಲಂಘಿಸುವವರು ಕಠಿಣ ಕ್ರಮಕ್ಕೆ ಸಜ್ಜಾಗಿರಿ ಎಂದೂ ಎಚ್ಚರಿಸಿತು.

ಇದನ್ನೂ ಓದಿ : ಬಿಸಿಸಿಐ ನಿಯಂತ್ರಣಕ್ಕೆ ಕಠಿಣ ನಿಯಮಗಳು ಮೂಗುದಾರವೇ ಹೊರತು ಸಡಿಲ ಸೂತ್ರವಲ್ಲ!

ಇನ್ನು, ಅಧಿಕಾರಿಗಳ ಕೂಲಿಂಗ್ ಆಫ್ ಅವಧಿಯ ಕುರಿತೂ ತನ್ನ ನಿಲುವು ಪ್ರಕಟಿಸಿರುವ ನ್ಯಾಯಪೀಠ, ಸತತ ಎರಡು ಬಾರಿ ಆಯ್ಕೆಯಾದ ಅಧಿಕಾರಿಗಳು ಕೂಲಿಂಗ್ ಆಫ್ ಅವಧಿ ನಿಯಮಕ್ಕೆ ಕಟಿಬದ್ಧವಾಗಿರಬೇಕೆಂದು ಸೂಚಿಸಿತು. ಜು.೫ರಂದು ಇದೇ ತ್ರಿಸದಸ್ಯ ನ್ಯಾಯಪೀಠ, ಮುಂದಿನ ತೀರ್ಪು ಪ್ರಕಟ ಆಗುವವರೆಗೂ ಯಾವುದೇ ಕಾರಣಕ್ಕೂ ರಾಜ್ಯ ಸಂಸ್ಥೆಗಳು ಚುನಾವಣೆ ನಡೆಸದಂತೆ ಫರ್ಮಾನು ಹೊರಡಿಸಿತ್ತು.

ಇದಕ್ಕೂ ಮುಂಚಿನ ವಿಚಾರಣೆಯ ವೇಳೆ ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ), ಲೋಧಾ ಸಮಿತಿಯ ಪ್ರಮುಖ ಶಿಫಾರಸುಗಳಲ್ಲಿ ಒಂದಾದ ‘ಕೂಲಿಂಗ್ ಆಫ್ ಅವಧಿ’ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅನುಭವಕ್ಕೆ ಆದ್ಯತೆ ನೀಡಬೇಕೆಂತಲೂ ಅದು ವಾದಿಸಿತು. ಲೋಧಾ ಸಮಿತಿಯ ಪ್ರಮುಖ ಶಿಫಾರಸುಗಳಲ್ಲಿ ‘ಒಂದು ರಾಜ್ಯ ಒಂದು ಮತ’, ‘ಒಬ್ಬ ಸದಸ್ಯ, ಒಂದು ಹುದ್ದೆ’ ಹಾಗೂ ೭೦ ವರ್ಷ ಮೀರಿದವರು ಬಿಸಿಸಿಐ ಹುದ್ದೆಯಲ್ಲಿರುವಂತಿಲ್ಲ’ ಮಹತ್ವವೆನಿಸಿದ್ದವು.

ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಮುಕುಲ್ ಮುದ್ಗಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ವರದಿ ಸಲ್ಲಿಸಿದ ಬಳಿಕ, ೨೦೧೫ರ ಜನವರಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಲೋಧಾ ಸಮಿತಿಯನ್ನು ನೇಮಿಸಿ ಬಿಸಿಸಿಐ ಆಡಳಿತ ಸುಧಾರಣೆಗೆ ನೆರವಾಗುವಂತೆ ವರದಿ ಸಲ್ಲಿಸಲು ಸೂಚಿಸಿತ್ತು. ಬಳಿಕ ಲೋಧಾ ಸಮಿತಿ ಸಲ್ಲಿಸಿದ್ದ ಬಹುತೇಕ ಶಿಫಾರಸುಗಳನ್ನು ೨೦೧೬ರ ಜುಲೈ ೧೮ರಂದು ಒಪ್ಪಿಕೊಂಡು ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಆದೇಶ ನೀಡಿತ್ತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More