ಏಷ್ಯಾ ಕೂಟದಲ್ಲಿ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ ಧ್ವಜಧಾರಿ

ಮುಂದಿನ ಶನಿವಾರದಿಂದ (ಆ.೧೮) ಶುರುವಾಗಲಿರುವ ಪ್ರತಿಷ್ಠಿತ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಧ್ವಜಧಾರಿಯಾಗಿ ಜಾವೆಲಿನ್ ಪಟು ನೀರಜ್ ಚೋಪ್ರಾ ಆಯ್ಕೆಯಾಗಿದ್ದಾರೆ. ಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡವನ್ನು ಮುನ್ನಡೆಸುವ ಗೌರವವನ್ನು ನೀರಜ್‌ಗೆ ನೀಡಲಾಗಿದೆ

ಹಾಲಿ ಕಾಮನ್ವೆಲ್ತ್ ಸ್ವರ್ಣ ವಿಜೇತ, ೨೦ರ ಹರೆಯದ ನೀರಜ್ ಚೋಪ್ರಾ ಏಷ್ಯಾಡ್‌ನಲ್ಲಿಯೂ ಪದಕ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಕಳೆದ ತಿಂಗಳು ಫಿನ್‌ಲ್ಯಾಂಡ್‌ನ ಸಾವೊ ಕ್ರೀಡಾಕೂಟದಲ್ಲಿಯೂ ಚಿನ್ನದ ಪದಕ ಜಯಿಸಿದ್ದ ನೀರಜ್, ವೃತ್ತಿಬದುಕಿನಲ್ಲೇ ಬಹುದೊಡ್ಡ ಗೌರವಕ್ಕೆ ಭಾಜನವಾಗಿದ್ದಾರೆ. ಕಳೆದ ೨೦೧೪ರ ಆವೃತ್ತಿಯಲ್ಲಿ ಹಾಕಿ ಆಟಗಾರ ಸರ್ದಾರ್ ಸಿಂಗ್ ಧ್ವಜಧಾರಿಯಾಗಿದ್ದರು.

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ೫೦೦ಕ್ಕೂ ಹೆಚ್ಚು ಮಂದಿಯ ನಿಯೋಗದಿಂದ ಕೂಡಿದೆ. ಆಗಸ್ಟ್ ೧೮ರಿಂದ ಸೆಪ್ಟೆಂಬರ್ ೨ರವರೆಗೆ ನಡೆಯಲಿರುವ ವಿಶ್ವದ ಮೂರನೇ ಅತಿದೊಡ್ಡ ಕ್ರೀಡಾಕೂಟದಲ್ಲಿ ಭಾರತ ಕಳೆದ ಸಾಲಿಗಿಂತಲೂ ಹೆಚ್ಚಿನ ಪದಕ ಗೆಲ್ಲುವ ಗುರಿ ಹೊತ್ತಿದೆ.

ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷ ನರೀಂದರ್ ಬಾತ್ರಾ, “ಈ ಬಾರಿಯ ಏಷ್ಯಾಡ್‌ನಲ್ಲಿ ಭಾರತದ ನಿಯೋಗವನ್ನು ಕೂಟದ ಉದ್ಘಾಟನೆಯಲ್ಲಿ ನೀರಜ್ ಚೋಪ್ರಾ ಮುನ್ನಡೆಸಲಿದ್ದಾರೆ,” ಎಂದು ಖಚಿತಪಡಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಅಸಾಧಾರಣ ಸಾಧನೆ ಮೆರೆದಿರುವ ನೀರಜ್ ಚೋಪ್ರಾ, ಏಷ್ಯಾಡ್‌ ಕೂಟವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ : ಡೈಮಂಡ್ ಲೀಗ್ ಫೈನಲ್ಸ್‌ಗೆ ಅರ್ಹತೆ ಪಡೆದ ಜಾವೆಲಿನ್ ಪಟು ನೀರಜ್ ಚೋಪ್ರಾ

೨೦೧೭ರ ಏಷ್ಯಾ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ೮೫.೨೩ ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನ ಗೆದ್ದಿದ್ದ ನೀರಜ್, ಅದಕ್ಕೂ ಹಿಂದಿನ ವರ್ಷ ಅಂದರೆ ೨೦೧೬ರಲ್ಲಿ ೨೦ ವರ್ಷದೊಳಗಿನವರ ಐಎಎಎಫ್ ವಿಶ್ವ ಚಾಂಪಿಯನ್‌ಶಿಪ್ ಕೂಟದಲ್ಲಿ ಸ್ವರ್ಣ ಪದಕ ಗೆದ್ದುಕೊಟ್ಟಿದ್ದರು.

ಅಂದಹಾಗೆ, ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ನಡೆದ ೨೦೧೪ರ ಕೂಟದಲ್ಲಿ ಭಾರತ ಒಟ್ಟು ೫೭ ಪದಕಗಳನ್ನು ಗೆದ್ದುಕೊಂಡಿತ್ತು. ೧೧ ಸ್ವರ್ಣ, ೧೦ ಬೆಳ್ಳಿ ಹಾಗೂ ೩೬ ಕಂಚಿನ ಪದಕಗಳನ್ನು ಗೆದ್ದಿದ್ದ ಭಾರತ ತಂಡ, ಈ ಬಾರಿ ಮತ್ತಷ್ಟು ಪದಕಗಳನ್ನು ಜಯಿಸುವ ವಿಶ್ವಾಸದಲ್ಲಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More