ಮಾಂಟ್ರಿಯಲ್ ಡಬ್ಲ್ಯೂಟಿಎ ಟೂರ್ನಿ: ವೀನಸ್ ಹೋರಾಟಕ್ಕೆ ತೆರೆ ಎಳೆದ ಹ್ಯಾಲೆಪ್

ವಿಶ್ವದ ಅಗ್ರ ಕ್ರಮಾಂಕಿತ ಟೆನಿಸ್ ಆಟಗಾರ್ತಿ ರೊಮೇನಿಯಾದ ಸಿಮೋನಾ ಹ್ಯಾಲೆಪ್, ಮಾಂಟ್ರಿಯಲ್‌ನಲ್ಲಿ ಮೋಹಕ ಆಟ ಮುಂದುವರಿಸಿದ್ದಾರೆ. ಹಿರಿಯ ಹಾಗೂ ಅನುಭವಿ ಆಟಗಾರ್ತಿ ವೀನಸ್ ವಿಲಿಯಮ್ಸ್ ವಿರುದ್ಧ ನೇರ ಸೆಟ್‌ಗಳ ಗೆಲುವಿನೊಂದಿಗೆ ಹ್ಯಾಲೆಪ್ ಎಂಟರ ಘಟ್ಟ ತಲುಪಿದ್ದಾರೆ

ಏಳು ಬಾರಿಯ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತೆ ವೀನಸ್ ವಿಲಿಯಮ್ಸ್, ಫ್ರೆಂಚ್ ಓಪನ್ ಚಾಂಪಿಯನ್ ಸಿಮೋನಾ ಹ್ಯಾಲೆಪ್ ಎದುರು ಸೋಲನುಭವಿಸಿ ಮಾಂಟ್ರಿಯಲ್ ಡಬ್ಲ್ಯೂಟಿಎ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಅನಸ್ಟಾಸಿಯಾ ಪಾವ್ಲಿಚೆಂಕೋವಾ ವಿರುದ್ಧದ ಮೊದಲ ಸುತ್ತಿನಲ್ಲಿ ಭೀಕರ ಹೋರಾಟ ನಡೆಸಿ ಮೂರು ತಾಸುಗಳ ಕಾದಾಟದಲ್ಲಿ ಗೆಲುವು ಸಾಧಿಸಿದ್ದ ಹ್ಯಾಲೆಪ್, ವೀನಸ್ ವಿರುದ್ಧ ೬-೨, ೬-೨ ನೇರ ಸೆಟ್‌ಗಳಲ್ಲಿ ಗೆಲುವು ಪಡೆದರು.

ಒಂದು ಬಗೆಯಲ್ಲಿ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಹ್ಯಾಲೆಪ್, ೭೧ ನಿಮಿಷಗಳಲ್ಲೇ ಪಂದ್ಯವನ್ನು ಕೈವಶಮಾಡಿಕೊಂಡರು. ಅನುಭವಿ ಆಟಗಾರ್ತಿ ಹಾಗೂ ೩೮ರ ಹರೆಯದ ವೀನಸ್ ವಿರುದ್ಧ ಆಕ್ರಮಣಕಾರಿ ಆಟವಾಡಿದ ಹ್ಯಾಲೆಪ್, ಅತಿ ಸುಲಭ ಗೆಲುವು ಪಡೆದರು. ವಿಶ್ವದ ೨೮ನೇ ಶ್ರೇಯಾಂಕಿತೆ ರಷ್ಯಾದ ಅನಸ್ಟಾಸಿಯಾ ಒಡ್ಡಿದ ಪ್ರಬಲ ಪ್ರತಿರೋಧದಿಂದ ಸಾಕಷ್ಟು ಬಸವಳಿದಿದ್ದ ಹ್ಯಾಲೆಪ್, ಈ ಋತುವಿನಲ್ಲಿ ಚೊಚ್ಚಲ ಪ್ರಶಸ್ತಿಗಾಗಿ ಎದುರು ನೋಡುತ್ತಿದ್ದ ವೀನಸ್ ಬಯಕೆಯನ್ನು ಹೊಸಕಿಹಾಕಿದರು.

೨೦೦೮ರ ವಿಂಬಲ್ಡನ್ ಫೈನಲ್‌ನಲ್ಲಿ ತನ್ನ ಕಿರಿಯ ಸೋದರಿ ಸೆರೆನಾ ವಿಲಿಯಮ್ಸ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಬರೋಬ್ಬರಿ ಹತ್ತು ವರ್ಷಗಳಾದರೂ, ವೀನಸ್‌ಗೆ ಗ್ರಾಂಡ್‌ಸ್ಲಾಮ್ ಗೆಲುವು ಮರೀಚಿಕೆಯಾಗಿದೆ. “ವಿಲಿಯಮ್ಸ್ ಸೋದರಿಯರ ಪೈಕಿ ಯಾರೊಬ್ಬರ ಜತೆಗೂ ಸೆಣಸಿ ಗೆಲುವು ಪಡೆಯುವುದು ಅಷ್ಟು ಸುಲಭವಲ್ಲ. ಪ್ರತಿಯೊಂದು ಚೆಂಡನ್ನು ಎಚ್ಚರಿಕೆಯಿಂದ ನಿಭಾಯಿಸಿದ್ದರ ಫಲವಿದು,’’ ಎಂದು ಗೆಲುವಿನ ಬಳಿಕ ಹ್ಯಾಲೆಪ್ ಪ್ರತಿಕ್ರಿಯಿಸಿದರು.

ಇದನ್ನೂ ಓದಿ : ವೃತ್ತಿಬದುಕಿನಲ್ಲೇ ಅತಿ ಹೀನಾಯ ಸೋಲು ಕಂಡ ಸೆರೆನಾ ವಿಲಿಯಮ್ಸ್

ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಹ್ಯಾಲೆಪ್, ಶುರುವಿನಿಂದಲೂ ಆಕ್ರಮಣಕಾರಿ ಆಟದೊಂದಿಗೆ ಮಿಂಚು ಹರಿಸಿದರು. ಮೊದಲ ಎರಡು ಗೇಮ್‌ಗಳನ್ನು ಗೆಲ್ಲುವ ಮೂಲಕ ಆರಂಭಿಕ ಸೆಟ್ ಅನ್ನು ಕೈವಶಕ್ಕೆ ಪಡೆದರು. ಬಳಿಕ ಎರಡನೇ ಸೆಟ್‌ನಲ್ಲಿಯೂ ಹ್ಯಾಲೆಪ್ ೩-೦ ಮುನ್ನಡೆಯೊಂದಿಗೆ ವೀನಸ್ ಸೋಲನ್ನು ಖಚಿತಪಡಿಸಿದರು. ಎರಡೂ ಸೆಟ್‌ನಲ್ಲಿ ತಲಾ ಎರಡು ಗೇಮ್‌ಗಳನ್ನು ಗೆಲ್ಲಲಷ್ಟೇ ವೀನಸ್‌ಗೆ ಸಾಧ್ಯವಾಯಿತು. ಮೊದಲ ಸರ್ವೀಸ್ ಪಾಯಿಂಟ್ಸ್‌ನಲ್ಲಿ ಶೇ. ೭೭ರಷ್ಟು ಪರಾಕ್ರಮ ಮೆರೆದ ಹ್ಯಾಲೆಪ್, ಐದು ಬಾರಿ ವೀನಸ್ ಸರ್ವ್ ಮುರಿದು ಗಮನ ಸೆಳೆದರು.

ಶರಪೋವಾ ಸವಾಲಿಗೂ ತೆರೆ

ಐದು ಬಾರಿಯ ಗ್ರಾಂಡ್‌ಸ್ಲಾಮ್ ವಿಜೇತೆ ಮರಿಯಾ ಶರಪೋವಾ ಕೂಡ ಮಾಂಟ್ರಿಯಲ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ವನಿತೆಯರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ ಹಣಾಹಣಿಯಲ್ಲಿ ವಿಶ್ವದ ಮಾಜಿ ನಂ.೧ ಟೆನಿಸ್ ಆಟಗಾರ್ತಿ ಶರಪೋವಾ ವಿರುದ್ಧ ಕೆರೊಲಿನಾ ಗಾರ್ಸಿಯಾ 6-3, 6-2 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ಆರನೇ ಶ್ರೇಯಾಂಕಿತ ಆಟಗಾರ್ತಿ ಗಾರ್ಸಿಯಾ, ಶ್ರೇಯಾಂಕ ರಹಿತ ಆಟಗಾರ್ತಿ ಶರಪೋವಾ ಎದುರು ನಿರ್ದಯಿ ಆಟವಾಡಿದರು. ಫ್ರಾನ್ಸ್ ಆಟಗಾರ್ತಿಯ ಪ್ರಚಂಡ ಆಟಕ್ಕೆ ದಿಟ್ಟ ಉತ್ತರ ನೀಡಲು ವಿಫಲವಾದ ಶರಪೋವಾ, ಸೋಲಿಗೆ ಗುರಿಯಾಗಿ ಟೂರ್ನಿಯಿಂದ ನಿರ್ಗಮಿಸಿದರು. ಮುಂದಿನ ಸುತ್ತಿನಲ್ಲಿ ಗಾರ್ಸಿಯಾ ವಿಶ್ವದ ನಂ ೧ ಆಟಗಾರ್ತಿ ಹ್ಯಾಲೆಪ್ ವಿರುದ್ಧ ಕಾದಾಡಲಿದ್ದಾರೆ.

ವೋಜ್ನಿಯಾಕಿ ಪರಾಭವ

ಮಾಂಟ್ರಿಯಲ್ ಟೂರ್ನಿಯಲ್ಲಿ ಈ ಬಾರಿ ಮತ್ತೊಂದು ಅಚ್ಚರಿದಾಯಕ ಫಲಿತಾಂಶ ಹೊರಬೀಳಲು ಎರಡನೇ ಶ್ರೇಯಾಂಕಿತ ಆಟಗಾರ್ತಿ ಕೆರೋಲಿನ್ ವೋಜ್ನಿಯಾಕಿ ಕಾರಣರಾದರು. ಯುವ ಆಟಗಾರ್ತಿ ಅರಿನಾ ಸೆಬಲೆಂಕೊ ವಿರುದ್ಧದ ಮೂರು ಸೆಟ್‌ಗಳ ರೋಚಕ ಕಾದಾಟದಲ್ಲಿ ವೋಜ್ನಿಯಾಕಿ ಪರಾಜಿತೆಯಾದರು. ನಿರ್ಣಾಯಕ ಘಟ್ಟದಲ್ಲಿ ಮೂರು ಮ್ಯಾಚ್ ಪಾಯಿಂಟ್ಸ್ ಕಲೆಹಾಕಿದ ಅರಿನಾ, ೫-೭, ೬-೨, ೭-೬ (೭/೪) ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುನ್ನಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More