ವಿಯೆಟ್ನಾಂ ಓಪನ್: ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದ ಅಜಯ್ ಜಯರಾಮ್

ಭಾರತದ ಬ್ಯಾಡ್ಮಿಂಟನ್ ಆಟಗಾರ ಅಜಯ್ ಜಯರಾಂ ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ಶನಿವಾರ (ಆ.೧೧) ನಡೆದ ಸೆಮಿಫೈನಲ್‌ನಲ್ಲಿ ಅವರು ಜಪಾನ್‌ನ ಯು ಇಗಾರ್ಶಿ ವಿರುದ್ಧ ೨೧-೧೪, ೨೧-೧೯ರ ನೇರ ಗೇಮ್‌ಗಳಲ್ಲಿ ಜಯಿಸಿದರು

ಪ್ರಸಕ್ತ ಋತುವಿನಲ್ಲಿ ಮೊದಲ ಪ್ರಶಸ್ತಿ ಸನಿಹ ಅಜಯ್ ಜಯರಾಮ್ ಸಾಗಿದ್ದಾರೆ. ಪ್ರಚಂಡ ಫಾರ್ಮ್‌ನಲ್ಲಿರುವ ಅವರು, ಜಪಾನ್ ಆಟಗಾರನ ವಿರುದ್ಧ ನೇರ ಗೇಮ್‌ಗಳ ಗೆಲುವಿನೊಂದಿಗೆ ಭಾನುವಾರ (ಆ.೧೨) ನಡೆಯಲಿರುವ ಪ್ರಶಸ್ತಿ ಸುತ್ತಿಗೆ ಅರ್ಹತೆ ಗಿಟ್ಟಿಸಿದರು. ೩೦ರ ಹರೆಯದ ಜಯರಾಮ್, ಮುಂದಿನ ಸುತ್ತಿನಲ್ಲಿ ಇಂಡೋನೇಷ್ಯಾ ಆಟಗಾರ ಹಾಗೂ ವಿಶ್ವದ ೭೯ನೇ ಶ್ರೇಯಾಂಕಿತ ಶೆಸಾರ್ ಹಿರೆನ್ ರುಸ್ಟಾವಿಟೊ ವಿರುದ್ಧ ಕಾದಾಡಲಿದ್ದಾರೆ.

೭೫,೦೦೦ ಅಮೆರಿಕನ್ ಡಾಲರ್ ಬಹುಮಾನದ ಬಿಡಬ್ಲ್ಯೂಎಫ್ ಟೂರ್ ಸೂಪರ್ ೧೦೦ ಪಂದ್ಯಾವಳಿಯಲ್ಲಿ ಭಾರತದ ಮತ್ತೋರ್ವ ಆಟಗಾರ ಮಿಥುನ್ ಮಂಜುನಾಥ್ ನಿರಾಸೆ ಅನುಭವಿಸಿದರು. ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಇದೇ ಶೆಸಾರ್ ಎದುರು ದಿಟ್ಟ ಹೋರಾಟ ನಡೆಸಿ ಅಂತಿಮವಾಗಿ ೧೭-೨೧, ೨೧-೧೯, ೧೪-೨೧ರಿಂದ ಸೋತು ಟೂರ್ನಿಯಿಂದ ಹೊರಬಿದ್ದರು.

ಮಿಥುನ್ ವಿರುದ್ಧ ಆಕ್ರಮಣಕಾರಿ ಆಟವಾಡಿದ ಇಂಡೋನೇಷಿಯಾ ಆಟಗಾರ, ಇದೀಗ ಪ್ರಶಸ್ತಿ ಸುತ್ತಿನಲ್ಲಿ ಜಯರಾಮ್ ವಿರುದ್ಧ ಗೆಲುವು ಸಾಧಿಸುವ ಗುರಿ ಹೊತ್ತಿದ್ದಾರೆ. ಸತತ ನಾಲ್ಕು ಇಂಡೋನೇಷಿಯಾ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಗೆಲುವು ಸಾಧಿಸಿರುವ ಶೆಸಾರ್, ಜಯರಾಮ್ ವಿರುದ್ಧವೂ ಜಯದ ವಿಶ್ವಾಸದಲ್ಲಿದ್ದಾರೆ. ಆದರೆ, ಪ್ರಚಂಡ ಫಾರ್ಮ್‌ನಲ್ಲಿರುವ ಜಯರಾಮ್, ಇಂಡೋನೇಷಿಯಾ ಆಟಗಾರನಿಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ : ಐತಿಹಾಸಿಕ ಅವಕಾಶ ಕೈಚೆಲ್ಲಿ ಮತ್ತೆ ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡ ಸಿಂಧು

ವಿಶ್ವದ ಹದಿಮೂರನೇ ಶ್ರೇಯಾಂಕಿತ ಜಯರಾಮ್, ಫೈನಲ್ ತಲುಪುವುದರೊಂದಿಗೆ ಈಗಾಗಲೇ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ. ಆದರೆ, ಕಳೆದ ವಾರವೂ ಪಿ ವಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್‌ನಲ್ಲಿ ನಿರಾಸೆ ಅನುಭವಿಸಿ ಸತತ ಎರಡನೇ ಬಾರಿಗೆ ರಜತ ಪದಕಕ್ಕೆ ತೃಪ್ತರಾಗಿದ್ದರು. ಹೀಗಾಗಿ, ಜಯರಾಮ್, ಶೆಸಾರ್ ವಿರುದ್ಧ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಅಣಿಯಾಗಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More