ವರುಣನೊಂದಿಗೆ ಭಾರತದ ಇನ್ನಿಂಗ್ಸ್‌ಗೆ ಕಡಿವಾಣ ಹಾಕಿದ ಆ್ಯಂಡರ್ಸನ್ 

ಇಂಗ್ಲೆಂಡ್‌ನ ಪ್ರಚಂಡ ವೇಗಿ ಜೇಮ್ಸ್ ಆ್ಯಂಡರ್ಸನ್ ಮತ್ತೊಮ್ಮೆ ತನ್ನ ನೆಚ್ಚಿನ ತಾಣ ಲಾರ್ಡ್ಸ್ ಮೈದಾನದಲ್ಲಿ ಮೆರೆದಾಡಿದ್ದಾರೆ. ವೃತ್ತಿಬದುಕಿನಲ್ಲಿ ಮತ್ತೊಮ್ಮೆ ಐದು ವಿಕೆಟ್ ಸಾಧನೆ ಮೆರೆದ ಅವರು, ವರುಣನಾಟದ ಮಧ್ಯದಲ್ಲಿ ಮಿಂಚು ಹರಿಸಿದರು. ಆದರೆ, ಈ ಬಾರಿಯೂ ಕೊಹ್ಲಿ ವಿಕೆಟ್ ಅವರಿಗೆ ದಕ್ಕಲಿಲ್ಲ!

ಲಾರ್ಡ್ಸ್ ಟೆಸ್ಟ್‌ನಲ್ಲಿ ಪುಟಿದೇಳುವುದರೊಂದಿಗೆ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ೧-೧ ಸಮಬಲ ಸಾಧಿಸಲು ಎದುರು ನೋಡುತ್ತಿರುವ ಟೀಂ ಇಂಡಿಯಾಗೆ ಜೇಮ್ಸ್ ಆ್ಯಂಡರ್ಸನ್ (೨೦ಕ್ಕೆ ೫) ಬಲವಾದ ಪೆಟ್ಟು ನೀಡಿದ್ದಾರೆ. ಪಂದ್ಯದ ಸತತ ಎರಡನೇ ದಿನದಾಟವೂ ವರುಣನ ಕೈಗೆ ಸಿಲುಕಿತಾದರೂ, ಆನಂತರದಲ್ಲಿ ಆ್ಯಂಡರ್ಸನ್ ದಾಳಿಗೆ ಸಿಲುಕಿದ ಭಾರತದ ಇನ್ನಿಂಗ್ಸ್ ಹಳಿ ತಪ್ಪಿತು. ಜೇಮ್ಸ್ ಜೊತೆಗೆ ಕ್ರಿಸ್ ವೋಕ್ಸ್ (೧೯ಕ್ಕೆ ೨) ಹಾಗೂ ಸ್ಯಾಮ್ ಕರನ್ ಮತ್ತು ಸ್ಟುವರ್ಟ್ ಬ್ರಾಡ್ ಗಳಿಸಿದ ತಲಾ ಒಂದು ವಿಕೆಟ್‌ಗಳಿಂದ ಭಾರತ ಕೇವಲ ೩೫.೨ ಓವರ್‌ಗಳಲ್ಲೇ ೧೦೭ ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಹೋರಾಟ ಮುಗಿಸಿತು.

ಇಶಾಂತ್ ಶರ್ಮಾ (೦) ಭಾರತದ ಕೊನೆಯ ಆಟಗಾರನಾಗಿ ಔಟಾಗುತ್ತಿದ್ದಂತೆ, ಆ್ಯಂಡರ್ಸನ್ ಲಾರ್ಡ್ಸ್ ಮೈದಾನದಲ್ಲಿ ಆರನೇ ಬಾರಿಗೆ ಐದು ವಿಕೆಟ್ ಸಾಧನೆ ಮೆರೆದರು. ಭಾರತದ ಇನ್ನಿಂಗ್ಸ್‌ನಲ್ಲಿ ಹೇಳಿಕೊಳ್ಳಬಹುದಾದ ಎರಡು ಹೆಸರೆಂದರೆ ಅದು ರವಿಚಂದ್ರನ್ ಅಶ್ವಿನ್ (೨೯) ಮತ್ತು ನಾಯಕ ವಿರಾಟ್ ಕೊಹ್ಲಿ (೨೩) ಮಾತ್ರವೇ. ಕೊಹ್ಲಿ, ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಜೋಸ್ ಬಟ್ಲರ್‌ಗೆ ಕ್ಯಾಚಿತ್ತು ಹೊರನಡೆದರೆ, ಅಶ್ವಿನ್ ಅವರನ್ನು ಸ್ಟುವರ್ಟ್ ಬ್ರಾಡ್ ಎಲ್‌ಬಿ ಬಲೆಗೆ ಕೆಡವಿದರು.

ಪ್ರತಿಕೂಲ ವಾತಾವರಣದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡ, ಆ್ಯಂಡರ್ಸನ್ ಪ್ರಖರ ದಾಳಿಯಿಂದಾಗಿ ಶುರುವಿನಲ್ಲೇ ತತ್ತರಿಸಿತು. ೩೬ರ ಹರೆಯದ ಆ್ಯಂಡರ್ಸನ್, ಮುರಳಿ ವಿಜಯ್ (೦), ಕೆ ಎಲ್ ರಾಹುಲ್ (೮) ವಿಕೆಟ್‌ ಪಡೆದು ಆರಂಭಿಕ ಆಘಾತ ನೀಡಿದರು. ಇನ್ನು, ಮೊದಲ ಪಂದ್ಯದಿಂದ ಕೈಬಿಡಲ್ಪಟ್ಟಿದ್ದ ಚೇತೇಶ್ವರ ಪೂಜಾರ (೧) ಸಾವಧಾನದೊಂದಿಗೆ ಕ್ರೀಸ್‌ಗೆ ಕಚ್ಚಿನಿಲ್ಲಲು ಯತ್ನಿಸುತ್ತಿದ್ದ ವೇಳೆಯಲ್ಲೇ ರನೌಟ್ ಆಗಿ ಕ್ರೀಸ್ ತೊರೆದರು. ಯುವ ಆಟಗಾರ ಪೋಪ್, ಚೇತೇಶ್ವರ ರನೌಟ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನೂ ಓದಿ : ಕೊಹ್ಲಿ ಪಡೆಯನ್ನು ಕಟ್ಟಿಹಾಕಿ ಚಾರಿತ್ರಿಕ ಟೆಸ್ಟ್‌ ಪಂದ್ಯದಲ್ಲಿ ಗೆಲುವು ಕಂಡ ಇಂಗ್ಲೆಂಡ್

ಪ್ರಮುಖ ಮೂರು ವಿಕೆಟ್‌ಗಳು ಪತನ ಕಾಣುತ್ತಲೇ ಭಾರತ ಥರಗುಟ್ಟಿತು. ಈ ವೇಳೆಯಲ್ಲಿ ಭಾರತಕ್ಕೆ ಆಧಾರಸ್ತಂಭದಂತಿದ್ದುದು ಅಜಿಂಕ್ಯ ರಹಾನೆ (೧೮) ಹಾಗೂ ಹಾಗೂ ನಾಯಕ ವಿರಾಟ್ ಕೊಹ್ಲಿ. ೨೦೧೪ರಲ್ಲಿ ಸ್ಮರಣೀಯ ಶತಕ ದಾಖಲಿಸಿದ್ದ ರಹಾನೆ ಮೇಲೆ ಸಾಕಷ್ಟು ನಿರೀಕ್ಷೆ ಇರಿಸಿಕೊಳ್ಳಲಾಗಿತ್ತು. ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯಿಂದ ಇನ್ನಿಂಗ್ಸ್ ಕಟ್ಟಲು ಮುಂದಾಗಿದ್ದ ಈ ಜೋಡಿ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.

ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕ್ರಿಸ್ ವೋಕ್ಸ್ ಯಶಸ್ವಿಯಾದರು. ಇನ್ನಿಂಗ್ಸ್‌ನ ೨೨ನೇ ಓವರ್‌ನಲ್ಲಿ ದಾಳಿಗಿಳಿದ ಕ್ರಿಸ್ ತೂರಿಬಿಟ್ಟ ನಾಲ್ಕನೇ ಎಸೆತವನ್ನು ಕೊಹ್ಲಿ, ನೇರವಾಗಿ ಸ್ಲಿಪ್‌ನಲ್ಲಿದ್ದ ಜೋಸ್ ಬಟ್ಲರ್‌ಗೆ ಕ್ಯಾಚಿತ್ತು ಪೆವಿಲಿಯನ್ ದಾರಿ ತುಳಿದರು. ೧೩.೧ ಓವರ್‌ಗಳಲ್ಲಿ ಈ ಜೋಡಿ ಸಹನೆಯ ೩೪ ರನ್ ಜೊತೆಯಾಟವಾಡಿದ್ದಷ್ಟೇ ಭಾರತದ ಇನ್ನಿಂಗ್ಸ್‌ನಲ್ಲಿ ಮೂಡಿಬಂದ ಆಕ‍ರ್ಷಕ ಜೊತೆಯಾಟ.

ತದನಂತರದಲ್ಲಿ ಬಂದ ಹಾರ್ದಿಕ್ ಪಾಂಡ್ಯ (೧೧) ಇದೇ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಜೋಸ್ ಬಟ್ಲರ್‌ಗೆ ಕ್ಯಾಚಿತ್ತರೆ, ದಿನೇಶ್ ಕಾರ್ತಿಕ್ (೧) ಸ್ಯಾಮ್ ಕರನ್‌ಗೆ ಬೌಲ್ಡ್ ಆದರು. ಆನಂತರದಲ್ಲಿ ಭಾರತದ ಪರ ಎರಡಂಕಿ ದಾಟಿದ್ದು ಆರ್ ಅಶ್ವಿನ್ ಮತ್ತು ೧೦ ರನ್‌ಗಳೊಂದಿಗೆ ಅಜೇಯವಾಗುಳಿದ ಮೊಹಮದ್ ಶಮಿ ಮಾತ್ರ. ಒಟ್ಟಾರೆ, ಮಳೆಬಾಧಿತ ಪಂದ್ಯದಲ್ಲಿ ಭಾರತವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಇಂಗ್ಲೆಂಡ್ ಬೌಲರ್‌ಗಳು ಮಹತ್ವದ ಪಾತ್ರ ವಹಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More