ರೋಜರ್ಸ್ ಕಪ್ ಟೆನಿಸ್: ಅಂತಿಮ ನಾಲ್ಕರ ಘಟ್ಟಕ್ಕೆ ಧಾವಿಸಿದ ರಾಫೆಲ್ ನಡಾಲ್

ವಿಶ್ವದ ನಂ.೧ ಆಟಗಾರ ರಾಫೆಲ್ ನಡಾಲ್ ಟೊರಾಂಟೊ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಅಂತಿಮ ನಾಲ್ಕರ ಘಟ್ಟಕ್ಕೆ ಧಾವಿಸಿದ್ದಾರೆ. ಮಂದಗತಿಯ ಆಟ ಶುರು ಮಾಡಿದರೂ, ಕ್ರಮೇಣ ಪುಟಿದೆದ್ದ ನಡಾಲ್, ಕ್ರೊವೇಷಿಯಾದ ಮರಿನ್ ಸಿಲಿಕ್ ವಿರುದ್ಧ ೨-೬ ೬-೪, ೬-೪ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು

ಆರಂಭಿಕ ಸೆಟ್‌ನಲ್ಲಿ ಸೋತು ಹಿನ್ನಡೆ ಅನುಭವಿಸಿದರೂ, ಆನಂತರದಲ್ಲಿ ಚೇತರಿಕೆಯ ಪ್ರದರ್ಶನ ನೀಡಿದ ರಾಫೆಲ್ ನಡಾಲ್, ಟೊರಾಂಟೊ ಮಾಸ್ಟರ್ಸ್ ಟೂರ್ನಿಯಲ್ಲಿ ಸೆಮಫೈನಲ್ ತಲುಪಿದರು. ಶುಕ್ರವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಸ್ಪೇನ್ ಆಟಗಾರ ನಡಾಲ್, ಕ್ರೊವೇಷ್ಯಾದ ಸಿಲಿಕ್ ಸವಾಲನ್ನು ಮೆಟ್ಟಿನಿಂತರು.

೨೦೧೩ರಲ್ಲಿ ಕೊನೆಯ ಬಾರಿಗೆ ಟೊರಾಂಟೊ ಎಟಿಪಿ ಮಾಸ್ಟರ್ಸ್ ಪ್ರಶಸ್ತಿ ಜಯಿಸಿರುವ ನಡಾಲ್ ಇದೀಗ, ಮತ್ತೊಮ್ಮೆ ಕೆನಡಾ ಓಪನ್‌ನಲ್ಲಿ ಚಾಂಪಿಯನ್ ಆಗುವ ಕನಸು ಹೊತ್ತಿದ್ದಾರೆ. ರಷ್ಯನ್ ಆಟಗಾರ ಕರೆನ್ ಕಚನೊವ್ ವಿರುದ್ಧ ಸೆಮಿಫೈನಲ್‌ನಲ್ಲಿ ನಡಾಲ್ ಸೆಣಸಲಿದ್ದಾರೆ. ಪುರುಷರ ಇನ್ನೊಂದು ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಕಚನೋವ್, ರಾಬಿನ್ ಹಾಸೆ ವಿರುದ್ಧ ೬-೩, ೬-೧ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

“ಇದು ನನ್ನ ಪಾಲಿಗೆ ಮಹತ್ವಪೂರ್ಣ ಪಂದ್ಯವಾಗಿತ್ತು. ಸಿಲಿಕ್ ಪ್ರತಿಭಾನ್ವಿತ ಆಟಗಾರ. ಕೊಂಚ ಯಾಮಾರಿದ್ದರೂ, ನಾನು ಪಂದ್ಯದಲ್ಲಿ ಸೋಲು ಅನುಭವಿಸಬೇಕಾಗುತ್ತಿತ್ತು. ಆದರೆ, ನಾನು ಸರಿದಿಸೆಯಲ್ಲಿ ಹಾಗೂ ಪಕ್ಕಾ ಯೋಜನೆಯೊಂದಿಗೆ ಆಡಿದ್ದರಿಂದ ಗೆಲುವು ಸಾಧ್ಯವಾಯಿತು,’’ ಎಂದು ಕ್ವಾರ್ಟರ್‌ಫೈನಲ್ ಸವಾಲನ್ನು ಮೆಟ್ಟಿನಿಲ್ಲುತ್ತಿದ್ದಂತೆ ನಡಾಲ್ ಪ್ರತಿಕ್ರಿಯಿಸಿದರು.

ಇದನ್ನೂ ಓದಿ : ಸೆರೆನಾ ಸೋಲಿಸಿ ಚೊಚ್ಚಲ ವಿಂಬಲ್ಡನ್ ಟ್ರೋಫಿಗೆ ಮುದ್ದಿಟ್ಟ ಏಂಜಲಿಕ್ ಕೆರ್ಬರ್

ಜ್ವೆರೇವ್ ಮಣಿಸಿದ ಸಿಸಿಪಾಸ್

ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಜರ್ಮನ್ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ಸೋಲಿನ ಆಘಾತ ಅನುಭವಿಸಿದರು. ವಿಂಬಲ್ಡನ್ ಚಾಂಪಿಯನ್ ನೊವಾಕ್ ಜೊಕೊವಿಚ್‌ಗೆ ದಿನದ ಹಿಂದಷ್ಟೇ ಆಘಾತ ನೀಡಿದ್ದ ಗ್ರೀಕ್ ಯುವ ಆಟಗಾರ ಸ್ಟೆಫಾನಸ್ ಸಿಸಿಪಾಸ್ ಕಠಿಣ ಹೋರಾಟದಲ್ಲಿ ೩-೬, ೭-೬ (೧೩/೧೧) ಹಾಗೂ ೬-೪ ಸೆಟ್‌ ರೋಚಕ ಗೆಲುವಿನೊಂದಿಗೆ ಉಪಾಂತ್ಯಕ್ಕೆ ಧಾವಿಸಿದರು.

ಜ್ವೆರೇವ್ ವಿರುದ್ಧದ ಈ ಗೆಲುವಿನೊಂದಿಗೆ ಇದೇ ಭಾನುವಾರಕ್ಕೆ ೨೦ನೇ ವಸಂತಕ್ಕೆ ಕಾಲಿರಿಸಲಿರುವ ಸಿಸಿಪಾಸ್, ಎಟಿಪಿ ಮಾಸ್ಟರ್ಸ್ ಟೂರ್ನಿಯೊಂದರಲ್ಲಿ ಮೂರು ಪ್ರಮುಖ ಗೆಲುವು ಸಾಧಿಸಿದ ಕಿರಿಯ ಟೆನಿಸಿಗ ಎನಿಸಿದರು. ೨೦೦೬ರ ಮಾಂಟೆ ಕಾರ್ಲೋ ಟೆನಿಸ್ ಪಂದ್ಯಾವಳಿಯಲ್ಲಿ ಇಂಥದ್ದೇ ಸಾಧನೆ ಮೆರೆದಿದ್ದ ನಡಾಲ್‌ಗೆ ಆಗ ೧೯ರ ಹರೆಯವಷ್ಟೇ ಆಗಿತ್ತು.

ಮುಂದಿನ ಪಂದ್ಯದಲ್ಲಿ ಸಿಸಿಪಾಸ್, ವಿಂಬಲ್ಡನ್ ರನ್ನರ್‌ ಅಪ್ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿರುದ್ಧ ಗೆಲುವು ಸಾಧಿಸಿದರು. ಕೆವಿನ್, ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಬಲ್ಗೇರಿಯಾ ಆಟಗಾರ ಗ್ರಿಗೊರ್ ಡಿಮಿಟ್ರೊವ್ ವಿರುದ್ಧ ೬-೨, ೬-೨ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಅರ್ಹತೆ ಗಳಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More