ಮಾಂಟ್ರಿಯಲ್ ಓಪನ್ ಟೆನಿಸ್: ಸೆಮಿಫೈನಲ್‌ಗೆ ಸಾಗಿದ ಸಿಮೋನಾ ಹ್ಯಾಲೆಪ್

ಮಾಂಟ್ರಿಯಲ್ ಓಪನ್ ಟೆನಿಸ್ ಪಂದ್ಯಾವಳಿಯ ಅಂತಿಮ ನಾಲ್ಕರ ಘಟ್ಟಕ್ಕೆ ಧಾವಿಸುವಲ್ಲಿ ವಿಶ್ವದ ನಂ.೧ ಆಟಗಾರ್ತಿ ಸಿಮೋನಾ ಹ್ಯಾಲೆಪ್ ಯಶ ಕಂಡರು. ಕ್ವಾರ್ಟರ್‌ಫೈನಲ್ ಕಾದಾಟದಲ್ಲಿ ಫ್ರಾನ್ಸ್‌ನ ಕೆರೊಲಿನಾ ಗಾರ್ಸಿಯಾ ವಿರುದ್ಧ ೭-೫, ೬-೧ ನೇರ ಸೆಟ್‌ಗಳಲ್ಲಿ ಅವರು ಗೆಲುವು ಸಾಧಿಸಿದರು

ಜಗತ್ತಿನ ನಂ.೧ ಟೆನಿಸ್ ಆಟಗಾರ್ತಿ, ರೊಮೇನಿಯಾದ ಸಿಮೋನಾ ಹ್ಯಾಲೆಪ್ ಡಬ್ಲ್ಯೂಟಿಎ ಕೆನಡಾ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಫ್ರಾನ್ಸ್ ಅಟಗಾರ್ತಿ ಕೆರೊಲಿನಾ ಗಾರ್ಸಿಯಾ ವಿರುದ್ಧ ೭-೫, ೬-೧ ನೇರ ಸೆಟ್‌ಗಳಲ್ಲಿ ಗೆಲುವು ಪಡೆದ ಹ್ಯಾಲೆಪ್, ಸತತ ನಾಲ್ಕನೇ ಬಾರಿಗೆ ಸೆಮಿಫೈನಲ್‌ಗೆ ದಾಪುಗಾಲಿಟ್ಟರು.

೨೬ರ ಹರೆಯದ ಹ್ಯಾಲೆಪ್ ಮೊದಲ ಸೆಟ್‌ನಲ್ಲಿ ಸಾಕಷ್ಟು ಬೆವರು ಹರಿಸುವಂತೆ ಮಾಡಿದ ಗಾರ್ಸಿಯಾ, ಪ್ರಬಲ ಪೈಪೋಟಿ ಒಡ್ಡಿದರು. ಈ ಹಿಂದಿನ ವರ್ಷವೂ ಕ್ವಾರ್ಟರ್‌ಫೈನಲ್‌ನಲ್ಲಿ ಇದೇ ಗಾರ್ಸಿಯಾ ವಿರುದ್ಧ ಜಯಭೇರಿ ಬಾರಿಸಿದ್ದ ಹ್ಯಾಲೆಪ್, ಎರಡನೇ ಸೆಟ್‌ನಲ್ಲಂತೂ ನಿರಾಯಾಸ ಗೆಲುವು ಪಡೆದರು. ಅಗ್ರ ಶ್ರೇಯಾಂಕಿತೆ ಸಿಮೊನಾ, ೧೯ ವಿನ್ನರ್ ಹಾಗೂ ಮೊದಲ ಸರ್ವ್‌ನಲ್ಲಿ ಶೇ.೭೭ರಷ್ಟು ಪಾಯಿಂಟ್ಸ್ ಕಲೆಹಾಕಿದರು.

ಸರಿಸುಮಾರು ೮೮ ನಿಮಿಷಗಳ ಕಾದಾಟದಲ್ಲಿ ಗಾರ್ಸಿಯಾ ಬಿರುಸಿನೊಂದಿಗೆ ಆಟ ಶುರು ಮಾಡಿದರೂ, ಕೆಲವೊಂದು ಅನಗತ್ಯ ತಪ್ಪು ಹೊಡೆತಗಳಿಂದ ಬೆಲೆ ತೆತ್ತರು. ಒಟ್ಟು ಐದು ಬಾರಿ ಸಿಮೋನಾ ವಿರುದ್ಧ ಸೆಣಸಿರುವ ಗಾರ್ಸಿಯಾ, ೨೦೧೭ರ ಡಬ್ಲ್ಯೂಟಿಎ ಬೀಜಿಂಗ್ ಫೈನಲ್‌ನಲ್ಲಿ ಗೆಲುವು ಸಾಧಿಸಿದ್ದು ಬಿಟ್ಟರೆ, ರೊಮೇನಿಯಾ ಆಟಗಾರ್ತಿಯ ವಿರುದ್ಧ ಮತ್ತೆ ಆಕೆ ಗೆಲುವು ಸಾಧಿಸಿಲ್ಲ.

ಇದನ್ನೂ ಓದಿ : ಮಾಂಟ್ರಿಯಲ್ ಡಬ್ಲ್ಯೂಟಿಎ ಟೂರ್ನಿ: ವೀನಸ್ ಹೋರಾಟಕ್ಕೆ ತೆರೆ ಎಳೆದ ಹ್ಯಾಲೆಪ್

ಫ್ರೆಂಚ್ ಓಪನ್ ಚಾಂಪಿಯನ್ ಹ್ಯಾಲೆಪ್, ಇದೀಗ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ವಿರುದ್ಧ ಕಾದಾಡಲಿದ್ದಾರೆ. ಬಾರ್ಟಿ, ವನಿತೆಯರ ಸಿಂಗಲ್ಸ್ ವಿಭಾಗದ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಅಪಾಯಕಾರಿ ಆಟಗಾರ್ತಿ ಹಾಲೆಂಡ್‌ನ ಕಿಕಿ ಬೆರ್ಟೆನ್ಸ್ ವಿರುದ್ಧ ೬-೩, ೬-೧ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ಮಹಿಳೆಯರ ವಿಭಾಗದ ಮತ್ತೊಂದು ಪಂದ್ಯದಲ್ಲಿ ಯುಎಸ್ ಓಪನ್ ಚಾಂಪಿಯನ್ ಸ್ಲೊವಾನಿ ಸ್ಟೀಫನ್ಸ್ ಕೂಡಾ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದರು. ಲಾಟ್ವಿಯಾದ ಅನಸ್ಟಾಸಿಯಾ ಸೆವಾಸ್ಟೊವಾ ವಿರುದ್ಧ ೬-೨, ೬-೨ ನೇರ ಸೆಟ್‌ಗಳಲ್ಲಿ ಸ್ಟೀಫನ್ಸ್ ಗೆಲುವಿನ ನಗೆಬೀರಿದರು.

“ಯುಎಸ್ ಓಪನ್‌ನ ಸರಣಿ ಟೂರ್ನಿಗಳಲ್ಲಿ ಒಂದಾದ ಮಾಂಟ್ರಿಯಲ್‌ನಲ್ಲಿ ನಾನು ತೋರುತ್ತಿರುವ ಪ್ರದರ್ಶನ ತೃಪ್ತಿ ತಂದಿದೆ. ಗಟ್ಟಿ ಅಂಕಣದಲ್ಲಿ ಮತ್ತೊಮ್ಮೆ ಉತ್ತರ ಅಮೆರಿಕದಲ್ಲಿ ಸೆಣಸುತ್ತಿರುವುದಕ್ಕೆ ಸಂತಸವಾಗುತ್ತಿದೆ,’’ ಎಂದು ಪಂದ್ಯ ಮುಗಿದ ಬಳಿಕ ಸ್ಟೀಫನ್ಸ್ ಪ್ರತಿಕ್ರಿಯಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More