ವೋಕ್ಸ್-ಜಾನಿ ಜೊತೆಯಾಟಕ್ಕೆ ಬಸವಳಿದ ವಿರಾಟ್ ಪಡೆ ಮುಂದೆ ಭಾರಿ ಸವಾಲು

ಕ್ರಿಸ್ ವೋಕ್ಸ್ (೧೨೦*) ಮತ್ತು ಜಾನಿ ಬೇರ್‌ಸ್ಟೋ (೯೪) ಜೊತೆಯಾಟದಲ್ಲಿ ಭಾರತ ತಂಡ ಬಸವಳಿಯಿತು. ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಸಂಪೂರ್ಣ ಹಿಡಿತ ಸಾಧಿಸಿದ್ದು, ಭಾರತ ತಂಡದ ಮುಂದೆ ಭಾರಿ ಸವಾಲೇ ಎದುರಾಗಿದೆ

ನಿಮಗಿಂತ ನಾವೇನು ಕಮ್ಮಿ ಎಂಬಂತೆ ಇಂಗ್ಲೆಂಡ್‌ನ ಮೇಲಿನ ಕ್ರಮಾಂಕವನ್ನು ಛಿದ್ರಗೊಳಿಸಿದ ಭಾರತ ತಂಡ, ಆನಂತರದಲ್ಲಿ ಆತಿಥೇಯರ ಮಧ್ಯಮ ಕ್ರಮಾಂಕದ ಆಟಕ್ಕೆ ಬೆರಗಾಯಿತು. ಕ್ರಿಸ್ ವೋಕ್ಸ್ (120*: 159 ಎಸೆತ, ೧೮ ಬೌಂಡರಿ) ಹಾಗೂ ಜಾನಿ ಬೇರ್‌ಸ್ಟೊ (೯೩: ೧೪೪ ಎಸೆತ, ೧೨ ಬೌಂಡರಿ) ಕಟ್ಟಿದ ಸೊಗಸಾದ ಇನ್ನಿಂಗ್ಸ್‌ ಲಾರ್ಡ್ಸ್ ಪಂದ್ಯದ ದಿಕ್ಕು ದೆಸೆಯನ್ನೇ ಬದಲಿಸಿತು.

ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಉಭಯರ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಂತ್ಯಕ್ಕೆ ಆತಿಥೇಯ ಇಂಗ್ಲೆಂಡ್, ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ೮೧ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೩೫೭ ರನ್ ಕಲೆಹಾಕಿದ್ದು, ೨೫೦ ರನ್‌ಗಳ ಅಮೋಘ ಮುನ್ನಡೆಯೊಂದಿಗೆ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ವೇಗಿ ಜೇಮ್ಸ್ ಆ್ಯಂಡರ್ಸನ್ ದಾಳಿಗೆ ತರಗೆಲೆಯಂತೆ ಉದುರಿಹೋದ ಭಾರತ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಿನ ಪಿಚ್‌ನಲ್ಲಿ ಹೇಗೆ ಬ್ಯಾಟ್ ಮಾಡಬಹುದು ಎಂಬುದನ್ನು ಕ್ರಿಸ್ ವೋಕ್ಸ್ ಹಾಗೂ ಜಾನಿ ಬೇರ್‌ಸ್ಟೊ ತೋರಿಸಿಕೊಟ್ಟರು. ಆರನೇ ವಿಕೆಟ್‌ ಜತೆಯಾಟದಲ್ಲಿ ಈ ಜೋಡಿ ಕಲೆಹಾಕಿದ ೧೮೯ ರನ್‌ಗಳು ಭಾರತವನ್ನು ಬಹುವಾಗಿ ಬಾಧಿಸಿತು. ಶತಕದ ಅಂಚಿನಲ್ಲಿ ಜಾನಿ ಎಡವಿದರೂ, ತಂಡಕ್ಕೆ ಅತಿ ಅಗತ್ಯವಾಗಿದ್ದ ಸಂದರ್ಭದಲ್ಲಿ ಅದ್ಭುತ ಜತೆಯಾಟವಾಡಿ ಮಿಂಚಿದರು. ದಿನೇಶ್ ಕಾರ್ತಿಕ್ ಅದ್ಭುತ ಕ್ಯಾಚ್‌ನಲ್ಲಿ ಜಾನಿ ವಿಕೆಟ್ ಕೈಚೆಲ್ಲಿದರು.

ಇದನ್ನೂ ಓದಿ : ವರುಣನೊಂದಿಗೆ ಭಾರತದ ಇನ್ನಿಂಗ್ಸ್‌ಗೆ ಕಡಿವಾಣ ಹಾಕಿದ ಆ್ಯಂಡರ್ಸನ್ 

ಕಾರ್ತಿಕ್ ನಿರ್ಗಮನದ ನಂತರದಲ್ಲಿ ಕ್ರೀಸ್‌ಗಿಳಿದ ಸ್ಯಾಮ್ ಕರನ್ ಕೂಡಾ ನಿರ್ಭಿಡೆಯಿಂದ ಬ್ಯಾಟ್ ಬೀಸಲಾರಂಭಿಸಿದರು. ಮತ್ತೊಂದು ಬದಿಯಲ್ಲಿ ಈ ಯುವ ಆಟಗಾರನಿಗೆ ಕ್ರಿಸ್ ವೋಕ್ಸ್ ಅದ್ಭುತ ಸಾಥ್ ಕೂಡಾ ವರವಾಯಿತು. ಮಂದಬೆಳಕಿನ ನಿಮಿತ್ತ ನಿಗದಿತ ಅವಧಿಗೂ ಮುನ್ನವೇ ಆಟ ನಿಂತಾಗ ಭಾರತ ತಂಡ ಭಾರವಾದ ಹೆಜ್ಜೆಗಳನ್ನಿಡುತ್ತಾ ಪೆವಿಲಿಯನ್‌ ದಾರಿ ಹುಡುಕಿದರೆ, ದಿನದ ಹೀರೋ ಕ್ರಿಸ್ ವೋಕ್ಸ್ ಸಾರ್ಥಕ ಇನ್ನಿಂಗ್ಸ್‌ನೊಂದಿಗೆ ಕರನ್ ಜತೆಗೆ ಹೆಜ್ಜೆ ಹಾಕಿದರು.

ಮೊದಲ ದಿನದಾಟ ಮಳೆಯಿಂದಾಗಿ ಸಂಪೂರ್ಣವಾಗಿ ತೊಯ್ದು ಹೋದ ಮೇಲೆ ಎರಡನೇ ದಿನದಾಟವೂ ಹೆಚ್ಚೂ ಕಮ್ಮಿ ವರುಣ ಆಟಕ್ಕೆ ಅಡ್ಡಿಪಡಿಸಿದ್ದ. ಆದಾಗ್ಯೂ, ಮಳೆ ನಿಂತ ನಂತರದ ಆಟದಲ್ಲಿ ಭಾರತ ತಂಡ ೧೦೭ ರನ್‌ಗಳಿಗೆ ಸರ್ವಪತನ ಕಂಡಿತ್ತು. ಇನ್ನು, ಮೂರನೇ ದಿನದಾಟ ಮೊದಲೆರಡು ಅವಧಿಯಲ್ಲಿ ಭಾರತದ ಹಿಡಿತದಲ್ಲಿ ಇತ್ತಾದರೂ, ಜಾನಿ ಹಾಗೂ ಕ್ರಿಸ್ ವೋಕ್ಸ್ ಕ್ರೀಸ್‌ಗೆ ಕಚ್ಚಿ ನಿಂತ ಬಳಿಕ ಕೈಜಾರಿತು.

ಕ್ರಿಸ್ ವೋಕ್ಸ್‌ ಜತೆಯಾಟಕ್ಕೂ ಮುನ್ನ ಜಾನಿ ಮತ್ತು ಜೋಸ್ ಬಟ್ಲರ್ (೨೪) ಐದನೇ ವಿಕೆಟ್‌ಗೆ ತಾಳ್ಮೆಯ ೪೨ ರನ್ ಕಲೆಹಾಕಿದರು. ೨೭ನೇ ಓವರ್‌ನಲ್ಲಿ ಇಂಗ್ಲೆಂಡ್ ೧೦೦ ರನ್ ಗಡಿ ದಾಟಿತು. ಮೊಹಮದ್ ಶಮಿ (೭೪ಕ್ಕೆ ೩) ಮತ್ತು ಇಶಾಂತ್ ಶರ್ಮಾ ಪ್ರಖರ ದಾಳಿಯ ಮಧ್ಯೆಯೂ ಇಂಗ್ಲೆಂಡ್ ವಿಚಲಿತವಾಗಲಿಲ್ಲ. ಹಾಗೆ ವಿಚಲಿತವಾದದ್ದು ಮೇಲಿನ ಕ್ರಮಾಂಕವಷ್ಟೆ.

ಆರಂಭಿಕರಾದ ಅಲೆಸ್ಟೈರ್ ಕುಕ್ (೨೧) ಮತ್ತು ಕೀಟನ್ ಜೆನ್ನಿಂಗ್ಸ್ (೧೧) ಹಾಗೂ ನಾಯಕ ಜೋ ರೂಟ್ (೧೯) ಮತ್ತು ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಓಲ್ಲಿ ಪೋಪ್ (೨೮) ಕೂಡಾ ಶೀಘ್ರಗತಿಯಲ್ಲಿ ವಿಕೆಟ್ ಕೈಚೆಲ್ಲಿದರು. ಎಜ್‌ಬ್ಯಾಸ್ಟನ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದ ಕುಕ್, ಲಾರ್ಡ್ಸ್‌ನಲ್ಲಿ ಪುಟಿದೇಳುವ ಸೂಚನೆ ನೀಡಿದರು. ೨೫ ಎಸೆತಗಳನ್ನು ಎದುರಿಸಿದ ಅವರು, ಆಕರ್ಷಕ ೪ ಬೌಂಡರಿಗಳೊಂದಿಗೆ ಗಮನ ಸೆಳೆದರಾದರೂ, ಕ್ರೀಸ್‌ಗೆ ಕಚ್ಚಿನಿಲ್ಲಲು ವಿಫಲವಾದರು.

ಕಳೆದ ಪಂದ್ಯದಲ್ಲಿ ಆರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದ್ದ ಕುಕ್, ಈ ಬಾರಿ ಇಶಾಂತ್ ಶರ್ಮಾ ಬೌಲಿಂಗ್‌ನಲ್ಲಿ ದಿನೇಶ್ ಕಾರ್ತಿಕ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಇದಕ್ಕೂ ಮುನ್ನ ೮ನೇ ಓವರ್‌ನಲ್ಲಿ ಕೀಟನ್ ಜೆನ್ನಿಂಗ್ಸ್ ಅವರನ್ನು ಮೊಹಮದ್ ಶಮಿ ಎಲ್‌ಬಿ ಬಲೆಗೆ ಕೆಡವಿದರೆ, ೨೫ನೇ ಓವರ್‌ನಲ್ಲಿ ಜೋ ರೂಟ್ ಕೂಡಾ ಶಮಿಯ ಮೋಹಕ ಸ್ಪೆಲ್‌ನಲ್ಲಿ ಎಲ್‌ಬಿ ಸುಳಿಗೆ ಸಿಲುಕಿದರು. ೮೯ ರನ್‌ಗಳಿಗೆ ೪ ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಇನ್ನಿಂಗ್ಸ್‌ಗೆ ಜಾನಿ ಮತ್ತು ವೋಕ್ಸ್ ಜತೆಯಾಟ ಜೀವಸೆಲೆಯಾಯಿತು.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನ್ನಿಂಗ್ಸ್: ೩೫.೨ ಓವರ್‌ಗಳಲ್ಲಿ ೧೦೭/೧೦ (ವಿರಾಟ್ ಕೊಹ್ಲಿ ೨೩, ಆರ್ ಅಶ್ವಿನ್ ೨೯; ಜೇಮ್ಸ್ ಆ್ಯಂಡರ್ಸನ್ ೨೦ಕ್ಕೆ ೫, ಕ್ರಿಸ್ ವೋಕ್ಸ್ ೧೯ಕ್ಕೆ ೨); ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ೮೧ ಓವರ್‌ಗಳಲ್ಲಿ ೩೫೭/೬ (ಕ್ರಿಸ್ ವೋಕ್ಸ್ ೧೨೦*, ಜಾನಿ ಬೇರ್‌ಸ್ಟೊ ೯೩; ಮೊಹಮದ್ ಶಮಿ ೭೪ಕ್ಕೆ ೩, ಹಾರ್ದಿಕ್ ಪಾಂಡ್ಯ ೬೬ಕ್ಕೆ ೨).

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More