ಏಷ್ಯಾ ಕ್ರೀಡಾಕೂಟ | ತರಬೇತುದಾರರ ಪಾತ್ರ ಕುರಿತು ಪ್ರಶ್ನಿಸಿದ ಸ್ಕ್ವಾಶ್ ತಂಡ

ಪ್ರತಿಷ್ಠಿತ ಏಷ್ಯಾ ಕ್ರೀಡಾಕೂಟ ಸನ್ನಿಹಿತವಾಗುತ್ತಿದ್ದು, ಇದೇ ಹೊತ್ತಲ್ಲಿ ಭಾರತೀಯ ಸ್ಕ್ವಾಶ್ ತಂಡ, ತರಬೇತುದಾರರಾದ ಸೈರಸ್ ಪೂಂಚಾ ಹಾಗೂ ಭುವನೇಶ್ವರಿ ಕುಮಾರಿ ಅವರ ಪಾತ್ರವನ್ನು ಪ್ರಶ್ನಿಸಿದೆ. ಏಷ್ಯಾಡ್‌ನಲ್ಲಿ ಇವರು ಆಡಳಿತಗಾರರಾಗಷ್ಟೇ ಕಾರ್ಯನಿರ್ವಹಿಸಬಹುದು ಎಂತಲೂ ತಂಡ ವಾದಿಸಿದೆ

ಇದೇ ಶನಿವಾರದಿಂದ (ಆ.೧೮) ಆರಂಭವಾಗಲಿರುವ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ಗರಿಷ್ಠ ಪದಕಗಳನ್ನು ಗೆಲ್ಲುವ ಗುರಿ ಹೊತ್ತಿದೆ. ಪ್ರಸ್ತುತ ಕೂಟಕ್ಕೆ ಸ್ಕ್ವಾಶ್ ವಿಭಾಗದಲ್ಲಿ ಭಾರತ ತಂಡದ ಎಂಟು ಮಂದಿ ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ ಮತ್ತು ಈ ಎಂಟು ಮಂದಿ ಆಟಗಾರರಿಗೆ ಪೂರ್ಣ ಪ್ರಮಾಣದ ಕೋಚ್ ಇಲ್ಲ. ಮೇಲಾಗಿ, ಈ ಎಂಟು ಮಂದಿಯ ಪೈಕಿ ಬಹುಪಾಲು ಆಟಗಾರರು ಕುಮಾರಿ ಇಲ್ಲವೇ ಪೂಂಚಾ ಅವರಿಂದ ಕಾಯಂ ಆಗಿ ತರಬೇತಿ ಪಡೆದಿಲ್ಲ.

ಹದಿನಾರು ಬಾರಿಯ ರಾಷ್ಟ್ರೀಯ ಚಾಂಪಿಯನ್ ಕುಮಾರಿಯ ಅರ್ಹತೆಯ ಕುರಿತು ಯಾರೂ ಚಕಾರ ಎತ್ತುವಂತಿಲ್ಲ. ಆದರೆ, ಅವರಿಗೆ ರಾಷ್ಟ್ರೀಯ ತಂಡದೊಟ್ಟಿಗೆ ಹೆಚ್ಚು ಒಡನಾಟವಿಲ್ಲ. ಏಷ್ಯಾ ಇಲ್ಲವೇ ಕಾಮನ್ವೆಲ್ತ್ ಕ್ರೀಡಾಕೂಟದಂಥ ಪ್ರಮುಖ ಕ್ರೀಡಾಕೂಟಗಳಲ್ಲಿ ಮಾತ್ರ ತಂಡದೊಟ್ಟಿಗೆ ಪ್ರಯಾಣ ಬೆಳೆಸುತ್ತಿದ್ದಾರೆ.

ಇನ್ನು, ಪೂಂಚಾ ಕುರಿತು ಹೇಳುವುದಾದರೆ, ಅವರು ಕಾಗದದಲ್ಲಷ್ಟೇ ಕೋಚ್ ಆಗಿದ್ದಾರೆ ಎಂಬ ಆರೋಪವಿದೆ. ವಾಸ್ತವವಾಗಿ ಓರ್ವ ತರಬೇತುದಾರನಿಗಿಂತ ಮಿಗಿಲಾಗಿ ಅವರು ಮ್ಯಾನೇಜರ್ ಆಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ತಿಂಗಳು ಚೆನ್ನೈನಲ್ಲಿ ನಡೆದಿದ್ದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿಯೂ ಅವರು ಸ್ಪರ್ಧಾವಳಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ : ಸ್ಕ್ವಾಶ್‌ನಲ್ಲಿ ಮಿಶ್ರಫಲ; ದೀಪಿಕಾ ಪಳ್ಳೀಕಲ್‌ಗೆ ನಿರಾಸೆ, ಜೋಶ್ನಾ ಕ್ವಾರ್ಟರ್‌ಗೆ

ಆದರೆ, ಈ ಇಬ್ಬರ ಕಾರ್ಯಚಟುವಟಿಕೆ ತರಬೇತಿ ನೀಡುವುದಕ್ಕಿಂತಲೂ ಮಿಗಿಲಾಗಿ ಆಡಳಿತಾತ್ಮಕ ಸಂಗತಿಗೇ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬುದೇ ಆಟಗಾರರ ಗುರುತರ ಆರೋಪ. ತಂಡಕ್ಕೆ ಬೇಕಿರುವುದು ಓರ್ವ ಮ್ಯಾನೇಜರ್‌ಗಿಂತಲೂ ಮಿಗಿಲಾಗಿ ತಾಂತ್ರಿಕ ಹಾಗೂ ತಂತ್ರಜ್ಞತೆ ಕುರಿತ ಸಲಹೆ ನೀಡುವವರು. ಮಾಜಿ ಕೋಚ್ ಅಶ್ರಫ್ ಕರಾರ್‌ಗುಯಿ ಅವರಿಂದ ಇದನ್ನು ಕೊಂಚ ನಿರೀಕ್ಷಿಸಬಹುದು. ಆದರೆ, ಸ್ಕ್ವಾಶ್ ಫೆಡರೇಷನ್ ಆಫ್ ಇಂಡಿಯಾ (ಎಸ್ಆರ್‌ಎಫ್‌ಐ) ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ ಈ ಈಜಿಪ್ಟ್ ಮೂಲದ ಕೋಚ್, ಏಪ್ರಿಲ್‌ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟಕ್ಕೂ ಮುನ್ನವೇ ರಾಜಿನಾಮೆ ಸಲ್ಲಿಸಿದ್ದರು.

“ಪಂದ್ಯಾವಳಿ ನಡೆಯುವ ಸಂದರ್ಭದಲ್ಲಿ ನಮಗೆ ಹೆಚ್ಚಿನ ತಾಂತ್ರಿಕ ಸಲಹೆಗಳ ಅಗತ್ಯ ಇರುತ್ತದೆ. ಇಲ್ಲಿವರೆಗೂ ನಾವು ಪೂರ್ಣಪ್ರಮಾಣದ ಕೋಚ್ ಅವರಿಂದ ತರಬೇತಿಗೊಂಡಿಲ್ಲ. ಭಾರತದಲ್ಲಿ ಇದುವರೆಗೂ ವಿಶ್ವದರ್ಜೆಯ ಸ್ಕ್ವಾಶ್ ಕೋಚ್ ಇಲ್ಲ. ಕೂಟದಲ್ಲಿ ಪೂಂಚಾ ಮತ್ತು ಕುಮಾರಿಯವರ ಪಾತ್ರ ಕೋಚ್‌ಗಿಂತಲೂ ಅಧಿಕಾರಿಯ ಪಾತ್ರದಂತಿದೆ. ಭಾರತೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಅಧಿಕಾರಿಗಳ ಜೊತೆಗೆ ಸಂಪರ್ಕ ಸಾಧಿಸುವುದು ಸೇರಿದಂತೆ ಕೋರ್ಟ್ ಆಚೆಗಿನ ಮಿಕ್ಕೆಲ್ಲ ಸಂಗತಿಗಳ ಬಗೆಗಷ್ಟೇ ಅವರು ಗಮನ ವಹಿಸುತ್ತಿದ್ದಾರೆ,’’ ಎಂದು ಸ್ಕ್ವಾಶ್ ತಂಡದ ಆಟಗಾರರು ದೂರಿದ್ದಾರೆ.

ಚೆನ್ನೈ ಮೂಲದ ಪೂಂಚಾ, ತವರಿನಲ್ಲೇ ಭಾರತೀಯ ಸ್ಕ್ವಾಶ್ ಅಕಾಡೆಮಿಯನ್ನು ಒಳಗೊಂಡಿದ್ದರೆ; ಕುಮಾರಿ, ನವದೆಹಲಿಯಲ್ಲಿ ತನ್ನದೇ ಅಕಾಡೆಮಿ ಹೊಂದಿದ್ದಾರೆ. ೨೦೧೪ರ ಏಷ್ಯಾ ಹಾಗೂ ಕಾಮನ್ವೆಲ್ತ್ ಕೂಟದ ವೇಳೆಯೂ ಇವರುಗಳು ತಂಡದೊಟ್ಟಿಗೆ ಪಯಣಿಸಿದ್ದರು. ಮಾತ್ರವಲ್ಲ, ಇದೇ ಏಪ್ರಿಲ್‌ನಲ್ಲಿ ನಡೆದಿದ್ದ ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್‌ ಕೂಟಕ್ಕೂ ತೆರಳಿದ್ದರು.

ಭಾರತ ಸ್ಕ್ವಾಶ್ ತಂಡವನ್ನು ಸರ್ಕಾರದ ವತಿಯಿಂದ ಕೂಟಗಳಿಗೆ ಕಳುಹಿಸಲಾಗುತ್ತಿದ್ದು, ಆಟಗಾರರಿಗೆ ಉಪಯುಕ್ತ ಸೇವೆ ಸಲ್ಲಿಸದ ಇವರುಗಳು ತೆರಿಗೆ ಹಣದಲ್ಲಿ ವಿದೇಶಿ ಪ್ರವಾಸ ಮಾಡುತ್ತಿದ್ದಾರೆ ಎಂಬುದು ಇದರಿಂದ ವೇದ್ಯವಾಗಿದೆ. ಈ ಬಗ್ಗೆ ಎಸ್‌ಆರ್‌ಎಫ್‌ಐನ ಅಧಿಕಾರಿಗಳು ಆಟಗಾರರ ಆರೋಪದ ಕುರಿತು ಪ್ರತಿಕ್ರಿಯೆಗೆ ಅಲಭ್ಯವಾಗಿದ್ದಾರೆ ಎಂದು ‘ಪಿಟಿಐ’ ವರದಿ ತಿಳಿಸಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More