ಇಂಡೋನೇಷ್ಯಾದಲ್ಲಿ ಹದಿನೆಂಟನೇ ಏಷ್ಯಾ ಕ್ರೀಡಾಕೂಟದ ಕಲರವ ಆರಂಭ

ವಿಶ್ವದ ಮೂರನೇ ಮಹಾನ್ ಕ್ರೀಡಾಕೂಟವಾದ ಏಷ್ಯಾ ಕ್ರೀಡಾಕೂಟದ ೧೮ನೇ ಆವೃತ್ತಿಗೆ ಚಾಲನೆ ಸಿಕ್ಕಿದೆ. ಅಧಿಕೃತವಾಗಿ ಕೂಟ ಶನಿವಾರದಿಂದ (ಆ.೧೮). ಆದರೂ, ಫುಟ್ಬಾಲ್-ಹ್ಯಾಂಡ್‌ಬಾಲ್‌ನಂಥ ಕ್ರೀಡೆಗಳು ಆರಂಭವಾಗಿ, ಇಂಡೋನೇಷ್ಯಾ ಜನತೆ ಕ್ರೀಡೋತ್ಸವದ ಸಂಭ್ರಮದಲ್ಲಿ ಮುಳುಗಿಹೋಗಿದೆ

ಜಕಾರ್ತದ ಬೀದಿಬೀದಿಗಳಲ್ಲೂ ದೊಡ್ಡ-ದೊಡ್ಡ ಭಿತ್ತಿಪತ್ರಗಳು, ಪೋಸ್ಟರ್‌ಗಳು ರಾರಾಜಿಸುತ್ತಿವೆ. ಇಂಡೋನೇಷ್ಯಾದ ಜನತೆ ಜಗತ್ತಿನ ಮೂರನೇ ಬಹುದೊಡ್ಡ ಕ್ರೀಡಾಕೂಟದ ಗುಂಗಲ್ಲಿ ಕಳೆದುಹೋಗಿದೆ. ಒಲಿಂಪಿಕ್ಸ್ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಟದ ಬಳಿಕ ಜಗತ್ತಿನ ಅತಿದೊಡ್ಡ ಮೂರನೇ ಬೃಹತ್ ಕ್ರೀಡಾಕೂಟಕ್ಕೆ ಇನ್ನು ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಇದೆ. ಆದಾಗ್ಯೂ, ಕೆಲವೊಂದು ಕ್ರೀಡೆಗಳು ಸೋಮವಾರವೇ (ಆ.೧೩) ಶುರುವಾಗಿದ್ದು, ಕ್ರೀಡಾಪ್ರೇಮಿಗಳ ನಾಡಿಮಿಡಿತವನ್ನು ಜೋರಾಗಿಸಿದೆ.

ಜಕಾರ್ತದಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾ ಕ್ರೀಡಾಕೂಟವು ಎಂಟು ವಿವಿಧ ಸ್ಥಳಗಳಲ್ಲಿ ಜರುಗಲಿದೆ. ಮಧ್ಯ ಜಕಾರ್ತದ ಗಿಲೊರಾ ಬಂಗ್ ಕರ್ನೋ ಕ್ರೀಡಾಂಗಣ ಮತ್ತು ಜಿಎಕ್ಸ್‌ಪೊ ಕೆಮಯೋರನ್ ಕ್ರೀಡಾಂಗಣಗಳು ಪ್ರಮುಖ ತಾಣಗಳಾಗಿವೆ. ಇನ್ನು, ಉತ್ತರ ಜಕಾರ್ತದ ಅಂಕೊಲ್ ಇಕೊಪಾರ್ಕ್, ದಕ್ಷಿಣ ಜಕಾರ್ತದ ಪಾಂಡಕ್ ಇಂದಾಹ್ ಗಾಲ್ಫ್ ಕೋರ್ಸ್, ಪುಲಮೋಸ್‌ನ ಜಕಾರ್ತ ಅಂತಾರಾಷ್ಟ್ರೀಯ ಈಕ್ವೆಸ್ಟ್ರಿಯನ್ ಪಾರ್ಕ್, ರವಾಮನ್‌ಗುನ್‌ನಲ್ಲಿನ ಜಕಾರ್ತ ಅಂತಾರಾಷ್ಟ್ರೀಯ ವೆಲೋಡ್ರೊಮ್, ಪೂರ್ವ ಜಕಾರ್ತದ ಜಿಒಆರ್ ಪಾಪ್ಕಿ ಹಾಗೂ ಸಿಬುಬರ್ ಮತ್ತು ತಮನ್ ಮಿನಿ ಇಂಡೋನೇಷಿಯಾ ಇಂದಾಹ್ ಕ್ರೀಡಾಂಗಣಗಳು ಕೂಡ ಕೂಟದ ಚುಂಬಕ ಸೆಳೆತಗಳಾಗಿವೆ.

ಕೂಟಕ್ಕೆ ಸಜ್ಜಾಗಿರುವ ಇನ್ನುಳಿದ ಕೆಲವು ತಾಣಗಳು ಆಡಳಿತಾತ್ಮಕ ವಲಯಗಳ ಆಸುಪಾಸಿನಲ್ಲಿದ್ದರೂ, ಬೇರೆ ಕ್ರೀಡಾಂಗಣಗಳ ಅಂತರ ಕೊಂಚ ದೂರದಲ್ಲಿದೆ. ಪ್ರವಾಸಿಗರು ಹಾಗೂ ಕ್ರೀಡಾಪ್ರೇಮಿಗಳು ಹೆಚ್ಚು ಗಲಿಬಿಲಿಗೊಳ್ಳದಂತೆ ‘ಜಕಾರ್ತ ಪೋಸ್ಟ್’ ಏಷ್ಯಾದ ಬಹುದೊಡ್ಡ ಕ್ರೀಡಾಕೂಟದ ಗೈಡ್ ಇಲ್ಲವೇ ಮಾರ್ಗದರ್ಶಿಯೊಂದನ್ನೂ ಸಜ್ಜುಗೊಳಿಸಿದೆ.

ಆತಿಥ್ಯದ ಅಚ್ಚುಕಟ್ಟು

ರಾಜಧಾನಿ ಜಕಾರ್ತದಲ್ಲಿ ಕೂಟಕ್ಕಾಗಿ ಅಣಿಗೊಳಿಸಲಾಗಿರುವ ಆತಿಥ್ಯ ಅಚ್ಚುಕಟ್ಟಿನಿಂದ ಕೂಡಿದೆ. ಕ್ರೀಡಾಂಗಣಗಳಿಗೆ ಸಮೀಪವಾಗಿರುವ ಸ್ಥಳಗಳಲ್ಲಿ ಪ್ರವಾಸಿಗರು ತಂಗಲು ವ್ಯವಸ್ಥೆ ಕಲ್ಪಿಸಿರುವ ಕೂಟದ ಸಂಘಟಕರು, ಊಟ-ವಸತಿಗೆ ಪ್ರವಾಸಿಗರು ತೊಂದರೆ ಅನುಭವಿಸದಂತೆ ನೋಡಿಕೊಂಡಿದ್ದಾರೆ. ಪ್ರಮುಖ ರೆಸ್ಟೋರೆಂಟ್‌ಗಳಾದ ಚುಂಗ್ ಹುವಾ ಹಾಗೂ ಮೆದಾನ್ ಬರುವಿಗೆ ಕೆಮಯೊರಾನ್‌ನ ಕ್ರೀಡಾಗ್ರಾಮದಿಂದ ಕೇವಲ ಹದಿನೈದು ನಿಮಿಷಗಳ ಪ್ರಯಾಣವಷ್ಟೆ.

ಚೀನಾದ ಅತಿ ಹಳೆಯದಾದ ರೆಸ್ಟೋರೆಂಟ್‌ಗಳಲ್ಲಿ ಈಗ ಸುಮಾತ್ರದ ಖಾದ್ಯಗಳೂ ಲಭ್ಯವಿವೆ. ಗುಲಾಯಿ ಕೆಪಾಲ ಇಕಾನ್ (ಮೀನಿನ ತಲೆಯ ಸಾರು), ರೆಂಡಾಂಗ್ (ತೆಂಗಿನ ಹಾಲಿನಲ್ಲಿ ತಯಾರಾದ ದನದ ಮಾಂಸದ ಖಾದ್ಯ), ಬುರುಂಗ್ ಪುನ್ನೈ ಗೊರೆಂಗ್ (ಪಾರಿವಾಳದ ಕರಿದ ಖಾದ್ಯ) ಮುಂತಾದ ವಿವಿಧ ಬಗೆಯ ಖಾದ್ಯಗಳನ್ನು ಭೋಜನಪ್ರಿಯರಿಗಾಗಿ ಸಜ್ಜುಗೊಳಿಸಲಾಗಿದೆ.

೨೪ ತಾಸುಗಳ ವೈದ್ಯಕೀಯ ಸೇವೆಗೆ ಆದ್ಯತೆ ನೀಡಲಾಗಿದೆ. ಪ್ರತಿಯೊಂದು ಕ್ಲಿನಿಕ್‌ಗಳು ಕ್ರೀಡಾಂಗಣದ ಸಮೀಪವೇ ಇರುವಂತೆ ನೋಡಿಕೊಳ್ಳಲಾಗಿದೆ. ಇನ್ನು, ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರತಿಯೊಂದು ಸೇವೆಯನ್ನೂ ಸಂಘಟಕರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅತಿಯಾದ ಬಿಸಿಲ ಝಳದಿಂದ ಪಾರಾಗಲು ಸನ್‌ಬ್ಲಾಕ್ ಕೊಡೆಗಳನ್ನು ಬಳಸುವಂತೆ ಸೂಚಿಸಲಾಗಿದ್ದು, ಪ್ರತಿಯೊಬ್ಬರೂ ಇಂಗ್ಲಿಷ್ ಮಾತನಾಡಲು ಸಾಧ್ಯವಾಗದ ಕಾರಣಕ್ಕಾಗಿ, ಪಾಕೆಟ್ ಡಿಕ್ಷನರಿ ಮತ್ತು ಭಾಷಾಂತರದ ಆ್ಯಪ್‌ಗಳಿಗೂ ಆದ್ಯತೆ ನೀಡಲಾಗಿದೆ.

ಇದನ್ನೂ ಓದಿ : ಏಷ್ಯಾ ಕ್ರೀಡಾಕೂಟಕ್ಕೆ ಕಡೆಗಣನೆ; ಎಎಫ್‌ಐ ವಿರುದ್ಧ ಸುಪ್ರೀಂ ಕದ ತಟ್ಟಿದ ಪ್ರಾಚಿ 

ಸೂತಕದ ನಡುವೆ ಸಂಭ್ರಮ!

ಶನಿವಾರದಿಂದ ಶುರುವಾಗುತ್ತಿರುವ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಒಂದು ವಿಧದಲ್ಲಿ ಸೂತಕದ ಮಧ್ಯೆ ಸಂಭ್ರಮದಂತಾಗಿದೆ. ದೇಶದ ಎರಡನೇ ಅತಿದೊಡ್ಡ ನಗರವಾಗಿರುವ ಸುರಬಾಯಾದಲ್ಲಿ ಕೇವಲ ಮೂರು ತಿಂಗಳ ಹಿಂದಷ್ಟೇ ಘಟಿಸಿದ ಭೀಕರ ಮಾರಣಾಂತಿಕ ಸ್ಫೋಟವೊಂದು ೧೩ ಜನರ ಜೀವ ತೆಗೆದಿತ್ತಲ್ಲದೆ, ಅಪಾರ ಆಸ್ತಿಪಾಸ್ತಿಯನ್ನೂ ಮಣ್ಣಾಗಿಸಿತ್ತು. ಕಳೆದೊಂದು ದಶಕದಲ್ಲೇ ಇಂಡೋನೇಷಿಯಾ ಕಂಡರಿಯದ ಆತ್ಮಹತ್ಯಾ ದಾಳಿ ಇದಾಗಿತ್ತೆಂಬುದು ಗಮನಾರ್ಹ.

ಈ ಆತ್ಮಹತ್ಯಾ ದಾಳಿ ಪ್ರಕರಣದಿಂದಾಗಿ ಇಂಡೋನೇಷಿಯಾ ಸರ್ಕಾರ ಕೂಟಕ್ಕೆ ಅತೀವ ಭದ್ರತೆಯನ್ನು ಒದಗಿಸಿದೆ. ಕ್ರೀಡಾಗ್ರಾಮ ಹಾಗೂ ಕ್ರೀಡಾಂಗಣಗಳಲ್ಲಿ ಅತಿ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಕೂಟದ ಪ್ರಮುಖಾಂಶಗಳು

  • ಹದಿನಾರು ಸಾವಿರ ಕ್ರೀಡಾ ಸ್ಪರ್ಧಾಳುಗಳು
  • ಆಗಸ್ಟ್ ೧೮ರಿಂದ ಸೆಪ್ಟೆಂಬರ್ ೨ರವರೆಗಿನ ಕೂಟದಲ್ಲಿ 50ಕ್ಕೂ ಹೆಚ್ಚಿನ ವಿವಿಧ ಕ್ರೀಡೆಗಳು
  • ಸ್ಪರ್ಧಾಕಣದಲ್ಲಿ ನಲವತ್ತೈದು ರಾಷ್ಟ್ರಗಳು
  • ೫೦ಕ್ಕೂ ಹೆಚ್ಚಿನ ಸ್ಪರ್ಧಾ ವಿಭಾಗಗಳಲ್ಲಿ ನಡೆಯಲಿರುವ ವಿವಿಧ ಕ್ರೀಡೆಗಳು
  • 6.6 ಟ್ರಿಲಿಯನ್ (ಇಂಡೋನೇಷಿಯಾ ರು.ಗಳಲ್ಲಿ) ಕೂಟಕ್ಕೆ ತಗಲಿರುವ ಖರ್ಚು. ಭಾರತೀಯ ರು.ಗಳಲ್ಲಿ ಅಂದಾಜು ೩೧,೫೧,೧೩,೭೦,೦೦೦
  • ಕ್ರೀಡಾಗ್ರಾಮದಲ್ಲಿನ ವಾಸದ ಸಾಮರ್ಥ್ಯ ೨೨,೨೭೨
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More