ಸಿನ್ಸಿನಾಟಿ ಓಪನ್‌: ದ್ವಿತೀಯ ಸುತ್ತಿಗೆ ಸೆರೆನಾ, ಮರ್ರೆಗೆ ಆರಂಭದಲ್ಲೇ ಆಘಾತ

ಇತ್ತೀಚೆಗಷ್ಟೇ ಮುಕ್ತಾಯ ಕಂಡ ಟೂರ್ನಿಯೊಂದರಲ್ಲಿ ವೃತ್ತಿಬದುಕಿನಲ್ಲೇ ಅತಿ ಹೀನಾಯ ಸೋಲನುಭವಿಸಿದ್ದ ಸೆರೆನಾ ವಿಲಿಯಮ್ಸ್, ಸಿನ್ಸಿನಾಟಿ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಆದರೆ, ಪುರುಷರ ವಿಭಾಗದಲ್ಲಿ ಬ್ರಿಟನ್‌ನ ಆಂಡಿ ಮರ್ರೆ ಮೊದಲ ಸುತ್ತಲ್ಲೇ ಸೋಲಿನ ಆಘಾತ ಅನುಭವಿಸಿದರು

23 ಗ್ರಾಂಡ್‌ಸ್ಲಾಮ್‌ಗಳ ಒಡತಿ ಸೆರೆನಾ ವಿಲಿಯಮ್ಸ್ ಮತ್ತೊಮ್ಮೆ ಟೆನಿಸ್ ಅಂಗಣಕ್ಕೆ ಮರಳಿದ್ದಾರೆ. ವೃತ್ತಿಬದುಕಿನಲ್ಲೇ ಅತಿ ಹೀನಾಯ ಸೋಲನುಭವಿಸಿದ ಹನ್ನೆರಡು ದಿನಗಳಿಗೆ ಸರಿಯಾಗಿ ಸೆರೆನಾ, ಸಿನ್ಸಿನ್ನಾಟಿ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಸೋಮವಾರ (ಆ.೧೩) ತಡರಾತ್ರಿ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ, ೬-೧, ೬-೨ ನೇರ ಸೆಟ್‌ಗಳಲ್ಲಿ ಆಸ್ಟ್ರೇಲಿಯಾದ ಡರಿಯಾ ಗಾವ್ರಿಲೋವಾ ವಿರುದ್ಧ ಜಯಭೇರಿ ಬಾರಿಸಿದರು.

ಆಗಸ್ಟ್ ೧ರಂದು ಸ್ಯಾನ್ ಜೋಸ್ ಪಂದ್ಯಾವಳಿಯಲ್ಲಿ ಸೆರೆನಾ, ಬ್ರಿಟನ್ ಆಟಗಾರ್ತಿ ಜೊಹಾನ್ನ ಕೊಂಟಾ ವಿರುದ್ಧ ೧-೬, ೦-೬ರ ಎರಡು ನೇರ ಸೆಟ್‌ಗಳಲ್ಲಿ ಸೋಲನುಭವಿಸಿ ವೃತ್ತಿಬದುಕಿನಲ್ಲೇ ಅತಿ ಹೀನಾಯ ಸೋಲಿಗೆ ಪಕ್ಕಾಗಿದ್ದರು. ಪಂದ್ಯದಲ್ಲಿ ಕೇವಲ ಒಂದೇ ಒಂದು ಗೇಮ್ ಜಯಿಸಿದ್ದ ಸೆರೆನಾ, ಆನಂತರದಲ್ಲಿ ಸತತ ೧೨ ಗೇಮ್‌ಗಳಲ್ಲಿ ಕೊಂಟಾ ಎದುರು ಪರಾಭವಗೊಂಡಿದ್ದರು. ಆದರೆ, ಸಿನ್ಸಿನ್ನಾಟಿಯ ಆರಂಭಿಕ ಸುತ್ತಿನಲ್ಲಿ ಕೇವಲ ೬೫ ನಿಮಿಷಗಳಲ್ಲೇ ಸೆರೆನಾ ಗೆಲುವಿನ ನಗೆಬೀರಿದ್ದಾರೆ.

ಸ್ಯಾನ್ ಜೋಸ್‌ ಟೂರ್ನಿಯಲ್ಲಿನ ಸೋಲಿನಿಂದಾಗಿ ಸೆರೆನಾ, ಕೆನಡಾದಲ್ಲಿ ಇತ್ತೀಚೆಗಷ್ಟೇ ಮುಗಿದ ರೋಜರ್ಸ್ ಕಪ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರು. ಸಿನ್ಸಿನ್ನಾಟಿಯಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಸೆರೆನಾ, ಗ್ರೌಂಡ್‌ಸ್ಟ್ರೋಕ್ ಶಾಟ್‌ಗಳಲ್ಲಿಯೂ ವಿಭಿನ್ನತೆ ತೋರಿದರು. ಎಂಟ ಏಸ್‌ಗಳನ್ನು ಸಿಡಿಸಿದ ಸೆರೆನಾ, ೨೭ ವಿನ್ನರ್‌ಗಳೊಂದಿಗೆ ಆಸ್ಟ್ರೇಲಿಯಾ ಆಟಗಾರ್ತಿಗೆ ಸೋಲುಣಿಸಿದರು. ಮುಂದಿನ ಸುತ್ತಿನಲ್ಲಿ ೩೬ರ ಹರೆಯದ ಸೆರೆನಾ, ಎಂಟನೇ ಶ್ರೇಯಾಂಕಿತೆ ಹಾಗೂ ಮಾಜಿ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ವಿರುದ್ಧ ಕಾದಾಡಲಿದ್ದಾರೆ.

ಇದನ್ನೂ ಓದಿ : ವೃತ್ತಿಬದುಕಿನಲ್ಲೇ ಅತಿ ಹೀನಾಯ ಸೋಲು ಕಂಡ ಸೆರೆನಾ ವಿಲಿಯಮ್ಸ್

ಕೊಂಟಾ ಶುಭಾರಂಭ

ವನಿತೆಯರ ಸಿಂಗಲ್ಸ್ ವಿಭಾಗದ ಇನ್ನೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಬ್ರಿಟನ್ ಆಟಗಾರ್ತಿ ಜೊಹಾನ್ನ ಕೊಂಟಾ ಬೆಲಾರಸ್‌ನ ಅರಿನಾ ಸಬಲೆಂಕೊ ವಿರುದ್ಧ ಮೂರು ಸೆಟ್‌ಗಳ ಹೋರಾಟದಲ್ಲಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಪ್ರಬಲ ಪೈಪೋಟಿ ನೀಡಿದ ಅರಿನಾ ಎದುರು ಕೊಂಟಾ ೬-೪, ೩-೬, ೬-೪ ಸೆಟ್‌ಗಳಿಂದ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಧಾವಿಸಿದರು.

ಮತ್ತೊಂದು ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಫ್ರಾನ್ಸ್ ಆಟಗಾರ್ತಿ ಕ್ರಿಸ್ಟಿನಾ ಮ್ಲೆಡೆನೋವಿಚ್ ಜರ್ಮನಿಯ ಜುಲಿಯಾ ಜಾರ್ಜಸ್ ವಿರುದ್ಧ ೬-೪, ೬-೨ ನೇರ ಸೆಟ್‌ಗಳಲ್ಲಿ ಗೆಲುವು ಪಡೆದರು. ಎರಡೂ ಸೆಟ್‌ಗಳಲ್ಲಿ ಆಕರ್ಷಕ ಆಟವಾಡಿದ ಕ್ರಿಸ್ಟಿನಾ, ಹೆಚ್ಚು ಪ್ರಯಾಸವಿಲ್ಲದೆಯೇ ಗೆಲುವಿನ ನಗೆಬೀರಿದರು.

ಮರ್ರೆಗೆ ಮತ್ತೆ ಸೋಲು

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ಮಾಜಿ ನಂ ೧ ಆಟಗಾರ ಆ್ಯಂಡಿ ಮರ್ರೆ ಮತ್ತೆ ಮುಗ್ಗರಿಸಿದರು. ಫ್ರಾನ್ಸ್ ಆಟಗಾರ ಲೂಕಾಸ್ ಪೌಲಿ ವಿರುದ್ಧದ ಹಣಾಹಣಿಯಲ್ಲಿ ೩೧ರ ಹರೆಯದ ಮರ್ರೆ ಮೂರು ಸೆಟ್‌ಗಳ ಸೆಣಸಾಟದಲ್ಲಿ ಪರಾಜಿತರಾದರು. ೨೪ರ ಹರೆಯದ ಪೌಲಿ, ೬-೧, ೧-೬, ೬-೪ ಸೆಟ್‌ಗಳಲ್ಲಿ ಬ್ರಿಟನ್ ಆಟಗಾರನನ್ನು ಮಣಿಸಿ ಮುಂದಿನ ಸುತ್ತಿಗೆ ಅರ್ಹತೆ ಗಿಟ್ಟಿಸಿದರು.

ಮೊದಲ ಸೆಟ್‌ನಲ್ಲೇ ಕಳಪೆ ಆಟವಾಡಿದ ಮರ್ರೆ ಆರು ಡಬಲ್ ಫಾಲ್ಟ್‌ಗಳಿಂದ ಬೆಲೆ ತೆತ್ತರು. ಏತನ್ಮಧ್ಯೆ, ಮೂರು ಬಾರಿ ಪೌಲಿ, ಬ್ರಿಟನ್ ಆಟಗಾರನ ಸರ್ವ್ ಮುರಿದರು. ಬೆನ್ನಿನ ಕೆಳಭಾಗದ ನೋವಿನಿಂದ ತೀವ್ರವಾಗಿ ಬಾಧಿಸಲ್ಪಡುತ್ತಿರುವ ಮರ್ರೆ, ಬಹುತೇಕ ಒಂದು ವರ್ಷ ಮಹತ್ವಪೂರ್ಣ ಪಂದ್ಯಾವಳಿಗಳಿಂದ ವಂಚಿತರಾಗಿದ್ದಾರೆ. ಈ ಋತುವಿನಲ್ಲಿ ನಾಲ್ಕನೇ ಟೂರ್ನಿಯಲ್ಲಿ ಆಡಲಿಳಿದಿದ್ದ ಮರ್ರೆ ಮತ್ತೆ ಸೋಲನುಭವಿಸಿದ್ದಾರೆ. ರೋಜರ್ಸ್ ಕಪ್ ಪಂದ್ಯಾವಳಿಯಿಂದಲೂ ಮರ್ರೆ ಹಿಂದೆ ಸರಿದಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More