ಕನ್ನಡಿಗ ಜೋಷಿಗೆ ನಿರಾಸೆ; ಮಹಿಳಾ ತಂಡದ ಕೋಚ್ ಆಗಿ ರಮೇಶ್ ಪೊವಾರ್ ಆಯ್ಕೆ

ಭಾರತ ವನಿತಾ ಕ್ರಿಕೆಟ್ ತಂಡದ ತರಬೇತುದಾರನ ಆಯ್ಕೆಯಲ್ಲಿ ಮುಂಬೈ ಪ್ರಧಾನ ಪಾತ್ರ ವಹಿಸಿದಂತೆ ಕಾಣುತ್ತಿದೆ. ವನಿತಾ ಕೋಚ್ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಸುನೀಲ್ ಜೋಷಿಗೆ ತೀವ್ರ ನಿರಾಸೆಯಾಗಿದ್ದು, ಮುಂಬೈ ಮೂಲದ ಮಾಜಿ ಆಫ್‌ಸ್ಪಿನ್ನರ್ ಪೊವಾರ್‌ಗೆ ಮಣೆ ಹಾಕಲಾಗಿದೆ

ಭಾರತ ತಂಡದ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್ ಪರ ಮುಂಬೈ ಕ್ರಿಕೆಟ್ ಪ್ರಬಲ ಲಾಬಿ ನಡೆಸಿದಂತಿದೆ. ಪ್ರಸಕ್ತ ಭಾರತ ವನಿತಾ ತಂಡದ ಹಂಗಾಮಿ ಕೋಚ್ ಆಗಿ ಮುಂದುವರಿಯುವಂತೆ ಪೊವಾರ್‌ಗೆ ಬಿಸಿಸಿಐ ಸೂಚನೆ ನೀಡಿದೆ. ನವೆಂಬರ್‌ನಲ್ಲಿ ನಡೆಯಲಿರುವ ೨೦೧೮ರ ಐಸಿಸಿ ವಿಶ್ವ ಟಿ೨೦ ಪಂದ್ಯಾವಳಿವರೆಗೂ ಪೊವಾರ್ ಕೋಚ್ ಆಗಿ ಮುಂದುವರಿಯಲು ನಿರ್ದೇಶಿಸಲಾಗಿದೆ.

ಮಹಿಳಾ ತಂಡದ ಕೋಚ್ ಸ್ಥಾನಕ್ಕೆ ಜುಲೈನಲ್ಲಿಯೇ ಪೊವಾರ್ ಅವರನ್ನು ಮೊದಲ ಮಧ್ಯಂತರ ಕೋಚ್ ಆಗಿ ನೇಮಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯ ನೇಮಿತ ಆಡಳಿತ ಸಮಿತಿಯು (ಸಿಒಎ), ಮಾಜಿ ಪ್ರಥಮದರ್ಜೆ ಕ್ರಿಕೆಟಿಗ ತುಷಾರ್ ಅರೋತೆ ಅವರನ್ನು ಯಾವುದೇ ವಿಚಾರಣೆಯನ್ನೂ ನಡೆಸದೆ ವನಿತಾ ಕೋಚ್ ತಂಡದ ಸ್ಥಾನದಿಂದ ವಜಾಗೊಳಿಸಿತ್ತು.

ವಾಸ್ತವವಾಗಿ ಸೋಮವಾರದಂದೇ (ಆ.೧೩) ಪೊವಾರ್ ಅವರ ಮುಂದುವರಿಕೆ ನಿರ್ಧಾರವನ್ನು ಖಚಿತಪಡಿಸಿತ್ತಾದರೂ, ಅಧಿಕೃತವಾಗಿ ಯಾವುದೇ ಘೋಷಣೆ ಆಗಿರಲಿಲ್ಲ. ವನಿತಾ ವಿಶ್ವಕಪ್ ಟಿ೨೦ ಪಂದ್ಯಾವಳಿಗೆ ಕೇವಲ ಮೂರು ತಿಂಗಳಷ್ಟೇ ಬಾಕಿ ಉಳಿದಿದ್ದು, ಪೊವಾರ್ ತಂಡವನ್ನು ಯಾವ ಬಗೆಯಲ್ಲಿ ಮಹತ್ವಪೂರ್ಣ ಟೂರ್ನಿಗೆ ಅಣಿಗೊಳಿಸುತ್ತಾರೆ ಎಂಬುದು ಕೂಡ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ : ಮಹಿಳಾ ತಂಡದ ಕೋಚ್ ಹುದ್ದೆಯ ೨೦ ಮಂದಿ ಅಭ್ಯರ್ಥಿಗಳ ರೇಸ್‌ನಲ್ಲಿ ಕನ್ನಡಿಗ ಜೋಷಿ

ಲೆವಲ್ ಮೂರರ ಕೋರ್ಸ್ ಮುಗಿಸಿ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಿಂದ ಹಿಂದಿರುಗಿರುವ ಪೊವಾರ್, ತರಬೇತಿ ಕುರಿತು ಯಾವುದೇ ಹೆಚ್ಚಿನ ಅನುಭವ ಹೊಂದಿಲ್ಲ. ಇಷ್ಟರ ಮಧ್ಯೆಯೂ ಪೊವಾರ್ ಅವರನ್ನೇ ವನಿತಾ ತಂಡದ ಕೋಚ್ ಆಗಿ ನೇಮಕ ಮಾಡಿರುವುದು ಕೂಡ ಹಲವಾರು ಪ್ರಶ್ನೆ ಹುಟ್ಟುಹಾಕಿದೆ. ಅಂದಹಾಗೆ, ವನಿತಾ ತಂಡಕ್ಕೆ ಪೂರ್ಣ ಪ್ರಮಾಣದ ಕೋಚ್ ನೇಮಸಲು ಸಾಕಷ್ಟು ಸಮಯಾವಕಾಶವೂ ಇಲ್ಲವೆಂಬುದರ ಹಿನ್ನೆಲೆಯಲ್ಲಿ ಪೊವಾರ್ ಅವರನ್ನು ನೇಮಿಸಲಾಗಿದೆ ಎಂಬ ಸಮರ್ಥನೆ ಕೂಡ ಹೊರಬಿದ್ದಿದೆ.

ಭಾರತ ವನಿತಾ ತಂಡದ ಕೋಚ್ ಸ್ಥಾನಕ್ಕೆ ಕನ್ನಡಿಗ ಹಾಗೂ ಅನುಭವಿ ಸುನೀಲ್ ಜೋಷಿ ಹೆಸರು ಕೂಡ ಕೇಳಿಬಂದಿತ್ತು. ಜಮ್ಮು ಕಾಶ್ಮೀರ ಸೇರಿದಂತೆ ಹಲವಾರು ತಂಡಗಳನ್ನು ಸಮರ್ಥವಾಗಿ ಮುನ್ನಡೆಸಿದ್ದ ಜೋಷಿ, ವನಿತಾ ತಂಡದ ಕೋಚ್ ಆಗಿ ಆಯ್ಕೆಯಾಗುವ ಕನಸು ಕಂಡಿದ್ದರಾದರೂ, ಅಂತಿಮವಾಗಿ ಈ ಘನ ಹುದ್ದೆ ಅವರ ಕೈಯಿಂದ ಸದ್ಯಕ್ಕಂತೂ ಜಾರಿದಂತಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More