ಸಿನ್ಸಿನ್ನಾಟಿ ಓಪನ್ | ಜೊಕೊ ಪಂದ್ಯಕ್ಕೆ ಮಳೆ ಕಾಟ; ಕೆರ್ಬರ್, ಸ್ಟೀಫನ್ಸ್ ಔಟ್

ಸಿನ್ಸಿನ್ನಾಟಿ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಜೊಕೊವಿಚ್ ಮತ್ತು ಗ್ರಿಗೊರ್ ಡಿಮಿಟ್ರೊವ್ ನಡುವಣದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಇತ್ತ, ವನಿತೆಯರ ವಿಭಾಗದಲ್ಲಿ ವಿಂಬಲ್ಡನ್ ಚಾಂಪಿಯನ್ ಏಂಜಲಿಕ್ ಕೆರ್ಬರ್ ಹಾಗೂ ಅಮೆರಿಕದ ಸ್ಲೊವಾನಿ ಸ್ಟೀಫನ್ಸ್ ಸೋಲಿನ ಆಘಾತ ಅನುಭವಿಸಿ ನಿರ್ಗಮಿಸಿದ್ದಾರೆ

ಹಾಲಿ ಚಾಂಪಿಯನ್ ಗ್ರಿಗೊರ್ ಡಿಮಿಟ್ರೊವ್ ವಿರುದ್ಧದ ಮೂರನೇ ಸುತ್ತಿನ ಪಂದ್ಯದಲ್ಲಿ ತಿಣಕುತ್ತಿದ್ದ ವೇಳೆ ೧೩ ಗ್ರಾಂಡ್‌ಸ್ಲಾಮ್ ವಿಜೇತ ನೊವಾಕ್ ಜೊಕೊವಿಚ್ ನೆರವಿಗೆ ಬಂದದ್ದು ಮಳೆ. ಸತತ ಮಳೆಯಿಂದಾಗಿ ರೋಜರ್ ಫೆಡರರ್ ಪಂದ್ಯ ಕೂಡ ಒಂದು ದಿನ ಮುಂದಕ್ಕೆ ಹೋಗುವಂತಾಯಿತು. ಸಿನ್ಸಿನ್ನಾಟಿ ಮಾಸ್ಟರ್ಸ್ ಟೂರ್ನಿಯಲ್ಲಿ ಐದು ಬಾರಿ ಫೈನಲ್ ತಲುಪಿದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲಲಾಗದ ಜೊಕೊವಿಚ್, ಆಟ ನಿಂತಾಗ ೨-೬, ೬-೩, ೨-೧ ಮುನ್ನಡೆ ಸಾಧಿಸಿದ್ದರು.

೯೦ ನಿಮಿಷಗಳ ಆಟವು ಮಳೆಯಿಂದಾಗಿ ಮೊದಲಿಗೆ ಸ್ಥಗಿತಗೊಂಡಿತು. ಮತ್ತೆ ಶುರುವಾದ ಮೂರನೇ ಸೆಟ್‌ನಲ್ಲಿ ಜೊಕೊವಿಚ್ ೨-೧ ಮುನ್ನಡೆ ಸಾಧಿಸಿದ್ದಾಗ ಮಳೆ ಇನ್ನೊಮ್ಮೆ ಆಟಕ್ಕೆ ಅಡ್ಡಿಪಡಿಸಿದ ನಿಮಿತ್ತ ಪಂದ್ಯ ಅಮಾನತುಗೊಂಡಿದ್ದು, ಶುಕ್ರವಾರ (ಆ.೧೭) ತಡರಾತ್ರಿ ಮತ್ತೆ ಶುರುವಾಗಲಿದೆ. ಟೆನಿಸ್ ಲೋಕದ ಒಂಬತ್ತು ಮಾಸ್ಟರ್ಸ್‌ ೧,೦೦೦ ಸ್ಪರ್ಧಾವಳಿಗಳಲ್ಲಿ ಜೊಕೊವಿಚ್ ಸಿನ್ಸಿನ್ನಾಟಿಯಲ್ಲಿ ಮಾತ್ರ ಗೆಲುವು ಸಾಧಿಸಿಲ್ಲ.

ಇದಕ್ಕೂ ಮುನ್ನ ನಡೆದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅರ್ಜೆಂಟೀನಾ ಆಟಗಾರ ಡೆಲ್ ಪೊಟ್ರೊ ಪ್ರತಿಕೂಲ ವಾತಾವರಣದಲ್ಲೂ ಗೆಲುವು ಸಾಧಿಸಿ ಮುನ್ನಡೆದರು. ದಕ್ಷಿಣ ಕೊರಿಯಾದ ಚುಂಗ್ ಹಿಯೊನ್ ವಿರುದ್ಧ ೬-೨, ೬-೩ ನೇರ ಸೆಟ್‌ಗಳಲ್ಲಿ ಪೊಟ್ರೊ ಗೆಲುವು ಪಡೆದರು. ಅಂತೆಯೇ, ಮಳೆಬಾಧಿತಗೊಂಡ ಮತ್ತೊಂದು ಪಂದ್ಯದಲ್ಲಿ ವಿಶ್ವದ ನಂ.೧ ಆಟಗಾರ್ತಿ ಸಿಮೋನಾ ಹ್ಯಾಲೆಪ್ ೪-೬, ೬-೩, ೬-೩ ಸೆಟ್‌ಗಳಿಂದ ಅಜ್ಲಾ ಟಾಮ್‌ಜಾನೊವಿಕ್ ವಿರುದ್ಧ ಗೆಲುವು ಸಾಧಿಸಿದರು.

ಇದನ್ನೂ ಓದಿ : ಸಿನ್ಸಿನ್ನಾಟಿ ಓಪನ್ ಟೆನಿಸ್: ತೃತೀಯ ಸುತ್ತಿಗೆ ಮುನ್ನಡೆದ ಸ್ಟೀಫನ್ಸ್

ಸ್ಟೀಫನ್ಸ್‌ ನಿರ್ಗಮನ

ಅಮೆರಿಕದ ಯುವ ಆಟಗಾರ್ತಿ ಹಾಗೂ ಯುಎಸ್ ಓಪನ್ ಹಾಲಿ ಚಾಂಪಿಯನ್ ಸ್ಲೊವಾನಿ ಸ್ಟೀಫನ್ಸ್ ಹೋರಾಟಕ್ಕೆ ತೆರೆಬಿದ್ದಿದೆ. ಮೂರನೇ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯನ್ ಆಟಗಾರ್ತಿ ಎಲಿಸಿ ಮೆರ್ಟೆನ್ಸ್, ಸ್ಟೀಫನ್ಸ್ ವಿರುದ್ಧದ ಕಠಿಣ ಹೋರಾಟದಲ್ಲಿ ೭-೬ (೧೦/೮) ಹಾಗೂ ೬-೨ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ವನಿತೆಯರ ಮೂರನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿತೆ ಏಂಜಲಿಕ್ ಕೆರ್ಬರ್, ಅಮೆರಿಕನ್ ಆಟಗಾರ್ತಿ ಮ್ಯಾಡಿಸನ್ ಕೀಸ್ ವಿರುದ್ಧ ಸೋಲನುಭವಿಸಿದರು.

ಫ್ಲಶಿಂಗ್ ಮೆಡೋಸ್‌ನಲ್ಲಿ ಕಳೆದ ವರ್ಷ ರನ್ನರ್ ಆಗಿದ್ದ ಮ್ಯಾಡಿಸನ್ ಕೀಸ್, ೨-೬ ೭-೬ (೭/೩) ೬-೪ ಸೆಟ್‌ಗಳಲ್ಲಿ ಗೆಲುವು ಪಡೆದರು. ಜರ್ಮನ್ ಆಟಗಾರ್ತಿಯ ವಿರುದ್ಧ ೪೪ ಅನಗತ್ಯ ತಪ್ಪುಗಳೆನ್ನೆಸಗಿದರೂ, ೫೫ ವಿನ್ನರ್‌ಗಳೊಂದಿಗೆ ಕೆರ್ಬರ್‌ಗೆ ಆಘಾತ ನೀಡಿದರು. ಮುಂದಿನ ಸುತ್ತಿನಲ್ಲಿ ಕೀಸ್, ಬೆಲಾರಸ್‌ನ ಅರಿನಾ ಸಬಲೆಂಕಾ ವಿರುದ್ಧ ಸೆಣಸಲಿದ್ದಾರೆ.

ಇನ್ನು, ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಕೂಡ ಕ್ವಾರ್ಟರ್‌ಫೈನಲ್ ತಲುಪಿದರು. ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ಗೆ ಆಘಾತ ನೀಡಿದ್ದ ಕ್ವಿಟೋವಾ, ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲೆಡೆನೋವಿಕ್ ವಿರುದ್ಧ ೬-೪, ೬-೨ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More