ವಿಶ್ವ ಸೈಕ್ಲಿಂಗ್‌ನಲ್ಲಿ ಭಾರತಕ್ಕೆ ಚಾರಿತ್ರಿಕ ರಜತ ತಂದಿತ್ತ ಯುವ ಸೈಕ್ಲಿಸ್ಟ್ ಇಸೋ

ಅಂಡಮಾನ್ ನಿಕೋಬಾರ್ ಮೂಲದ ಹದಿನೇಳರ ಹರೆಯದ ಇಸೋ ಆಲ್ಬೆನ್ ವಿಶ್ವ ಸೈಕ್ಲಿಂಗ್ ಸ್ಪರ್ಧಾವಳಿಯಲ್ಲಿ ಭಾರತಕ್ಕೆ ಐತಿಹಾಸಿಕ ರಜತ ಪದಕ ತಂದಿತ್ತಿದ್ದಾರೆ. ೨೦ ವರ್ಷದೊಳಗಿನವರ ಐಎಎಎಫ್ ವಿಶ್ವ ಅಥ್ಲೆಟಿಕ್ಸ್‌ನಲ್ಲಿ  ಹಿಮಾ ದಾಸ್ ಚರಿತ್ರೆ ಬರೆದಂತೆ ಇಸೋ ಸೈಕ್ಲಿಂಗ್‌ನಲ್ಲಿ ಮಿಂಚಿದ್ದಾರೆ

ಭಾರತೀಯ ಸೈಕ್ಲಿಂಗ್‌ನಲ್ಲಿ ಯುವ ಸೈಕ್ಲಿಸ್ಟ್ ಈಸೋ ಆಲ್ಬೆನ್ ಸ್ವರ್ಣ ಅಧ್ಯಾಯ ಬರೆದಿದ್ದಾರೆ. ಕಳೆದ ತಿಂಗಳಷ್ಟೇ ೨೦ ವರ್ಷದೊಳಗಿನವರ ಐಎಎಎಫ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಟ್ಟ ಹಿಮಾ ದಾಸ್ ಬಳಿಕ ಇದೀಗ ಆಲ್ಬೆನ್ ಅಂಥದ್ದೇ ಸಾಧನೆಯೊಂದಿಗೆ ಮಿಂಚು ಹರಿಸಿದ್ದಾರೆ. ಸ್ವಿಡ್ಜರ್ಲೆಂಡ್‌ನ ಏಗ್ಲೆಯಲ್ಲಿ ನಡೆದ ಯುಸಿಐ ಜೂನಿಯರ್ ಟ್ರ್ಯಾಕ್ ಸೈಕ್ಲಿಂಗ್ ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಕೀರಿನ್ ವಿಭಾಗದಲ್ಲಿ ಆಲ್ಬೆನ್ ಮೊದಲ ಸ್ಥಾನ ಪಡೆದರು. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ ಮೊಟ್ಟಮೊದಲ ಸೈಕ್ಲಿಸ್ಟ್ ಎನಿಸಿಕೊಂಡು ದಾಖಲೆ ಬರೆದಿದ್ದಾರೆ.

ಆಲ್ಬೆನ್ ಈ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಚಿನ್ನದ ಪದಕದಿಂದ ವಂಚಿತರಾದರು. ಪ್ರಬಲ ಪೈಪೋಟಿ ಒಡ್ಡಿದ ಜೆಕ್ ಗಣರಾಜ್ಯದ ಜಾಕುಬ್ ಸ್ಟಾಸ್ಟ್ನಿ, ಕೇವಲ ೦.೦೧೭ ಸೆಕೆಂಡುಗಳ ಅಂತರದಿಂದ ಆಲ್ಬೆನ್ ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಜಯಿಸಿದರು. “ನಾನು ಚಿನ್ನದ ಪದಕ ಗೆಲ್ಲಬಹುದಿತ್ತಾದರೂ, ಕೊಂಚದರಲ್ಲೇ ಅದರಿಂದ ವಂಚಿತವಾದೆ. ಆದರೆ, ಬೆಳ್ಳಿ ಸಾಧನೆ ಕೂಡ ನನ್ನಲ್ಲಿ ಸಂತೃಪ್ತಿ ತಂದಿದೆ,’’ ಎಂದು ಸ್ಪರ್ಧೆಯ ಬಳಿಕ ಆಲ್ಬೆನ್ ಉದ್ಗರಿಸಿದ್ದಾರೆ.

“ನನಗೆ ಹಾಗೂ ಭಾರತಕ್ಕೆ ಇದು ದೊಡ್ಡ ಪದಕವಾಗಿದೆ. ನನ್ನೀ ಸಾಧನೆಯ ಹಿಂದೆ ನೆರವಾದ ಆರ್ ಕೆ ಶರ್ಮಾ ನೇತೃತ್ವದ ನನ್ನ ತರಬೇತು ಪಡೆಯ ಅಪಾರ ಪರಿಶ್ರಮವಿದೆ,’’ ಎಂದು ಆಲ್ಬೆನ್ ಕೋಚಿಂಗ್ ತಂಡಕ್ಕೆ ಕೃತಜ್ಞತೆ ಅರ್ಪಿಸಿದರು. ಅಂದಹಾಗೆ, ಈ ವಿಭಾಗದಲ್ಲಿ ಕಜಕ್‌ಸ್ತಾನದ ಆಂಡ್ರೆ ಚುಗೆ ಕಂಚಿನ ಪದಕ ಗೆದ್ದು ನಿಟ್ಟುಸಿರುಬಿಟ್ಟರು.

ಇದನ್ನೂ ಓದಿ : ಭಾರತದ ಸ್ವರ್ಣ ಸಾಧಕಿ ಹಿಮಾ ದಾಸ್‌ಗೆ ಅಭಿನಂದನೆಗಳ ಮಹಾಪೂರ

ಭಾರತಕ್ಕೆ ಮೊಟ್ಟಮೊದಲ ಪದಕ

ಟ್ರ್ಯಾಕ್ ಸೈಕ್ಲಿಂಗ್ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊಟ್ಟಮೊದಲ ವಿಶ್ವ ಪದಕ ಇದಾಗಿದ್ದು, ಆ ದಿಸೆಯಲ್ಲಿ ಇಸೊ ಆಲ್ಬೆನ್ ಸಾಧನೆ ಚಾರಿತ್ರಿಕ ಎನಿಸಿದೆ. “ಯಾವುದೇ ಅವಘಡಕ್ಕೆ ಆಸ್ಪದವಾಗದಂತೆ ಮುನ್ನಡೆ ಕಾಯ್ದುಕೊಳ್ಳುವುದು ನನ್ನ ಗುರಿಯಾಗಿತ್ತು. ಆದರೆ, ಫೈನಲ್‌ನಲ್ಲಿ ಕೊಂಚದರಲ್ಲೇ ಮೊದಲ ಸ್ಥಾನ ಕೈತಪ್ಪಿತು. ಇಷ್ಟಾದರೂ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದೆನೆಂಬ ಸಂತಸ ಮತ್ತು ಸಂತೃಪ್ತ ಭಾವ ನನ್ನನ್ನು ಆವರಿಸಿದೆ,’’ ಎಂದು ಇಸೊ ಮತ್ತೊಮ್ಮೆ ಪುನರುಚ್ಚರಿಸಿದರು.

“ಎಲ್ಲ ಸಿಎಫ್‌ಐ ಸದಸ್ಯರಿಗೂ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಭಾರತೀಯ ಕ್ರೀಡಾ ಪ್ರಾಧಿಕಾರ ನೀಡಿದ ನಮ್ಮ ಮೇಲೆ ಇರಿಸಿದ ವಿಶ್ವಾಸ, ನೀಡಿದ ಸಹಕಾರ ಮತ್ತು ನೆರವಿಗೆ ವಂದನೆ ಸಲ್ಲಿಸುತ್ತಿದ್ದೇನೆ. ನಾಲ್ಕು ವರ್ಷಗಳ ಹಿಂದೆ ನಾವು ಅಂಜುತ್ತಲೇ ಆರಂಭಿಸಿದ ಈ ಪಯಣದಲ್ಲಿ ಕಡೆಗೂ ಗುರಿ ತಲುಪುವಲ್ಲಿ ಯಶ ಕಂಡಿದ್ದೇವೆ. ಆಲ್ಬೆನ್ ಅವರ ಈ ಐತಿಹಾಸಿಕ ಸಾಧನೆಗೆ ನೆರವಾದ ಪ್ರತಿಯೋರ್ವರಿಗೂ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಬಯಸುತ್ತೇನೆ,’’ ಎಂದು, ಪ್ರಸ್ತುತ ಏಷ್ಯಾಡ್‌ಗಾಗಿ ಭಾರತೀಯ ಸೈಕ್ಲಿಸ್ಟ್ ತಂಡದ ಜೊತೆಗಿರುವ ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (ಸಿಎಫ್‌ಐ) ಪ್ರಧಾನ ಕಾರ್ಯದರ್ಶಿ ಓಂಕಾರ್ ಸಿಂಗ್ ತಿಳಿಸಿದ್ದಾರೆ.

ಏತನ್ಮಧ್ಯೆ, ಇದೇ ಚಾಂಪಿಯನ್‌ಶಿಪ್‌ನ ಟೀಂ ವಿಭಾಗದಲ್ಲಿ ಭಾರತ ಯಾವುದೇ ಪದಕ ಗೆಲ್ಲಲಾಗಲಿಲ್ಲ. ಇಸೋ, ಮಾಯುರ್ ಪವಾರ್ ಮತ್ತು ಜೇಮ್ಸ್ ಕೀತೆಲ್ಪಕಮ್ ಸಿಂಗ್ ಅವರಿದ್ದ ಭಾರತದ ತ್ರಿವಳಿ ಜೋಡಿ ೨೦೦ ಮೀಟರ್ ಗುರಿಯನ್ನು ೧೫.೯೫೭ ಸೆಕೆಂಡುಗಳಲ್ಲಿ ಕ್ರಮಿಸಿದರೆ, ೪೦೦ ಮೀಟರ್ ಗುರಿಯನ್ನು ೨೬.೯೧೪ ಸೆಕೆಂಡುಗಳಲ್ಲಿ ಕ್ರಮಿಸಿ ಫೈನಲ್‌ಗೆ ಅರ್ಹತೆ ಗಳಿಸುವಲ್ಲಿ ವಿಫಲವಾಯಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More