ಸರಣಿ ಜೀವಂತವಾಗಿಡುವ ನಿರ್ಣಾಯಕ ಕದನಕ್ಕೆ ಅಣಿಯಾದ ಕೊಹ್ಲಿ ಪಡೆ

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯನ್ನು ಜೀವಂತವಾಗಿಡಲು ಕೊಹ್ಲಿ ಪಡೆ ಸರ್ವಸನ್ನದ್ಧವಾಗಿದೆ. ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಜ್‌ನಲ್ಲಿ ಶನಿವಾರದಿಂದ (ಆ.೧೮) ಶುರುವಾಗಲಿರುವ ಮೂರನೇ ಟೆಸ್ಟ್ ಪಂದ್ಯ ಭಾರತ ತಂಡಕ್ಕೆ ಮಾಡು ಇಲ್ಲವೇ ಮಡಿಯಂತಿದ್ದರೆ, ಇಂಗ್ಲೆಂಡ್ ಸರಣಿ ಮೇಲೆ ಕಣ್ಣಿಟ್ಟಿದೆ

ಮೊದಲ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಅದರಲ್ಲೂ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿನ ಇನ್ನಿಂಗ್ಸ್ ಸೋಲಿನಿಂದ ದಿಕ್ಕೆಟ್ಟಂತಾಗಿರುವ ಭಾರತ ತಂಡಕ್ಕೆ ಈಗ ಮತ್ತೊಂದು ಸತ್ವಪರೀಕ್ಷೆ ಎದುರಾಗಿದೆ. ಎಜ್‌ಬ್ಯಾಸ್ಟನ್‌ ಪಂದ್ಯದಲ್ಲಿನ ೩೧ ರನ್ ಸೋಲಿನ ಬಳಿಕ ಲಾರ್ಡ್ಸ್ ಮೈದಾನದಲ್ಲಿ ಇನ್ನಿಂಗ್ಸ್ ಮತ್ತು ೧೫೯ ರನ್ ಸೋಲು ಭಾರತ ತಂಡದ ಆತ್ಮವಿಶ್ವಾಸವನ್ನು ಘಾಸಿಗೊಳಿಸಿದ್ದು, ಇದೀಗ ಸರಣಿಯಲ್ಲಿ ಪುಟಿದೆದ್ದು ನಿಲ್ಲಬೇಕಾದ ಒತ್ತಡಕ್ಕೆ ಕೊಹ್ಲಿ ಬಳಗ ಸಿಲುಕಿದೆ.

ಕ್ಯಾಪ್ಟನ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಶತಾಯ ಗತಾಯ ನಾಟಿಂಗ್‌ಹ್ಯಾಮ್ ಪಂದ್ಯವನ್ನು ಗೆದ್ದು ಸರಣಿಯನ್ನು ೨-೧ರಿಂದ ಜೀವಂತವಾಗಿಡುವ ಸಂಕಲ್ಪ ತೊಟ್ಟಿದೆ. ಇದಕ್ಕೆ ಪೂರಕ ಎಂಬಂತೆ ನಾಟಿಂಗ್‌ಹ್ಯಾಮ್‌ ಪಂದ್ಯಗಳಲ್ಲಿನ ಫಲಿತಾಂಶವು ಇಂಗ್ಲೆಂಡ್ ಮಿಶ್ರಫಲ ಅನುಭವಿಸಿದ್ದು, ಕೊಹ್ಲಿ ಪಡೆ ಇದರ ಲಾಭ ಪಡೆಯುವ ಸನ್ನಾಹದಲ್ಲಿದೆ.

ಗೆಲ್ಲಲೇಬೇಕಾದ ಅನಿವಾರ್ಯ ಒತ್ತಡದಲ್ಲಿರುವ ಭಾರತ, ಆಡುವ ಅಂತಿಮ ಇಲೆವೆನ್‌ನಲ್ಲಿ ಮತ್ತೆ ಕೆಲವೊಂದು ಬದಲಾವಣೆಗೆ ಮುಂದಾಗಿರುವುದು ಈಗಾಗಲೇ ಖಚಿತವಾಗಿದೆ. ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ವೈಫಲ್ಯದಿಂದಾಗಿ ಅವರ ಸ್ಥಾನಕ್ಕೆ ೨೦ರ ಹರೆಯದ ರಿಷಭ್ ಪಂತ್ ಆಗಮಿಸುವುದು ಕೂಡಾ ಖಚಿತವಾಗಿದೆ. ಕಳೆದೆರಡು ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ನಲ್ಲಿ ಕಾರ್ತಿಕ್ ೦, ೨೦, ೧ ಮತ್ತು ೦ಗೆ ವಿಕೆಟ್ ಒಪ್ಪಿಸಿರುವುದು ಅವರ ಟೆಸ್ಟ್ ಭವಿಷ್ಯದ ಮೇಲೂ ಕರಿನೆರಳು ಬೀರಿದೆ.

ವಿಶ್ವಾಸದಲ್ಲಿ ಕೊಹ್ಲಿ

ಮೊದಲ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದ್ದರೂ, ಸರಣಿಯಲ್ಲಿ ಪುಟಿದೇಳಲು ಇನ್ನೂ ಅವಕಾಶವಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ನಾಯಕ ವಿರಾಟ್ ಕೊಹ್ಲಿ ವಿಶ್ವಾಸದಲ್ಲಿದ್ದಾರೆ. ಯುವ ಆಟಗಾರ ರಿಷಭ್ ಪಂತ್ ಸೇರ್ಪಡೆ ತಂಡಕ್ಕೆ ನೆರವಾಗಬಹುದು ಎಂಬ ಆಶಯ ಇರಿಸಿಕೊಳ್ಳಲಾಗಿದೆ. ಒಂದು ತ್ರಿಶತಕ ಸೇರಿದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ೫೪ಕ್ಕೂ ಹೆಚ್ಚು ಸರಾಸರಿ ಹೊಂದಿರುವ ಪಂತ್, ಇಂಗ್ಲೆಂಡ್ ನೆಲದಲ್ಲಿ ಯಶ ಕಾಣುವ ತವಕದಲ್ಲಿದ್ದಾರೆ.

ಆದರೆ, ಅವರಿಗೆ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್ ಹಾಗೂ ಸ್ಯಾಮ್ ಕರನ್‌ರಂಥ ಪ್ರಚಂಡರ ದಾಳಿಯನ್ನು ಪಂತ್ ಎದುರಿಸಬೇಕಿದೆ. ಪಂತ್ ಪದಾರ್ಪಣೆ ಯಶಸ್ವಿಯಾಗುವುದರ ಜತೆಗೆ ಮೊದಲ ಎರಡೂ ಟೆಸ್ಟ್ ಪಂದ್ಯಗಳಿಗೆ ಗಾಯದ ಸಮಸ್ಯೆಯಿಂದ ಅಲಭ್ಯವಾಗಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಮೊನಚಿನ ದಾಳಿಯಿಂದ ಮಿಂಚಬಲ್ಲರಾದರೆ ಕೊಹ್ಲಿ ಪಡೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಪುಟಿದೇಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮುರಳಿ-ರಾಹುಲ್ ಸ್ಥಾನ ಉಳಿಸಿಕೊಳ್ಳುವರೇ?

ಆರಂಭಿಕರಾದ ಮುರಳಿ ವಿಜಯ್ ಹಾಗೂ ಶಿಖರ್ ಧವನ್ ಜತೆಗೆ ಕನ್ನಡಿಗ ಕೆ ಎಲ್ ರಾಹುಲ್ ಪೈಕಿ ಯಾರು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುತ್ತಾರೆ ಎಂಬುದು ಕೂಡಾ ಕೌತುಕ ಕೆರಳಿಸಿದೆ. ದಕ್ಷಿಣ ಆಫ್ರಿಕಾ ಹಾಗೂ ಪ್ರಸ್ತುತ ಇಂಗ್ಲೆಂಡ್ ಪ್ರವಾಸವನ್ನೂ ಸೇರಿದಂತೆ ಮುರಳಿ ವಿಜಯ್ ೧೦ ವಿದೇಶಿ ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಗಳಿಸಿರುವುದು ಕೇವಲ ೧೨೦ ರನ್‌ಗಳನ್ನಷ್ಟೆ. ಕೇವಲ ೧೨.೮ ಬ್ಯಾಟಿಂಗ್ ಸರಾಸರಿ ಹೊಂದಿರುವ ಮುರಳಿ ವಿಜಯ್‌ಗೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಮತ್ತೊಂದು ಅವಕಾಶ ನೀಡುವ ಕುರಿತು ಚಿಂತಾಕ್ರಾಂತವಾಗಿದೆ. ಆದಾಗ್ಯೂ ಗೆಲ್ಲಲೇಬೇಕಿರುವ ಪಂದ್ಯದಲ್ಲಿ ಅವರಿಗೆ ಅವಕಾಶ ಕಲ್ಪಿಸಿದರೂ ಅಚ್ಚರಿಯಿಲ್ಲ.

ಇನ್ನು, ಧವನ್ ವಿಷಯಕ್ಕೆ ಬರುವುದಾದರೆ, ದಕ್ಷಿಣ ಆಫ್ರಿಕಾ ವಿರುದ್ಧ ೧೭.೭೫ರ ಸರಾಸರಿಯಾದರೆ, ಇಂಗ್ಲೆಂಡ್ ವಿರುದ್ಧದ ಈ ಎರಡು ಟೆಸ್ಟ್ ಪಂದ್ಯಗಳಲ್ಲಿ ಹಾಗೂ ಇಂಗ್ಲೆಂಡ್‌ ನೆಲದಲ್ಲಿ ಅವರ ಬ್ಯಾಟಿಂಗ್ ಸರಾಸರಿ ೨೦.೧೨. ಆದರೆ, ಈ ಎರಡೂ ಅಂಕಿಅಂಶಗಳ ಮಧ್ಯೆ ಧವನ್ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಕ್ರಮವಾಗಿ ೬೮.೯೩ ಮತ್ತು ೫೭.೨೯. ಬಹುಶಃ ಮ್ಯಾನೇಜ್‌ಮೆಂಟ್ ಈ ಅಂಕಿಅಂಶವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯನ್ನು ಅಲ್ಲಗಳೆಯಾಗದು.

ಇನ್ನು, ಇನ್ನಿಂಗ್ಸ್ ಆರಂಭಿಸುವ ದಿಸೆಯಲ್ಲಿ ಧವನ್ ಮತ್ತು ರಾಹುಲ್ ಮಧ್ಯೆ ಪೈಪೋಟಿ ಕೂಡಾ ಇದೆ. ವಿದೇಶಿ ಟೆಸ್ಟ್‌ಗಳಲ್ಲಿ ಮಧ್ಯಮ ಕ್ರಮಾಂಕವನ್ನು ನೆಚ್ಚಿಕೊಳ್ಳಲಾಗಿಲ್ಲ. ಇನ್ನು, ಕೊಹ್ಲಿಯಂತೂ ದೈಹಿಕವಾಗಿ ಈಗಷ್ಟೇ ಪೂರ್ಣ ಪ್ರಮಾಣದಲ್ಲಿ ಕ್ಷಮತೆ ಸಾಧಿಸಿದ್ದು, ಕರುಣ್ ನಾಯರ್‌ಗೆ ಅವಕಾಶ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಆದಾಗ್ಯೂ, ಟೀಮ್ ಇಂಡಿಯಾದ ಅಭ್ಯಾಸದ ವೇಳೆ ಕರುಣ್ ನಾಯರ್ ಕಾಣಿಸಿಕೊಂಡಿರಲಿಲ್ಲ. ಹೆಚ್ಚುವರಿ ಬ್ಯಾಟ್ಸ್‌ಮನ್ ಒಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಇನ್ನಷ್ಟೇ ತೀರ್ಮಾನ ತೆಗೆದುಕೊಳ್ಳಬೇಕಿದೆ.

ಟ್ರೆಂಟ್ ಬಿಜ್ ಪಿಚ್ ಕಳೆದ ೨೦೧೪ಕ್ಕಿಂತಲೂ ಈ ಬಾರಿ ಬೇರೆಯದೇ ಸ್ವರೂಪದಿಂದ ಕೂಡಿದೆ. ಕಳೆದ ಬಾರಿ ಭಾರತ, ೪೫೭ ಮತ್ತು ೩೯೧/೯ ಡಿಕ್ಲೇರ್‌ನೊಂದಿಗೆ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಇತ್ತ, ಇಂಗ್ಲೆಂಡ್, ೪೯೬ ರನ್ ಗಳಿಸಿತ್ತಲ್ಲದೆ, ಪಂದ್ಯ ಡ್ರಾ ಕಂಡಿತ್ತು.

ಇನ್ನು, ವಾತಾವರಣ ಕೂಡಾ ತಿಳಿಯಾದ ಆಕಾಶದಿಂದ ಕೂಡಿದ್ದು, ಮೊದಲ ನಾಲ್ಕು ದಿನ ಆಟ ಸುಗಮವಾಗಿ ಸಾಗುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯ ಮಳೆಯಿಂದಾಗಿ ಗಲಿಬಿಲಿಗೊಂಡಿತ್ತಲ್ಲದೆ, ಮೂರೂವರೆ ದಿನಗಳಲ್ಲೇ ರೋಚಕ ಫಲಿತಾಂಶ ಹೊಮ್ಮಿಸಿತ್ತು.

ಇದನ್ನೂ ಓದಿ : ಲಾರ್ಡ್ಸ್ ಟೆಸ್ಟ್ ತಂಡದ ಆಯ್ಕೆಯಲ್ಲಿ ನಾವು ಎಡವಿರುವುದು ನಿಜ ಎಂದ ವಿರಾಟ್

ಸರಣಿ ಮೇಲೆ ಇಂಗ್ಲೆಂಡ್ ಕಣ್ಣು

ಮೊದಲ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಇಂಗ್ಲೆಂಡ್, ಇದೀಗ ಸರಣಿ ಕೈವಶ ಮಾಡಿಕೊಳ್ಳುವ ಗುರಿ ಹೊತ್ತಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ವೇಗಿ ಜೇಮ್ಸ್ ಆ್ಯಂಡರ್ಸನ್ ೯ ವಿಕೆಟ್ ಗಳಿಸಿದರೆ, ಕ್ರಿಸ್ ವೋಕ್ಸ್ ಆಲ್ರೌಂಡ್ ಆಟದೊಂದಿಗೆ ವಿಜೃಂಭಿಸಿದ್ದರು. ಇನ್ನು, ಮೊದಲ ಪಂದ್ಯದ ಹೀರೋ ಬೆನ್ ಸ್ಟೋಕ್ಸ್ ನಾಟಿಂಗ್‌ಹ್ಯಾಮ್ ಟೆಸ್ಟ್‌ಗೆ ಮರಳಿದ್ದು, ಇಂಗ್ಲೆಂಡ್‌ನ ಸರಣಿ ಗೆಲುವಿಗೆ ಹೆಚ್ಚಿನ ಬಲ ತಂದಿದೆ.

ಮೊದಲ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ್ದ ನಾಯಕ ಜೋ ರೂಟ್, ಲಾರ್ಡ್ಸ್ ಟೆಸ್ಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ, ಕ್ರಿಸ್ ವೋಕ್ಸ್ ಮತ್ತು ವಿಕೆಟ್‌ಕೀಪರ್ ಜಾನಿ ಬೇರ್‌ಸ್ಟೋ ಅದ್ಭುತ ಜತೆಯಾಟವು ಪಂದ್ಯದ ಗತಿಯನ್ನೇ ಬದಲಿಸಿತ್ತಲ್ಲದೆ, ಇಂಗ್ಲೆಂಡ್ ಒಂದರ ಹಿಂದೊಂದರಂತೆ ಎರಡು ಗೆಲುವು ಸಾಧಿಸಲು ನೆರವಾಗಿದ್ದರು.

ಒಟ್ಟಾರೆ, ಭಾರತ ಮತ್ತು ಇಂಗ್ಲೆಂಡ್ ನಡುವಣದ ಮೂರನೇ ಟೆಸ್ಟ್ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ. ಎಲ್ಲಕ್ಕಿಂತ ಮಿಗಿಲಾಗಿ, ಪ್ರವಾಸಿ ತಂಡಕ್ಕಂತೂ ಈ ಪಂದ್ಯ ಅತಿ ಮಹತ್ವವಾಗಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿಇನ್ನಿಂಗ್ಸ್ ಸೋಲನುಭವಿಸಿದ ನಂತರದಲ್ಲಿ ಮಾಜಿ ಆಟಗಾರರು ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿಯತ್ತ ಕೆಂಗಣ್ಣು ಬೀರಿದ್ದರು.

ಇದೆಲ್ಲದರ ಮಧ್ಯೆ, ಬಿಸಿಸಿಐ ಈ ಇಬ್ಬರ ಸ್ಪಷ್ಟನೆ ಕೇಳುವ ಮಟ್ಟಕ್ಕೂ ಹೋಗಿತ್ತು. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ತಂಡದ ಆಯ್ಕೆಯಲ್ಲಿ ಎಡವಿದ್ದು ನಿಜ ಎಂದು ಕೊಹ್ಲಿ ಒಪ್ಪಿಕೊಂಡಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ನಾಟಿಂಗ್‌ಹ್ಯಾಮ್ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಯಾವ ತಂತ್ರಗಾರಿಕೆ ಅನುಸರಿಸುತ್ತಾರೆ ಎಂಬ ಬಗ್ಗೆ ಭಾರತೀಯ ಕ್ರಿಕೆಟ್ ಪ್ರೇಮಿಗಳಲ್ಲಿ ಕಾತರ ಗರಿಗೆದರಿದೆ.

ತಂಡಗಳು ಇಂತಿವೆ

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಮುರಳಿ ವಿಜಯ್, ಕೆ ಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್), ರಿಷಭ್ ಪಂತ್, ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ.

ಇಂಗ್ಲೆಂಡ್: ಜೋ ರೂಟ್ (ನಾಯಕ), ಅಲೆಸ್ಟೈರ್ ಕುಕ್, ಕೀಟನ್ ಜೆನ್ನಿಂಗ್ಸ್, ಜಾನಿ ಬೇರ್‌ಸ್ಟೋ, ಜೋಸ್ ಬಟ್ಲರ್, ಒಲಿವರ್ ಪೋಪ್, ಮೊಯೀನ್ ಅಲಿ, ಅದಿಲ್ ರಶೀದ್, ಜೇಮಿ ಪಾರ್ಟರ್, ಬೆನ್ ಸ್ಟೋಕ್ಸ್, ಸ್ಯಾಮ್ ಕರನ್, ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್ ಹಾಗೂ ಜೇಮಿ ಪಾರ್ಟರ್.

ಪಂದ್ಯ ಆರಂಭ: ಮಧ್ಯಾಹ್ನ ೩.೩೦ (ಭಾರತೀಯ ಕಾಲಮಾನ) | ನೇರಪ್ರಸಾರ: ಸೋನಿ ನೆಟ್ವರ್ಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More