ಬುಲ್ಸ್ ಕಟ್ಟಿಹಾಕಿ ಶುಭಾರಂಭ ಮಾಡಿದ ವಿನಯ್ ಸಾರಥ್ಯದ ಹುಬ್ಬಳ್ಳಿ ಟೈಗರ್ಸ್

ಪರಿಣಾಮಕಾರಿ ದಾಳಿಯೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸುವಲ್ಲಿ ಆರ್ ವಿನಯ್ ಕುಮಾರ್ ಯಶಸ್ವಿಯಾದರು. ಕೆಪಿಎಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ೬ ವಿಕೆಟ್ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು

ಆರಂಭಿಕ ಮೊಹಮದ್ ತಾಹ (೬೨: ೫೦ ಎಸೆತ, ೮ ಬೌಂಡರಿ, ೧ ಸಿಕ್ಸರ್) ದಾಖಲಿಸಿದ ಅರ್ಧಶತಕ ತಂಡದ ಕೈಹಿಡಿಯಿತು. ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಬಳಿಕವೇ ತಾಹ ವಿಕೆಟ್ ಒಪ್ಪಿಸಿದ್ದು. ಹದಿನೆಂಟನೇ ಓವರ್‌ನ ೪ನೇ ಎಸೆತದಲ್ಲಿ ಕೆಪಿ ಅಪ್ಪಣ್ಣ ತಾಹ ಅವರನ್ನು ರನೌಟ್ ಮಾಡಿದರು. ಒಂದೊಳ್ಳೆಯ ಜೊತೆಯಾಟ ಸಿಗದ ಹೊರತಾಗಿಯೂ ತಾಹ, ತಂಡವನ್ನು ವಿಜಯದತ್ತ ಮುನ್ನಡೆಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾದರು.

ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬುಲ್ಸ್‌, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 128 ರನ್‌ ಗಳಿಸಿ ವಿನಯ್ ಪಡೆಗೆ ಸಾಧಾರಣ ಗುರಿ ನೀಡಿತು. ಈ ಮೊತ್ತವನ್ನು ಇನ್ನೂ ಏಳು ಎಸೆತ ಬಾಕಿ ಇರುವಂತೆಯೇ ಅಂದರೆ, ೧೮.೫ ಓವರ್‌ಗಳಲ್ಲಿ ೬ ವಿಕೆಟ್ ಕಳೆದುಕೊಂಡು ಮುಟ್ಟುವುದರೊಂದಿಗೆ ಹುಬ್ಬಳ್ಳಿ ಟೈಗರ್ಸ್ ಗೆಲುವು ಸಾಧಿಸಿತು.

ಇದಕ್ಕೂ ಮುನ್ನ, ಮೊದಲ ಓವರ್‌ನಲ್ಲೇ ಬುಲ್ಸ್‌ಗೆ ಹೊಡೆತ ನೀಡಿದ ಹುಬ್ಬಳ್ಳಿ ತಂಡದ ನಾಯಕ ಆರ್ ವಿನಯಕುಮಾರ್, ಓವರ್‌ನ ಕೊನೆಯ ಎಸೆತದಲ್ಲಿ ಶಿಶಿರ್ ಭವಾನೆ ವಿಕೆಟ್ ಪಡೆದರು. ವಿನಯ್ ಎಸೆತವನ್ನು ಕಟ್ ಮಾಡಲು ಮುಂದಾದ ಶಿಶಿರ್, ವಿಕೆಟ್‌ ಕೀಪರ್ ನಿತಿನ್ ಭಿಲ್ಲೆಗೆ ಕ್ಯಾಚಿತ್ತು ಕ್ರೀಸ್ ತೊರೆದರು.

ಇದನ್ನೂ ಓದಿ : ಉತ್ತಪ್ಪ ಸ್ಫೋಟಕ ಆಟದಲ್ಲಿ ಶುಭಾರಂಭ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್

ಇತ್ತ, ನಾಯಕ ಭರತ್ ಚಿಪ್ಲಿ (29; 25 ಎಸೆತ, 2 ಬೌಂಡರಿ, 2 ಸಿಕ್ಸರ್) ಕೊಂಚ ಆತ್ಮವಿಶ್ವಾಸದಿಂದೊಂದಿಗೆ ಬ್ಯಾಟ್ ಬೀಸಲು ಮುಂದಾದರು. ಅವರಿಗೆ ಅನುರಾಗ್ ಬಾಜಪೇಯಿ ಕೂಡ ಸ್ವಲ್ಪ ಮಟ್ಟಿನ ಸಾಥ್ ನೀಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಈ ಜೋಡಿ 45 ರನ್‌ ಕಲೆಹಾಕಿತು. 9ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಮಹೇಶ್ ಪಟೇಲ್ ಎಸೆತವನ್ನು ಅನುರಾಗ್ ಮುನ್ನುಗ್ಗಿ ಹೊಡೆಯಲು ಯತ್ನಿಸಿದರಾದರೂ, ಚೆಂಡು ಅವರ ಹಿಡಿತಕ್ಕೆ ಸಿಗದ ಫಲವಾಗಿ, ವಿಕೆಟ್‌ ಕೀಪರ್ ನಿತಿನ್ ಅವರಿಂದ ಸ್ಟಂಪೌಟ್ ಆಗಿ ಹೊರನಡೆದರೆ, ಅದೇ ಓವರ್‌ನಲ್ಲಿ ಭರತ್ ಚಿಪ್ಲಿ ಕೂಡ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತದ್ದು ತಂಡದ ಇನ್ನಿಂಗ್ಸ್‌ಗೆ ಬಲವಾದ ಪೆಟ್ಟು ನೀಡಿತು.

ನಂತರ ಆಡಲಿಳಿದ ಮೀರ್ ಕೌನೇನ್ ಅಬ್ಬಾಸ್ ಕೇವಲ 4 ರನ್‌ ಗಳಿಸಿ ಕ್ರಾಂತಿ ಕುಮಾರ್ ಎಸೆತದಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತರೆ, ಕೆ ಎನ್ ಭರತ್ ರನ್‌ ಗಳಿಸುವ ಪ್ರಯತ್ನದಲ್ಲಿದ್ದರು. ನಂತರ ಬಂದ ಸುನೀಲ್ ರಾಜು ಕೂಡ ಮಹೇಶ್ ಪಟೇಲ್ ಎಸೆತದಲ್ಲಿ ವಿನಯಕುಮಾರ್ ಪಡೆದ ಕ್ಯಾಚ್‌ಗೆ ಔಟಾದರು. ಆದರೆ, ಕೆಳ ಕ್ರಮಾಂಕದಲ್ಲಿ ಎಂ ಜಿ ನವೀನ್ (೪೪: ೨೫ ಎಸೆತ, ೧ ಬೌಂಡರಿ, ೪ ಸಿಕ್ಸರ್) ಕೆಚ್ಚೆದೆಯ ಅಜೇಯ ಆಟ ತಂಡದ ಮೊತ್ತವನ್ನು ೧೦೦ರ ಗಡಿ ದಾಟಿಸಿತು.

ಸಂಕ್ಷಿಪ್ತ ಸ್ಕೋರ್

ಬಿಜಾಪುರ ಬುಲ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 128 (ಭರತ್ ಚಿಪ್ಲಿ 29, ಕೆ.ಎನ್. ಭರತ್ 19, ಎಂ.ಜಿ. ನವೀನ್ 4*4, ಆರ್. ವಿನಯಕುಮಾರ್ 19ಕ್ಕೆ1, ಕ್ರಾಂತಿಕುಮಾರ್ 33ಕ್ಕೆ1, ಐ. ಜಿ. ಅನಿಲ್ 28ಕ್ಕೆ 2, ಮಹೇಶ್ ಪಟೇಲ್ 16ಕ್ಕೆ 3 ಹುಬ್ಬಳ್ಳಿ ಟೈಗರ್ಸ್: ೧೮.೫ ಓವರ್‌ಗಳಲ್ಲಿ ೬ ವಿಕೆಟ್‌ಗೆ ೧೩೧ (ಮೊಹಮದ್ ತಾಹ ೬೨; ಸುನೀಲ್ ರಾಜು ೨೧/೨) ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ ೪ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ಮೊಹಮದ್ ತಾಹ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More