ಪಾಕ್ ಕ್ರಿಕೆಟಿಗ ನಾಸಿರ್ ಜೆಮ್ಷೆದ್‌ಗೆ ೧೦ ವರ್ಷಗಳ ನಿಷೇಧದ ಬರೆ ಎಳೆದ ಪಿಸಿಬಿ

ಚೊಚ್ಚಲ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (ಪಿಎಸ್ಎಲ್) ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ್ದ ಪಾಕಿಸ್ತಾನ ತಂಡದ ಮಾಜಿ ಆರಂಭಿಕ ಜೆಮ್ಷೆದ್‌ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ೧೦ ವರ್ಷ ನಿಷೇಧ ಹೇರಿದೆ. ಈ ನಿಷೇಧದಿಂದಾಗಿ ಜೆಮ್ಷೆಡ್‌ ಕ್ರಿಕೆಟ್ ಬದುಕು ಹೆಚ್ಚೂಕಡಿಮೆ ಮುಗಿದಂತಾಗಿದೆ

೨೦೧೭ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಸಿಲುಕಿದ್ದ ಹಾಗೂ ವಿಚಾರಣೆಗೂ ಸಹಕರಿಸದ ಹಿನ್ನೆಲೆಯಲ್ಲಿ ಜೆಮ್ಷೆದ್‌ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ. ಶುಕ್ರವಾರ (ಆ.೧೭) ಭ್ರಷ್ಟಾಚಾರ ತಡೆ ಟ್ರಿಬ್ಯುನಲ್ ಕಳಂಕಿತ ಕ್ರಿಕೆಟಿಗನಿಗೆ ಹತ್ತು ವರ್ಷಗಳ ನಿಷೇಧ ಹೇರಿದೆ.

ಪಾಕಿಸ್ತಾನ ಪರ ೪೮ ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನಾಡಿರುವ ಜೆಮ್ಷೆದ್‌, ಇದೇ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ೨೦೧೭ರ ಫೆಬ್ರವರಿಯಲ್ಲಿ ಎಲ್ಲ ಬಗೆಯ ಕ್ರಿಕೆಟ್‌ನಿಂದ ಅಮಾನತುಗೊಂಡಿದ್ದರು. ಆನಂತರ ಪಿಸಿಬಿಯ ಭ್ರಷ್ಟಾಚಾರ ತಡೆ ನಿಯಮವನ್ನು ಉಲ್ಲಂಘಿಸಿದ ತಪ್ಪಿಗಾಗಿ ಹಾಗೂ ಎಸಿಯು ನಡೆಸಿದ ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ಅವರು ಡಿಸೆಂಬರ್‌ನಲ್ಲಿ ಒಂದು ವರ್ಷ ನಿಷೇಧಕ್ಕೆ ಗುರಿಯಾಗಿದ್ದರು.

“ಪಿಎಸ್‌ಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಜೆಮ್ಷೆದ್‌ ಪ್ರಮುಖ ಸೂತ್ರಧಾರ. ಅವರ ಮೇಲಿನ ಹಲವಾರು ಆರೋಪಗಳು ಋಜುವಾತಾಗಿರುವ ಹಿನ್ನೆಲೆಯಲ್ಲಿ ೧೦ ವರ್ಷ ನಿಷೇಧ ಹೇರಲಾಗಿದೆ. ಇನ್ನು ಮುಂದೆ ಕ್ರಿಕೆಟ್‌ ಸಂಬಂಧಿತ ಚಟುವಟಿಕೆಗಳಲ್ಲಿ ಅವರು ಪಾಲ್ಗೊಳ್ಳುವಂತಿಲ್ಲ. ನಿಷೇಧದ ಅವಧಿಯ ನಂತರವೂ ಅವರು ಕ್ರಿಕೆಟ್ ಇಲ್ಲವೇ ಕ್ರಿಕೆಟ್ ಆಡಳಿತದಲ್ಲಿಯೂ ತೊಡಗಿಸಿಕೊಳ್ಳಲಾಗದು,’’ ಎಂದು ಪಿಸಿಬಿಯ ಕಾನೂನು ಸಲಹೆಗಾರ ತಫಜುಲ್ ರಿಜ್ವಿ ತಿಳಿಸಿದ್ದಾರೆ.

ಇದನ್ನೂ ಓದಿ : ಭಾರತ-ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್‌ ಪಂದ್ಯದ ಮೇಲೆ ಫಿಕ್ಸಿಂಗ್ ಕರಿನೆರಳು

ಜೆಮ್ಷೆದ್‌ ಪಿಎಸ್‌ಎಲ್‌ನ ಮೊದಲ ಎರಡು ಆವೃತ್ತಿಗಳಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ, ಕಳೆದ ವರ್ಷ ನಡೆದ ಟೂರ್ನಿಯಲ್ಲಿ ಘಟಿಸಿದ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಅವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಇನ್ನು, ಇದೇ ಹಗರಣದಲ್ಲಿ ಸಿಲುಕಿದ್ದ ಶಾರ್ಜೀಲ್ ಖಾನ್ ಮತ್ತು ಖಾಲಿದ್ ಲತೀಫ್ ಎರಡು ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದಾರೆ. ಅಂತೆಯೇ, ವೇಗಿ ಮೊಹಮದ್ ಇರ್ಫಾನ್ ಹಾಗೂ ಆಲ್ರೌಂಡರ್ ಮೊಹಮದ್ ನವಾಜ್ ಕ್ರಮವಾಗಿ ೧೨ ತಿಂಗಳು ಮತ್ತು ೨ ತಿಂಗಳು ನಿಷೇಧಕ್ಕೆ ಗುರಿಯಾಗಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More