ಉದ್ಘಾಟನಾ ಬೆರಗಿನಲ್ಲಿ ಏಷ್ಯಾಕೂಟಕ್ಕೆ ಇಂಡೋನೇಷ್ಯಾದ ಸಂಮೋಹಕ ಸ್ಪರ್ಶ

ಜಗತ್ತಿನ ಮೂರನೇ ಅತಿ ದೊಡ್ಡ ಕ್ರೀಡಾಕೂಟವಾದ ಏಷ್ಯಾ ಕ್ರೀಡಾಕೂಟಕ್ಕೆ ಶನಿವಾರ (ಆ.೧೮) ಜಕಾರ್ತದಲ್ಲಿ ಸಂಮೋಹಕ ಸ್ಪರ್ಶ ನೀಡಲಾಯಿತು. ಉದ್ಘಾಟನಾ ಕೂಟದ ಪ್ರತಿಕ್ಷಣವೂ ಜಕಾರ್ತದ ಪ್ರಮುಖ ಕ್ರೀಡಾಂಗಣದಲ್ಲಿ ನೆರೆದಿದ್ದ ೧೩ ಸಹಸ್ರಕ್ಕೂ ಹೆಚ್ಚಿನ ಅಥ್ಲೀಟ್‌ಗಳನ್ನು ಮಂತ್ರಮುಗ್ಧಗೊಳಿಸಿತು

ಜಕಾರ್ತ ಏಷ್ಯಾ ಕ್ರೀಡಾಕೂಟದ ಉದ್ಘಾಟನಾ ಸೊಬಗಿನಲ್ಲಿ ಇಡೀ ವಿಶ್ವದ ಗಮನ ಸೆಳೆದದ್ದು ಉತ್ತರ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ಪಥಸಂಚಲನದಲ್ಲಿ ಹೆಜ್ಜೆ ಇಟ್ಟದ್ದು. ವರ್ಣರಂಜಿತ ಸಮಾರಂಭದಲ್ಲಿ ವಿದ್ಯುದಲಂಕಾರ ಹೊಂಗಿರಣದ ಕಿರಣಗಳು ನಭದೆತ್ತರಕ್ಕೆ ಜಿಗಿಯುತ್ತಿದ್ದದ್ದು ಒಂದೆಡೆಯಾದರ; ಮತ್ತೊಂದೆಡೆ, ಕಿಕ್ಕಿರಿದು ತುಂಬಿದ್ದ ಜಿಲೊರೊ ಕ್ರೀಡಾಂಗಣವು ಕೊರಿಯನ್ನರ ಈ ಏಕತಾ ನಡೆಯನ್ನು ಕಣ್ಣೆವೆಯಿಕ್ಕದೆ ಕಂಡು ವಿಸ್ಮಯಗೊಂಡಿತು.

ದಕ್ಷಿಣ ಕೊರಿಯಾ ಮಹಿಳಾ ಬಾಸ್ಕೆಟ್‌ಬಾಲ್ ಆಟಗಾರ್ತಿ ಲಿಮ್ ಯುಂಗ್-ಹುಯಿ ಹಾಗೂ ಉತ್ತರ ಕೊರಿಯಾದ ಫುಟ್ಬಾಲ್ ಪಟು ಜು ಕ್ಯೊಂಗ್-ಕೋಲ್ ಜಂಟಿಯಾಗಿ ಕೊರಿಯಾದ ಏಕತಾ ಧ್ವಜವನ್ನು ಹಿಡಿದು ಅಥ್ಲೀಟ್‌ಗಳನ್ನು ಮುನ್ನಡೆಸುತ್ತ ಕ್ರೀಡಾಕೂಟದ ಶಾಂತಿ, ಸ್ನೇಹ ಹಾಗೂ ಸೌಹಾರ್ದ ಎತ್ತಿ ಹಿಡಿದದ್ದಕ್ಕಾಗಿ ಕ್ರೀಡಾಂಗಣದಲ್ಲಿದ್ದ ಅಷ್ಟೂ ಮಂದಿ ಕೈಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಸುಮಾರ್ತ ದ್ವೀಪದಲ್ಲಿನ ದೇಶದ ರಾಜಧಾನಿ ಜಕಾರ್ತ ಮತ್ತು ಪಾಲೆಂಬಾಂಗ್‌ನಲ್ಲಿ ಮುಂದಿನ ಹದಿನೈದು ದಿನಗಳು ನಡೆಯಲಿರುವ ಕ್ರೀಡಾಕೂಟದ ಪ್ರತಿ ರಸಸಮಯ ಕ್ರೀಡಾಪ್ರಿಯರನ್ನು ಮುದಗೊಳಿಸುವ ಮುನ್ಸೂಚನೆಯನ್ನು ಈ ಉದ್ಘಾಟನಾ ಕಾರ್ಯಕ್ರಮವು ನಿರೂಪಿಸಿತು.

ಜೊಕೊ ಸ್ಟಂಟ್‌ಗೆ ಮಾರುಹೋದ ಮಂದಿ

ದಕ್ಷಿಣ ಕೊರಿಯಾದ ಪ್ರಧಾನಿ ಲೀ ನಾಕ್-ಯೊನ್ ಮತ್ತು ಉತ್ತರ ಕೊರಿಯಾದ ಉಪ ಪ್ರಧಾನಿ ರಿ ರ್ಯೊಂಗ್-ನ್ಯಾಮ್ ವಿಐಪಿ ಗ್ಯಾಲರಿಯಲ್ಲಿ ಕೂತು ಉದ್ಘಾಟನಾ ಸಮಾರಂಭವನ್ನು ಸವಿದದ್ದು ಕೂಡಾ ಕೊರಿಯನ್ನರ ಏಕತಾ ಪ್ರದರ್ಶನಕ್ಕೆ ಸಾಕ್ಷ್ಯ ನುಡಿಯಿತು. ಇದಕ್ಕೂ ಮುನ್ನ ಉದ್ಘಾಟನಾ ಸಮಾರಂಭಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡುಡು ಜಕಾರ್ತ ರಸ್ತೆಗಳಲ್ಲಿ ಮೋಟಾರ್‌ ಬೈಕ್‌ನಲ್ಲಿ ನಡೆಸಿದ ಸಾಹಸಮಯ ನಡೆಗೆ ಕ್ರೀಡಾಂಗಣದಲ್ಲಿದ್ದವರು ಬೆಕ್ಕೆಸಬೆರಗಾದರು.

ಭಾರತವನ್ನು ಮುನ್ನಡೆಸಿದ ಚೋಪ್ರಾ

ಇನ್ನು, ೫೭೭ಕ್ಕೂ ಹೆಚ್ಚು ಅಥ್ಲೀಟ್‌ಗಳನ್ನು ಒಳಗೊಂಡ ಭಾರತದ ನಿಯೋಗವನ್ನು ಜಾವೆವಲಿನ್ ಪಟು ನೀರಜ್ ಚೋಪ್ರಾ ಮುನ್ನಡೆಸಿದರು. ಇದೇ ಏಪ್ರಿಲ್‌ನಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಧ್ವಜಧಾರಿಯಾಗಿ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಮುನ್ನಡೆಸಿದ್ದರು. ಕಳೆದ ಬಾರಿಗಿಂತಲೂ ಈ ಬಾರಿ ಅತ್ಯಧಿಕ ಪದಕಗಳನ್ನು ಗೆಲ್ಲುವ ಗುರಿ ಹೊತ್ತಿರುವ ಭಾರತ, ಕೂಟದ ಮೊದಲ ದಿನದಿಂದಲೇ ಪದಕ ಬೇಟೆಗೆ ಸರ್ವಸನ್ನದ್ಧವಾಗಿದೆ.

ಸರಿಸುಮಾರು ೧,೫೦೦ಕ್ಕೂ ಹೆಚ್ಚಿನ ನೃತ್ಯಪಟುಗಳು ಸಾಂಪ್ರದಾಯಿಕ ದಿರಿಸಿನಲ್ಲಿ ನಡೆಸಿಕೊಟ್ಟ ನತ್ಯ ಪ್ರದರ್ಶನ ಕೂಡಾ ಮನಮೋಹಕವಾಗಿತ್ತು. ಅಫ್ಘಾನಿಸ್ತಾನ ತನ್ನ ಕ್ರೀಡಾಪಟುಗಳನ್ನು ಕ್ರೀಡಾಂಗಣಕ್ಕೆ ಪರೇಡ್ ಮಾಡುವ ಮುಂಚಿನ ಈ ನೃತ್ಯಕ್ಕೆ ಕ್ರೀಡಾಂಗಣ ಮಾರುಹೋಯಿತು. ಆದರೆ, ಇದಕ್ಕಿಂತಲೂ ಮಿಗಿಲಾಗಿ ಎರಡೂ ಕೊರಿಯಾ ರಾಷ್ಟ್ರಗಳ ಅಥ್ಲೀಟ್‌ಗಳು ನೀಲಿ ಮತ್ತು ಶ್ವೇತ ಬಣ್ಣದ ಯೂನಿಫಾರಮ್‌ನಲ್ಲಿ ಜತೆಜತೆಯಾಗಿ ಹೆಜ್ಜೆ ಹಾಕಿದಾಗಲಂತೂ ಇಡೀ ಕ್ರೀಡಾಂಗಣಕ್ಕೆ ಕ್ರೀಡಾಂಗಣವೇ ಹರ್ಷೋನ್ಮಾದದಲ್ಲಿ ಚೀರಿತು.

ಇದನ್ನೂ ಓದಿ : ದಿಲ್ಲಿಯಿಂದ ಜಕಾರ್ತವರೆಗಿನ ಹದಿನೇಳು ಏಷ್ಯಾ ಕೂಟ ಸಾಗಿಬಂದ ಹಾದಿ

ಅಧ್ಯಕ್ಷರ ನರ್ತನ

ಕ್ರೀಡಾಂಗಣದೊಳಗೆ ಮೋಟಾರ್ ಬೈಕ್‌ನಲ್ಲಿ ಆಗಮಿಸಿ ಎಲ್ಲರನ್ನೂ ಸ್ತಂಭಿಸಿದ್ದ ಇಂಡೋನೇಷ್ಯಾ ಅಧ್ಯಕ್ಷ ಜೊಕೊ, ಇಂಡೋನೇಷ್ಯಾ ಗಾಯಕಿ ವಿಯಾ ವಾಲೆನ್ ಮೈಕ್‌ನಲ್ಲಿ ಉಲಿಯುತ್ತಿದ್ದಂತೆ ಕೂತಿದ್ದ ಸೀಟಿನಿಂದಲೇ ನರ್ತನಕ್ಕೆ ಮುಂದಾದರು. ಇದೆಲ್ಲದರ ಮಧ್ಯೆ ಲೊಂಬಾಕ್ ಭೂಕಂಪದಲ್ಲಿ ನಲುಗಿದವರಿಗಾಗಿ ಕ್ರೀಡಾಂಗಣದಲ್ಲಿ ಕ್ಷಣಕಾಲ ಮೌನವನ್ನಾಚರಿಸಿ ನಮಿಸಲಾಯಿತು. “ಇದು ನಿಮ್ಮ ತಾಯ್ನಾಡು ಎಂಬ ಹೆಮ್ಮೆಯಲ್ಲಿ ಬೀಗಬಹುದು,’’ ಎಂದು ಏಷ್ಯಾ ಒಲಿಂಪಿಕ್ಸ್ ಕೌನ್ಸಿಲ್‌ನ ಅಧ್ಯಕ್ಷ ಶೇಖ್ ಅಹಮದ್ ಅಲ್-ಫಹಾದ್ ಸಾಬಾ ಇಂಡೋನೇಷ್ಯಾ ಜನತೆಯನ್ನು ಉದ್ದೇಶಿಸಿ ನುಡಿದರು. ಇದಕ್ಕೂ ಮುನ್ನ ಜೊಕೊ, ಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ ಎಂದು ಘೋಷಿಸಿದರು.

೪೫ ರಾಷ್ಟ್ರಗಳ ಸರಿಸುಮಾರು ೧೮ ಸಹಸ್ರಕ್ಕೂ ಹೆಚ್ಚಿನ ಅಥ್ಲೀಟ್‌ಗಳು ಮತ್ತು ಪದಾಧಿಕಾರಿಗಳು ಈ ಉದ್ಘಾಟನಾ ಕೂಟಕ್ಕೆ ಸಾಕ್ಷಿಯಾದರು. ಸಾಮಾನ್ಯವಾಗಿ, ಈ ಬಾರಿಯೂ ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ಮಧ್ಯೆ ಚಾಂಪಿಯನ್‌ಶಿಪ್‌ಗಾಗಿ ಪ್ರಬಲ ಹೋರಾಟ ನಡೆಯುವ ಸಾಧ್ಯತೆ ಇದೆ. ಇತ್ತ, ಚೀನಾ ಮಾತ್ರ ಮತ್ತೊಮ್ಮೆ ನಂ ೧ ಸ್ಥಾನಕ್ಕಾಗಿ ಮುಂದಾಗಿದ್ದು, ಭಾರತ ತನ್ನ ಈ ಹಿಂದಿನ ಸಾಧನೆಯನ್ನು ಉತ್ತಮೀಕರಿಸಿಕೊಳ್ಳಲು ಅಣಿಯಾಗಿದೆ.

Team Indonesia . #asiangames2018 #asiangames #openingceremony

A post shared by File Indonesia 📷 (@fileindonesia) on

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More