ಜಕಾರ್ತ ಏಷ್ಯಾಡ್‌ನಲ್ಲಿ ಚಿನ್ನದ ಸೌರಭ ಬೀರಿದ ಹದಿನಾರರ ಕಿಶೋರ 

ಕೂಟದ ಮೊದಲ ಎರಡೂ ದಿನ ಸ್ವರ್ಣ ಪದಕ ಗೆಲ್ಲಲು ವಿಫಲವಾದ ಭಾರತಕ್ಕೆ ಶೂಟಿಂಗ್‌ನಲ್ಲಿ ಮೂರನೇ ದಿನದಂದು ಸೌರಭ್ ಚೌಧರಿ ಚಿನ್ನ ತಂದಿತ್ತರು. ಪುರುಷರ ೧೦ ಮೀಟರ್ ಏರ್‌ ಪಿಸ್ತೂಲ್‌ನಲ್ಲಿ ಈ ಯುವ ಶೂಟರ್ ಸಾಧನೆಯೊಂದಿಗೆ ಅಭಿಷೇಕ್ ವರ್ಮಾ ಕಂಚಿನ ಪದಕ ಜಯಿಸಿದರು

ಗುರಿ ಇಡುವ ಸ್ಪರ್ಧೆಯಲ್ಲಿ ಭಾರತದ ಗುರಿಕಾರರು ಹದಿನೆಂಟನೇ ಏಷ್ಯಾ ಕ್ರೀಡಾಕೂಟದ ಮೂರನೇ ದಿನದಂದೂ ಪದಕ ಬಾಚಿದ್ದಾರೆ. ಕಳೆದ ಎರಡೂ ದಿನಗಳಲ್ಲಿ ಸ್ವರ್ಣ ಪದಕ ಗೆಲ್ಲಲು ದಿನಾಂತ್ಯದವರೆಗೂ ಕಾದಿದ್ದ ಭಾರತ, ಮೂರನೇ ದಿನದ ಶುರುವಿನಲ್ಲೇ ಬಂಗಾರದ ನಗೆಬೀರಿತು. ಇನ್ನು, ಇದೇ ಪುರುಷರ ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಅಭಿಷೇಕ್ ವರ್ಮಾ ಕಂಚು ಪದಕ ಜಯಿಸಿದರು.

ಇವರಿಬ್ಬರ ಈ ಸಾಧನೆಯೊಂದಿಗೆ ಭಾರತ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯಾ ಕ್ರೀಡಾಕೂಟದಲ್ಲಿ ಶೂಟಿಂಗ್ ವಿಭಾಗವೊಂದರಲ್ಲೇ ಐದು ಪದಕಗಳನ್ನು ಗೆದ್ದಂತಾಗಿದೆ. ಮೊದಲ ದಿನದಂದು ಅಪೂರ್ವಿ ಚಾಂಡೀಲಾ ಮತ್ತು ರವಿಕುಮಾರ್ ೧೦ ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಕಂಚು ಗೆದ್ದರೆ, ಎರಡನೇ ದಿನದಂದು ದೀಪಕ್ ಕುಮಾರ್ ಮತ್ತು 19ರ ಹರೆಯದ ಲಕ್ಷಯ್ ಬೆಳ್ಳಿ ಪದಕ ಜಯಿಸಿದ್ದರು.

ಅಂದಹಾಗೆ, ಭಾರತ ಕೂಟದಲ್ಲಿ ಮೂರನೇ ಚಿನ್ನದ ಪದಕ ಗೆದ್ದಂತಾಗಿದೆ. ಮೊದಲ ದಿನದಂದು ಕುಸ್ತಿ ವಿಭಾಗದಲ್ಲಿ ಬಜರಂಗ್ ಪುನಿಯಾ ಮತ್ತು ಕೂಟದ ಎರಡನೇ ದಿನದಂದು ವಿನೇಶ್ ಫೋಗಟ್ ಕೂಡಾ ಕುಸ್ತಿಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಇದರೊಂದಿಗೆ ಏಷ್ಯಾಡ್‌ನಲ್ಲಿ ಭಾರತ ಒಟ್ಟು 7 ಪದಕಗಳನ್ನು ಜಯಿಸಿದೆ. ಮೂರು ಚಿನ್ನ, ೨ ಬೆಳ್ಳಿ ಹಾಗೂ ೨ ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಭಾರತ ಏಳನೇ ಸ್ಥಾನ ಅಲಂಕರಿಸಿದೆ.

ಜಿತು ರೈ ಹಿಂದಿಕ್ಕಿದ್ದ ಸೌರಭ್ ಚೌಧರಿ ಕುರಿತು

ಎಳೆಯ ವಯಸ್ಸಿನಲ್ಲೇ ಏಷ್ಯಾಡ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ಸೌರಭ್ ಚೌಧರಿ ಉತ್ತರ ಪ್ರದೇಶ ಮೂಲದವರು. ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಾ ಬರುತ್ತಿರುವ ಈ ಯುವ ಗುರಿಕಾರ, ೨೦೧೭ರ ಡಿಸೆಂಬರ್‌ನಲ್ಲಿ ಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದಲ್ಲದೆ, ೧೦ನೇ ಏಷ್ಯಾ ಯುವ ಒಲಿಂಪಿಕ್ಸ್ ಕ್ರೀಡಾಕೂಟದ ಅರ್ಹತಾ ಸುತ್ತಿನಲ್ಲಿ ದಾಖಲೆ ಬರೆದಿದ್ದರು.

ಜಪಾನ್‌ನ ವಾಕೊ ಸಿಟಿಯಲ್ಲಿ ನಡೆದ ೨೦೧೮ರ ಯುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಈ ಪ್ರತಿಷ್ಠಿತ ಕೂಟದಲ್ಲಿ ಸ್ಥಾನ ಗಿಟ್ಟಿಸಿದ ಭಾರತದ ಮೂರನೇ ಯುವ ಅಥ್ಲೀಟ್ ಎನಿಸಿದ್ದರು. ಇನ್ನು, ಕೆಎಸ್ಎಸ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ೧೦ ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಒಲಿಂಪಿಯನ್, ಜಿತು ರೈ ಅವರನ್ನೇ ಹಿಂದಿಕ್ಕಿದ್ದಾಗ ಕೇವಲ ೧೫ರ ಹರೆಯ. ಅದೇ ದಿನದಂದು ಜೂನಿಯರ್ ಮತ್ತು ಯುವ ವಿಭಾಗಗಳ ಶೂಟಿಂಗ್‌ನಲ್ಲಿ ಸೌರಭ್ ಬೆಳ್ಳಿ ಪದಕ ಜಯಿಸಿದ್ದ.

ವಿಶ್ವ ತಂಡದಲ್ಲೂ ಮಿಂಚು

ಕಳೆದ ವರ್ಷ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿಯೂ ಸೌರಭ್ ಚೌಧರಿ ಮಿಂಚು ಹರಿಸಿದ್ದ. ತಂಡ ವಿಭಾಗದಲ್ಲಿ ಕಂಚು ಗೆದ್ದಿದ್ದ ಸೌರಭ್, ವೈಯಕ್ತಿಕ ವಿಭಾಗದಲ್ಲಿ ನಾಲ್ಕನೇ ಸ್ಥಾನದೊಂದಿಗೆ ಹೋರಾಟ ಮುಗಿಸಿದ್ದ. ಇನ್ನು, ೨೦೧೮ರ ಆರಂಭದಲ್ಲಿ ಜರ್ಮನಿಯ ಸುಹ್ಲ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಶೂಟಿಂಗ್‌ನಲ್ಲಿ ವಿಶ್ವ ದಾಖಲೆಯ ಸ್ಕೋರ್‌ನೊಂದಿಗೆ ಸೌರಭ್ ಚಿನ್ನಕ್ಕೆ ಗುರಿ ಇಟ್ಟಿದ್ದ.

ಹದಿನೈದರ ಹರೆಯದ ಸೌರಭ್ ಫೈನಲ್‌ನಲ್ಲಿ ೨೪.೩೭ ಪಾಯಿಂಟ್ಸ್ ಗಳಿಸಿದ್ದ. ಆ ಮೂಲಕ ಚೀನಾ ಶೂಟರ್ ವಾಂಗ್ ಜಿಹಾವೊ ಅವರ ೨೪೨.೫ ವಿಶ್ವದಾಖಲೆಯ ಪಾಯಿಂಟ್ಸ್‌ಗಳನ್ನು ಸೌರಭ್ ಹಿಂದಿಕ್ಕಿದ್ದ. ಇದೇ ಚಾಂಪಿಯನ್‌ಶಿಪ್‌ನಲ್ಲಿ ಮಿಶ್ರ ಟೀಂ ಸ್ಪರ್ಧೆಯಲ್ಲಿ ದೇವಾಂಶಿ ರಾಣಾ ಜತೆಗೆ ಸೌರಭ್ ಸ್ವರ್ಣ ಪದಕ ಜಯಿಸಿದ್ದ. ಈ ಮಿಶ್ರ ಟೀಂ ಈವೆಂಟ್‌ನಲ್ಲಿ ಮನುಭಾಕರ್ ಮತ್ತು ಅನ್ಮೋಲ್ ಜೈನ್ ಜೋಡಿಯನ್ನು ಸೌರಭ್ ಮತ್ತು ದೇವಾಂಶಿ ಜೋಡಿ ಹಿಂದಿಕ್ಕಿತ್ತು.

ಇನ್ನು, ಪ್ಲಾಜೆನ್‌ನಲ್ಲಿ ನಡೆದ ೨೮ನೇ ಶೂಟಿಂಗ್ ಹೋಪ್ಸ್ ಇಂಟರ್‌ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜೂನಿಯರ್ ಏರ್ ಪಿಸ್ತೂಲ್‌ ಶೂಟಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಸೌರಭ್, ಮಿಶ್ರ ಟೀಂ ಈವೆಂಟ್‌ನಲ್ಲಿ ದೇವಾಂಶಿ ರಾಣಾ ಜತೆಗೆ ಬೆಳ್ಳಿ ಪದಕ ಜಯಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More