ಶೂಟಿಂಗ್‌ನಲ್ಲಿ ಮತ್ತೊಂದು ಬೆಳ್ಳಿ ಪದಕ ತಂದುಕೊಟ್ಟ ಸಂಜೀವ್ ರಜಪೂತ್

ಗುರಿ ಇಡುವ ಆರಂಭಿಕ ಹಂತದಲ್ಲಿ ನಿಖರತೆ ಕಾಯ್ದುಕೊಂಡು ಮೊದಲ ಸ್ಥಾನದಲ್ಲಿದ್ದ ಸಂಜೀವ್ ರಜಪೂತ್, ಕ್ರಮೇಣ ಏಕಾಗ್ರತೆ ಕಳೆದುಕೊಂಡು ಬೆಳ್ಳಿಗೆ ತೃಪ್ತವಾದರು. ಜಕಾರ್ತ ಕೂಟದಲ್ಲಿ ಭಾರತದ ಶೂಟರ್‌ಗಳ ಪದಕ ಬೇಟೆ ಅವ್ಯಾಹತವಾಗಿರುವಂತೆ ನೋಡಿಕೊಳ್ಳುವಲ್ಲಿ ಸಂಜೀವ್ ಯಶ ಕಂಡರು

ಪುರುಷರ ೫೦ ಮೀಟರ್ ರೈಫಲ್ ತ್ರಿ ಪೊಸಿಷನ್‌ನಲ್ಲಿ ಸಂಜೀವ್ ರಜಪೂತ್ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಮಂಗಳವಾರ (ಆ.೨೧) ಭಾರತ ಶೂಟಿಂಗ್‌ನಲ್ಲಿ ಗೆದ್ದ ಮೂರನೇ ಪದಕವಿದು. ದಿನದ ಆರಂಭದಲ್ಲಿ ೧೦ ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ರೈತನ ಮಗ ಹಾಗೂ ಹದಿನಾರರ ಹರೆಯದ ಸೌರಭ್ ಚೌಧರಿ ಚಿನ್ನಕ್ಕೆ ಗುರಿ ಪಟ್ಟರೆ, ಇದೇ ವಿಭಾಗದಲ್ಲಿ ಅಭಿಷೇಕ್ ವರ್ಮಾ ಕಂಚು ಜಯಿಸಿದ್ದರು.

ಇದೇ ಹಾದಿಯಲ್ಲಿ ಸಾಗಿದ ಸಂಜೀವ್, ಹದಿನೆಂಟನೇ ಏಷ್ಯಾಡ್‌ನಲ್ಲಿ ಭಾರತದ ಪದಕ ಗಳಿಕೆಗೆ ತನ್ನ ಕೊಡುಗೆಯನ್ನೂ ನೀಡಿದರು. ೩೭ರ ಹರೆಯದ ಸಂಜೀವ್, ಒಟ್ಟಾರೆ ೪೫೨.೭ ಪಾಯಿಂಟ್ಸ್ ಗಳಿಸುವುದರೊಂದಿಗೆ ಬೆಳ್ಳಿ ಪದಕ ಜಯಿಸಿದರು. ಚೀನಾದ ಹುಯಿ ಝಿಚೆಂf ೪೫೨.೭ ಪಾಯಿಂಟ್ಸ್ ಪೇರಿಸುವುದರ ಮೂಲಕ ಸ್ವರ್ಣ ಪದಕ ಗೆದ್ದರೆ, ೪೪೧.೪ ಪಾಯಿಂಟ್ಸ್ ಗಳಿಸಿದ ಜಪಾನ್‌ನ ಮಾಟ್ಸುಮುಟೊ ಟಕಾಯುಕಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು.

ಮೊಣಕಾಲು ಮತ್ತು ಬೋರಲುಬಿದ್ದ ಸ್ಥಿತಿಯ ಗುರಿ ಇಡುವ ಸ್ಪರ್ಧೆಯಲ್ಲಿ ಸಂಜೀವ್ ರಜಪೂತ್ ಪ್ರತಿಸ್ಪರ್ಧಿಗಳಿಗಿಂತಲೂ ಮುನ್ನಡೆ ಸಾಧಿಸಿದ್ದರು. ಆದರೆ, ನಿಂತ ಭಂಗಿಯಲ್ಲಿನ ಶೂಟಿಂಗ್‌ ಸುತ್ತಿನಲ್ಲಿ ರಜಪೂತ್ ಸ್ವರ್ಣ ಗೆಲ್ಲುವ ಭರವಸೆ ಕ್ಷೀಣಿಸಿತು. ಆದಾಗ್ಯೂ ಮೊಣಕಾಲೂರಿ ಗುರಿ ಇಡುವ ಮೂರನೇ ಸರಣಿಯಲ್ಲಿ ೭.೮ರೊಂದಿಗೆ ಮತ್ತೆ ಹಿಡಿತ ಸಾಧಿಸಿದ ರಜಪೂತ್, ೧೫೧.೨ ಸ್ಕೋರ್‌ನೊಂದಿಗೆ ಅಗ್ರಸ್ಥಾನ ಗಳಿಸಿದರು.

ಇದನ್ನೂ ಓದಿ : ಜಕಾರ್ತ ಏಷ್ಯಾಡ್‌ನಲ್ಲಿ ಚಿನ್ನದ ಸೌರಭ ಬೀರಿದ ಹದಿನಾರರ ಕಿಶೋರ 

ಅಂತೆಯೇ, ಬೋರಲುಬಿದ್ದು ಗುರಿ ಇಡುವಾಗಲೂ ರಜಪೂತ್ ಮುನ್ನಡೆಯಲ್ಲೇ ಇದ್ದರು. ೧೦ ಪಾಯಿಂಟ್ಸ್‌ಗಳ ಸ್ಥಿರ ಪ್ರದರ್ಶನ ನೀಡಿದ ರಜಪೂತ್, ೩೦ ಶೂಟ್‌ಗಳ ಬಳಿಕ ೩೦೭.೧ ಪಾಯಿಂಟ್ಸ್ ಪೇರಿಸಿ ಈ ವೇಳೆಯಲ್ಲಿಯೂ ಮುನ್ನಡೆ ಕಾಯ್ದುಕೊಂಡಿದ್ದರು. ಇತ್ತ, ನಿಂತ ಭಂಗಿಯಲ್ಲಿನ ಶೂಟಿಂಗ್‌ನಲ್ಲಿ ಮೊದಲ ಸರಣಿಯಲ್ಲಿ ೩೫೫.೬ ಪಾಯಿಂಟ್ಸ್ ಗಳಿಸಿ ಮುನ್ನಡೆ ಪಡೆದ ರಜಪೂತ್, ಕೊಂಚದರಲ್ಲಿ ಚೀನಿ ಶೂಟರ್ ಮೇಲುಗೈ ಸಾಧಿಸಲು ಆಸ್ಪದ ಮಾಡಿಕೊಟ್ಟರು.

ಸಂಜೀವ್ ರಜಪೂತ್ ನಿರ್ಣಾಯಕ ಹಂತದಲ್ಲಿ ಅನುಭವಿಸಿದ ಈ ಹಿನ್ನಡೆಯನ್ನೇ ಲಾಭವಾಗಿಸಿಕೊಂಡ ಚೀನಿ ಶೂಟರ್, ಚಿನ್ನಕ್ಕೆ ಗುರಿ ಇಟ್ಟರು. ಅಂದಹಾಗೆ, ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆದ ಇದೇ ಪುರುಷರ ೫೦ ಮೀಟರ್ ೩ ಪೊಸಿಷನ್‌ ಶೂಟಿಂಗ್‌ನಲ್ಲಿಯೂ ಸಂಜೀವ್ ರಜಪೂತ್ ಸ್ವರ್ಣ ಪದಕ ಜಯಿಸಿದ್ದರು. ಆದರೆ, ಏಷ್ಯಾಡ್‌ನಲ್ಲಿ ಸ್ವರ್ಣ ಗೆಲ್ಲುವ ಅವಕಾಶವನ್ನು ಕೊಂಚದರಲ್ಲೇ ಅವರು ತಪ್ಪಿಸಿಕೊಂಡಂತಾಯಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More