ಏಷ್ಯಾಡ್‌ನಲ್ಲಿ ಚೊಚ್ಚಲ ಕಂಚು ಗೆದ್ದು ಐತಿಹಾಸಿಕ ಸಾಧನೆಗೈದ ಇಂಡಿಯಾದ ಸೆಪಕ್ ಟಕ್ರಾ ತಂಡ

ಏಷ್ಯಾ ಕ್ರೀಡಾಕೂಟದ ಇತಿಹಾಸದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಭಾರತದ ಸೆಪಕ್‌ ಟಕ್ರಾ ತಂಡ ಕಂಚಿನ ಪದಕ ಜಯಿಸಿ ಐತಿಹಾಸಿಕ ಸಾಧನೆ ಮೆರೆದಿದೆ. ಪಾಲೆಂಬಾಂಗ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್ ಎದುರು ೦-೨ರಿಂದ ಪರಾಭವಗೊಂಡ ಭಾರತ ತಂಡ, ತೃತೀಯ ಸ್ಥಾನಕ್ಕೆ ತೃಪ್ತವಾಯಿತು

ಮಂಗಳವಾರ (ಆ.೨೧) ಮಧ್ಯಾಹ್ನದ ಒಳಗಡೆಯೇ ಶೂಟಿಂಗ್‌ನಲ್ಲಿ ಮೂರು ಪದಕ ಗೆದ್ದ ಭಾರತ, ತದನಂತರದಲ್ಲಿ ಮತ್ತೊಂದು ಪದಕ ಪಡೆಯಿತು. ಸೆಪಕ್ ಟಕ್ರಾ ವಿಭಾಗದಲ್ಲಿ ಭಾರತ ತಂಡ ಮೂರನೇ ಸ್ಥಾನ ಗಳಿಸುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿತು. ಪುರುಷರ ರೆಗು ವಿಭಾಗದ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ಥಾಯ್ಲೆಂಡ್ ಎದುರು ಭಾರತ ತಂಡ ೦-೨ರಿಂದ ಸೋಲನುಭವಿಸಿದರೂ, ಸೆಮಿಫೈನಲ್ ತಲುಪಿದ ಸಾಧನೆಯಿಂದಾಗಿ ಕಂಚು ಪದಕವನ್ನು ಗೆದ್ದುಬೀಗಿತು.

ಸೆಪಕ್ ಟಕ್ರಾ ಕ್ರೀಡೆಯ ವೈಶಿಷ್ಟ್ಯವೆಂದರೆ, ಸೆಮಿಫೈನಲ್‌ನಲ್ಲಿ ಸೋಲನುಭವಿಸಿದ ತಂಡಗಳೂ ಕಂಚಿನ ಪದಕಕ್ಕೆ ಭಾಜನವಾಗುತ್ತವೆ. ಅದರಂತೆ ಭಾರತ ತಂಡ, ಥಾಯ್ಲೆಂಡ್ ಎದುರು ೦-೨ ನೇರ ಗೇಮ್‌ಗಳ ಅಂತರದಿಂದ ಸೋಲನುಭವಿಸಿದರೂ, ಕಂಚಿನ ಪದಕಕ್ಕೆ ಪಾತ್ರವಾಯಿತು. ಇದರೊಂದಿಗೆ, ಕೂಟದಲ್ಲಿ ಭಾರತ ಒಟ್ಟು ಒಂಬತ್ತು ಪದಕ ಗೆದ್ದಂತಾಗಿದೆ. ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚು ಪದಕಗಳನ್ನು ಭಾರತ ಇಲ್ಲಿವರೆಗೆ ಜಯಿಸಿದೆ.

ಟೂರ್ನಿಯಲ್ಲಿನ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಇರಾನ್ ವಿರುದ್ಧ ಅಮೋಘ ಗೆಲುವು ಸಾಧಿಸುವುದರೊಂದಿಗೆ ಭರ್ಜರಿ ಆರಂಭ ಪಡೆದಿತ್ತು. ಇರಾನ್ ತಂಡವನ್ನು ೨೧-೧೬, ೧೯-೨೧, ೨೧-೧೭ರಿಂದ ಮಣಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು. ಇಷ್ಟಾದರೂ, ಬಿ ಗುಂಪಿನಲ್ಲಿದ್ದ ಭಾರತ ತಂಡ, ಇರಾನ್ ನಂತರದ ಆತಿಥೇಯ ಇಂಡೋನೇಷಿಯಾ ವಿರುದ್ಧದ ಕಾದಾಟದಲ್ಲಿ ೦-೩ರಿಂದ ಸೋಲನುಭವಿಸಿತ್ತು.

ಆದರೆ, ಆತಿಥೇಯರ ವಿರುದ್ಧದ ಈ ಸೋಲಿನ ಹೊರತಾಗಿಯೂ ಭಾರತ, ಸೆಮಿಫೈನಲ್‌ಗೆ ಅರ್ಹತೆ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಅದರಂತೆ, ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೆಣಸಿದ ಭಾರತ ತಂಡ, ಹಾಲಿ ಚಾಂಪಿಯನ್ನರ ಸವಾಲನ್ನು ಮೆಟ್ಟಿನಿಲ್ಲಲು ವಿಫಲವಾದರೂ, ಇರಾನ್ ಎದುರಿನ ಪಂದ್ಯದ ಗೆಲುವಿನೊಂದಿಗೆ ಅಂತಿಮ ನಾಲ್ಕರ ಘಟ್ಟ ತಲುಪಿದ್ದ ಹಿನ್ನೆಲೆಯಲ್ಲಿ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿತ್ತು.

ಇದನ್ನೂ ಓದಿ : ಶೂಟಿಂಗ್‌ನಲ್ಲಿ ಮತ್ತೊಂದು ಬೆಳ್ಳಿ ಪದಕ ತಂದುಕೊಟ್ಟ ಸಂಜೀವ್ ರಜಪೂತ್

ಏನಿದು ಸೆಪಕ್ ಟಕ್ರಾ ಕ್ರೀಡೆ?

ಆಗ್ನೇಯ ಏಷ್ಯಾದ ಕ್ರೀಡೆ ಸೆಪಕ್ ಟಕ್ರಾ ಕ್ರೀಡೆಯನ್ನು ಫುಟ್‌ವಾಲಿ ಎಂತಲೂ ಕರೆಯಲಾಗುತ್ತದೆ. ಸಿಂಥೆಟಿಕ್ ಫೈಬರ್‌ನಿಂದ ಕೂಡಿದ ಚೆಂಡನ್ನು ಈ ಆಟಕ್ಕೆ ಬಳಸಲಾಗುತ್ತದೆ. ಈ ಕ್ರೀಡೆಯಲ್ಲಿ ಕ್ರೀಡಾಪಟುಗಳು ತಮ್ಮ ಕಾಲು, ಮೊಣಕಾಲು, ಎದೆ ಹಾಗೂ ತಲೆಯಿಂದ ಮಾತ್ರ ಚೆಂಡನ್ನು ಸ್ಪರ್ಶಿಸಬಹುದಾಗಿರುತ್ತದೆ. ಮಲೇಷಿಯಾದಲ್ಲಿ ಈ ಕ್ರೀಡೆಯನ್ನು ಸೆಪಕ್ ರಾಗ/ಸೆಪಕ್ ಟಕ್ರಾ/ಟಕ್ರಾ ಎಂದು ಕರೆದರೆ, ಥಾಯ್ಲೆಂಡ್‌ನಲ್ಲಿ ಟಕ್ರಾ ಎನ್ನಲಾಗುತ್ತದೆ. ಅಂತೆಯೇ ಲಾವೋಸ್‌ನಲ್ಲಿ ಇದನ್ನು ‘ಕಟಾವ್’ ಎಂದು ಕರೆಯಲಾಗುತ್ತದೆ.

ರೆಗು ವಿಭಾಗದ ಆಟದಲ್ಲಿ ಇತ್ತಂಡಗಳಲ್ಲೂ ತಲಾ ಮೂವರು ಸ್ಪರ್ಧಿಗಳಿರುತ್ತಾರೆ. ಈ ಮೂವರ ಪೈಕಿ ಒಬ್ಬಾತ ಹಿಂದುಗಡೆ ಇರುತ್ತಾನೆ. ಈತನ್ನು ‘ಟಿಕಾಂಗ್’ ಎಂದು ಕರೆಯಲಾದರೆ, ಇನ್ನಿಬ್ಬರು ಕೋರ್ಟ್‌ನ ಎಡ ಮತ್ತು ಬಲಗಡೆ ಮುಂದುಗಡೆ ಇರುತ್ತಾರೆ. ಎಡಗಡೆ ಇರುವಾತನನ್ನು ಫೀಡರ್/ಸೆಟರ್/ಟಾಸರ್ ಎಂದು ಕರೆಯಲಾದರೆ, ಬಲಬದಿಯಲ್ಲಿ ಇರುವಾತನನ್ನು ಅಟ್ಯಾಕರ್/ಸ್ಟ್ರೈಕರ್/ಕಿಲ್ಲರ್ ಎನ್ನಲಾಗುತ್ತದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More